ADVERTISEMENT

ದೇವರ ಅಸ್ತಿತ್ವ ಮತ್ತು ನೈತಿಕಶ್ರದ್ಧೆ

ರಾಜಕುಮಾರ ಕುಲಕರ್ಣಿ
Published 24 ಜುಲೈ 2020, 19:31 IST
Last Updated 24 ಜುಲೈ 2020, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಾಕ್‍ಡೌನ್ ತೆರವುಗೊಳಿಸಿದ ನಂತರ ದೇವಾಲಯಗಳಲ್ಲಿ ಭಕ್ತರ ಪ್ರವೇಶಕ್ಕೆ ಸರ್ಕಾರ ಅವಕಾಶ ನೀಡಿದೆ. ಆದರೂ ಕೆಲವು ದೇವಾಲಯಗಳಲ್ಲಿನ ದೇವರುಗಳಿಗೆ ತಮ್ಮ ಭಕ್ತರಿಗೆ ದರ್ಶನ ಕರುಣಿಸುವ ಭಾಗ್ಯ ಇನ್ನೂ ದೊರೆತಿಲ್ಲ. ಇನ್ನು ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.

ಈ ಅವಧಿಯಲ್ಲಿ ಬೇರೆ ಕ್ಷೇತ್ರಗಳಿಗೆ ಎದುರಾದಂತೆ ದೇವಸ್ಥಾನಗಳಿಗೂ ಆರ್ಥಿಕ ಸಮಸ್ಯೆ ಎದುರಾಯಿತು. ವಿವಿಧ ಪ್ರಕಾರದ ಪೂಜೆಗಳಿಂದ ಮತ್ತು ಹುಂಡಿಗೆ ಭಕ್ತಗಣದಿಂದ ಕಾಣಿಕೆ ರೂಪದಲ್ಲಿ ಸಂದಾಯವಾಗುತ್ತಿದ್ದ ಹಣವನ್ನೇ ದೈನಂದಿನ ಖರ್ಚುವೆಚ್ಚ
ಗಳಿಗೆ ವಿನಿಯೋಗಿಸುತ್ತಿದ್ದ ದೇವಾಲಯಗಳು, ಬೀಗಮುದ್ರೆ ಬಿದ್ದದ್ದೇ ತಡ ಸಂಕಷ್ಟಕ್ಕೆ ಒಳಗಾದವು. ಕೆಲವು ದೇವಾಲಯಗಳ ಆಡಳಿತ ಮಂಡಳಿಯವರು ದೇವಾಲಯಗಳ ಒಡೆತನದಲ್ಲಿರುವ ಸ್ಥಿರಾಸ್ತಿಯನ್ನು ಮಾರಿ ಖರ್ಚು ನಿಭಾಯಿಸುವ ಹೇಳಿಕೆ ನೀಡಿದರು. ಆಯಾ ರಾಜ್ಯಗಳಲ್ಲಿನ ಸರ್ಕಾರಗಳು ಹಣಕಾಸು ನೆರವು ನೀಡಲು ಮುಂದೆ ಬಂದವು. ಈ ಸಂದರ್ಭದಲ್ಲಿ, ದೇವಸ್ಥಾನಗಳ ಸುತ್ತಲಿನ ಸಣ್ಣ ವ್ಯಾಪಾರಿಗಳ ಕುರಿತು ಯಾರೂ ಚಿಂತಿಸಲಿಲ್ಲ ಎನ್ನುವುದು ಬೇರೆ ಮಾತು.

ನಾವು ಮಾಡುವ ಪ್ರತೀ ಕೆಲಸಕ್ಕೂ ದೇವರನ್ನು ನಂಬುತ್ತೇವೆ. ನಮ್ಮ ಬದುಕಿನಲ್ಲಿ ಸಂಭವಿಸುವ ಒಳ್ಳೆಯದು, ಕೆಟ್ಟದ್ದು ಎರಡಕ್ಕೂ ದೇವರನ್ನೇ ಹೊಣೆಯಾಗಿಸುತ್ತೇವೆ. ಅದಕ್ಕೆಂದೇ ಇಲ್ಲಿ ಹೆಜ್ಜೆಗೊಂದು ಮಂದಿರ, ಮಸೀದಿ, ಚರ್ಚ್‌ ಕಾಣಸಿಗುತ್ತವೆ. ದೇವಾಲಯಗಳಿಗೆ ಲಕ್ಷಾಂತರ ರೂಪಾಯಿ ಕಾಣಿಕೆ ನೀಡಿ ಪುನೀತರಾಗುತ್ತೇವೆ. ತುಪ್ಪ, ಶ್ರೀಗಂಧದ ಚಕ್ಕೆ, ರೇಷ್ಮೆ ವಸ್ತ್ರವನ್ನು ಅಗ್ನಿಗೆ ಸಮರ್ಪಿಸಿ ಧನ್ಯರಾಗುತ್ತೇವೆ. ಕುರಿ, ಕೋಳಿ, ಕೋಣಗಳನ್ನು ಬಲಿ ಕೇಳುವ ಹಿಂಸಾಪ್ರವೃತ್ತಿಯ ದೇವರುಗಳಿದ್ದಂತೆ, ಒಂದು ಲೋಟ ನೀರಿಗೂ ಮತ್ತು ತಲೆಗೂದಲಿನ ಸಮರ್ಪಣೆಗೂ ಸಂತೃಪ್ತರಾಗುವ ಅಲ್ಪತೃಪ್ತ ದೇವರುಗಳೂ ಇದ್ದಾರೆ. ಒಟ್ಟಿನಲ್ಲಿ ಮನುಷ್ಯ ತನಗೆ ಅನುಕೂಲವಾಗುವಂತೆ ದೇವರುಗಳನ್ನು ಸೃಷ್ಟಿಸಿಕೊಂಡಿದ್ದಾನೆ. ಹೀಗಾಗಿ, ದೇವರು ಸೃಷ್ಟಿಕರ್ತನೋ ಅಥವಾ ದೇವರನ್ನೇ ಸೃಷ್ಟಿಸುವ ಮನುಷ್ಯ ಸೃಷ್ಟಿಕರ್ತನೋ ಎನ್ನುವ ಗೊಂದಲ ಕೆಲವರಿಗೆ.

ADVERTISEMENT

ಇಷ್ಟೆಲ್ಲ ದೈವಶ್ರದ್ಧೆಯಿರುವ ಮನುಷ್ಯ ಈಗ ದೇಗುಲ ಪ್ರವೇಶಿಸಲು ಹಿಂಜರಿಯುತ್ತಿದ್ದಾನೆ. ಪ್ರಾಣಭಯ ಎನ್ನುವುದು ಭಕ್ತಿಯನ್ನು ಹಿಂದಿಕ್ಕಿ ಮುನ್ನೆಲೆಗೆ ಬಂದಿದೆ. ದೈವಶ್ರದ್ಧೆಗಿಂತಲೂ ಮಿಗಿಲಾದದ್ದು ನೈತಿಕಶ್ರದ್ಧೆ ಎನ್ನುವುದನ್ನು ಈ ಸಂದರ್ಭದಲ್ಲಿ ಮನುಷ್ಯ ಅರ್ಥಮಾಡಿಕೊಳ್ಳಬೇಕಾಗಿದೆ. ನೈತಿಕಶ್ರದ್ಧೆ ಇರುವವರು ಎಷ್ಟು ದೇವರುಗಳನ್ನಾದರೂ ನಂಬಲಿ ಯಾವುದೇ ಅಪಾಯವಿಲ್ಲ. ಆದರೆ ದೈವಶ್ರದ್ಧೆಯಿರುವವರು ನೀತಿವಂತರಾಗಿ ಇರದಿದ್ದರೆ ಅತ್ಯಂತ ಅಪಾಯಕಾರಿ. ದೇವರ ಅಸ್ತಿತ್ವದ ಕುರಿತು ವಿಜ್ಞಾನಿ ಆಲ್ಬರ್ಟ್ ಐನ್‍ಸ್ಟೀನ್ ತಮ್ಮ ‘ಐನ್‍ಸ್ಟೀನ್- ದಿ ಹ್ಯೂಮನ್ ಸೈಡ್’ ಪುಸ್ತಕದಲ್ಲಿ ಹೀಗೆ ವಿವರಿಸುತ್ತಾರೆ– ‘ದೇವರಿದ್ದಾನೆ ಎಂದು ನಾನು ನಂಬುವುದಿಲ್ಲ. ಮನುಷ್ಯನ ಪ್ರಯತ್ನಗಳಲ್ಲಿಅತ್ಯಂತ ಮುಖ್ಯವಾದದ್ದೆಂದರೆ, ನಮ್ಮ ಕರ್ಮವೆಲ್ಲ ನೀತಿಯುತವಾಗಿರಬೇಕೆಂದು ಮಾಡುವ ಪ್ರಯತ್ನ. ನಮ್ಮ ಉಳಿವು, ಅಸ್ತಿತ್ವ ಕೂಡ ಅದನ್ನು ಅವಲಂಬಿಸಿದೆ. ನಾವು ಮಾಡುವ ಕೆಲಸ ನೀತಿಯುತವಾಗಿದ್ದರೆ ಮಾತ್ರ ಬದುಕಿಗೊಂದು ಸೌಂದರ್ಯ, ಗಾಂಭೀರ್ಯ’.

ಅಂಧಶ್ರದ್ಧೆ ಎನ್ನುವುದು ನಮ್ಮ ಮನೆಯಿಂದಲೇ ಶುರುವಾಗುತ್ತದೆ. ಮಗುವನ್ನು ದೇವರ ಪಟದ ಎದುರು ನಿಲ್ಲಿಸಿ, ತಪ್ಪು ಮಾಡಿದರೆ ದೇವರು ಶಿಕ್ಷಿಸುತ್ತಾನೆ ಎಂದು ಹೆದರಿಸುತ್ತೇವೆ. ನೀತಿವಂತನಾಗಿರಬೇಕು ಎನ್ನುವುದಕ್ಕಿಂತ, ದೇವರು ಶಿಕ್ಷಿಸುತ್ತಾನೆಂಬ ಹೆದರಿಕೆಯಿಂದ ತಪ್ಪು ಮಾಡಬಾರದೆನ್ನುವ ಭಾವನೆ ಮಗುವಿನಲ್ಲಿ ಬಲವಾಗುತ್ತದೆ. ಹೀಗೆ ನೈತಿಕಶ್ರದ್ಧೆಯನ್ನು ದೈವಶ್ರದ್ಧೆ ಹಿಂದಕ್ಕೆ ತಳ್ಳುತ್ತದೆ. ದೈವಶ್ರದ್ಧೆಯನ್ನು ಮೈಗೂಡಿಸಿಕೊಳ್ಳುವ ಮನುಷ್ಯ, ತಾನು ಮಾಡಿದ ತಪ್ಪುಗಳಿಗಾಗಿ ದೇವರಿಂದ ಶಿಕ್ಷೆಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳಲು ಮುಂದಾಗುತ್ತಾನೆ. ಪರಿಣಾಮವಾಗಿ, ಕಂಚಿನ ಕಳಶ, ವಜ್ರದ ಕಿರೀಟ, ಬೆಳ್ಳಿ ಗದೆ, ಚಿನ್ನದ ಓಲೆಗಳು ಪರ್ಯಾಯ ಮಾರ್ಗಗಳಾಗಿ ಅನುಷ್ಠಾನಕ್ಕೆ ಬರುತ್ತವೆ.

ಅಂಧಶ್ರದ್ಧೆಗೆ ಒಗ್ಗಿಕೊಂಡ ಮನುಷ್ಯ, ಪ್ರಕೃತಿದತ್ತವಾದ ಸಮಸ್ಯೆಗಳನ್ನೆಲ್ಲ ದೇವರ ಶಾಪವೆಂದೇ ಭಾವಿಸುತ್ತಾನೆ. ಪ್ರವಾಹ, ಭೂಕಂಪ, ಬರ ಇವೆಲ್ಲ ಪ್ರಕೃತಿದತ್ತವಾದ ಸಮಸ್ಯೆಗಳು. ಇಲ್ಲಿ ಮನುಷ್ಯನ ಪಾತ್ರ ಕೂಡ ಇದೆ. ಆದರೆ ಮನುಷ್ಯ ತನ್ನ ವರ್ತನೆಯಿಂದ ಎದುರಾಗುವ ಪ್ರಕೃತಿ ವಿಕೋಪಗಳಿಗೆ ದೇವರ ಕಡೆ ಕೈತೋರಿಸಿ ನಿರುಮ್ಮಳನಾಗುತ್ತಾನೆ. ಕೆಲವರ ಪ್ರಕಾರ, ಕೊರೊನಾ ಮಾನವ ನಿರ್ಮಿತ ಸಮಸ್ಯೆಯಲ್ಲ. ಅದು ಸಹ ದೇವರ ಶಾಪ.

ಕರುನಾಡಿನ ಶಿಲ್ಪಕಲಾ ವೈಭವವನ್ನು ಕುವೆಂಪು ಹೀಗೆ ವರ್ಣಿಸುತ್ತಾರೆ ‘ಗಂಟೆಗಳ ದನಿಯಿಲ್ಲ, ಜಾಗಟೆಗಳಿಲ್ಲಿಲ್ಲ, ಕರ್ಪೂರದಾರತಿಯ ಜ್ಯೋತಿಯಿಲ್ಲ’. ದೇವಾಲಯದ ಪರಿಕಲ್ಪನೆಯನ್ನೇ ಕುವೆಂಪು ತಿರಸ್ಕರಿಸುವ ಬಗೆಯಿದು. ಎ.ಎನ್.ಮೂರ್ತಿರಾವ್ ತಮ್ಮ ‘ದೇವರು’ ಕೃತಿಯಲ್ಲಿ ದೇವರ ಅಸ್ತಿತ್ವವನ್ನೇ ಪ್ರಶ್ನಿಸುತ್ತಾರೆ. ಅಂತಿಮವಾಗಿ ಅವರು ಹೇಳುವುದು ಹೀಗೆ ‘ದೇವರಿದ್ದರೆ ಅವನಿಗೆ ನಮ್ಮ ಸೇವೆಯಿಂದ ಆಗಬೇಕಾದ ಪ್ರಯೋಜನವೇನೂ ಇಲ್ಲ. ನಮ್ಮ ಕೈಂಕರ್ಯಕ್ಕೆ, ಸೇವೆಗೆ ಪಾತ್ರವಾಗಬೇಕಾದದ್ದು, ಅದರಿಂದ ಪ್ರಯೋಜನ ಪಡೆಯಬಹುದಾದದ್ದು- ಮಾನವಕುಲ’.

ದೇವರು ಮಂದಿರ, ಮಸೀದಿ, ಚರ್ಚ್‌ಗಳಲ್ಲಿಲ್ಲ. ದೇವರಿಗೆ ಮಾಡುವ ಸೇವೆ ನ್ಯಾಯಯುತವಾಗಿ ಸಲ್ಲಬೇಕಾದದ್ದು ಅನಾಥರಿಗೆ, ಬಡವರಿಗೆ, ದುಃಖಿಗಳಿಗೆ. ಆದ್ದರಿಂದ ದೀನ, ದುರ್ಬಲರಲ್ಲಿ ದೇವರನ್ನು ಕಾಣುವ ಮನಃಸ್ಥಿತಿಯನ್ನು ರೂಢಿಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.