ADVERTISEMENT

ಸಂಗತ: ಮಿತವಾಗಿ ಬಡಿಸಿ, ಎಲ್ಲವನ್ನೂ ಭುಂಜಿಸಿ

ಪರರ ಹಸಿವಿನ ನೆನಪಿಲ್ಲದೆ, ಸಾಲು ಸಾಲು ಪಕ್ವಾನ್ನಗಳನ್ನು ಹಾಕಿಸಿಕೊಂಡು, ತಿನ್ನದೆ ಎಲೆಯಲ್ಲೇ ಬಿಡುವುದು ಎಷ್ಟು ಸರಿ?

ಪ.ರಾಮಕೃಷ್ಣ
Published 24 ಅಕ್ಟೋಬರ್ 2021, 19:25 IST
Last Updated 24 ಅಕ್ಟೋಬರ್ 2021, 19:25 IST
   

ಒಂದೆಡೆ ಭರ್ಜರಿ ಮದುವೆ ನಡೆದಿತ್ತು. ಭಾರಿ ಸಂಖ್ಯೆಯಲ್ಲಿ ಅತಿಥಿ ಅಭ್ಯಾಗತರ ಬರುವಿಕೆಯನ್ನು ನಿರೀಕ್ಷಿಸಿ ಊಟದ ಖಾದ್ಯಗಳನ್ನು ಹೆಚ್ಚಾಗಿಯೇ ತಯಾರಿಸಿದ್ದರು. ಆದರೆ ಅಪರಿಮಿತವಾಗಿ ಅನ್ನಾಹಾರ ಉಳಿದಿತ್ತು. ಯಾವುದಾದರೂ ಅನಾಥಾಶ್ರಮವನ್ನು ಹುಡುಕಿಕೊಂಡು ಹೋಗಿ ಅದನ್ನು ಕೊಟ್ಟು ಹಸಿದಿರುವವರ ಹೊಟ್ಟೆ ತಂಪು ಮಾಡಬಹುದಿತ್ತು. ಆದರೆ ಆಗಲೇ ಹಳಸಲು ಆರಂಭಿಸಿದ್ದ ಪಲಾವನ್ನು ತೆಗೆದುಕೊಂಡು ಹೋಗಿ ಕಲ್ಯಾಣಮಂಟಪದ ಹಿಂಭಾಗದಲ್ಲಿ ಸುರುವಿ ಗಾಡಿ ಕಟ್ಟಿದರು ಮದುವೆ ಮಾಡಿಸಿದವರು.

ಹೀಗೆ ಸುರಿದ ಪಲಾವನ್ನು ಯಾರದೋ ದನಗಳು ಬಂದು ಸಮೃದ್ಧವಾಗಿ ತಿಂದುಮುಗಿಸಿದವು. ಅಧಿಕವಾಗಿ ಡಾಲ್ಡಾ ಹಾಕಿ ತಯಾರಿಸಿದ್ದ ಪಲಾವ್ ಮಹಿಮೆಯಿಂದ ಅವುಗಳ ಹೊಟ್ಟೆ ನಗಾರಿಯಂತೆ ಉಬ್ಬರಿಸಿತು. ವೈದ್ಯರು ಎಷ್ಟೇ ಶ್ರಮಿಸಿದರೂ ಫಲ ಸಿಗಲಿಲ್ಲ. ಐದು ದನಗಳು ಸತ್ತುಹೋದವು. ಮೆಲುಕಿಗೆ ಸಿಗದ ಆಹಾರ ಸಹಜವಾಗಿ ಜಾನುವಾರುಗಳ ಸಾವಿಗೆ ಕಾರಣವಾಗುತ್ತದೆ, ಹಾಗೆಯೇ ಆಯಿತು.

ಸಮಾರಂಭಗಳು ಎನ್ನುವಾಗ ಹಲವಾರು ಬಗೆಯ ಭಕ್ಷ್ಯಗಳು ಇರುತ್ತವೆ. ಎಲ್ಲವನ್ನೂ ಹಾಕಿಸಿ ಕೊಳ್ಳುವವರು, ಇನ್ನು ತಿನ್ನಲು ಸಾಧ್ಯವೇ ಇಲ್ಲ ಎನಿಸಿ ದಾಗ ನಿಸ್ಸಂಕೋಚವಾಗಿ ಅಲ್ಲಿಯೇ ಬಿಟ್ಟು ಎದ್ದು ಹೋಗುತ್ತಾರೆ.

ADVERTISEMENT

ಮನೆಯವರಿಗೆ ತುಂಬ ಜನ ಸಮಾರಂಭಕ್ಕೆ ಬರಬೇಕು, ಉಂಡು ಹರಸಿ ಹೋಗಬೇಕು ಎಂಬ ಆಶಯವಿರುತ್ತದೆ. ಆದರೆ ಅತಿಥಿಗಳು ಎಲ್ಲವನ್ನೂ ಬಡಿಸಿಕೊಳ್ಳಲಿ ಎಂಬುದು ಅಷ್ಟೊಂದು ಪಕ್ವಾನ್ನಗಳನ್ನು ತಯಾರಿಸಿರುವುದರ ಹಿಂದಿನ ಉದ್ದೇಶ ಅಲ್ಲ. ಸಿಹಿ ಇಷ್ಟವಾಗದಿದ್ದರೆ ಖಾರ, ಖಾರ ಹೆಚ್ಚು ಬೇಡವೆಂದವರಿಗೆ ಸಿಹಿ ಹೀಗೆ ವೈವಿಧ್ಯಮಯ ರುಚಿಗಳ ಪದಾರ್ಥಗಳನ್ನು ತಯಾರಿಸಿ, ಉಣ್ಣುವ ವ್ಯಕ್ತಿ ಯಾವುದು ಬೇಕೋ ಅದನ್ನು ಆರಿಸಿಕೊಳ್ಳಲಿ ಎಂಬ ಆಶಯ ಇರುತ್ತದೆ. ಎಲ್ಲವನ್ನೂ ಹಾಕಿಸಿಕೊಂಡು ಕಲಸಿ ಎಲೆಯಲ್ಲಿ ಪಿರಮಿಡ್ ಕಟ್ಟಿ ಎದ್ದುಹೋದರೆ ಅನ್ನದಾನ ಮಾಡಿದ ಪುಣ್ಯಾತ್ಮನ ಆಶಯಕ್ಕೆ ಭಂಗ ತಂದಂತಾಗದೇ?

ವರನಟ ಡಾ. ರಾಜಕುಮಾರ್ ಊಟ ಮಾಡುವ ವಿಧಾನವನ್ನು ತುಂಬ ಜನ ಬಣ್ಣಿಸಿದ್ದಾರೆ. ತಟ್ಟೆಯಲ್ಲಿ ಬೇಕಾದಷ್ಟನ್ನೇ ಬಡಿಸಿಕೊಂಡು, ಸ್ವಲ್ಪವೂ ಬಿಡದಂತೆ ಸ್ವಚ್ಛವಾಗಿ ಊಟ ಮಾಡಿ ‘ಆಹಾ, ಎಂತಹ ರುಚಿ ಕರ ಭೋಜನ’ ಎಂದು ಹೊಗಳಿ ಹೋಗುವ ಸ್ವಭಾವ ಅವರದಾಗಿತ್ತಂತೆ. ಅವರು ಯಾವ ಬಗೆಯ ಊಟ ವನ್ನೂ ಟೀಕಿಸಲಿಲ್ಲ, ನನಗೆ ರುಚಿಸುವುದಿಲ್ಲ ಎಂದು ಹೇಳಲಿಲ್ಲ.

ಸಮಾರಂಭದಲ್ಲಿ ಬಳಸುವ ಧಾನ್ಯಗಳು, ತರಕಾರಿ ಎಲ್ಲವೂ ನಾವು ಕಂಡರಿಯದ ಅನ್ನದಾತನೊಬ್ಬನ ಶ್ರಮದ ಉತ್ಪನ್ನವಾಗಿರುತ್ತವೆ. ಬಿತ್ತಿದ ಬೆಳೆಗೆ ಗೊಬ್ಬರ ಹಾಕಿ, ಕ್ರಿಮಿಕೀಟ, ಪಕ್ಷಿಗಳ ಬಾಧೆ ಬರದಂತೆ ಹಗಲಿ ರುಳೂ ಕಾದು ಫಸಲನ್ನು ಮಾರುಕಟ್ಟೆಗೆ ತರುವ ಶ್ರಮಜೀವಿಯ ಬೆವರಿನ ಹನಿ ಮುತ್ತಾಗಿ ಮಿನುಗಬೇಕಿ ದ್ದರೆ ಅವನ ಬೆಳೆ ಬೇರೆಯವರ ಹೊಟ್ಟೆ ತುಂಬಿಸಿ ತೃಪ್ತಿಯ ತೇಗು ಹೊರಗೆ ಬರಬೇಕು. ಆದರೆ ವ್ಯರ್ಥಗೊಳ್ಳುವ ಊಟದಿಂದ ಯಾರಿಗೂ ಯಾವುದೇ ಸಾರ್ಥಕ್ಯ ಭಾವ ಉದಿಸಲು ಸಾಧ್ಯವಿಲ್ಲ ತಾನೆ?

ಮೋಹನ ಕುಮಾರ್ ಎಂಬ ಕನ್ನಡಿಗ ಕರ್ನಾಟಕ ದಾದ್ಯಂತ ಶಾಲಾ ಕಾಲೇಜುಗಳ ವಸತಿನಿಲಯ, ಛತ್ರಗಳಿಗೆ ತಮ್ಮದೇ ಖರ್ಚಿನಲ್ಲಿ ಫಲಕಗಳನ್ನು ಬರೆಸಿ ಕೊಟ್ಟು ಬರುವ ಮಹತ್ವದ ಕೆಲಸ ಮಾಡಿದ್ದಾರೆ. ‘ಎಷ್ಟು ಬೇಕೋ ಅಷ್ಟು ಮಾತ್ರ ಬಡಿಸಿಕೊಳ್ಳಿ. ಯಾವುದೇ ಪದಾರ್ಥವನ್ನೂ ಎಲೆಯಲ್ಲಿ ಬಿಟ್ಟು ಹೋಗಬೇಡಿ. ಇನ್ನೊಬ್ಬರ ಆಹಾರವನ್ನು ಕಸಿದುಕೊಳ್ಳುವ ಹಕ್ಕು ನಿಮಗೆ ಇಲ್ಲ. ನೀವು ಎಲೆಗೆ ಹಾಕಿಸಿಕೊಳ್ಳದೆ ಉಳಿ ಯುವ ಆಹಾರ ಹಸಿದ ಹೊಟ್ಟೆಗಳನ್ನು ತಂಪಾಗಿಡಲಿ...’ ಹೀಗೆ ಹಲವಾರು ವಿಧದಿಂದ ಮನವಿ ಮಾಡಿಕೊಂಡ ವಾಕ್ಯಗಳು ಉಣ್ಣುವವರನ್ನು ಎಚ್ಚರಿಸುತ್ತವೆ.

ಒಂದು ಕಾಲದಲ್ಲಿ ನೌಕರಿ ಅರಸಿಕೊಂಡು ಮೋಹನ ಕುಮಾರ್ ಬೆಂಗಳೂರಿಗೆ ಬಂದಾಗ ಕೈಯಲ್ಲಿ ಕಾಸಿರಲಿಲ್ಲ. ಹಸಿವು ತಾಳಲಾಗದೆ ಒಂದು ಮದುವೆ ಛತ್ರಕ್ಕೆ ನುಗ್ಗಿದಾಗ ದ್ವಾರಪಾಲಕ ಹೊರಗೆ ತಳ್ಳಿದರಂತೆ. ನಿತ್ರಾಣವಾಗಿ ಹೊರಗಿನ ಗೋಡೆಗೆ ಆತು ಕುಳಿತುಕೊಂಡ ಅವರ ಮೈಮೇಲೆ ಹಿಂದಿನಿಂದ ಯಾರೋ ಊಟ ಮಾಡಿದ ಪತ್ರಾವಳಿಗಳ ರಾಶಿಯನ್ನೇ ಎಸೆದರಂತೆ. ಆಗ ಅವರಿಗನಿಸಿದ್ದು, ತಿಪ್ಪೆಗೆ ಎಸೆಯುವ ಆಹಾರವನ್ನು ಉಳಿಸಿ ಹಸಿದವನಿಗೆ ಕೊಡಬಹುದಿತ್ತು ಎಂಬ ಭಾವ. ಇದು ಅವರ ಬದುಕಿಡೀ ಪರರನ್ನು ಎಚ್ಚರಿಸುವ ಫಲಕಗಳನ್ನು ತಯಾರಿಸಿ ಹಂಚುವ ಕಾಯಕಕ್ಕೆ ಪ್ರೇರೇಪಿಸಿತು.

ಕೊರೊನಾ ಕಾಡಿದಾಗ ಕೆಲಸವಿಲ್ಲದೆ ಹೊತ್ತಿನ ತುತ್ತಿಗಾಗಿ ಪರದಾಡಿದ ಕುಟುಂಬಗಳ ಕಂಬನಿಯ ಕಥೆಯನ್ನು ನಾವು ಮರೆತಿಲ್ಲ. ಬರೇ ಬಿಸಿಲು, ಹಸಿರಿನ ಸುಳಿವಿಲ್ಲ. ಕೊಳಚೆ ನೀರಿಗೂ ತತ್ವಾರವಿರುವ ಸೊಮಾಲಿಯಾದಲ್ಲಿ ಜೇಡಿಮಣ್ಣನ್ನು ರೊಟ್ಟಿ ಮಾಡಿ ತಿಂದು ಉಸಿರು ಉಳಿಸಿಕೊಂಡವರ ಬದುಕಿಗೊಂದು ನೆಲೆ ಕಲ್ಪಿಸುವಲ್ಲಿ ವಿಶ್ವಸಂಸ್ಥೆಯೇ ಅಸಹಾಯವಾಗಿದೆ. ಹೀಗಿರುವಲ್ಲಿ ಪರರ ಹಸಿವಿನ ನೆನಪಿಲ್ಲದೆ, ಸಾಲು ಸಾಲು ಪಕ್ವಾನ್ನಗಳನ್ನು ಮಾಡಿಸಿ, ಬಂದವರಿಗೆ ಆಗ್ರಹದಿಂದ ಬಡಿಸಿ ‘ಸಮಾರಂಭ ಭರ್ಜರಿಯಾಗಿತ್ತು’ ಎಂಬ ಹೊಗಳಿಕೆಗೆ ಕಿವಿಯಾನಿಸುವವರು ಕೂಡ ಹಿತಮಿತವಾದ ಭಕ್ಷ್ಯಗಳನ್ನು ತಯಾರಿಸಲು ಮುಂದಾಗುವುದೂ ಮುಖ್ಯವಾಗುತ್ತದೆ.

ಹಾಗೆಯೇ ಬಂದವರು, ಅನ್ನಕ್ಕಾಗಿ ಪರಿತಪಿಸುವವರ ಹೊಟ್ಟೆ ಸೇರಬೇಕಾದ ಆಹಾರವನ್ನು ನಿರರ್ಥಕ ಗೊಳಿಸುವುದು ಅನ್ನ ನೀಡಿದ ಭೂಮಿಗೆ ಮಾಡುವ ಅಪಚಾರವೆಂದು ಭಾವಿಸಿ ಬೇಕಾದಷ್ಟನ್ನೇ ಬಡಿಸಿಕೊಳ್ಳಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.