ADVERTISEMENT

ಮಾನಸಿಕ ಆರೋಗ್ಯ: ಯಾರು ಹೊಣೆ?

ಮಾನಸಿಕ ರೋಗಿಗಳು ಸಿನಿಮಾಗಳಲ್ಲಿ ತೋರಿಸುವ ‘ವಿಚಿತ್ರ ನಟ’ರಂತೆ ಇರುವುದಿಲ್ಲ ಎಂಬುದು ಮನೋವೈದ್ಯಕೀಯ ಚಿಕಿತ್ಸಾ ಕೇಂದ್ರಗಳಿಗೆ ಭೇಟಿ ನೀಡಿದರೆ ಗೊತ್ತಾಗುತ್ತದೆ!‌

ಡಾ.ಕೆ.ಎಸ್.ಪವಿತ್ರ
Published 25 ಏಪ್ರಿಲ್ 2019, 20:45 IST
Last Updated 25 ಏಪ್ರಿಲ್ 2019, 20:45 IST
ಅಅಅ
ಅಅಅ   

ಸಿನಿಮಾ ಮತ್ತು ಮನೋರೋಗಗಳ ನಡುವೆ ಇರುವ ನಂಟು ಈಗ ಮತ್ತೊಮ್ಮೆ ಗೊಂದಲಕ್ಕೆ ಬಿದ್ದಿದೆ. ಸಿನಿಮಾಗಳಲ್ಲಿ ಮಾನಸಿಕ ರೋಗಗಳ ಚಿತ್ರಣ ಚಿತ್ರವಿಚಿತ್ರವಾಗಿ ನಡೆಯುವುದು ಅಪರೂಪವೇನೂ ಅಲ್ಲ. ಮನೋರೋಗಿಗಳನ್ನು ಅಪಾಯಕರವಾಗಿ, ಅಸ್ತವ್ಯಸ್ತ ಉಡುಗೆ- ತೊಡುಗೆಯುಳ್ಳವರಾಗಿ, ಅಪಹಾಸ್ಯದಿಂದ ಚಿತ್ರಿಸುವುದು ಸರ್ವೇಸಾಮಾನ್ಯ.

ಇತ್ತೀಚೆಗೆ ಸಿನಿಮಾ ಉದ್ಯಮದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮನೋರೋಗಗಳನ್ನು ಮತ್ತಷ್ಟು ಅವಹೇಳನ ಮಾಡುವಂತೆ ಸಿನಿಮಾ ಶೀರ್ಷೀಕೆಗಳನ್ನು ಇಡುವ ಪ್ರವೃತ್ತಿಯೂ ಮೊದಲಾಗಿದೆ. 2014ರಲ್ಲಿ, ಅಂದರೆ ಸುಮಾರು ಐದು ವರ್ಷಗಳ ಹಿಂದೆ ಸಿನಿಮಾ ಒಂದಕ್ಕೆ ‘ನಿಮ್ಹಾನ್ಸ್’ ಎಂದು ಹೆಸರಿಡಲಾಗಿತ್ತು. ಈ ಶೀರ್ಷಿಕೆಯನ್ನು ತೆಗೆದುಹಾಕಬೇಕೆಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌) ನ್ಯಾಯಾಲಯದ ಮೆಟ್ಟಿಲು ಏರಿತ್ತು. ನ್ಯಾಯಾಲಯ ಆ ಶೀರ್ಷಿಕೆಯನ್ನು ರದ್ದುಪಡಿಸಿ ತೀರ್ಪೂ ಇತ್ತಿತ್ತು.

ಅದರ ನಿರ್ದೇಶಕರು ಹೇಳಿದಂತೆ ‘ನಿಮ್ಹಾನ್ಸ್, ಸರ್ಕಾರದ ಸಂಸ್ಥೆ. ‘ಸಿಬಿಐ’ ಎಂಬ ಸಿನಿಮಾ ಹೆಸರಿನಂತೆ ಅದನ್ನೂ ಯಾರು ಬೇಕಾದರೂ ಉಪಯೋಗಿಸಬಹುದು’. ಅವರ ಈ ವಾದವನ್ನು ನಿಮ್ಹಾನ್ಸ್ ವಿರೋಧಿಸಿತ್ತು. ಇಲ್ಲಿ ‘ನಿಮ್ಹಾನ್ಸ್’ ಹೆಸರನ್ನು ‘ತಲೆ ಸರಿಇಲ್ಲದವರು’ ಎಂಬುದಕ್ಕೆ ಸಂವಾದಿಯಾಗಿ, ಜನರನ್ನು ರಂಜಿಸಲು ಉಪಯೋಗಿಸಿದ್ದು ಸ್ಪಷ್ಟವಾಗಿತ್ತು. ‘ನಿಮ್ಹಾನ್ಸ್’ ಜನರ ಸಂಸ್ಥೆ ನಿಜ, ಆದರೆ ಅದು ಇರುವುದು ಮನೋರೋಗಕ್ಕೆ ಸರಿಯಾದ ಚಿಕಿತ್ಸೆ ಪಡೆಯಲು! ‘ಮನೋರೋಗ’ದ ಕಳಂಕ- ಹಣೆಪಟ್ಟಿಗಳ ಬಗ್ಗೆ ನಿಮ್ಹಾನ್ಸ್ ಸಂಸ್ಥೆ ಮಾಡುತ್ತಿರುವ ಕೆಲಸ-ಕಾರ್ಯಗಳನ್ನು ಬಲಪಡಿಸುವುದರ ಬದಲು, ಸಿನಿಮಾಕ್ಕೆ ಹೆಸರಿಟ್ಟು, ಅದಕ್ಕೆ ವಿರುದ್ಧವಾಗಿ ಕೆಲಸ ಮಾಡುವುದಲ್ಲ.

ADVERTISEMENT

ಮತ್ತೆ ಇಂಥದ್ದೇ ಇನ್ನೊಂದು ಪ್ರಯತ್ನ ನಮ್ಮ ಎದುರಿಗಿದೆ. ಬರುವ ಜೂನ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿರುವ ಕಂಗನಾ ರನೋಟ್‌- ರಾಜ್‍ಕುಮಾರ್ ರಾವ್‌ ಅಭಿನಯದ ಮತ್ತು ಏಕ್ತಾ ಕಪೂರ್ ನಿರ್ಮಿಸುತ್ತಿರುವ ‘ಮೆಂಟಲ್ ಹೈ ಕ್ಯಾ?’ ಸಿನಿಮಾದ ಪೋಸ್ಟರ್‌ಗಳನ್ನು ನೋಡಿ ನಾವು ಮನೋವೈದ್ಯರು ಬೆಚ್ಚಿಬಿಟ್ಟಿದ್ದೇವೆ, ಚಿಂತಿತರಾಗಿದ್ದೇವೆ, ಆಕ್ರೋಶಕ್ಕೆ ಒಳಗಾಗಿದ್ದೇವೆ! ಈ ಸಿನಿಮಾದ ಪೋಸ್ಟರ್‌ಗಳೆಲ್ಲವೂ ವಿಚಿತ್ರ- ಅಪಾಯ- ಹಾಸ್ಯದ ಸನ್ನಿವೇಶಗಳನ್ನೇ ಸೂಚಿಸುತ್ತವೆ. ಮಾನಸಿಕ ಅಸ್ವಸ್ಥತೆಯ ವಸ್ತು ಈ ಕಥೆಗಿದೆ ಎಂಬುದನ್ನುಏಕ್ತಾ ಕಪೂರ್ ‘ಇದು ನಿಮ್ಮಲ್ಲಿನ ಅಸ್ವಸ್ಥತೆಯನ್ನು ಹೊರತರುವ ಸಮಯ. ಏಕೆಂದರೆ ಮಾನಸಿಕ ಸ್ವಸ್ಥತೆಗೇ ಇಲ್ಲಿಯವರೆಗೆ ಬಹಳ ಗೌರವ ಕೊಟ್ಟುಬಿಟ್ಟಿದ್ದೇವೆ’ ಎಂಬ ತಮ್ಮ ಟ್ವಿಟರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಂಗನಾ ರನೋಟ್‌ರ ಹೇಳಿಕೆಯೂ ಭ್ರಮೆಗಳ ಕುರಿತು ಅವರ ಅಜ್ಞಾನವನ್ನಷ್ಟೇ ತೋರಿಸುತ್ತದೆ.

ಇನ್ನೂ ಬಿಡುಗಡೆಯಾಗದಿದ್ದರೂ ಈ ಸಿನಿಮಾದಲ್ಲಿ ಇರಬಹುದಾದ ಅಸ್ವಸ್ಥ ಚಿಂತನೆಯನ್ನು ಚಿತ್ರದ ಶೀರ್ಷಿಕೆ ಮತ್ತು ಮೇಲಿನ ಮಾತುಗಳಿಂದ ಊಹಿಸಬಹುದು. ಮತ್ತೊಮ್ಮೆ ಅಪರಾಧ- ಕ್ರೌರ್ಯ- ಅಪಹಾಸ್ಯ- ವಿಚಿತ್ರ ನಡವಳಿಕೆಗಳೊಂದಿಗೆ ಮಾನಸಿಕ ಅಸ್ವಸ್ಥತೆಯನ್ನು ತಳಕು ಹಾಕುವ ಪ್ರಯತ್ನ ಇದು ಎಂದು ಹೇಳಬಹುದು. ವಾಸ್ತವ ಏನೆಂದರೆ, ಇಂದು ಮಾನಸಿಕ ರೋಗಗಳು ವಿಚಿತ್ರ, ಕಾರಣ ತಿಳಿಯದ ಕಾಯಿಲೆಗಳಲ್ಲ ಎಂಬುದು ವೈಜ್ಞಾನಿಕ ಸಂಶೋಧನೆಗಳಿಂದ ನಿರೂಪಿತ. ಇತರ ಕಾಯಿಲೆಗಳಂತೆ ಅವು ಕೂಡ ಜೈವಿಕ ತಳಹದಿಯುಳ್ಳ, ಚಿಕಿತ್ಸೆಯುಳ್ಳ ಕಾಯಿಲೆಗಳು. ಮಾನಸಿಕ ರೋಗಗಳಿಂದ ನರಳುವ ವ್ಯಕ್ತಿಗಳು ಸಿನಿಮಾಗಳಲ್ಲಿ ತೋರಿಸುವಂತೆ, ‘ವಿಚಿತ್ರ ನಟ’ರಂತೆ ಇರುವುದಿಲ್ಲ ಎಂಬುದು ಮನೋವೈದ್ಯಕೀಯ ಚಿಕಿತ್ಸಾ ಕೇಂದ್ರಗಳಿಗೆ ಭೇಟಿ ನೀಡಿದರೆ ಗೊತ್ತಾಗುತ್ತದೆ!‌

ಭಾರತೀಯ ಮನೋವೈದ್ಯರ ಸಂಘ ಕೈ ಕಟ್ಟಿ ಕುಳಿತಿಲ್ಲ. ಇತ್ತೀಚೆಗಷ್ಟೇ ಜಾರಿಗೆ ಬಂದಿರುವ ಮಾನಸಿಕ ಆರೋಗ್ಯ ಆರೈಕೆ ಕಾನೂನು- 2017 ದೇಶದ ಪ್ರತಿಯೊಬ್ಬ ಪ್ರಜೆಗೂ ಅನ್ವಯಿಸುವಾಗ, ಮನೋರೋಗಗಳ ಬಗ್ಗೆ ತಪ್ಪು ನಂಬಿಕೆಗಳನ್ನು ಪ್ರಚೋದಿಸುವ ಇಂತಹ ಸಿನಿಮಾಗಳ ಬಗ್ಗೆಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ– ಸೆನ್ಸಾರ್ ಮಂಡಳಿ) ಜವಾಬ್ದಾರಿ ತೆಗೆದುಕೊಳ್ಳಬೇಕು, ಶೀರ್ಷಿಕೆಯನ್ನು- ಮನೋರೋಗದ ಬಗೆಗೆ ತಪ್ಪು ನಂಬಿಕೆಗಳನ್ನು ಹರಡುವ ಸನ್ನಿವೇಶಗಳನ್ನು ಈ ಚಿತ್ರದಿಂದ ತೆಗೆದು ಹಾಕಬೇಕು ಎಂದು ಆಗ್ರಹಿಸಿದೆ.

ಒಬ್ಬ ಮನೋವೈದ್ಯ ಪ್ರತಿದಿನಕ್ಕೆ ಹೆಚ್ಚೆಂದರೆ 60 ರೋಗಿಗಳನ್ನು ನೋಡಬಹುದು, ವಾರಕ್ಕೆ ಒಂದು ಲೇಖನ ಬರೆಯಬಹುದು, ಇಲ್ಲವೇ ಅರಿವನ್ನು ನೀಡುವ ಭಾಷಣವನ್ನು ತಿಂಗಳಿಗೊಮ್ಮೆ ಮಾಡಿ ನೂರಿನ್ನೂರು ಜನರಿಗೆ ಮಾನಸಿಕ ಸ್ವಾಸ್ಥ್ಯ- ಅಸ್ವಾಸ್ಥ್ಯಗಳ ಬಗೆಗೆ ಅರಿವು ಮೂಡಿಸಬಹುದು. ಆದರೆ, ಸಿನಿಮಾ ಒಂದು ಪ್ರಬಲ ಸಮೂಹ ಮಾಧ್ಯಮ. ಇವಿಷ್ಟೂ ಜನರ ಹತ್ತು ಪಟ್ಟು- ನೂರು ಪಟ್ಟು ಜನರನ್ನು ಒಂದು ಸಿನಿಮಾ ಕೇವಲ ಮೂರು ಗಂಟೆಗಳಲ್ಲಿ ತಲುಪಬಲ್ಲದು. ತನ್ನ ರಂಜನೆಯ ಗುಣದಿಂದ ಬಹಳ ಬೇಗ, ದೀರ್ಘಕಾಲದವರೆಗೆ ಉಳಿಯಬಲ್ಲ ನಂಬಿಕೆಗಳನ್ನು ಜನಮಾನಸದಲ್ಲಿ ನೆಲೆಯಾಗಿಸಿಬಿಡಬಲ್ಲದು. ಮಾನಸಿಕ ಆರೋಗ್ಯ ಕೇವಲ ಮನೋವೈದ್ಯರಿಗೆ, ಮನೋರೋಗಗಳಿಗೆ ಸಂಬಂಧಿಸಿದ್ದಲ್ಲ. ಅದು ಸಮಾಜಕ್ಕೂ, ಸಿನಿಮಾ ಮಾಡುವ ನಿರ್ದೇಶಕರಿಗೂ, ನೋಡುವ ಪ್ರೇಕ್ಷಕನಿಗೂ ಸಂಬಂಧಿಸಿದ್ದು. ಹೀಗಿರುವಾಗ ಸಿನಿಮಾದ ಪ್ರಾಬಲ್ಯವನ್ನು ಅರಿತು ಅದನ್ನು ಸರಿಯಾದ ದಾರಿಯಲ್ಲಿ ದುಡಿಸಿಕೊಳ್ಳಬೇಕು.

- ಲೇಖಕಿ: ಮನೋವೈದ್ಯೆ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.