ADVERTISEMENT

ಸಂಗತ: ಎಲ್ಲರೂ ನಮ್ಮವರೆ, ನಮ್ಮ ಗೆಳೆಯರೆ!

ತಾನು ನಾಗರಿಕ ಅಂದುಕೊಂಡ ಮನುಷ್ಯನೊಳಗೆ ಅನಾಗರಿಕತೆ ಇನ್ನೂ ಜೀವಂತವಾಗಿರುವುದನ್ನು ಅಲ್ಲಲ್ಲಿ ನಡೆಯುವ ಪ್ರಕರಣಗ

ಸದಾಶಿವ ಸೊರಟೂರು
Published 7 ಅಕ್ಟೋಬರ್ 2022, 0:15 IST
Last Updated 7 ಅಕ್ಟೋಬರ್ 2022, 0:15 IST
Sangatha 07102022
Sangatha 07102022   

ಮನುಕುಲದ ಕಥೆ ಅನಾಗರಿಕತೆಯಿಂದ ನಾಗರಿಕತೆಯೆಡೆಗೆ ನಡೆದ ಕಥೆಯಷ್ಟೇ ಅಲ್ಲ ಶೋಷಣೆಯ ಕಥೆಯೂ ಹೌದು.‌ ಮನುಷ್ಯ ತಾನು ಎಷ್ಟೇ ಬೆಳೆದು ಮುಂದೆ ಬಂದಿದ್ದರೂ ಶೋಷಿಸುವ ಮನೋಭಾವವನ್ನು ಅಷ್ಟೇ ಜತನವಾಗಿ ಉಳಿಸಿಕೊಂಡು ಬಂದಿರುವುದು ದುರ್ದೈವ. ಹೊಸ ಹೊಸ ರೂಪದಲ್ಲಿ ಶೋಷಣೆ ಅಸ್ತಿತ್ವದಲ್ಲಿರುವುದು ವಿಷಾದಕರ. ಅದು ಮನುಷ್ಯನ ರಕ್ತದಲ್ಲಿ ಬೆರೆತುಹೋದ ಅಮಲು. ತಾನು ನಾಗರಿಕ ಅಂದುಕೊಂಡ ಅವನೊಳಗೆ ಅನಾಗರಿಕತೆ ಇನ್ನೂ ಜೀವಂತವಾಗಿದೆ.

ಮೊನ್ನೆಯಷ್ಟೆ ಒಬ್ಬ ಫೋಟೊಗ್ರಾಫರ್ ಮಾಡಿದ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಒಳಗಾಯಿತು. ಪತ್ರಿಕೆಗಳು ಕೂಡ ಅದನ್ನು ವರದಿ ಮಾಡಿದವು. ಒಂದು ಮದುವೆ ಕಾರ್ಯಕ್ಕೆ ಫೋಟೊ ತೆಗೆಯಲು ಹೋದ ಫೋಟೊಗ್ರಾಫರ್‌ನಿಂದ ಬೆಳಿಗ್ಗೆಯಿಂದ ಸಂಜೆವರೆಗೂ ನಿರಂತರವಾಗಿ ಫೋಟೊ ತೆಗೆಸಿಕೊಳ್ಳಲಾಗಿದೆ. ಅವನಿಗೆ ಕುಡಿಯಲು ಒಂದು ಲೋಟ ನೀರೂ ಕೊಡಲಾಗಿಲ್ಲ. ಊಟವೂ ಇಲ್ಲ. ಅವನು ‘ಹತ್ತು ನಿಮಿಷದಲ್ಲಿ ಊಟ ಮಾಡುವೆ, ಅವಕಾಶ ಕೊಡಿ’ ಎಂದು ಕೋರಿದ್ದಾನೆ. ಅವರು ಅದಕ್ಕೂ ಆಸ್ಪದ ನೀಡಿಲ್ಲ. ಹಸಿವಿನಿಂದ ಬಳಲಿದ್ದಾನೆ. ಹಸಿವು ಕೋಪಕ್ಕೆ ತಿರುಗಿದೆ. ಅವನು ಬೆಳಿಗ್ಗೆಯಿಂದ ತೆಗೆದ ಅಷ್ಟೂ ಫೋಟೊಗಳನ್ನು ವರನ ಮುಂದೆಯೇ ಅಳಿಸಿಹಾಕಿದ್ದಾನೆ. ಕಾರಣ ಏನೇ ಇರಲಿ, ಊಟ ಮಾಡಲೂ ಬಿಡದಂತೆ ದಿನಪೂರ್ತಿ ದುಡಿಸಿಕೊಂಡಿದ್ದು ಅನಾಗರಿಕ ವರ್ತನೆ.

ಮೇಲ್ನೋಟಕ್ಕೆ ಇದೊಂದು ನಗೆಯುಕ್ಕಿಸುವ ಪ್ರಸಂಗದಂತೆ ಕಾಣಿಸಿದರೂ ನಾಗರಿಕರೆನಿಸಿಕೊಂಡವರ ಅನಾಗರಿಕತೆಯನ್ನು, ಸಂವೇದನಾರಾಹಿತ್ಯವನ್ನು ತೆರೆದಿಡುತ್ತದೆ. ಫೋಟೊಗ್ರಾಫರ್‌ನ ಜಾಗದಲ್ಲಿ ನಾವು ನಿಂತು ನೋಡಬೇಕು. ಸಾರ್ವಜನಿಕರ ನಡುವೆ ನಿಂತು ಕೆಲಸ ಮಾಡುವ ಕೆಲವರ ಪಾಡು ಹೀಗೇ ಆಗುತ್ತದೆ. ಮನುಷ್ಯರೊಳಗಿನ ಮನುಷ್ಯತ್ವ ಕ್ಷೀಣಿಸುತ್ತಿರುವುದರ ಲಕ್ಷಣಗಳಿವು. ಮದುವೆ ಮನೆಯವರ ದರ್ಪ ಕಾಣಿಸುತ್ತದೆ. ‘ನಾವು ಹಣ ಕೊಡುತ್ತೇವೆ ನೀನು ಕೆಲಸ ಮಾಡಬೇಕಷ್ಟೇ’ ಅನ್ನುವ ಮನಃಸ್ಥಿತಿ ಅಲ್ಲಿದೆ.

ADVERTISEMENT

ಇಲ್ಲಿ ಬರೀ ಜನರಿದ್ದಾರೆ, ಮನುಷ್ಯರ ಸಂಖ್ಯೆ ಕಡಿಮೆ ಇದೆ. ಪ್ರತಿಯೊಬ್ಬನೂ ಇನ್ನೊಬ್ಬ ಕೂಡ ತನ್ನಂತೆ ಎಂದು ಯೋಚಿಸುವಲ್ಲಿ ಸೋಲುತ್ತಿದ್ದಾನೆ. ಅದಕ್ಕೆ ಅವನು ಬೆಳೆಸಿಕೊಂಡಿರುವ ಹಲವು ಅಹಂಗಳು ಅಡ್ಡ ಬರುತ್ತಿವೆ. ನಿಜಕ್ಕೂ ಬೇರೆಯವರ ಖುಷಿಯಲ್ಲೇ ನಮ್ಮ‌ ಖುಷಿಯೂ ಅಡಗಿದೆ ಎಂಬುದು ಅವನ ಅರಿವಿಗೆ ಬರುತ್ತಿಲ್ಲ. ಇದನ್ನೇ ‘ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು’ ಎಂದು ಸರ್ವಜ್ಞ ಹೇಳಿರುವುದು.

ಒಬ್ಬ ತನ್ನ ಮನೆ ಮೇಲಿನ ಹುಲ್ಲು ತೆಗೆಸಲುಕೆಲಸದವನನ್ನು ಕರೆದ. ಅವನು ಅದಕ್ಕೆ ಎರಡು ರೂಪಾಯಿ, ಎರಡು ರೊಟ್ಟಿ ಕೇಳಿದ. ಇವನು ಒಪ್ಪಲಿಲ್ಲ, ಬರೀ ಎರಡು ರೊಟ್ಟಿಗಳನ್ನು ಕೊಡುವುದಾಗಿ ಹೇಳಿದ. ಅವನು ಹೊರಟುಹೋದ. ಮಧ್ಯಾಹ್ನ ಮತ್ತೆ ಬಂದು ಒಂದು ರೂಪಾಯಿ, ಎರಡು ರೊಟ್ಟಿ ಕೇಳಿದ. ಇವನು ಮತ್ತೂ ಒಪ್ಪಲಿಲ್ಲ. ಇನ್ನಷ್ಟು ಹೊತ್ತು ಕಳೆದು ಬಂದು ಅವನು ಐವತ್ತು ಪೈಸೆ ಎರಡು ರೊಟ್ಟಿ ಕೇಳಿದ. ಇವನು ಸುತರಾಂ ಒಪ್ಪಲಿಲ್ಲ. ಅವನು ಮತ್ತೆ‌ ಹೋಗಿ ಸಂಜೆ ಮರಳಿ ಬಂದು ಎರಡು ರೊಟ್ಟಿಗೆ ಒಪ್ಪಿಕೊಂಡು ಕೆಲಸ ಮಾಡಿದ. ಕೆಲವರ ಅಸಹಾಯಕತೆ ಹೇಗೆ ಉಳ್ಳವರಿಗೆ ಶೋಷಣೆಯ ಅಸ್ತ್ರವಾಗುತ್ತಿದೆ ಎಂಬುದನ್ನು ಈ ಪುಟ್ಟ ಕಥೆ ಹೇಳುತ್ತದೆ.

ಕವಿ ಬಶೀರ್ ಬಾದ್ರ ಅವರ ಮಾತು ಎಷ್ಟೊಂದು ಮಾರ್ಮಿಕವಾಗಿದೆ, ‘ಮನೆಗಳ ಮೇಲೆ ಹೆಸರು, ಹೆಸರಿನ ಜೊತೆ ಹುದ್ದೆ, ಘನತೆ ಕಾಣಿಸುತ್ತಿತ್ತು. ಎಷ್ಟೋ ಹುಡುಕಿದೆ, ಆದರೆ ಸಿಗಲಿಲ್ಲ ಒಬ್ಬ ಮನುಷ್ಯನ ವಿಳಾಸ ಕೂಡ’ ಅಂತ ಬರೆಯುತ್ತಾರೆ. ಹೌದು, ನಮ್ಮಲ್ಲಿ ಮನುಷ್ಯರ ಕೊರತೆ ಇದೆ. ಮನುಷ್ಯತ್ವದ ಕೊರತೆ ಇದೆ. ನಮ್ಮ ಬಹುತೇಕ ಸಮಸ್ಯೆಗಳು ಮನುಷ್ಯತ್ವದಿಂದಬಗೆಹರಿಯುತ್ತವೆ.

ಪತ್ರಿಕೆ ಹಾಕುವ ಹುಡುಗ ಹತ್ತು ನಿಮಿಷ ತಡವಾಗಿ ಬಂದರೆ ಬೈಯುತ್ತೇವೆ. ಅವನ ಸೈಕಲ್ ಕೈಕೊಟ್ಟಿತ್ತೊ, ಮಳೆ ಸುರಿದ ಕಾರಣವೊ ನಾವು ಯೋಚಿಸುವುದಿಲ್ಲ, ಮನೆ ಕೆಲಸದವರನ್ನು ಮನಬಂದಂತೆ ನಡೆಸಿ
ಕೊಳ್ಳುತ್ತೇವೆ. ಪೌರಕಾರ್ಮಿಕರು ಬರೀ ಸ್ವಚ್ಛ ಮಾಡಲು ಹುಟ್ಟಿದವರು ಎಂಬಂತೆ ಒಂದು ನಿರ್ಲಕ್ಷ್ಯದ ದೃಷ್ಟಿಯಿಂದ ಅವರನ್ನು ನೋಡುತ್ತೇವೆ. ಹೋಟೆಲ್ ಮಾಣಿ, ಕಾವಲುಗಾರ, ಕೂಲಿಯವರನ್ನೆಲ್ಲ ಉಡಾಫೆ ಯಿಂದ ನಡೆಸಿಕೊಳ್ಳುತ್ತೇವೆ. ನಾವು ಅವರಿಗೆ ದುಡ್ಡು ಕೊಡುತ್ತೇವೆ ಮತ್ತು ಅವರಿರುವುದು ನಮ್ಮ ಸೇವೆಗೆ ಎಂಬ ದರ್ಪದ ಮನೋಭಾವ ನಮ್ಮದು. ನಾವು ಮನಸ್ಸಿನಿಂದ ನೋಡುವುದಿಲ್ಲ, ಹಣದಿಂದ ನೋಡುತ್ತೇವೆ.

ನೆನಪಿರಲಿ, ಅವರಿಗೂ ಮನಸ್ಸಿದೆ, ಸ್ವಾಭಿಮಾನವಿದೆ. ನೀವು ಹಣ ಕೊಡುವುದು ಅವರ ಕೆಲಸಕ್ಕಷ್ಟೇ. ಅವರ ಆತ್ಮಗೌರವಕ್ಕಲ್ಲ. ಅದಕ್ಕೆ ಬೆಲೆ ಕಟ್ಟಲಾಗದು. ಇನ್ನೊಬ್ಬರನ್ನು ಗೌರವಿಸುವುದರಲ್ಲಿ ಮನುಷ್ಯನ ಶ್ರೇಷ್ಠತೆ ಅಡಗಿದೆ. ತಮಿಳು ಉಕ್ತಿಯೊಂದಿದೆ. ‘ಎಲ್ಲವೂ ನಮ್ಮೂರೆ, ಎಲ್ಲರೂ ನಮ್ಮ ಗೆಳೆಯರೆ’ ಎನ್ನುವುದು ಅದರ ತತ್ವ. ನಮ್ಮನ್ನು ಎಂದಿಗೂ ಪೊರೆಯಬೇಕಾದ ತತ್ವ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.