ADVERTISEMENT

ಸೂಪರ್‌ಪವರ್ ಆಗುತ್ತಿರುವ ದೇಶದಲ್ಲಿ ಮಕ್ಕಳಿಗೆ ಮಣ್ಣು ತಿನ್ನಿಸಿದ ‘ಹಸಿವು’

ಡಾ.ಎಚ್.ಡಿ.ಉಮಾಶಂಕರ್
Published 7 ಮೇ 2019, 20:15 IST
Last Updated 7 ಮೇ 2019, 20:15 IST
.
.   

ಚಿಕ್ಕಂದಿನಲ್ಲಿ ‘ಹೋಗು ಎಲ್ಲಾದ್ರು ಮಣ್ಣು ತಿನ್ನು’ ಎಂದು ಮನೆಯ ಹಿರಿಯರು ಕೋಪದಲ್ಲಿ ಬೈದಾಗಷ್ಟೇ ಮಣ್ಣು ತಿನ್ನುವ ಪ್ರಮೇಯದ ಕಲ್ಪನೆ ಬರುತ್ತಿತ್ತು. ಇದರೊಂದಿಗೆ ಅವ್ವನೋ, ಅಜ್ಜಿಯೋ, ಅತ್ತೆಯೋ ಹುತ್ತದ ಮಣ್ಣನ್ನು, ಕೆಮ್ಮಣ್ಣನ್ನು, ಬಕ್ರೆ ಮಣ್ಣನ್ನು ಬೇರೆ ಬೇರೆ ಕಾರಣಗಳಿಗಾಗಿ ತಿಂದಾಗಷ್ಟೇ ‘ಮಣ್ಣು ತಿನ್ನುತ್ತಿದ್ದಾರೆ’ ಎಂದು ಹುಸಿನಗೆ ಬೀರುತ್ತಿದ್ದೆವು. ತುಂಬಾ ಚಿಕ್ಕಂದಿನಲ್ಲಿ ಗೊತ್ತಿಲ್ಲದೆ ಮಣ್ಣು ಮುಕ್ಕಿ ಒದೆ ತಿಂದ ನೆನಪುಗಳು ಇನ್ನೂ ಎದೆಯೊಳಗೆ ಹಸಿರಾಗಿವೆ. ಇಷ್ಟು ಬಿಟ್ಟರೆ ಮತ್ತೆಲ್ಲೂ ಮಣ್ಣು ತಿನ್ನುವುದನ್ನು ನೋಡಿರಲಿಲ್ಲ; ಕೇಳಿಯೂ ಇರಲಿಲ್ಲ.

‘ಅನ್ನ ತಿನ್ನುವ ಬಾಯಲ್ಲಿ ಮತ್ತೇನೂ ತಿನ್ನಲು ಸಾಧ್ಯವಿಲ್ಲ’ ಎಂದು ನಂಬಿದ್ದ ನಮಗೆ ‘ದಲಿತರಿಗೆ ಮಲ ತಿನ್ನಿಸಿದ, ಮೂತ್ರ ಕುಡಿಸಿದ’ ವಿಷಯ ತಿಳಿದು ಕಣ್ಣಂಚು ನೀರಾಡಿತ್ತು. ಇದನ್ನು ಬಿಟ್ಟರೆ ಇದೀಗ ಭೀಕರವಾದ ಕರಾಳ ಹಸಿವು ಮಣ್ಣು ತಿನ್ನುವಂತೆ ಮಾಡಿ ಇಬ್ಬರು ಮಕ್ಕಳನ್ನು ಬಲಿ ತೆಗೆದುಕೊಂಡದ್ದು ಕೇಳಿ ವಿಚಿತ್ರ ನೋವು ಎಡತಾಕುತ್ತಿದೆ (ಪ್ರ.ವಾ., ಮೇ 5). ಕರ್ನಾಟಕದ ಇಬ್ಬರು ಮಕ್ಕಳು ಆಂಧ್ರಪ್ರದೇಶದಲ್ಲಿ ಈ ರೀತಿಯ ದಾರುಣ ಸಾವಿಗೆ ತುತ್ತಾಗಿದ್ದಾರೆ.

ನಮ್ಮ ಮನೆಯ ಹಿರೀಕರು ಜೀತ ಮಾಡುತ್ತಿದ್ದಾಗ ಮನೆಯ ಯಜಮಾನರು ಕೊಟ್ಟ ಮುದ್ದೆಯನ್ನು ತಾವು ತಿಂದು, ಅದರಲ್ಲೇ ಸ್ವಲ್ಪ ಉಳಿಸಿಕೊಂಡು ಮನೆಯ ಮಕ್ಕಳಿಗಾಗಿ ತರುತ್ತಿದ್ದರಂತೆ. ಕುಟುಂಬದ ಹಸಿವು ಆ ಮಟ್ಟದಲ್ಲಿ ಅವರನ್ನು ಬಾಧಿಸುತ್ತಿದ್ದರೂ ಅವರ ದುಡಿಮೆಯ ಉತ್ಸಾಹ ಕುಗ್ಗಿರಲಿಲ್ಲ; ಮಣ್ಣು ತಿನ್ನುವ ಆಲೋಚನೆ ಬಂದಿರಲಿಲ್ಲ. ಊಟವಿಲ್ಲದೆ ಬರೀ ನೀರು ಕುಡಿದು ಮಲಗುತ್ತಿದ್ದ ತಾಯಂದಿರ ಬದುಕೂ ಹೀಗೆಯೇ ಇತ್ತು.

ADVERTISEMENT

ಒಂದೆರಡು ದಿನದ ಹಿಂದೆ ಮೈಸೂರಿನ ಹಿರಿಯ ಪ್ರಾಧ್ಯಾಪಕ ಶಿವಸ್ವಾಮಿಯವರು ದೇವನೂರ ಮಹಾದೇವ ಅವರ ‘ಒಡಲಾಳ’ ಕೃತಿಯ ಒಂದು ಸನ್ನಿವೇಶವನ್ನು ಹೇಳುತ್ತಿದ್ದರು. ಅದರ ಮೂಲಕ, ಅವರು ಬಡವರು ಮತ್ತು ದಲಿತರ ಹಸಿವಿನ ಹಾಹಾಕಾರದ ತೀವ್ರತೆಯನ್ನು ಕಟ್ಟಿಕೊಟ್ಟಿದ್ದರು. ಇದನ್ನು ಕೇಳಿದ ದಿನವೇ, ಬರಸಿಡಿಲಿನಂತೆ ಈ ಸಂಗತಿಯನ್ನು ಸಾಬೀತುಪಡಿಸುವಂತೆ ಮಣ್ಣು ತಿಂದು ಸತ್ತ ಮಕ್ಕಳ ಕತೆ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.

ಕೋಟ್ಯಧೀಶರು ಇರುವ, ನೂರಾರು ಕೆ.ಜಿ.ತೂಕದ ಚಿನ್ನದ ತೇರು, ಕಿರೀಟವನ್ನು ದೇವರಿಗೆ ಮಾಡಿಸಿಕೊಡಬಲ್ಲ ಶ್ರೀಮಂತರಿರುವ, ಉದ್ಯಮಿಗಳಿಗೆ ಸಾವಿರಾರು ಕೋಟಿ ರೂಪಾಯಿ ಸಾಲ ಮಂಜೂರು ಮಾಡಬಲ್ಲ ತಾಕತ್ತಿನ ಬ್ಯಾಂಕುಗಳಿರುವ, ಕೆಲವು ಕಂಪನಿಗಳಿಗೆ ಲಕ್ಷ ಕೋಟಿ ರೂಪಾಯಿಗಳ ಲೆಕ್ಕದಲ್ಲಿ ತೆರಿಗೆ ಮನ್ನಾ ಮಾಡಬಲ್ಲ ಸಂಪತ್ತಿರುವ, ತಿನ್ನುವ ಆಹಾರದ ಎಲ್ಲ ಸಾಮಗ್ರಿಗಳ ಬೆಲೆ ಗಗನಕ್ಕೇರಿದರೂ ತಲೆಕೆಡಿಸಿಕೊಳ್ಳದವರು ಇರುವ, ಪ್ರತಿ ಚುನಾವಣೆಯಲ್ಲೂ ಕೋಟಿಗಟ್ಟಲೆ ಅನಾಮಧೇಯ ಹಣ ಸಿಕ್ಕುವ ಇಲ್ಲಿ... ಮಕ್ಕಳಿಬ್ಬರು ಹಸಿವಿಗಾಗಿ ಮಣ್ಣು ತಿಂದರೆ ಯಾರನ್ನು ದೂರುವುದು?

‘ಅಕ್ಕಿಯನ್ನು ಉಚಿತವಾಗಿ ನೀಡಿದರೆ ಬಡವರು ಸೋಮಾರಿಗಳಾಗುತ್ತಾರೆ’ ಎನ್ನುವ ಉಪದೇಶ ಕೊಟ್ಟವರಲ್ಲಿ ಇದಕ್ಕೆ ಉತ್ತರ ಇರಬಹುದೇನೋ! ಹಸಿವಿನಿಂದ ಎದ್ದು ಬಂದವರಲ್ಲಿ, ಹಸಿವನ್ನೇ ಹಾಸುಹೊದ್ದುಕೊಂಡವರಲ್ಲಿ ಇದಕ್ಕೆ ಉತ್ತರ ಖಂಡಿತ ಸಿಕ್ಕಲಾರದು; ಸಿಗುವುದು ಕಣ್ಣೀರು ಮಾತ್ರ! ನಾಗರಿಕರು ಎನಿಸಿಕೊಂಡಿರುವವರು ಕಣ್ಣಿನಿಂದ ನೋಡಲೂ ಹೇಸುವ ಮಲದ ಗುಂಡಿಗೆ ಇಳಿದು ಸ್ವಚ್ಛಗೊಳಿಸಲು ಹೋಗಿ, ದೇಶದಾದ್ಯಂತ ಕಳೆದ ಹತ್ತು ವರ್ಷಗಳಲ್ಲಿ ಸತ್ತಿರುವ ಕಾರ್ಮಿಕರ ಸಂಖ್ಯೆ 1,340ನ್ನು ದಾಟಿದೆ. ಜೀತ ನಾಶವಾಗಿದೆ ಎಂದುಕೊಂಡರೂ ಅಲ್ಲಲ್ಲಿ ಗೋಚರವಾಗುತ್ತಲೇ ಇದೆ. ಮಕ್ಕಳ ಅಕಾಲ ದುಡಿಮೆ ತಗ್ಗಿಲ್ಲ, ಕೂಲಿಗಾಗಿ ಗುಳೆ ಹೋಗುವವರ ಸರದಿ ನಿರಂತರವಾಗಿದೆ. ಒಂದು ಹುದ್ದೆಗೆ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗುವ, ಒಂದು ಪ್ರವೇಶ ಪರೀಕ್ಷೆಯ ಅರ್ಹತೆಗೆ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಈ ದೇಶದಲ್ಲಿ ಉದ್ಯೋಗದ ಪ್ರಮಾಣ ಕುಸಿಯುತ್ತಲೇ ಹೋಗುತ್ತಿದೆ ಎನ್ನುವುದು ಭೀಕರವಾದರೂ ವಾಸ್ತವ. ಇವರೆಲ್ಲರ ಹಿಂದೆ ಹಸಿವಿನ ಪಯಣ ಇದೆ ಎಂಬುದನ್ನು ಪ್ರತ್ಯೇಕವಾಗೇನೂ ಹೇಳಬೇಕಿಲ್ಲ.

ಮೊನ್ನೆ ಗೆಳೆಯನೊಬ್ಬ ಕರೆ ಮಾಡಿ ‘ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ, ಅಲ್ಲಿನ ಯಂತ್ರದ ಅವಘಡದಿಂದ ನನ್ನ ಕೈಬೆರಳುಗಳು ತುಂಡಾದವು. ಇದರಿಂದ ಕೆಲಸ ಮಾಡಲು ಸಾಧ್ಯವಾಗದೆ ಹಳ್ಳಿ ಸೇರಿದೆ. ಕೆಲವೇ ದಿನಗಳಲ್ಲಿ ನನ್ನ ತಂದೆ ಸತ್ತರು. ತಿಥಿ ಮಾಡಲೂ ಸಾಧ್ಯವಾಗುತ್ತಿಲ್ಲ’ ಎಂದು ಹೇಳಿಕೊಂಡಾಗ, ಇಲ್ಲಿನ ಹಸಿವು ಮತ್ತು ನಿರುದ್ಯೋಗದ ಬಿಸಿ ಎಷ್ಟು ತೀವ್ರತರವಾಗಿದೆ ಎನ್ನುವುದು ಇನ್ನಷ್ಟು ಅರ್ಥವಾಗುತ್ತಾ ಹೋಗುತ್ತಿದೆ.

ಆ ಮಕ್ಕಳ ಸಾವನ್ನು ಕುರಿತು ‘ಅವರ ತಂದೆ ತಾಯಿ ಕುಡಿಯುತ್ತಿದ್ದರು, ಮಕ್ಕಳನ್ನು ಸರಿಯಾಗಿ ನೋಡಿಕೊಂಡಿಲ್ಲ, ಅದಕ್ಕಾಗೇ ಸತ್ತರು, ನಾವೇನು ಮಾಡೋಕಾಗುತ್ತೆ’ ಎಂದು ಯಾರಾದರೂ ಹೇಳಿಬಿಡಬಹುದು. ಸಭ್ಯ ನಾಗರಿಕರೆನಿಸಿಕೊಂಡು, ‘ಸಂಸ್ಕೃತಿಯಲ್ಲಿ ನಮ್ಮ ದೇಶ ಗುರು ಇದ್ದ ಹಾಗೆ’ ಎನ್ನುತ್ತಾ, ಜಗತ್ತಿನಲ್ಲಿ ಆರ್ಥಿಕವಾಗಿ ಮುನ್ನುಗ್ಗುತ್ತಿರುವ ದೇಶ ನಮ್ಮದೆನ್ನುವ ಹೆಮ್ಮೆಪಡುತ್ತಾ ಈ ಮಾತುಗಳನ್ನು ಹೇಳುವುದಾದರೂ ಹೇಗೆ? ಜಗತ್ತಿನಲ್ಲಿ ಕಾರ್ಮಿಕ ರಾಜ್ಯದ ಕನಸು ಕಂಡ ಕಾರ್ಲ್ ಮಾರ್ಕ್ಸ್ ಹುಟ್ಟಿದ ದಿನವೇ ಇಂತಹದ್ದೊಂದು ದುರಂತ ನಡೆದಿರುವುದು ಶೋಚನೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.