ADVERTISEMENT

ಆನೆ, ಮಾನವ- ಮೊಬೈಲ್ ಸಂಘರ್ಷ

ಆನೆಗಳು ಎದುರಾದಾಗ ಎಚ್ಚರದಿಂದ ಇರಬೇಕಿದ್ದ ಜನ, ವಿಡಿಯೊ ತೆಗೆಯಲು ಹೋಗಿ ಪ್ರಾಣಾಪಾಯ ಆಹ್ವಾನಿಸುವಂತೆ ವರ್ತಿಸತೊಡಗಿರುವುದು ವಿಪರ್ಯಾಸ

ಎಚ್.ಕೆ.ಶರತ್
Published 14 ಜನವರಿ 2021, 19:31 IST
Last Updated 14 ಜನವರಿ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸೆಲ್ಫಿ ವ್ಯಾಮೋಹ ಮತ್ತು ಎಲ್ಲವನ್ನೂ ನೇರವಾಗಿ (ಲೈವ್‌) ಜಗತ್ತಿಗೆ ರವಾನಿಸುವ ಉಮೇದು, ಸುತ್ತಲಿನ ಜಗತ್ತಿನ ಆಗುಹೋಗುಗಳನ್ನು ಸಂಯಮದಿಂದ ಗಮನಿಸುವ ವಿವೇಕವನ್ನೇ ನಮ್ಮಿಂದ ಕಸಿದುಕೊಳ್ಳಲಾರಂಭಿಸಿದೆಯೇ? ಹೀಗೊಂದು ಪ್ರಶ್ನೆ ಮೂಡಲು ಕಾರಣವಾದದ್ದು, ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಅಬ್ಬನ ಗ್ರಾಮಕ್ಕೆ ಇತ್ತೀಚೆಗೆ ಕಾಡಾನೆಯೊಂದು ಬಂದಾಗ ಅಲ್ಲಿನ ಕೆಲ ಯುವಕರು ವರ್ತಿಸಿದ ರೀತಿ.

ಆನೆ ಮತ್ತು ಮಾನವ ಸಂಘರ್ಷ ತೀವ್ರ ಸ್ವರೂಪ ಪಡೆದಿರುವ ಹಾಸನ ಜಿಲ್ಲೆಯ ಆಲೂರು-ಸಕಲೇಶಪುರ ಭಾಗದಲ್ಲಿ ಆನೆಗಳು ಊರುಗಳೆಡೆಗೆ ಧಾವಿಸುವುದು ಅಪರೂಪವೇನಲ್ಲ. ಆದರೆ ಈ ಬಾರಿ ಬೆಳ್ಳಂಬೆಳಗ್ಗೆ ಜನಸಂದಣಿ ಇರುವ ಕಡೆಯೇ ಆನೆಯೊಂದು ರಸ್ತೆಯಲ್ಲಿ ಸಾಗಿದ್ದರಿಂದ ಮತ್ತು ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ ಕಾರಣಕ್ಕೆ ಹೆಚ್ಚು ಜನರ ಗಮನ ಸೆಳೆಯಿತು.

ಕಾಡಾನೆಯೊಂದು ಊರ ರಸ್ತೆಯಲ್ಲಿ ಸಾಗುವಾಗ ಅದರಿಂದ ಅಂತರ ಕಾಯ್ದುಕೊಳ್ಳಲು ಮುಂದಾಗುವ ಬದಲು, ಕೆಲ ಯುವಕರು ಆನೆಯನ್ನೇ ಹಿಂಬಾಲಿಸುತ್ತ ಮೊಬೈಲ್‍ನಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ಮತ್ತು ವಿಡಿಯೊ ಮಾಡುವುದರಲ್ಲೇ ಮಗ್ನರಾಗಿದ್ದರು. ಯುವಕರ ಈ ವರ್ತನೆಯು ಕಾಡುಪ್ರಾಣಿ ಮತ್ತು ಮಾನವರ ನಡುವಿನ ಸಂಘರ್ಷ ತೀವ್ರಗೊಂಡಿರುವ ಪ್ರದೇಶಗಳಲ್ಲಿ ಸಾವು-ನೋವಿನ ಪ್ರಮಾಣ ಕಡಿಮೆ ಮಾಡಲು ಜನಸಮೂಹದಲ್ಲಿ ಸೂಕ್ತ ತಿಳಿವಳಿಕೆ ಮೂಡಿಸುವ ಅಗತ್ಯ ಇರುವುದಕ್ಕೆ ಹಿಡಿದ ಕನ್ನಡಿಯಂತೆಯೂ ತೋರುತ್ತಿತ್ತು.

ADVERTISEMENT

ಸುತ್ತಲಿನ ಜಗತ್ತನ್ನು ಅರಿಯುವ ಸಂಯಮವೇ ಇಲ್ಲವಾಗುತ್ತ, ಕಂಡದ್ದೆಲ್ಲವನ್ನೂ ಜಗತ್ತಿಗೆ ನೇರವಾಗಿ ಬಿತ್ತರಿಸುವ ಉಮೇದು ವ್ಯಾಪಿಸುತ್ತಿದೆ. ಇದರಿಂದ, ಪ್ರಾಣಿ-ಮಾನವ ಸಂಘರ್ಷ ಚಾಲ್ತಿಯಲ್ಲಿರುವ ಪ್ರದೇಶಗಳಲ್ಲಿ ಆಯಾ ಪ್ರಾಣಿಗಳ ಜೀವನಕ್ರಮ, ವರ್ತನೆ ಮತ್ತು ಅವು ಎದುರಾದಾಗ ಅನುಸರಿಸಬೇಕಿರುವ ಕ್ರಮಗಳ ಕುರಿತು ಅರಿವು ಮೂಡಿಸುವ ದಿಸೆಯಲ್ಲಿ ಸರ್ಕಾರ ಚಿಂತಿಸುವ ಅಗತ್ಯವಿದೆ.

ಬೇರೆ ದಾರಿ ಕಾಣದೆ ಕಳೆದ ಕೆಲ ದಶಕಗಳಿಂದಲೂ ಕಾಡುಪ್ರಾಣಿಗಳೊಂದಿಗೆ ಏಗುತ್ತಲೇ ಬದುಕು ದೂಡುತ್ತ ಬಂದವರಲ್ಲಿ ಸಹಜವಾಗಿಯೇ ತಾವು ನೆಲೆಸಿರುವ ಭಾಗದಲ್ಲಿರುವ ಪ್ರಾಣಿಗಳ ಜೀವನಕ್ರಮ ಮತ್ತು ವರ್ತನೆಯ ಕುರಿತು ತಕ್ಕಮಟ್ಟಿಗೆ ತಿಳಿವಳಿಕೆ ಇರುತ್ತಿತ್ತು. ಕಾಡುಪ್ರಾಣಿಗಳಿಂದ ಸಾಧ್ಯವಾದಷ್ಟೂ ಅಂತರ ಕಾಯ್ದುಕೊಂಡು ಹೋಗುವ ಸಂಯಮವೂ ಇತ್ತು.

ಬೆರಳ ತುದಿಯಲ್ಲೇ ಮಾಹಿತಿ ಲಭ್ಯವಿರುವ ಪ್ರಸ್ತುತ ಸಂದರ್ಭದಲ್ಲಿ, ಹಾಗೆ ಲಭ್ಯವಿರುವ ಮಾಹಿತಿಯನ್ನು ತಮ್ಮ ಸುತ್ತಲಿನ ಜಗತ್ತನ್ನು ಅರಿಯಲು ತೆರೆದುಕೊಂಡಿರುವ ಹೊಸ ಕಿಟಕಿಗಳಂತೆ ಯುವ ಸಮೂಹ ಬಳಸಬೇಕಿತ್ತು. ಅದರ ಬದಲಿಗೆ, ತಮ್ಮಲ್ಲಿ ಇರುವುದನ್ನೆಲ್ಲ ಜಗತ್ತಿನ ಮುಂದೆ ತೆರೆದಿಡಲು ಇರುವ ಬಾಗಿಲಾಗಿ ಸಾಮಾಜಿಕ ಜಾಲತಾಣಗಳನ್ನು ಅವರು ಪರಿಭಾವಿಸತೊಡಗಿದ್ದಾರೆ. ಇದರಿಂದ ಯುವ ಸಮೂಹಕ್ಕೆ ಪ್ರಾಣಿಗಳೂ ಅವುಗಳೊಂದಿಗೆ ಹೆಣಗಾಡಬೇಕಿರುವ ತಮ್ಮ ಬದುಕೂ ಪ್ರದರ್ಶನದ ಸರಕಾಗಿಯಷ್ಟೇ ಗೋಚರಿಸತೊಡಗಿದೆ.

ಆಲೂರು- ಸಕಲೇಶಪುರ ಭಾಗದಲ್ಲಿ ಆನೆಗಳ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ಸಮಸ್ಯೆ ದಿನೇ ದಿನೇ ಬಿಗಡಾಯಿಸುತ್ತಿದೆ. ಆನೆ ದಾಳಿಗೆ ಸಿಲುಕಿ ಯಾರಾದರೂ ಸಾವನ್ನಪ್ಪಿದಾಗ, ಜನರ ಆಕ್ರೋಶ ತಣಿಸುವ ಸಲುವಾಗಿ ಒಂದೆರಡು ಆನೆಗಳನ್ನು ಸೆರೆ ಹಿಡಿದು ಬೇರೆಡೆಗೆ ಸಾಗಿಸುವ ಕಸರತ್ತೂ ದಶಕಗಳಿಂದ ಚಾಲ್ತಿಯಲ್ಲಿದೆ.

ಸಮಸ್ಯೆಯ ಸ್ವರೂಪ ಮತ್ತು ಅದರ ತೀವ್ರತೆ ತಗ್ಗಿಸಲು ಇರುವ ಮಾರ್ಗೋಪಾಯಗಳ ಕುರಿತು ಮುಕ್ತವಾಗಿ ಚರ್ಚಿಸುವ ಇಚ್ಛೆ ಸರ್ಕಾರಕ್ಕೂ ಇದ್ದಂತಿಲ್ಲ. ಇಂತಹ ಸಂದರ್ಭದಲ್ಲಿ, ಆನೆಗಳು ಎದುರಾದರೆ ಎಚ್ಚರದಿಂದ ಇರಬೇಕಿದ್ದ ಜನರೇ ವಿಡಿಯೊ ತೆಗೆಯಲು ಹೋಗಿ ಪ್ರಾಣಾಪಾಯ ಆಹ್ವಾನಿಸುವಂತೆ ವರ್ತಿಸತೊಡಗಿರುವುದು ವಿಪರ್ಯಾಸ.

ಉದ್ದಿಮೆ ವಲಯಕ್ಕೆ ಅಗತ್ಯವಿರುವ ಮಾನವ ಸಂಪನ್ಮೂಲ ಒದಗಿಸುವ ದಿಸೆಯಲ್ಲಿ ಯುವ ಸಮುದಾಯಕ್ಕೆ ಕೌಶಲ ತರಬೇತಿ ನೀಡಲು ಮತ್ತು ಉದ್ದಿಮೆಗಳ ಅಗತ್ಯಕ್ಕೆ ಅನುಗುಣವಾಗಿ ಶೈಕ್ಷಣಿಕ ಪಠ್ಯಕ್ರಮ ರೂಪಿಸಲು ಮುತುವರ್ಜಿ ತೋರುವ ಸರ್ಕಾರ, ಬದುಕು ಕಟ್ಟಿಕೊಳ್ಳಲು ಅಗತ್ಯವಿರುವ ಪರಿಸರದ ಕುರಿತು ಅರಿವು ಮೂಡಿಸುವ ಬಗ್ಗೆಯೂ ಚಿಂತಿಸಬೇಕಿದೆ.

ಪ್ರಾಣಿ-ಮಾನವ ಸಂಘರ್ಷ ಚಾಲ್ತಿಯಲ್ಲಿರುವ ಪ್ರದೇಶಗಳ ಶಾಲಾ-ಕಾಲೇಜು ವಿದ್ಯಾರ್ಥಿಗಳು ತಮ್ಮ ಪಠ್ಯದಲ್ಲೇ ಈ ಕುರಿತು ಓದುವಂತಾದರೆ ಒಳಿತಲ್ಲವೇ? ಸುತ್ತಲಿನ ಪರಿಸರ ಅರಿಯಲು ನೆರವಾಗುವುದು ಕೂಡ ಶಿಕ್ಷಣದ ಆದ್ಯತೆಯಲ್ಲವೇ? ಇದು ಕೂಡ ಬದುಕಲು ಅಗತ್ಯವಿರುವ ಕೌಶಲವಲ್ಲವೇ?

ನಗರಗಳಲ್ಲಿ ನೆಲೆಸಿರುವ ಜನ ಮೊದಲೆಲ್ಲ ಅಪರೂಪಕ್ಕೆ ಹಳ್ಳಿಗಳಿಗೆ ಭೇಟಿ ನೀಡಿ, ಕಾಡುಪ್ರಾಣಿಗಳಿಗೂ ಪ್ರಾಣಿಸಂಗ್ರಹಾಲಯದಲ್ಲಿ ಸಾಕುವ ಪ್ರಾಣಿಗಳಿಗೂ ವ್ಯತ್ಯಾಸವೇ ಇಲ್ಲ ಎನ್ನುವಂತೆ ಮಾತನಾಡುವುದನ್ನು ಕಂಡು ಸ್ಥಳೀಯರು ನಗುತ್ತಿದ್ದರು. ಆದರೆ ಇಂದು, ತಮ್ಮ ಪರಿಸರದಲ್ಲಿ ನೆಲೆಸಿರುವ ಪ್ರಾಣಿಗಳು ಎದುರಾದರೆ ಅವುಗಳೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬ ಸ್ಥಳೀಯರ ತಿಳಿವಳಿಕೆಯನ್ನು, ಜಗತ್ತಿಗೆ ಎಲ್ಲವನ್ನೂ ನೇರವಾಗಿ ಬಿತ್ತರಿಸುವ ಧಾವಂತ ಹೊಸಕಿ ಹಾಕುತ್ತಿರುವಂತೆ ಭಾಸವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.