ADVERTISEMENT

ಸಂಗತ | ಪ್ರದರ್ಶನಪ್ರಿಯತೆ: ಔಚಿತ್ಯಪ್ರಜ್ಞೆ ಮರೆ

ವೈಯಕ್ತಿಕ ಸಂಗತಿಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳುವ ಖಯಾಲಿ ವ್ಯಾಪಕವಾಗುತ್ತಿದೆ. ಅಸಹಾಯಕರು, ದುರ್ಬಲರಿಗೆ ನೀಡುವ ನೆರವೂ ಪ್ರಚಾರಪ್ರಿಯತೆಯ ಭಾಗವಾಗುವುದು ಸರಿಯಲ್ಲ.

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 0:40 IST
Last Updated 23 ಜೂನ್ 2025, 0:40 IST
   

‘ಇಂದು ನನ್ನ ಮಗನ ಹುಟ್ಟುಹಬ್ಬ. ಅವನ ಬರ್ತ್‌ ಡೇಗೆ ಎಷ್ಟೊಂದು ಮಂದಿ ವಿಶ್‌ ಮಾಡಿದ್ದಾರೆ ನೋಡಿ’ ಎಂದು ಗೆಳೆಯರೊಬ್ಬರು ಮೊಬೈಲ್‌ ಫೋನ್‌ ತೆಗೆದು ತೋರಿಸಿದರು. ‘ನಿಮ್ಮ ಮಗನ ಬರ್ತ್‌ ಡೇ ವಿಷಯ ಅವರಿಗೆಲ್ಲ ಹೇಗೆ ಗೊತ್ತು?’ ಎನ್ನುವ ಪ್ರಶ್ನೆಗೆ ಅವರ ಉತ್ತರ: ‘ನಾನು ವಾಟ್ಸ್‌ಆ್ಯಪ್‌ನಲ್ಲಿ ಸ್ಟೇಟಸ್‌ ಹಾಕಿದ್ದೆ’. 

ಜನರೊಂದಿಗೆ ಹೆಚ್ಚಿನ ಒಡನಾಟವಿರುವ ಹಾಗೂ ಸ್ವಂತ ಉದ್ಯಮ ಹೊಂದಿರುವ ಗೆಳೆಯರ ಸಂಭ್ರಮ ವಿಚಿತ್ರವಾಗಿ ಕಾಣಿಸಿತು. ಹುಟ್ಟುಹಬ್ಬ ಖಾಸಗಿ ವಿಚಾರ. ಮಕ್ಕಳ ಹುಟ್ಟುಹಬ್ಬವನ್ನು ಮನೆಯಲ್ಲಿ ಆಚರಿಸಿ, ಶುಭ ಹಾರೈಸಿದರೆ ಸಾಕು. ಮಕ್ಕಳು ದೂರದಲ್ಲಿದ್ದರೆ ದೂರವಾಣಿ ಮೂಲಕ ಶುಭಾಶಯ ಹೇಳಬಹುದು. ಸಮೀಪದ ಬಂಧುಮಿತ್ರರು ಹುಟ್ಟುಹಬ್ಬದಂತಹ ವೈಯಕ್ತಿಕ ವಿಷಯಗಳನ್ನು ನೆನಪಿಟ್ಟುಕೊಂಡು ಶುಭಾಶಯ ಹೇಳಿದಾಗ ಸಂತೋಷ ಪಡುವುದರಲ್ಲಿ ತಪ್ಪೇನೂ ಇಲ್ಲ.

ಆದರೆ, ಫೇಸ್‌ಬುಕ್‌ ಅಥವಾ ವಾಟ್ಸ್‌ಆ್ಯಪ್‌ ಮೂಲಕ ತಾವೇ ಪ್ರಚಾರ ಕೊಟ್ಟುಕೊಳ್ಳುವುದು, ಆ ಪೋಸ್ಟ್‌ಗಳನ್ನು ನೋಡಿದವರು ಔಪಚಾರಿಕವಾಗಿ ಹಾರೈಸಿದಾಗ ಸಂಭ್ರಮಿಸುವುದು ಹುಸಿ ಸಂಭ್ರಮದಂತೆ ಕಾಣಿಸುತ್ತದೆ.

ADVERTISEMENT

ಮದುವೆಯ ವಾರ್ಷಿಕೋತ್ಸವ, ಪರೀಕ್ಷೆಗಳಲ್ಲಿ ಮಕ್ಕಳ ಸಾಧನೆಯಂತಹವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂಭ್ರಮಿಸುವವರೂ ಇದ್ದಾರೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶ ಪ್ರಕಟಗೊಂಡ ಸಂದರ್ಭದಲ್ಲಂತೂ ಸಾಮಾಜಿಕ ಜಾಲತಾಣಗಳು ಮಕ್ಕಳ ಅಂಕಪಟ್ಟಿಗಳಿಂದ ತುಂಬಿ ಹೋಗಿರುತ್ತವೆ. ವೈಯಕ್ತಿಕ ಸಂಭ್ರಮವನ್ನು ಹೀಗೆ ಸಾರ್ವಜನಿಕವಾಗಿ ಜಾಹೀರುಗೊಳಿಸುವುದೂ ಪ್ರಚಾರಪ್ರಿಯತೆಯ ಭಾಗವೇ. ಪ್ರದರ್ಶನ, ಪ್ರಚಾರಕ್ಕಾಗಿ ಹಣ ಕೊಟ್ಟು ಪ್ರಾಯೋಜಿತ ಸೇವೆಗಳನ್ನು ಬಳಸಿಕೊಳ್ಳುವವರೂ ಇದ್ದಾರೆ.

ವೈಯಕ್ತಿಕ ಕಷ್ಟ– ಸುಖಗಳನ್ನು ಹಂಚಿಕೊಳ್ಳುವುದು ಮನುಷ್ಯ ಸಹಜ ಗುಣ. ನೋವು, ದುಗುಡವನ್ನು ಹಂಚಿಕೊಂಡಾಗ ಮನಸ್ಸು ಹಗುರವಾಗುತ್ತದೆ. ಹಂಚಿಕೊಳ್ಳುವುದರಿಂದ ಸಂತೋಷವೂ ಹೆಚ್ಚಾಗುತ್ತದೆ. ಆದರೆ, ನೋವು– ನಲಿವಿನ ಹಂಚಿಕೊಳ್ಳುವಿಕೆಯು ಆತ್ಮೀಯ ವಲಯಕ್ಕೆ ಸೀಮಿತವಾಗಿದ್ದರೆ ಚೆನ್ನ. ಉಳಿದವರಿಗೆ ಪ್ರೇರಣೆ ಆಗಲೆನ್ನುವ ಸದುದ್ದೇಶದಿಂದ ಅಪರೂಪದ ವೈಯಕ್ತಿಕ ಸಾಧನೆಯನ್ನು ಸಾರ್ವಜನಿಕವಾಗಿ ಹಂಚಿಕೊಂಡರೆ ತಪ್ಪೇನಿಲ್ಲ.

ಸ್ವಯಂ ಪ್ರಚಾರ ಮಾಡಿಕೊಳ್ಳುವುದರಲ್ಲಿ ಸರಿ– ತಪ್ಪು ಪ್ರಶ್ನೆ ಉದ್ಭವಿಸುವುದೇ ಇಲ್ಲ ಎಂದು ಹೇಳುವವರೂ ಇದ್ದಾರೆ. ಸ್ವಯಂ ಪ್ರದರ್ಶನವನ್ನು ಪ್ರಶ್ನಿಸಿದಾಗ, ‘ನಾವು ಹೇಗಾದರೂ ಇರುತ್ತೇವೆ, ಏನಾದರೂ ಮಾಡಿಕೊಳ್ಳುತ್ತೇವೆ, ನಿಮಗೇನು ಕಷ್ಟ?’ ಎಂದು ಮರುಪ್ರಶ್ನೆ ಹಾಕುವವರೂ ಇದ್ದಾರೆ. ನಿಜ, ಇವೆಲ್ಲ ಅವರವರ ಇಷ್ಟಕ್ಕೆ ಸಂಬಂಧಿಸಿದ ವಿಚಾರಗಳು. ನಾವು ಯೋಚಿಸಬೇಕಾದುದು ಔಚಿತ್ಯದ ಪ್ರಶ್ನೆಯನ್ನು. ಯಾವುದು ಸಾರ್ವಜನಿಕ ಪ್ರಚಾರಕ್ಕೆ ಅರ್ಹ, ಯಾವುದು ಅಲ್ಲ ಎಂಬ ವಿವೇಕ ನಮ್ಮಲ್ಲಿ ಇರಬೇಕು. ಸಾರ್ವಜನಿಕ ಮಹತ್ವವಿರುವಂತಹ ವಿದ್ಯಮಾನ, ಘಟನೆಗಳು ಬೆಳಕಿಗೆ ಬರುವುದಕ್ಕೆ ಅವಕಾಶ ಕಲ್ಪಿಸುವುದರಲ್ಲಿ ಅರ್ಥವಿದೆ ಎನ್ನುವುದನ್ನು ಅರಿತುಕೊಂಡಾಗ ‘ಯಾವುದು ಖಾಸಗಿ’ ಎನ್ನುವುದೂ ನಮ್ಮ ಅರಿವಿಗೆ ತಾನಾಗಿಯೇ ಬರುತ್ತದೆ.

ಪ್ರಸ್ತುತ ಕಾಲಘಟ್ಟದಲ್ಲಿ ಮನುಷ್ಯ ಒಳಗಿನಿಂದ ತಬ್ಬಲಿಯಾಗುತ್ತಿದ್ದಾನೆ. ಮನುಷ್ಯ ಸಂಬಂಧ, ಒಡನಾಟ, ಆತ್ಮೀಯತೆ ಕಡಿಮೆ ಆಗುತ್ತಿರುವಾಗ, ಖಾಸಗಿ ಸಂಗತಿಗಳ ಮೂಲಕ ಜನರ ಗಮನ ಸೆಳೆದು ಒಳಗಿನ ಖಾಲಿತನ ತುಂಬಿಕೊಳ್ಳುವ ಪ್ರಯತ್ನ ಪ್ರದರ್ಶನಪ್ರಿಯತೆ ಆಗಿರಬಹುದೇ? ಏನೇ ಇರಲಿ, ಸಣ್ಣಪುಟ್ಟ ವೈಯಕ್ತಿಕ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರಚಾರ ಪಡೆಯಲು ಬಯಸುವುದು ವ್ಯಕ್ತಿತ್ವದ ಘನತೆಯನ್ನು ಕುಗ್ಗಿಸುತ್ತದೆ; ಕೆಲವೊಮ್ಮೆ ಅಪಹಾಸ್ಯಕ್ಕೂ ಆಸ್ಪದ ಕಲ್ಪಿಸುತ್ತದೆ.

ಸಾರ್ವಜನಿಕ ಮಹತ್ವವಿರುವ ಘಟನೆಗಳಿಗೆ ಪ್ರಚಾರ ದೊರೆಯುವುದು ಅಗತ್ಯ. ಆದರೆ ಇಲ್ಲಿಯೂ ಸಂವೇದನೆ, ವಿವೇಕ, ಔಚಿತ್ಯಪ್ರಜ್ಞೆ ಮುಖ್ಯ. ಉದಾಹರಣೆ ನೋಡಿ: ಅಂಗವಿಕಲ ಯುವಕನೊಬ್ಬನಿಗೆ ಗಾಲಿಕುರ್ಚಿ ದಾನ ಮಾಡುವ ಒಂದು ಗುಂಪು, ಆ ಅಸಹಾಯಕನನ್ನು ಕುರ್ಚಿಯಲ್ಲಿ ಕೂರಿಸಿ, ಸೂಟುಬೂಟಿನಲ್ಲಿ ಅವನ ಹಿಂದೆ ನಗುತ್ತಾ ನಿಂತು ಫೋಟೊ ತೆಗೆಸಿಕೊಳ್ಳುತ್ತದೆ. ಇಂಥ ಫೋಟೊ– ವರದಿಗಳು ಮಾಧ್ಯಮಗಳಲ್ಲೂ ಪ್ರಕಟಗೊಳ್ಳುತ್ತವೆ.

ಬಡ ಕುಟುಂಬವೊಂದಕ್ಕೆ ₹10 ಸಾವಿರ ನೆರವು ನೀಡುವ ಹತ್ತು ಮಂದಿ ವ್ಯಾಪಕ ಪ್ರಚಾರಕ್ಕೆ ಮುಂದಾಗುತ್ತಾರೆ. ಇಂತಹ ಸಣ್ಣಪುಟ್ಟ ಸಹಾಯಗಳಿಗೆ ಮೀತಿ ಮೀರಿದ ಪ್ರಚಾರ ಅಗತ್ಯವೇ? ಅಸಹಾಯಕರು, ದುರ್ಬಲರನ್ನು ನೆರವಿನ ನೆಪದಿಂದ ಪ್ರಚಾರಕ್ಕೆ ಬಳಸಿಕೊಳ್ಳುವುದು ನ್ಯಾಯೋಚಿತವೇ? ಇಂತಹ ಮನೋಭಾವವನ್ನು ಗಮನಿಸಿಯೇ ನಮ್ಮ ಹಿರಿಯರು, ‘ಬಲಗೈಯಲ್ಲಿ ನೀಡಿದ್ದು ಎಡಗೈಗೆ ಗೊತ್ತಾಗಬಾರದು’ ಎಂದು ಹೇಳಿರುವುದು.

ಕೊರೊನಾ ಕಾಲದಲ್ಲಿ ಸಮಾಜಮುಖಿ ಚಟುವಟಿಕೆಗಳು ಹಾಗೂ ನೆರವಿನ ಮಹಾಪೂರವೇ ಹರಿಯಿತು. ಆ ಸಂದರ್ಭದಲ್ಲಿ ಪ್ರಚಾರಪ್ರಿಯರನ್ನು ಗಮನದಲ್ಲಿಟ್ಟುಕೊಂಡ ಒಂದು ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಜನರ ಗಮನಸೆಳೆದಿತ್ತು. ‘ಸಮಾಜ ಸೇವೆಗೆ ಹೊರಡುವಾಗ ಕ್ಯಾಮೆರಾವನ್ನು ಮನೆಯಲ್ಲಿಯೇ ಬಿಟ್ಟು ಹೋಗಿ’ ಎನ್ನುವ ಆ ವಿಡಿಯೊದಲ್ಲಿನ ಮಾತು ಪ್ರಚಾರಕ್ಕೆ ಹಾತೊರೆಯುವವರನ್ನು ಎಚ್ಚರಿಸುವಂತಿತ್ತು. 

ಪ್ರಚಾರ– ಪ್ರದರ್ಶನಗಳ ಅಬ್ಬರದ ನಡುವೆಯೂ ಯಾವುದೇ ಅತಿರೇಕ, ಆಡಂಬರವಿಲ್ಲದೆ ಸಮಾಜಮುಖಿ ಚಟುವಟಿಕೆಗಳಲ್ಲಿ ಸದ್ದಿಲ್ಲದೆ ತೊಡಗಿಕೊಂಡಿರುವ ಸಂಘಟನೆಗಳು ಬಹಳಷ್ಟಿವೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡೂ ಎಲೆ ಮರೆಯ ಕಾಯಿಗಳಂತೆ ಇರುವವರೂ ಇದ್ದಾರೆ. ಜನರ ಹೃದಯ ಗೆಲ್ಲುವುದು ಇದೇ ವರ್ಗವೆಂದು ಬಿಡಿಸಿ ಹೇಳಬೇಕಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.