ADVERTISEMENT

ಟ್ರಂಪ್ ಮತ್ತು ನನ್ನ ದೊಡ್ಡಮ್ಮ

ಅಮೆರಿಕದ ಅಧ್ಯಕ್ಷರು ಭಾರತಕ್ಕೆ ಭೇಟಿ ಕೊಟ್ಟಿದ್ದಕ್ಕೂ ನನ್ನ ದೊ‌ಡ್ಡಮ್ಮನ ಮನೆಗೆ ನಾನು ತೆರಳಿದ್ದಕ್ಕೂ ಸಾಕಷ್ಟು ಸಾಮ್ಯ ಕಾಣುತ್ತದೆ!

ಗೋಪಾಲನಾಯ್ಕ ಜಿ.ಎಸ್‌.
Published 2 ಮಾರ್ಚ್ 2020, 19:45 IST
Last Updated 2 ಮಾರ್ಚ್ 2020, 19:45 IST
.
.   

ಬೆಂಗಳೂರು ಸೇರಿ, ಹೇಗೋ ನೌಕರಿ ಗಿಟ್ಟಿಸಿ, ಸಣ್ಣ ಕಾರೊಂದನ್ನೂ ಕೊಂಡ ಮೇಲೆ, ಹೈಸ್ಕೂಲು ಓದುತ್ತಿದ್ದಾಗ ನಾನು ಆಗಾಗ ಮಧ್ಯಾಹ್ನದ ಊಟಕ್ಕಾಗಿ ಮನೆಗೆ ಹೋಗುತ್ತಿದ್ದ ನನ್ನ ದೊಡ್ಡಮ್ಮನ ನೆನಪಾಗಿ, ಒಮ್ಮೆ ಭೇಟಿ ಮಾಡಲೆಂದು ಆಕೆಗೆ ಕರೆ ಮಾಡಿ ಊರಿಗೆ ಹೊರಟೆ. ಬಹಳ ವರ್ಷಗಳ ನಂತರ ತಂಗಿ ಮಗ, ಸೊಸೆ ಮನೆಗೆ ಬರುತ್ತಿದ್ದಾರೆಂದು ತಿಳಿದ ದೊಡ್ಡಮ್ಮ, ಮನೆಯ ಅಂಗಳ ಗುಡಿಸಿ ರಂಗೋಲಿ ಹಾಕಿ, ಒಳಗೆ ನೆಲಕ್ಕೆ ಸೆಗಣಿ ಸಾರಿಸಿ, ಟ್ರಂಕಿನಲ್ಲಿದ್ದ ಹಳೆಯ (ಅವಳಿಗೆ ಹೊಸದು) ಸೀರೆಯೊಂದನ್ನು ಉಟ್ಟು, ರವಿಕೆ ಹರಿದು ತೋಳು ಕಾಣುತ್ತಿದ್ದುದನ್ನು ತನ್ನ ಸೆರಗಿನಿಂದ ಮುಚ್ಚಿಕೊಳ್ಳುತ್ತಾ ‘ಬಾ ಮಗ ಒಳೀಕೆ’ ಎಂದು ಮಮತೆಯಿಂದ ಕರೆದು ಚಾಪೆ ಹಾಸಿ ಕೂರಿಸಿ, ನನಗೆ ಇಷ್ಟವಾದ ಮೊಟ್ಟೆ ಪಲ್ಯ ರೊಟ್ಟಿಯನ್ನು ತಿನ್ನಲು ಕೊಟ್ಟಳು.

ಸಾಮಾನ್ಯವಾಗಿ ಕೆಲವರು ತಮ್ಮ ಬಡತನದಲ್ಲೇ ಶ್ರೀಮಂತಿಕೆಯನ್ನು ತೋರಿಸಿ, ನಂತರ ಅವರಿಂದ ಏನಾದರೊಂದಿಷ್ಟು ಸಹಾಯದ ನಿರೀಕ್ಷೆ ಮಾಡುವುದುಂಟು. ಹಾಗಾಗಿಯೇ ಆಕೆ ನಡು ನಡುವೆ ‘ಮಕ್ಳೆಲ್ಲಾ ದೂರಾಗಿ ನನಗೆ ಈ ಹಳೇ ಮನೆ ಕೊಟ್ಟವ್ರೆ. ಮಳೆ ಬಂದ್ರೆ ಮನೆ ಸೋರುತ್ತೆ. ಆಗಾಗ ನಂಗೆ ಮೈ ಸರಿ ಇರೇಕಿಲ್ಲ, ಏನ್ಮಾಡಾನಾ ಬಡವಿ’ ಇತ್ಯಾದಿ ನೋವುಗಳನ್ನು ಹಂಚಿಕೊಂಡಳು. ನಾನು ರೊಟ್ಟಿ–ಪಲ್ಯ ತಿನ್ನುತ್ತಾ ‘ಇದು ನಾಟಿ ಕೋಳಿ ಮೊಟ್ಟೆನಾ’ ಎಂದು ಕೇಳಿದೆ. ‘ಹ್ಞೂಂ ಮಗ, ಕೋಳೀನ ಕಾವಿಗೆ ಕೂರ‍್ಸಿ ನಾಲಕ್ ದಿನ ಆಗಿತ್ತು ಅಷ್ಟೇ. ನೀನ್ ಬರೋ ಸುದ್ದಿ ಕೇಳಿ, ನಿಂಗಿಷ್ಟ ಅಂತ, ಕಾವಿಗಿಟ್ಟಿದ್ದ ಮೊಟ್ಟೆನಲ್ಲೇ ನಾಲ್ಕ್ ತಗ್ದು ಪಲ್ಯ ಮಾಡ್ದೆ, ಚಂದಾಗೈತಾ ಮಗ’ ಎಂದಳು. ನಾನು ನಗರ ಜೀವನದ ಸಹಜ ವ್ಯಾವಹಾರಿಕ ದೃಷ್ಟಿಯಿಂದ, ಕಾವಿಗಿಟ್ಟಿದ್ದ ನಾಲ್ಕು ಮೊಟ್ಟೆಗಳ ಬಗ್ಗೆ ಚಿಂತಿಸಿದೆ. ಕಾವಿಗೇ ಬಿಟ್ಟಿದ್ದರೆ ಆ ನಾಲ್ಕು ಮೊಟ್ಟೆಗಳು ಮರಿಯಾಗಿ ಐದಾರು ತಿಂಗಳಲ್ಲೇ ಬೆಳೆದು, ಸಾವಿರ ರೂಪಾಯಿಯಾದರೂ ಬಡವಿ ದೊಡ್ಡಮ್ಮನಿಗೆ ಸಿಗುತ್ತಿತ್ತಲ್ಲಾ ಎಂದು.

ವಾಪಸ್‌ ಹೊರಡುವಾಗ ಆಕೆಯ ಔದಾರ್ಯಕ್ಕೆ ಇನ್ನೂರು ರೂಪಾಯಿ ಕೈಗಿಟ್ಟು ‘ಆರು ತಿಂಗಳ ನಂತರ ಬರ್ತೀನಿ, ನನಗೊಂದು ಹುಂಜ ಸಾಕಿ ಕೊಡು’ ಎಂದು ಹೇಳಿ ಹೊರಟೆ. ಹಣ ನೋಡಿ ಹಿರಿ ಹಿರಿ ಹಿಗ್ಗಿದ ಆಕೆ ನನ್ನ ಕೈ ಹಿಡಿದು ಊರ ಹೆಬ್ಬಾಗಿಲವರೆಗೂ ಕರೆತಂದು, ಅಲ್ಲಿದ್ದವರಿಗೆಲ್ಲಾ ‘ನನ್ನ ತಂಗಿ ಮಗ’ ಎಂದು ಪರಿಚಯಿಸಿ, ನನ್ನನ್ನು ಬೀಳ್ಕೊಟ್ಟು ಗರ್ವದಿಂದ ಹಿಂತಿರುಗಿ ಹೋದಳು.

ADVERTISEMENT

ಆಕೆ ಹೋಗುವಾಗ ಊರಿನವರೆಲ್ಲಾ ಕೇಳಿದರಂತೆ, ‘ಕಾರ್‌ನಲ್‌ ಬಂದಿದ್ದ ನಿನ್ ತಂಗಿ ಮಗ ದುಡ್ಡೇನಾರ ಕೊಟ್ಟಿರ್ತಾನಲ್ವೇ’, ‘ಬೆಂಗ್ಳೂರ್ನಾಗೆ ಬಟ್ಟೆ ಎಲ್ಲಾ ಕಮ್ಮೀಗ್ ಸಿಗ್ತಾವಂತೆ ಸೀರೆ ಗೀರೆ ಕೊಟ್ಟಿರ್ಬೇಕಲ್ವೇ’, ‘ನಿಂಗೇನ್ ಬಿಡವ್ವ, ಕಷ್ಟಕಾಲಕ್ಕೆ ತಂಗಿ ಮಗನಾದ್ರೂ ಅವ್ನೆ’, ‘ಮಳೆ ಬಂದ್ರೆ ನಿನ್ ಮನೆ ಸೋರುತ್ತೆ, ಹೊಸ ಹೆಂಚೇನಾದ್ರೂ ಹಾಕ್ಸಿಕೊಡು ಅಂತ ಕೇಳೋದಲ್ವೇ’, ‘ಯಾವಾಗ್ಲೂ ನಿನ್ಜೊತೆ ಜಗಳ ಕಾಯ್ತಿದ್ದ ಆ ಮುದುಕಿ ನರಸಜ್ಜಿ, ನಿನ್ ತಂಗಿ ಮಗ ಕಾರ್‌ನಲ್ ಬಂದಿದ್ನ ನೋಡಿ ಇನ್ಮೇಲೆ ಬಾಯ್ಮುಚ್ಕೊಂಡಿರ್ತಾಳೆ ಬಿಡು’ ಇತ್ಯಾದಿ ಮಾತುಗಳಿಗೆ, ನಾನು ಬಂದ ಖುಷಿಯ ಅಮಲಿನಲ್ಲೇ ದೊಡ್ಡಮ್ಮ ಅವರಿಗೆ ಉತ್ತರಿಸಿದಳಂತೆ. ನಾನು ಇನ್ನೂರು ರೂಪಾಯಿ ಕೊಟ್ಟು, ಆರು ತಿಂಗಳ ನಂತರ ಸುಮಾರು ಐನೂರು ರೂಪಾಯಿ ಬೆಲೆ ಬಾಳುವ ಹುಂಜಕ್ಕೆ ಗಾಳ ಹಾಕಿದ ಮರ್ಮ ನನ್ನ ದೊಡ್ಡಮ್ಮನಿಗೆ ತಿಳಿಯಲೇ ಇಲ್ಲ.

ಈಗ ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಭೇಟಿ ಕೊಟ್ಟಿದ್ದನ್ನು ಮೇಲಿನ ವಿಷಯಕ್ಕೆ ಹೋಲಿಸಿ ನೋಡಿದರೆ, ಹರಿದ ರವಿಕೆಯಿಂದ ತೋಳು ಕಾಣುತ್ತಿದ್ದುದನ್ನು ತನ್ನ ಸೆರಗಿನಿಂದ ಮುಚ್ಚಿಕೊಂಡ ದೊಡ್ಡಮ್ಮ, ಟ್ರಂಪ್‍ಗೆ ಕೊಳೆಗೇರಿ ಕಾಣಬಾರದೆಂದು ಗೋಡೆ ಕಟ್ಟಿದ್ದು ಎರಡೂ ಒಂದೇ ಎಂಬಂತೆ ಕಾಣಿಸುತ್ತವೆ. ಅವರ ಭೇಟಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದು, ಆಕೆ ಕಾವಿಗೆ ಇಟ್ಟ ಮೊಟ್ಟೆಯನ್ನು ತೆಗೆದು ಪಲ್ಯ ಮಾಡಿದ್ದು, ಪ್ರಧಾನಿ ಲಕ್ಷಾಂತರ ಜನರನ್ನು ಸೇರಿಸಿದ್ದು, ಆಕೆ ನನ್ನ ತಂಗಿ ಮಗ ಎಂದು ಊರ ಜನರಿಗೆಲ್ಲಾ ನನ್ನನ್ನು ಪರಿಚಯಿಸಿದ್ದು, ಇನ್ನೇನು ನಮ್ಮ ದೇಶದ ಅದೃಷ್ಟ ಖುಲಾಯಿಸಿತು, ಪಾಕಿಸ್ತಾನದ ಹುಟ್ಟಡಗಿಸಲು ಸರಿಯಾದ ಸಮಯ, ಇನ್ಮೇಲೆ ನಮ್ಮ ಶತ್ರು ರಾಷ್ಟ್ರ ಬಾಲಮುದುರಿ ಕೂರುತ್ತೆ ಎಂದೆಲ್ಲಾ ಸುದ್ದಿವಾಹಿನಿಗಳು ಪ್ರಚಾರ ಕೊಟ್ಟಿದ್ದು, ಇತ್ತ ಊರ ಜನರೆಲ್ಲಾ ದೊಡ್ಡಮ್ಮನನ್ನು ಹೊಗಳಿ ಅಟ್ಟಕ್ಕೇರಿಸಿದ್ದು, ಆಕೆ ಬಡತನದಲ್ಲೇ ಶ್ರೀಮಂತಿಕೆ ತೋರಿಸಿ ನನ್ನಿಂದ ಸಹಾಯ ನಿರೀಕ್ಷಿಸಿದ್ದು, ಟ್ರಂಪ್ ಅವರು ನಮ್ಮೊಂದಿಗೆ ವ್ಯಾವಹಾರಿಕ ಒಪ್ಪಂದದ ಭಾಗವಾಗಿ ಯುದ್ಧ ಹೆಲಿಕಾಪ್ಟರ್ ಮತ್ತು ರಕ್ಷಣಾ ಸಾಮಗ್ರಿ ಮಾರಾಟ ಮಾಡಿದ್ದು ಎಲ್ಲವೂ ಕಾಕತಾಳೀಯವೆಂಬಂತೆ ಕಾಣಿಸುತ್ತವೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.