ಸಂಗತ: ಇಳಿಸೋಣ ಆಹಾರ ಹೊತ್ತವರ ಭಾರ
ಕ್ಷಣಾರ್ಧದಲ್ಲಿ ವ್ಯಾಪಕವಾಗಿ ಹರಡುವ ನೇತ್ಯಾತ್ಮಕ ಸುದ್ದಿಗಳ ನಡುವೆ ಸಕಾರಾತ್ಮಕ ಸಂಗತಿಯೊಂದು ಕಣ್ಣಿಗೆ ಬಿದ್ದು ಮನಸ್ಸಿಗೆ ಹಾಯೆನಿಸಿತು. ಆಹಾರವನ್ನು ಮನೆಬಾಗಿಲಿಗೆ ತಂದುಕೊಡುವ ಜೊಮಾಟೊ ಕಂಪನಿಯ ಸ್ಥಾಪಕ ದೀಪಿಂದರ್ ಗೋಯಲ್ ಸುದ್ದಿಯಲ್ಲಿ ಇರುವವರು. ದೀಪಿಂದರ್ ಗುರುಗ್ರಾಮದಲ್ಲಿ ಇತ್ತೀಚೆಗೆ ಆಹಾರವನ್ನು ಖುದ್ದಾಗಿ ಗ್ರಾಹಕರಿಗೆ ತಲುಪಿಸಲು ಕಂಪನಿಯ ಸಮವಸ್ತ್ರ ಧರಿಸಿ ಬೈಕ್‌ನಲ್ಲಿ ಹೊರಟರು. ಆಹಾರ ಖರೀದಿಸಬೇಕಾದ ಮಳಿಗೆಯು ಪ್ರತಿಷ್ಠಿತ ಮಾಲ್‌ವೊಂದರ ಮೂರನೇ ಮಹಡಿಯಲ್ಲಿತ್ತು. ಅಲ್ಲಿಗೆ ಹೋಗಲು ಲಿಫ್ಟ್ ಹತ್ತಿರ ಬರುತ್ತಿದ್ದಂತೆ ದೀಪಿಂದರ್ ಅವರನ್ನು ತಡೆಯಲಾಯಿತು. ಕಾರಣ, ಡೆಲಿವರಿ ಹುಡುಗರು ಲಿಫ್ಟ್ ಉಪಯೋಗಿಸುವಂತೆ ಇರಲಿಲ್ಲ!
ಮೂರು ಮಹಡಿ ಮೆಟ್ಟಿಲು ಹತ್ತಿ ಹೋದ ದೀಪಿಂದರ್‌ಗೆ ಅಲ್ಲಿ ಮತ್ತೊಂದು ಅಚ್ಚರಿ ಕಾದಿತ್ತು. ಡೆಲಿವರಿ ಹುಡುಗರು ಉಪಾಹಾರಗೃಹದ ಒಳಗೆ ಪ್ರವೇಶಿಸುವಂತೆ ಇರಲಿಲ್ಲ. ದೀಪಿಂದರ್ ಮೆಟ್ಟಿಲ ಬಳಿಯೇ ಬಹಳ ಹೊತ್ತು ಕಾಯಬೇಕಾಯಿತು. ಹಾಗೆ ಕೂತಾಗ ಅಲ್ಲಿದ್ದ ಇತರ ಡೆಲಿವರಿ ಹುಡುಗರ ಜತೆ ಮಾತುಕತೆ ಆಯಿತು. ಅವರ ಕಷ್ಟಸುಖಗಳೂ ಗೊತ್ತಾದವು.
ಮನೆಗೆ ಬಂದವರೇ ಟ್ವಿಟರ್‌ನಲ್ಲಿ ಈ ವಿಷಯವನ್ನು ಪೋಸ್ಟ್ ಮಾಡಿದರು. ತಕ್ಷಣವೇ ಗುರುಗ್ರಾಮದ ಮಾಲ್‌ನ ಮಾಲೀಕ ಸ್ಪಂದಿಸಿದರು. ಡೆಲಿವರಿ ಹುಡುಗರ ಕೆಲಸವನ್ನು ಕಡಿಮೆ ಶ್ರಮದಾಯಕವಾಗಿಸಲು ಸಹಕರಿಸುವಂತೆ ಎಲ್ಲ ಮಾಲ್‌ಗಳ ಮುಖ್ಯಸ್ಥರಿಗೂ ದೀಪಿಂದರ್ ಮನವಿ ಮಾಡಿದರು. ಅಷ್ಟೇ ಅಲ್ಲ, ತಮ್ಮ ಕಂಪನಿಯ ಡೆಲಿವರಿ ಹುಡುಗ, ಹುಡುಗಿಯರ ಕೆಲಸ ಸುಲಭವಾಗಲು ಮತ್ತು ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವಂತೆ ಮಾಡಲು ಹಲವಾರು ಕ್ರಮಗಳನ್ನು ಕೈಗೊಂಡರು. ಈ ಒಂದು ನಡೆಯ ಮೂಲಕ, ಸಹೋದ್ಯೋಗಿಗಳ ಮೇಲೆ ಸಹಾನುಭೂತಿ ಇರಬೇಕೆಂಬುದನ್ನು ಅವರು ತೋರಿಸಿಕೊಟ್ಟರು.
ತಳಮಟ್ಟದಲ್ಲಿ ಕೆಲಸ ಮಾಡುವಾಗ ನಿತ್ಯವೂ ಡೆಲಿವರಿ ಉದ್ಯೋಗಿಗಳು ಸಣ್ಣ ಹೋರಾಟವನ್ನೇ ಮಾಡಬೇಕಾಗುತ್ತದೆ. ಟ್ರಾಫಿಕ್ ಸಮಸ್ಯೆ, ಒಂದರ ಹಿಂದೊಂದು ಬರುವ ಆರ್ಡರ್‌ಗಳು, ನಿರ್ದಿಷ್ಟ ಸಮಯದಲ್ಲಿ ಆರ್ಡರ್ ತೆಗೆದುಕೊಂಡು ಅವನ್ನು ತಲುಪಿಸಬೇಕಾದ ಅನಿವಾರ್ಯ, ಹೀಗೇ ಎಂದು ಹೇಳಲು ಬಾರದ ಗ್ರಾಹಕರ ವರ್ತನೆ... ಒಂದೇ ಎರಡೇ.
ಹಾಗಾಗಿ, ಡೆಲಿವರಿ ಹುಡುಗರ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದರಲ್ಲಿ ಗ್ರಾಹಕರಾದ ನಮ್ಮ ಕರ್ತವ್ಯವೂ ಇದೆ.
ದೈಹಿಕ ಶ್ರಮಕ್ಕಿಂತ ಮನುಷ್ಯನಿಗೆ ಸಂಕಟ ತರುವುದೆಂದರೆ, ಎದುರಿಗಿರುವ ವ್ಯಕ್ತಿ ತನ್ನನ್ನು ಗೌರವಿಸದಿರುವುದು! ನಮಗೆ ಆಹಾರ ತರುವವರಲ್ಲಿ ಓದುತ್ತಿರುವ ವಿದ್ಯಾರ್ಥಿಯಿರಬಹುದು, ಕುಟುಂಬವನ್ನು ನೋಡಿಕೊಳ್ಳುತ್ತಿರುವ ಸ್ವಾಭಿಮಾನಿ ಹುಡುಗಿಯಿರಬಹುದು, ತಾಯಿಯ ಆಸ್ಪತ್ರೆ ಖರ್ಚಿಗೆ ಸಹಾಯವಾಗಲಿ ಎಂದು ವಾರಕ್ಕೆರಡು ದಿನ ತನ್ನ ಕೆಲಸ ಮುಗಿಸಿ ಈ ಕೆಲಸ ಮಾಡುತ್ತಿರುವ ಉದ್ಯೋಗಿ ಇರಬಹುದು, ತಾನು ಖರೀದಿಸಿದ ಬೈಕಿನ ಸಾಲ ಕಟ್ಟಲು ಒದ್ದಾಡುತ್ತಿರುವ ಹುಡುಗನಿರಬಹುದು. ನಮ್ಮ ಹಸಿದ ಹೊಟ್ಟೆಯನ್ನು ತುಂಬಿಸಲು, ಎಷ್ಟೇ ಹೊತ್ತಾಗಲಿ, ಸರದಿ ಸಾಲಿನಲ್ಲಿ ನಿಂತು ಆಹಾರ ಪಡೆದು, ಮಹಾನಗರಗಳ ಕಿಕ್ಕಿರಿದ ರಸ್ತೆಗಳಲ್ಲಿ, ಸಂದಿಗೊಂದಿಗಳಲ್ಲಿ ಭಾರ ಹೊತ್ತು ತರುವ ಹುಡುಗ, ಹುಡುಗಿಯನ್ನು ಕನಿಷ್ಠವಾಗಿ ಕಾಣದೆ, ಅವಮಾನಿಸದೆ, ಮುಗುಳ್ನಕ್ಕು ಅದನ್ನು ಸ್ವೀಕರಿಸುವುದು ನಾವು ಮಾಡಬೇಕಾದ ಮೊದಲ ಕೆಲಸ.
ಟಿಪ್ಸ್ ಕೊಡುತ್ತೇವೋ ಇಲ್ಲವೋ ಟೀಕೆಗಳನ್ನು ಮಾಡುವುದು ಬೇಡ. ಕೊಂಚ ತಡವಾದರೆ ಆಕಾಶವೇ ತಲೆಯ ಮೇಲೆ ಬಿದ್ದಂತೆ ವರ್ತಿಸುವುದು, ಕೆಟ್ಟದಾಗಿ ವರದಿ ಮಾಡುವುದು, ಹಣ ಕೊಡದಿರುವುದು, ಆರ್ಡರ್ ರದ್ದು ಮಾಡುವುದು ಇವೆಲ್ಲ ನಿಜಕ್ಕೂ ಸಲ್ಲದು. ಹಾಗೆಂದು ಗ್ರಾಹಕರಿಗೆ ತೊಂದರೆಯಾದರೆ ದೂರು ಕೊಡುವುದು ಬೇಡವೇ? ಖಂಡಿತ, ಅಸಹನೀಯ ನಡವಳಿಕೆಗೆ ದೂರು ನೀಡಬೇಕಾಗುತ್ತದೆ, ಸಣ್ಣಪುಟ್ಟ ತಪ್ಪುಗಳಿಗೆ ಅಲ್ಲ.
ಹಣವಿದ್ದ ಮಾತ್ರಕ್ಕೆ ಯಾರೇನೂ ಪರ್ಯಾಯ ಜಗತ್ತೊಂದರಲ್ಲಿ ವಾಸಿಸುವುದಿಲ್ಲ. ತಮಗಾಗಿ ಕೆಲಸ ಮಾಡುವವರ ದಾರಿಯಲ್ಲಿ ಒಂದಿಷ್ಟು ದೂರ ನಡೆದು ಅಲ್ಲಿನ ಸಮಸ್ಯೆಗಳ ಬಗ್ಗೆ ಅರ್ಥ ಮಾಡಿಕೊಂಡು ಜಗತ್ತಿಗೂ ಹೇಳಿದ ದೀಪಿಂದರ್ ನಿಜಕ್ಕೂ ಸ್ತುತ್ಯರ್ಹರು. ವ್ಯವಹಾರ ಎನ್ನುವುದು ಬರೀ ಕೊಡು ತೆಗೆದುಕೊಳ್ಳುವಿಕೆಯ ಮೇಲೆಯೇ ನಿಂತಿರುವಾಗ ಅದಕ್ಕೊಂದು ಪುಟ್ಟ ಮಾನವೀಯ ಸ್ಪರ್ಶ ಒದಗಿಸಿದ್ದು ಮಾದರಿ ನಡೆ.
ಕಂಪನಿ ಶುರುವಾಗಿ ಹತ್ತು ವರ್ಷಗಳಾದ ಮೇಲೆ ದೀಪಿಂದರ್‌ಗೆ ಈ ಉದ್ಯೋಗಿಗಳ ನೆನಪಾಯಿತೇ? ಇದು ಕಂಪನಿಯ ಮಾರುಕಟ್ಟೆ ತಂತ್ರ ಅನ್ನುತ್ತಾರೆ ಕೆಲ ನೆಟ್ಟಿಗರು. ಇರಬಹುದು ಅಂತಲೇ ಅಂದುಕೊಳ್ಳೋಣ. ಆದರೆ ಈ ನಡೆಯಿಂದ ಡೆಲಿವರಿ ಹುಡುಗರು ಅನುಭವಿಸುವ ಸಂಕಟದ ಅರಿವು ಇಡೀ ಜಗತ್ತಿಗೆ ಆಯಿತಲ್ಲ. ಮಾಲ್‌ಗಳ ಮುಖ್ಯಸ್ಥರು ಹಾಗೂ ಜನ ಒಂದಿಷ್ಟಾದರೂ ಮಾನವೀಯತೆ ತೋರಿಸಲು ಅನುಕೂಲವಾಯಿತಲ್ಲ!
ಅವರೇನೋ ತಡವಾಗಿಯಾದರೂ ತಮ್ಮ ಹುಡುಗರ ಬೆನ್ನಿನ ಚೀಲದ ಭಾರವನ್ನು ಹೊತ್ತು ಅವರ ಕಷ್ಟ ಅರ್ಥ ಮಾಡಿಕೊಂಡರು, ನಾವೂ ಕೊಂಚ ಮನುಷ್ಯತ್ವದಿಂದ ವರ್ತಿಸಿ ಆ ಹುಡುಗರ ಹೃದಯದ ಭಾರವನ್ನು ಕಡಿಮೆ ಮಾಡಲು ಇದು ಸುಸಮಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.