ADVERTISEMENT

ವಿಶ್ವ ಏಡ್ಸ್‌ ದಿನ | ಎಚ್‍ಐವಿ: ಘೋಷವಾಕ್ಯಕ್ಕೆ ಬದ್ಧರಾಗೋಣ

ಸಂಯಮ, ನಿಯಂತ್ರಣ ಮತ್ತು ಮುನ್ನೆಚ್ಚರಿಕೆಯೇ ಮೂಗುದಾರ

ಗೌರಿ ಚಂದ್ರಕೇಸರಿ
Published 1 ಡಿಸೆಂಬರ್ 2021, 6:14 IST
Last Updated 1 ಡಿಸೆಂಬರ್ 2021, 6:14 IST
ಎಚ್‍ಐವಿ: ಘೋಷವಾಕ್ಯಕ್ಕೆ ಬದ್ಧರಾಗೋಣ
ಎಚ್‍ಐವಿ: ಘೋಷವಾಕ್ಯಕ್ಕೆ ಬದ್ಧರಾಗೋಣ   

ಮತ್ತೊಂದು ‘ಏಡ್ಸ್ ದಿನ’ವನ್ನು (ಡಿಸೆಂಬರ್‌ 1) ಆಚರಿಸುತ್ತಿದ್ದೇವೆ. ಡಿಸೆಂಬರ್ ತಿಂಗಳಿಡೀ ಏಡ್ಸ್ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಜಾಥಾ, ಕರಪತ್ರ, ಬೀದಿನಾಟಕ ಸೇರಿದಂತೆ ಈ ರೋಗದ ತೀವ್ರತೆಯ ಬಗ್ಗೆ ಜನರಲ್ಲಿ ಅರಿವನ್ನು ಉಂಟು ಮಾಡುವ ಅನೇಕ ಕಾರ್ಯಕ್ರಮಗಳಿಗೆ ಕೋಟಿಗಟ್ಟಲೆ ಹಣ ವ್ಯಯವಾಗುತ್ತದೆ. ಇದಲ್ಲದೆ ದೂರದರ್ಶನ, ರೇಡಿಯೊ, ಗೋಡೆಬರಹಗಳ ಮೂಲಕ ವರ್ಷವಿಡೀ ಎಚ್‍ಐವಿ ಸೋಂಕಿನ ಕುರಿತಂತೆ ಸರ್ಕಾರವು ಜನರಲ್ಲಿ ಅರಿವು ಮೂಡಿಸುವ ಪ್ರಯತ್ನವನ್ನು ಮಾಡುತ್ತಲೇ ಇದೆ. ಆದರೂ ಎಚ್‍ಐವಿ ಕುರಿತಂತೆ ನಾವು ಎಷ್ಟರ ಮಟ್ಟಿಗೆ ಜಾಗೃತರಾಗಿದ್ದೇವೆ?

ಮಾನವನ ನಡವಳಿಕೆಗೆ ಸಂಬಂಧಪಟ್ಟ ಕಾಯಿಲೆ ಎಚ್‍ಐವಿ. ಮನೋನಿಗ್ರಹ, ಸಂಯಮದಿಂದ ಇದ್ದಲ್ಲಿ ಎಚ್‍ಐವಿ ಹತ್ತಿರ ಸುಳಿಯಲಾರದು. ಆಧುನಿ ಕತೆಯ ಭರಾಟೆಗೆ ಸಿಲುಕಿ ಜೀವನಮೌಲ್ಯಗಳು ಗಾಳಿಗೆ ತೂರಲ್ಪಡುತ್ತಿವೆ. ಭವಿಷ್ಯದ ಸುಖಕ್ಕಿಂತ ಕ್ಷಣಿಕ ಸುಖಕ್ಕೆ ಮನುಷ್ಯ ಮಹತ್ವ ಕೊಡುತ್ತಿದ್ದಾನೆ. ಬಾಳಿ ಬದುಕಬೇಕಾದ ಜೀವನವನ್ನು ಕೈಯ್ಯಾರೆ ಮೊಟಕುಗೊಳಿಸಿಕೊಳ್ಳುತ್ತಿದ್ದಾನೆ. ‘ಸೋಂಕನ್ನು ಸೊನ್ನೆಗೆ ತರೋಣ’ ಎಂಬ, ಹಿಂದೆ ಹೇಳಿದ ಘೋಷ ವಾಕ್ಯ ಅರ್ಥವನ್ನು ಕಳೆದುಕೊಂಡು ಕೆಲವರು ಜೀವನ ವನ್ನೇ ಸೊನ್ನೆಯಾಗಿಸಿಕೊಳ್ಳುತ್ತಿದ್ದಾರೆ.

‘ಬದುಕಿರಿ, ಬದುಕಲು ಬಿಡಿ’ ಎಂಬ ಮಾತು ಎಷ್ಟೊಂದು ಅರ್ಥಪೂರ್ಣವಾಗಿದೆ! ತಾನು ಬದುಕುವು ದಲ್ಲದೆ ಇನ್ನೊಬ್ಬರನ್ನೂ ಬದುಕಲು ಬಿಡುವುದು ಮಾನವೀಯತೆಯ ಜೊತೆಗೆ ಕರ್ತವ್ಯವನ್ನೂ ಸೂಚಿಸು ತ್ತದೆ. ಆದರೆ ಕೆಲವರು ತಮ್ಮ ಆರೋಗ್ಯಕ್ಕೆ ಸಂಚಕಾರ ತಂದುಕೊಳ್ಳುವುದಲ್ಲದೆ ತಮ್ಮನ್ನು ನಂಬಿದವರಲ್ಲೂ ಅಭದ್ರತೆ ಭಾವ ಉಂಟಾಗುವಂತೆ ಮಾಡುತ್ತಾರೆ.

ADVERTISEMENT

ಆರೋಗ್ಯ ಭಾಗ್ಯದ ಮುಂದೆ ಇನ್ನಾವ ಭಾಗ್ಯವೂ ದೊಡ್ಡದಲ್ಲ. ಹೇಳದೇ ಕೇಳದೇ ಎದುರಾಗುವ ಅಪಘಾತಗಳು, ಕೆಲವು ರೋಗಗಳನ್ನು ತಡೆಯಲು ಸಾಧ್ಯವಿಲ್ಲ. ಆದರೆ ನಮ್ಮ ಅಂಕೆಯಲ್ಲಿರುವ ಎಚ್‍ಐವಿ ಸೋಂಕನ್ನು ಪಡೆದುಕೊಳ್ಳದೇ ಇರಲು ಸಾಧ್ಯವಿದೆ. ಸಂಯಮ, ನಿಯಂತ್ರಣ, ಮುನ್ನೆಚ್ಚರಿಕೆಗಳೆಂಬ ಮೂಗುದಾರ ನಮ್ಮ ಕೈಯಲ್ಲಿದ್ದರೆ ಬದುಕಿನ ಬಂಡಿ ಅಪಘಾತಗಳಿಗೆ ಎಡೆ ಮಾಡಿಕೊಡದು.

ಎಚ್‍ಐವಿ ಕೇವಲ ವ್ಯಕ್ತಿಯೊಬ್ಬನ ಆರೋಗ್ಯಕ್ಕೆ ಸಂಬಂಧಪಟ್ಟದ್ದಲ್ಲ. ಅದು ಆತನ ಕುಟುಂಬದ ಮೇಲೂ ಪರಿಣಾಮವನ್ನು ಬೀರುವಂತಹದ್ದು. ಸೋಂಕಿತ ವ್ಯಕ್ತಿಯ ಖರ್ಚು- ವೆಚ್ಚ, ದೈಹಿಕ, ಮಾನಸಿಕ ಸಮಸ್ಯೆಗಳು, ಚಿಕಿತ್ಸೆಗಾಗಿ ಆಸ್ಪತ್ರೆಯೊಂದಿಗೆ ನಿರಂತರ ಸಂಪರ್ಕ... ಹೀಗೆ ಬದುಕಿನಲ್ಲಿ ಅನೇಕ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ. ಈ ಸೋಂಕು ಬರದಂತೆ ತಡೆಯಲು ಮುನ್ನೆಚ್ಚರಿಕೆಯೊಂದೇ ಮದ್ದು.

ಈ ಹಿಂದೆ ಇದ್ದ ಎಚ್‍ಐವಿ ಸೋಂಕಿನ ಪ್ರಮಾಣ ಇತ್ತೀಚೆಗೆ ಇಳಿಮುಖವಾಗಿದ್ದರೂ ಅರಿವು ಮೂಡಿಸಲು ಎಷ್ಟೆಲ್ಲ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿದ್ದರೂ ಹೊಸದಾಗಿ ಸೋಂಕನ್ನು ಪಡೆದ ವ್ಯಕ್ತಿಗಳು ಪತ್ತೆಯಾಗುತ್ತಲೇ ಇದ್ದಾರೆ. ವಿಷಾದದ ಸಂಗತಿ ಎಂದರೆ, ಸುಶಿಕ್ಷಿತರೂ ಇದರಿಂದ ಹೊರತಾಗ ದಿರುವುದು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರದ ಹಾಗೂ ಸ್ವಯಂಸೇವಾ ಸಂಸ್ಥೆಗಳ ಕಾರ್ಯಕರ್ತರು ಈ ಸೋಂಕಿನ ವಿರುದ್ಧ ವರ್ಷವಿಡೀ ಕಾರ್ಯತತ್ಪರರಾಗಿದ್ದಾರೆ. ಆದರೆ ಅಂದುಕೊಂಡ ಮಟ್ಟದಲ್ಲಿ ಎಚ್‍ಐವಿ ನಿಯಂತ್ರಣ ಸಾಧ್ಯವಾಗಿಲ್ಲ.

ಸೋಂಕನ್ನು ತಡೆಗಟ್ಟುವ ಕಾರ್ಯಕ್ರಮದಲ್ಲಿ ಆಗಾಗ ಕೊರತೆಗಳು ಕೇಳಿಬರುತ್ತಲೇ ಇರುತ್ತವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಪರೀಕ್ಷಾ ಕಿಟ್‍ಗಳು ಇಲ್ಲದೆ ಇರುವುದು, ಸೋಂಕಿತರಿಗೆ ವರದಾನವಾಗಿರುವ ಎಆರ್‌ಟಿ ಮಾತ್ರೆಗಳ ಕೊರತೆಯಂತಹ ಸಮಸ್ಯೆಗಳು ಆಗಾಗ ತಲೆದೋರುತ್ತಲೇ ಇರುತ್ತವೆ. ಸೋಂಕಿತ ವ್ಯಕ್ತಿಯ ಸಿ.ಡಿ4 ಮಟ್ಟ 350ಕ್ಕಿಂತ ಕಡಿಮೆ ಇದ್ದಾಗ ಆತ ಜೀವನವಿಡೀ ಎಆರ್‌ಟಿ ಚಿಕಿತ್ಸೆಯನ್ನು ಪಡೆಯ ಬೇಕೆಂದು ಸಲಹೆಯನ್ನು ನೀಡಲಾಗುತ್ತದೆ. ಆದರೆ ಈ ಮಾತ್ರೆಗಳು ಆಗಾಗ ಆಸ್ಪತ್ರೆಗಳಲ್ಲಿ ಲಭ್ಯವಿರದೇ ಸೋಂಕಿತರು ಪರದಾಡಬೇಕಾಗುತ್ತದೆ. ಇಂತಹ ವೈರುಧ್ಯದ ಪರಿಸ್ಥಿತಿಗಳಿಂದ ಸೋಂಕಿತರು ಆಪ್ತ ಸಮಾಲೋಚನೆಯಲ್ಲಿ ಪಡೆದ ಆತ್ಮವಿಶ್ವಾಸವನ್ನು ಕಳೆದುಕೊಳ್ಳುವಂತೆ ಆಗುತ್ತದೆ. ಬದುಕಿನಲ್ಲಿರುವ ಒಂದು ಆಶಾಕಿರಣವೂ ಅವರಿಂದ ದೂರವಾದಂತೆ ಆಗುತ್ತದೆ. ಇಂತಹ ಪರಿಸ್ಥಿತಿ ತಲೆದೋರದಂತೆ ನೋಡಿಕೊಳ್ಳುವ ದಿಸೆಯಲ್ಲಿ ಸರ್ಕಾರ ಗಮನ ಹರಿಸಬೇಕಾದದ್ದು ಅತ್ಯವಶ್ಯವಾಗಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಆಪ್ತ ಸಮಾಲೋಚಕರು ಸುಮಾರು ಇಪ್ಪತ್ತು ವರ್ಷಗಳಿಂದ ಎಚ್ಐವಿಯನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ಶ್ರಮಿಸುತ್ತಿದ್ದಾರೆ. ಆದರೆ ಅವರಿನ್ನೂ ದಿನಗೂಲಿ ನೌಕರರಾಗಿಯೇ ಸೇವೆ ಸಲ್ಲಿಸುತ್ತಿದ್ದಾರೆ. ಸದಾ ಕ್ಷಯ ಹಾಗೂ ಎಚ್ಐವಿ ಸೋಂಕಿತರ ಸಂಪರ್ಕಕ್ಕೆ ಬರುವ ಇವರಿಗೆ ಸೂಕ್ತವಾದ ಸೌಲಭ್ಯಗಳ ಕೊರತೆ ಇದೆ. ಒಂದು ರೀತಿಯಲ್ಲಿ ಆಪ್ತ ಸಮಾಲೋಚಕರದು ಹಗ್ಗದ ಮೇಲಿನ ನಡಿಗೆಯಂತೆ ಆಗಿದೆ. ಆರೋಗ್ಯ ಇಲಾಖೆ ಈ ಬಗ್ಗೆಯೂ ಗಮನ ಹರಿಸುವ ಅವಶ್ಯಕತೆ ಇದೆ.

ದಿನಾಚರಣೆಯ ಈ ವರ್ಷದ ಘೋಷವಾಕ್ಯ ‘ಅಸಮಾನತೆಗಳನ್ನು ಕೊನೆಗೊಳಿಸಿ, ಏಡ್ಸ್‌ ಅನ್ನು ಕೊನೆಗೊಳಿಸಿ’ ಎಂಬುದಾಗಿದೆ. ಈ ವಿಷಯದಲ್ಲಿ ನಮ್ಮ ನಮ್ಮ ಜವಾಬ್ದಾರಿ, ಕರ್ತವ್ಯಗಳನ್ನು ಅರಿತು ನಡೆದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.