ADVERTISEMENT

ಸಂಗತ: ಸ್ವಪ್ರೀತಿಯಿಂದ ಸ್ವವಿವಾಹದೆಡೆಗೆ

ಡಾ.ಜ್ಯೋತಿ
Published 8 ಜೂನ್ 2022, 19:31 IST
Last Updated 8 ಜೂನ್ 2022, 19:31 IST
   

ನಿಮ್ಮನ್ನು ನೀವು ಎಷ್ಟು ಪ್ರೀತಿಸಬಹುದು? ಈ ಪ್ರೀತಿ, ನಿಮ್ಮನ್ನು ನೀವೇ ವಿವಾಹವಾಗುವ ಮಟ್ಟಕ್ಕೆಕೊಂಡೊಯ್ಯಬಲ್ಲದೇ? ಹಿಂದಿಯ ‘ಕ್ವೀನ್’ ಸಿನಿಮಾ ದಲ್ಲಿ ನಾಯಕಿ ತನ್ನ ಮುರಿದುಹೋದ ಮದುವೆಯಿಂದ ವಿಚಲಿತಳಾಗದೆ, ಒಬ್ಬಳೇ ಹನಿಮೂನ್‌ಗೆ ಹೋಗುವ ನಿರ್ಧಾರ ತೆಗೆದುಕೊಳ್ಳುವುದು, ಪ್ರೇಕ್ಷಕರಿಗೆ ಅರ್ಥೈಸಿಕೊಳ್ಳಲು ಸ್ವಲ್ಪ ಕಷ್ಟವೆನಿಸಿತ್ತು. ಈಗ ವಾಸ್ತವದಲ್ಲಿ, 24 ವರ್ಷದ ಗುಜರಾತ್ ಮಹಿಳೆ ಕ್ಷಮಾ ಬಿಂದು, ಇದೇ 11ರಂದು ತನ್ನನ್ನು ತಾನೇ ಮದುವೆಯಾಗುವುದಾಗಿ ಘೋಷಿಸಿದ್ದಾರೆ. ಈ ಮೂಲಕ, ಆಕೆ ವಿವಾಹಿತ ಒಂಟಿ ಮಹಿಳೆ ಎನಿಸಿಕೊಳ್ಳುತ್ತಾರೆ.

ಇಂತಹ ವಿವಾಹ ಪದ್ಧತಿಯನ್ನು ಸ್ವವಿವಾಹ (ಸೋಲೋಗಮಿ) ಎಂದು ಕರೆಯುತ್ತಾರೆ. ಇದು, ಭಾರತದ ಮೊದಲ ಸ್ವವಿವಾಹ ಪ್ರಕರಣವಾಗಲಿದೆ. ಇತ್ತೀಚಿನ ದಿನಗಳಲ್ಲಿ ಸ್ವವಿವಾಹ ಪದ್ಧತಿ ಪಾಶ್ಚಾತ್ಯ ದೇಶಗಳಲ್ಲಿ ಮತ್ತು ಜಪಾನಿನಲ್ಲಿ ಜನಪ್ರಿಯತೆ ಪಡೆಯುತ್ತಿದ್ದು, ಸಾವಿರಾರು ಪ್ರಕರಣಗಳು ದಾಖಲಾಗಿವೆ. ಇದು ಕಾನೂನಿನ ನೆಲೆಯಲ್ಲಿ ಅಧಿಕೃತ ಸ್ಥಾನಮಾನ ಪಡೆಯದಿದ್ದರೂ ಮದುವೆಯಾಗಬೇಕಾದ ಬಾಹ್ಯ ಒತ್ತಡ ಕಡಿಮೆ ಮಾಡಿಕೊಳ್ಳಲು ಅನೇಕರು ಈ ಮಾರ್ಗ ಅನುಸರಿಸುವುದು ಹೆಚ್ಚಾಗುತ್ತಿದೆ.

ಸುಮಾರು 20 ವರ್ಷಗಳ ಹಿಂದೆ, ಅಮೆರಿಕದ ಜನಪ್ರಿಯ ಧಾರಾವಾಹಿ ‘ಸೆಕ್ಸ್ ಆ್ಯಂಡ್ ದಿ ಸಿಟಿ’ಯ ಪಾತ್ರವಾದ ಕ್ಯಾರಿ ಬ್ರಾಡ್ ಶಾ ಸ್ವವಿವಾಹ ಆಗುವುದರ ಮೂಲಕ ಇದು ಜನಪ್ರಿಯತೆ ಪಡೆಯಿತು. ಇದಕ್ಕೆ ಸ್ಫೂರ್ತಿ, 1993ರಲ್ಲಿ ಸ್ವವಿವಾಹವಾದ ವಿಶ್ವದ ಮೊದಲ ಮಹಿಳೆ ಅಮೆರಿಕದ ಲಿಂಡಾ ಬೇಕರ್ ಎನ್ನಬಹುದು. ಅವರು ತಮ್ಮ ಸ್ನೇಹಿತರ ಸಮ್ಮುಖದಲ್ಲಿ, ‘ನಾನು ನನ್ನ ಜೀವನದ ಕೊನೆಯ ಕ್ಷಣಗಳವರೆಗೆ ನನ್ನನ್ನು ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ’ ಎನ್ನುವ ವೈವಾಹಿಕ ಪ್ರತಿಜ್ಞೆ ತೆಗೆದುಕೊಂಡರು. ವಿಸ್ಮಯವೆಂದರೆ, ಇದರಲ್ಲಿ ವಿಚ್ಛೇದನ ಪ್ರಕರಣವೊಂದು ನಡೆದಿದೆ. ಬ್ರೆಜಿಲ್‌ನ ಕ್ರಿಸ್ ಗಲೇರಾ ಸ್ವವಿವಾಹವಾದ 90 ದಿನಗಳ ನಂತರ ವ್ಯಕ್ತಿಯೊಬ್ಬನನ್ನು ಪ್ರೀತಿಸಿ, ತನಗೆ ತಾನು ವಿಚ್ಛೇದನ ಕೊಟ್ಟುಕೊಂಡು ಆ ವ್ಯಕ್ತಿಯನ್ನು ವಿವಾಹವಾದರು!

ADVERTISEMENT

ಈ ಸ್ವವಿವಾಹ ಹೇಗೆ ನಡೆಯುತ್ತದೆಂದರೆ, ಒಬ್ಬ ವ್ಯಕ್ತಿ ತನ್ನ ಧಾರ್ಮಿಕ ಸಂಪ್ರದಾಯದಂತೆ ಸಾರ್ವಜನಿಕ ಸಮಾರಂಭದಲ್ಲಿ ತನ್ನನ್ನೇ ವಿವಾಹವಾಗುತ್ತಾರೆ. ಹಲವು ದೇಶಗಳಲ್ಲಿ ಇಂತಹ ವಿವಾಹ ಆಯೋಜಿಸುವ ಸಂಘಟನೆಗಳೂ ಅಸ್ತಿತ್ವಕ್ಕೆ ಬಂದಿವೆ. ಈಗ, ಭಾರತದಲ್ಲಿ ಸ್ವವಿವಾಹವಾಗುತ್ತಿರುವ ಕ್ಷಮಾ ಕೂಡ ಹಿಂದೂ ಧಾರ್ಮಿಕ ವಿಧಿ ವಿಧಾನಗಳಂತೆ ಅರಿಶಿನ, ಮೆಹೆಂದಿ ಕಾರ್ಯಕ್ರಮಗಳೊಂದಿಗೆ, ಸಪ್ತಪದಿ ತುಳಿದೇ ತನ್ನನ್ನು ವಿವಾಹವಾಗುತ್ತಿರುವುದಾಗಿ ಹೇಳಿದ್ದಾರೆ. ಅವರೇ ಹೇಳಿದಂತೆ, ‘ನನಗೆ ಇನ್ನೊಬ್ಬರನ್ನು ಮದುವೆಯಾಗಲು ಇಷ್ಟವಿಲ್ಲ. ಆದರೆ, ವಧುವಾಗಿ ಕಾಣಿಸಿಕೊಳ್ಳುವ ಆಸೆ. ಇಲ್ಲಿ ನನ್ನ ಸಂದೇಶವೆಂದರೆ, ನನ್ನನ್ನು ನನಗಿಂತ ಇನ್ಯಾರೂ ಹೆಚ್ಚು ಪ್ರೀತಿಸುವುದು ಅಸಾಧ್ಯ’.

ವಿಶೇಷವೆಂದರೆ, ಹೆಚ್ಚಾಗಿ ಹೆಮಕ್ಕಳೇ ಸ್ವವಿವಾಹವಾಗಲು ಮುಂದೆ ಬರುತ್ತಿದ್ದಾರೆ. ಯಾಕೆಂದು ಕಳೆದ ಕೆಲವು ದಶಕಗಳ ಮಹಿಳಾ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಹೆಣ್ಣುಮಕ್ಕಳು ಸ್ವತಂತ್ರ ವಾಗಿ ಬದುಕುವುದನ್ನು ಕಲಿಯುತ್ತಿದ್ದಾರೆ. ಆದರೆ, ಒಬ್ಬ ಮಹಿಳೆ ‘ಸರಿಯಾದ’ ವಯಸ್ಸಿನಲ್ಲಿ ಮದುವೆಯಾಗದಿದ್ದಲ್ಲಿ ಸಮಾಜವು ಅವಳನ್ನು ಜೀವನದಲ್ಲಿ ಸೋತಿರುವವಳಂತೆ ನೋಡುತ್ತದೆ. ಇಂತಹ ಸಾಮಾಜಿಕ ಮತ್ತು ಕೌಟುಂಬಿಕ ಒತ್ತಡಗಳಿಂದ ಹೊರಬರಲು, ಮಹಿಳೆಯರು ಈ ಹೊಸ ಸಂಪ್ರದಾಯಕ್ಕೆ ಮನಸ್ಸು ಮಾಡುತ್ತಿದ್ದಾರೆ. ಸ್ವವಿವಾಹದಲ್ಲಿ ಮುಖ್ಯವಾಗಿ ಇರುವುದು, ತಾನು ಇನ್ನೊಬ್ಬ ವ್ಯಕ್ತಿಯ ಅಗತ್ಯವಿಲ್ಲದೆ ತನ್ನನ್ನು ಪ್ರೀತಿಸುವ ಮತ್ತು ಕಾಳಜಿಯಿಂದ ನೋಡಿಕೊಳ್ಳುವ ಭರವಸೆ ಪಡೆದುಕೊಳ್ಳುವುದು, ತನ್ನಲ್ಲಿರುವ ದೌರ್ಬಲ್ಯಗಳನ್ನು ಒಪ್ಪಿಕೊಂಡು, ತನ್ನನ್ನು ಕ್ಷಮಿಸಿ, ಸಂಪೂರ್ಣವಾಗಿ ಪ್ರೀತಿಸುವುದು.

ಪ್ರತಿಯೊಬ್ಬರೂ ಇನ್ನೊಬ್ಬರನ್ನು ವಿವಾಹವಾಗುವ ಮೊದಲು ಸ್ವವಿವಾಹದ ಆಶಯಗಳನ್ನು ಅಳವಡಿಸಿ ಕೊಳ್ಳುವುದು ಉತ್ತಮ. ಯಾಕೆಂದರೆ, ನಮ್ಮನ್ನು ನಾವು ಪ್ರೀತಿಸದ, ಒಪ್ಪಿಕೊಳ್ಳದ ವಿನಾ ಇನ್ನೊಬ್ಬರನ್ನು ಹೇಗೆ ಸಂಪೂರ್ಣವಾಗಿ ಪ್ರೀತಿಸಬಲ್ಲೆವು? ನಮ್ಮನ್ನು ನಾವು ಅರಿತುಕೊಳ್ಳದಿದ್ದಲ್ಲಿ, ಇನ್ನೊಬ್ಬರನ್ನು ಅರಿಯಲು ಸಾಧ್ಯವೇ? ಅಲ್ಲದೆ, ಜಗತ್ತೆಲ್ಲಾ ಕೈಬಿಟ್ಟಿದೆ ಎನಿಸಿದಾಗ, ನಮ್ಮೊಂದಿಗೆ ಜೊತೆಗಿರುವುದು ನಮ್ಮ ದೇಹ, ಮನಸ್ಸು, ಮತ್ತು ಆತ್ಮ ಮಾತ್ರ.

ಒಟ್ಟಿನಲ್ಲಿ, ಸ್ವವಿವಾಹ ಪದ್ಧತಿ ಸಾಮಾಜಿಕ ವ್ಯವಸ್ಥೆಗಳ ವಿರುದ್ಧ ಹೆಣ್ಣುಮಕ್ಕಳ ದಂಗೆಯೆನ್ನಬಹುದು. ಯಾಕೆಂದರೆ, ಮದುವೆಯಾಗಬೇಕೆಂಬ ಒತ್ತಡವು ಗಂಡಿಗಿಂತ ಹೆಣ್ಣಿನ ಮೇಲೆ ಜಾಸ್ತಿ ಇರುತ್ತದೆ. ಅದೇ ರೀತಿ, ಒಂಟಿಯಾಗಿರುವ ಗಂಡಿಗಿಂತ ಒಂಟಿಯಾಗಿರುವ ಹೆಣ್ಣನ್ನು ಸಮಾಜ ಕುಹಕ ದೃಷ್ಟಿಯಿಂದ ನೋಡುತ್ತದೆ. ಇವುಗಳಿಂದ ಬಿಡಿಸಿಕೊಳ್ಳಲು, ಸ್ವತಂತ್ರ ಮನೋಭಾವದ ಹೆಣ್ಣುಮಕ್ಕಳು ಸ್ವವಿವಾಹಕ್ಕೆ ಮುಂದಾಗುತ್ತಿದ್ದಾರೆ.

ಈಗಾಗಲೇ, ಹಲವಾರು ಧಾರ್ಮಿಕ ಮುಖಂಡರು ಮತ್ತು ಸಂಪ್ರದಾಯಸ್ಥರು, ಇದು ಧರ್ಮಕ್ಕೆ ವಿರುದ್ಧ ವಾದುದೆಂದು ಹೇಳಿದ್ದಾರೆ. ಆದರೆ, ಕ್ಷಮಾ ಈ ಬೆದರಿಕೆಗಳಿಗೆ ತಲೆಕೆಡಿಸಿಕೊಳ್ಳದೆ, ತನ್ನ ವಿವಾಹ ತಯಾರಿ ಮುಂದುವರಿಸಿದ್ದಾರೆ. ಈ ವಿನೂತನ ವಿವಾಹಕ್ಕೆ ನಮ್ಮ ಸಮಾಜ ಹೇಗೆ ಸ್ಪಂದಿಸುತ್ತದೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.