ADVERTISEMENT

ಸಂಗತ | ‘ಆತ್ಮನಿರ್ಭರ’ದಲ್ಲಿ ಗಾಂಧಿಬೋಧೆ ಇದೆಯೆ?

ಡಾ.ಪುರುಷೋತ್ತಮ ಬಿಳಿಮಲೆ
Published 23 ಸೆಪ್ಟೆಂಬರ್ 2025, 0:30 IST
Last Updated 23 ಸೆಪ್ಟೆಂಬರ್ 2025, 0:30 IST
   
ಮೋದಿ ಪ್ರತಿಪಾದಿಸುತ್ತಿರುವ ‘ಆತ್ಮನಿರ್ಭರ ಭಾರತ’ ಹಾಗೂ ಗಾಂಧಿಯ ‘ಸ್ವದೇಶಿ’ ಪರಿಕಲ್ಪನೆ ಮೇಲ್ನೋಟಕ್ಕೆ ಒಂದೇ ರೀತಿಯಾದರೂ ಆಳದಲ್ಲಿ ಸಂಪೂರ್ಣ ಭಿನ್ನ.

ಪ್ರಧಾನಿ ನರೇಂದ್ರ ಮೋದಿ ಅವರು, ‘ಆತ್ಮನಿರ್ಭರ ಭಾರತ’ದ (ಸ್ವದೇಶಿ ಪರಿಕಲ್ಪನೆ) ಬಗ್ಗೆ ಹೆಚ್ಚು ಒತ್ತು ಕೊಟ್ಟು ಮಾತನಾಡುತ್ತಿದ್ದಾರೆ. ದೇಶೀಯತೆ ಅಥವಾ ಸ್ವದೇಶಿ ಪರಿಕಲ್ಪನೆ ಬಗ್ಗೆ ಬಲಪಂಥೀಯರು ಹೀಗೆ ಮಾತನಾಡುವುದು ಹೊಸತೇನಲ್ಲ. ಆದರೆ, ಅಧಿಕಾರಕ್ಕೆ ಏರಿದಾಗ ಇವರೆಲ್ಲ ಹೇಗೆ ಬಂಡವಾಳಶಾಹಿಗಳ ಪರವಾಗಿ ನಿಲ್ಲುತ್ತಾರೆ ಎಂಬುದನ್ನು ನಾವು ಸ್ಪಷ್ಟವಾಗಿ ಕಂಡಿದ್ದೇವೆ. ಅದಾನಿ, ಅಂಬಾನಿ ಮೊದಲಾದ ಬಂಡವಾಳಶಾಹಿಗಳನ್ನೂ ಹಾಗೂ ಅಮೆರಿಕದಂಥ ಬಂಡವಾಳಶಾಹಿ ದೇಶವನ್ನು ಬಗಲಲ್ಲಿ ಇರಿಸಿಕೊಂಡು ಇವರೆಲ್ಲ ಹೇಳುತ್ತಿರುವ ಸ್ವದೇಶಿಪರ ಮಾತುಗಳು ಎಷ್ಟು ಪೊಳ್ಳು ಎಂಬುದು ಖಚಿತವಾಗಬೇಕಾದರೆ ಇವರ ಆಡಳಿತ ವಿಧಾನಗಳನ್ನು, ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ ಸ್ವರಾಜ್ಯದ ಪರಿಕಲ್ಪನೆಯೊಂದಿಗೆ ಹೋಲಿಸಿ ನೋಡಬೇಕು. ಗಾಂಧಿಯನ್ನು ವಿರೋಧಿಸಿದವರಿಗೆ ‘ಸ್ವದೇಶಿ ಪರಿಕಲ್ಪನೆ’ ಅರ್ಥವಾಗಲಾರದು.

ಗಾಂಧೀಜಿಯವರ ‘ಸ್ವದೇಶಿ ಚಳವಳಿ’ಗೆ ಬ್ರಿಟಿಷ್ ಉತ್ಪನ್ನಗಳನ್ನು ಬಹಿಷ್ಕರಿಸಿ, ಸ್ಥಳೀಯವಾಗಿ ತಯಾರಿಸಿದ ವಸ್ತುಗಳನ್ನು ಬಳಸುವುದರ ಮೂಲಕ ದೇಶೀಯ ಆರ್ಥಿಕತೆಯನ್ನು ಬಲಪಡಿಸುವ ಸ್ಪಷ್ಟವಾದ ಗುರಿಯಿತ್ತು. ಇದಕ್ಕೆ ಪೂರಕವಾಗಿ, ಗಾಂಧೀಜಿ ಖಾದಿ ಮತ್ತು ನೂಲುವಿಕೆಯನ್ನು ಪ್ರತಿಪಾದಿಸಿದರು. ಈ ಪ್ರಕ್ರಿಯೆ ಸ್ವಯಂ ಆಡಳಿತಕ್ಕೆ (ಸ್ವರಾಜ್ಯ) ಅತ್ಯಗತ್ಯ ಎಂದು ಅವರು ನಂಬಿದ್ದರು.

ಬ್ರಿಟಿಷ್ ಆರ್ಥಿಕತೆಯನ್ನು ದುರ್ಬಲಗೊಳಿಸುವುದು, ದೇಶೀಯ ಉದ್ಯಮಗಳ ಉತ್ತೇಜನದ ಮೂಲಕ ಸ್ವಾವಲಂಬನೆಯನ್ನು ಬೆಳೆಸುವುದು, ಖಾದಿ ಧರಿಸುವುದು, ಎಲ್ಲರಿಗೂ ನೂಲುವಿಕೆ ಸಾಧ್ಯವಾಗುವಂಥ ಸರಳ ಸೂತ್ರಗಳ ಮೂಲಕ ದೇಶದ ಜನರನ್ನು ಒಗ್ಗೂಡಿಸುವುದು, ಇತ್ಯಾದಿ ಗಾಂಧೀಜಿಯ ಯೋಜನೆಗಳಾಗಿದ್ದವು. ಇದರಿಂದ ಬ್ರಿಟಿಷ್ ಉತ್ಪನ್ನಗಳ ಮಾರಾಟ ಕುಸಿಯಿತು. ಭಾರತೀಯ ಸಮಾಜದ ಎಲ್ಲಾ ವರ್ಗದ ಜನರು, ಮುಖ್ಯವಾಗಿ ವಿದ್ಯಾರ್ಥಿಗಳು ಮತ್ತು ಮಹಿಳೆಯರು ಸ್ವದೇಶಿ ಚಳವಳಿಗೆ ಧುಮುಕಿದರು. ಪರಿಣಾಮವಾಗಿ, ಭಾರತದ ರಾಷ್ಟ್ರೀಯ ಘನತೆ ಮತ್ತು ಆತ್ಮವಿಶ್ವಾಸ ಹೆಚ್ಚಿತು.

ADVERTISEMENT

ಮಹಾತ್ಮ ಗಾಂಧಿ ಅವರು ಬಳಸಿದ ಸ್ವದೇಶಿ (ಭಾರತೀಯತೆ) ಪದವನ್ನು ಹಿಂದುತ್ವದ ಸಿದ್ಧಾಂತಿಗಳೂ ಬಳಸುತ್ತಾರೆ. ಆದರೆ, ಗಾಂಧೀಜಿಯ ಸ್ವರಾಜ್ಯದ ಕಲ್ಪನೆ ಮತ್ತು ಹಿಂದುತ್ವವಾದಿಗಳ ದೇಶೀಯತೆ ಅಥವಾ ಭಾರತೀಯತೆಯ ಕಲ್ಪನೆ ಒಂದೇ ಅಲ್ಲ ಎಂಬುದನ್ನು ಮರೆಯಬಾರದು. ಅದು ಒಂದೇ ಆಗಿದ್ದರೆ ಹಿಂದುತ್ವವಾದಿಗಳು ಗಾಂಧಿಯನ್ನು ಈ ಪರಿ ದ್ವೇಷಿಸುತ್ತಿರಲಿಲ್ಲ. ಗಾಂಧಿಯವರು ಸ್ವದೇಶಿ ಚಳವಳಿಯನ್ನು ಜನರಲ್ಲಿ ದೇಶಭಕ್ತಿಯನ್ನು ತುಂಬುವ ಸಾಧನವಾಗಿ ಬಳಸಿದರು. ಆದರೆ, ಹಿಂದುತ್ವವಾದಿಗಳು ರಾಷ್ಟ್ರೀಯತೆ ಹೆಸರಲ್ಲಿ ಹಿಂದೂಗಳಲ್ಲದವರ ವಿರುದ್ಧ ದ್ವೇಷ ಸಾರಲು ಭಾರತೀಯತೆಯನ್ನು ಉಪಯೋಗಿಸುತ್ತಾರೆ. ಗಾಂಧೀಜಿಯವರಿಗೆ ಸ್ವದೇಶಿ ಎಂದರೆ ದೇಶದ ಚೈತನ್ಯ. ಆದರೆ, ಹಿಂದುತ್ವವಾದಿಗಳಿಗೆ ಸ್ವದೇಶಿ ಎನ್ನುವುದು ದೇಶದೊಳಗಿನ ಜನರನ್ನು ಪರಸ್ಪರ ಎತ್ತಿಕಟ್ಟಲು ಒಂದು ಅಸ್ತ್ರ. ದ್ವೇಷವೇ ಅವರ ಭಾಷೆ.

ಗಾಂಧೀಜಿ ವಿದೇಶಿ ಉತ್ಪನ್ನಗಳನ್ನು ಬಳಸಲು ನಿರಾಕರಿಸಿದ್ದು ಅವರ ವಿರುದ್ಧ ಸೇಡು ತೀರಿಸಿಕೊಳ್ಳುವ ಕಾರಣಕ್ಕಿಂತ ಹೆಚ್ಚಾಗಿ ತಾಯ್ನಾಡಿನ ಮೇಲಿನ ಬದ್ಧತೆಯ ಕಾರಣದಿಂದ. ಗಾಂಧಿಯವರ ಸ್ವದೇಶಿ ಯೋಜನೆ ಹಿಂದೂ ರಾಷ್ಟ್ರೀಯವಾದಿಗಳಂತೆ ದುರಭಿಮಾನದಿಂದ ಕೂಡಿರಲಿಲ್ಲ. ಅಲ್ಲಿ ದ್ವೇಷಭಾಷೆಯೂ ಇರಲಿಲ್ಲ. ಭಾರತದ ಬಡವರ ಹಿತಾಸಕ್ತಿಗೆ ವಿರುದ್ಧವಾದ ಉತ್ಪನ್ನಗಳನ್ನು ನಿರಾಕರಿಸುವುದು ಗಾಂಧಿಯವರ ನೀತಿಯಾದರೆ, ಹಿಂದುತ್ವವಾದಿಗಳು ಸ್ವದೇಶಿ ಹೆಸರಿನಲ್ಲಿ ಶ್ರೀಮಂತ ಹಿಂದೂ ಕಾರ್ಪೊರೇಟ್‌ಗಳನ್ನು ಬೆಂಬಲಿಸುತ್ತಾರೆ.  

ಸ್ವದೇಶಿ ಚಳವಳಿಯ ಭಾಗವಾಗಿ ಗಾಂಧೀಜಿ ಅಸಹಕಾರ ಚಳವಳಿಯನ್ನು ಬೆಳೆಸಿದರು. ಆ ಚಳವಳಿಯನ್ನು ‘ಸಂವಿಧಾನಬಾಹಿರ’ ಎಂದು ಕರೆದವರ ವಿರುದ್ಧ ಗಾಂಧಿಯವರು ‘ಇದು ನ್ಯಾಯಯುತ ಮತ್ತು ಧಾರ್ಮಿಕ ಸಿದ್ಧಾಂತವನ್ನು ಆಧರಿಸಿದೆ’ ಎಂದು ವಾದಿಸಿದರು. ‘ಅನ್ಯಾಯದ ಸರ್ಕಾರದೊಂದಿಗೆ ಸಹಕರಿಸದಿರುವುದು ಪ್ರತಿಯೊಬ್ಬ ಮನುಷ್ಯನ ಅಂತರ್ಗತ ಹಕ್ಕು. ಅನ್ಯಾಯ ಮತ್ತು ನ್ಯಾಯದ ನಡುವೆ, ಸತ್ಯ ಮತ್ತು ಅಸತ್ಯದ ನಡುವೆ ಯಾವುದೇ ಸಹಕಾರ ಇರಬಾರದು’ ಎಂದು ಗಾಂಧೀಜಿ ವಾದಿಸಿದರೆ, ಹಿಂದುತ್ವವಾದಿಗಳ ಆಡಳಿತ ಚಳವಳಿಗಳನ್ನು ನ್ಯಾಯಬಾಹಿರ ಎಂದು ಘೋಷಿಸಿ, ಅನೇಕರನ್ನು ಜೈಲಿಗೆ ತಳ್ಳಿದೆ.

‘ಸರ್ಕಾರವು ತಮ್ಮ ಗೌರವವನ್ನು ಕಸಿದುಕೊಂಡಾಗ ವಿರೋಧಿಸುವುದು ನಾಗರಿಕರ ಹಕ್ಕು’ ಎಂದು ಗಾಂಧೀಜಿ ವಾದಿಸಿದರೆ, ಹಿಂದುತ್ವವಾದಿಗಳು ಜನರು ಪ್ರತಿಭಟಿಸುವುದನ್ನು ಒಪ್ಪುವುದೇ ಇಲ್ಲ. ಮತಕಳ್ಳತನದ ಬಗ್ಗೆ ದನಿಯೆತ್ತಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರೇ ಜೈಲಿಗೆ ಹೋಗಬೇಕೆಂದು ವಾದಿಸುವ ಅವರು, ಚುನಾವಣಾ ಆಯೋಗದ ಬಗ್ಗೆ ಮೌನವಾಗಿರುತ್ತಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಮಾನ್ಯ ಪ್ರಧಾನಿಗಳು ಪ್ರತಿಪಾದಿಸುವ ‘ಆತ್ಮನಿರ್ಭರ ಭಾರತ’ದ ಪರಿಕಲ್ಪನೆಯನ್ನು ಗಾಂಧೀಜಿಯ ‘ಸ್ವರಾಜ್ಯ’ದ ಪರಿಕಲ್ಪನೆಯಿಂದ ದೂರ ಇರಿಸಿ ನೋಡಬೇಕಾದ್ದು ಅಗತ್ಯ.

ಈ ಹೊತ್ತಿನ ‘ಆತ್ಮನಿರ್ಭರ ಭಾರತ’ದ ಪರಿಕಲ್ಪನೆ ಒಂದು ಘೋಷಣೆಯಾಗಿಯಷ್ಟೇ ಚಾಲ್ತಿಯಲ್ಲಿದೆ. ಆದರೆ, ಮಹಾತ್ಮ ಪ್ರತಿಪಾದಿಸಿದ ‘ಸ್ವದೇಶಿ ಚಿಂತನೆ’ ಘೋಷಣೆಯಾಗಿಯಷ್ಟೇ ಉಳಿಯದೆ, ಗಾಂಧೀಜಿ ಹಾಗೂ ಅವರ ಅನುಯಾಯಿಗಳ ಜೀವನವಿಧಾನವೂ ಆಗಿತ್ತು. ಗಾಂಧೀಜಿ ಅವರ ಆಶ್ರಮಗಳು ಸ್ವದೇಶಿ ಚಿಂತನೆಗಳ ಪ್ರಯೋಗಶಾಲೆಗಳೂ ಆಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.