ಅವಸರದ ಬೆನ್ನೇರಿ ‘ಕ್ಷಿಪ್ರ ಡೆಲಿವರಿ’.
ಸಂಜೆಯ ವಾಹನ ದಟ್ಟಣೆಯಲ್ಲಿ ಯಾರಿಗೂ ಇರುಸುಮುರುಸು ಮಾಡದೆ ಕಾರು ಓಡಿಸುತ್ತಿದ್ದ ಡ್ರೈವರ್ ತುಂಬಾ ಅನುಭವಿ ಅನ್ನಿಸಿ ಮಾತಿಗೆಳೆದಾಗ, ನಾವು ಹೆಚ್ಚು ಯೋಚಿಸದ ನಗರ ನಾಗರಿಕತೆಯ ತಲ್ಲಣಗಳನ್ನು ಆತ ಹಾದುಬಂದಂತೆ ಅನ್ನಿಸಿತು.
‘ಆರು ತಿಂಗಳಿಂದ ಕ್ಯಾಬ್ ಓಡಿಸುತ್ತಿರುವೆ. ಅದಕ್ಕೂ ಮೊದಲು, ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದೆ. ಎಂಟು ತಿಂಗಳಲ್ಲಿಯೇ ಬಹಳ ಕಷ್ಟವೆನಿಸಿ ಬಿಟ್ಟುಬಿಟ್ಟೆ. ಹತ್ತು ನಿಮಿಷಗಳ ಒಳಗೆ ದಿನಸಿ ತಲುಪಿಸಬೇಕಾಗಿತ್ತು. ತುಂಬಾ ವೇಗವಾಗಿ ಗಾಡಿ ಓಡಿಸುತ್ತಿದ್ದೆ. ಒಮ್ಮೆ ಸಿಗ್ನಲ್ ಜಂಪ್ ಮಾಡಿಬಿಟ್ಟೆ. ದಂಡ ಕಟ್ಟಬೇಕಾಯಿತು. ಇನ್ನೊಮ್ಮೆ ಅಪಘಾತವಾಯಿತು. ಗ್ರಾಹಕರ ಬೈಗುಳದ ಜೊತೆಗೆ ಆಸ್ಪತ್ರೆಯ ಖರ್ಚು. ಇದೆಲ್ಲ ರಗಳೆ ಬೇಡವೆಂದು ಆ ಕೆಲಸ ಬಿಟ್ಟುಬಿಟ್ಟೆ’ ಎಂದು ತಮ್ಮ ಅನುಭವ ಹಂಚಿಕೊಂಡರು. ಅವರ ಮಾತುಗಳನ್ನು ಕೇಳುತ್ತ ‘ಇನ್‌ಸ್ಟಂಟ್ ಡೆಲಿವರಿ’ ಸಂಸ್ಕೃತಿಯ ಬಗ್ಗೆ ಯೋಚಿಸುವಂತೆ ಮಾಡಿತು.
ಕೆಲವೇ ನಿಮಿಷಗಳಲ್ಲಿ ದಿನಸಿ ತಲುಪಿಸುವ ಆಲೋಚನೆಯನ್ನು ಮೊದಲು ವ್ಯಾಪಾರವಾಗಿಸಿದ್ದು ಟರ್ಕಿ ದೇಶದ ‘ಗೆಟಿರ್’ ಹೆಸರಿನ ಕಂಪನಿ. ಹತ್ತು ನಿಮಿಷಗಳಲ್ಲಿ ಯಾವುದೇ ದಿನಸಿ, ತಿನಿಸು ಅಥವಾ ವಸ್ತುವನ್ನು ಗ್ರಾಹಕರಿಗೆ ತಲುಪಿಸುವ ‘ಇನ್‌ಸ್ಟಂಟ್ ಡೆಲಿವರಿ’ ಕಂಪನಿಗಳು, ಯಾವ ದೇಶಗಳಲ್ಲಿ ನಿರುದ್ಯೋಗ ಮತ್ತು ಯುವಕರ ಸಂಖ್ಯೆ ಹೆಚ್ಚಿದೆಯೋ ಅಲ್ಲಿ ಹೆಚ್ಚು ಸಕ್ರಿಯವಾಗಿವೆ. ‘ಬ್ಲಿಂಕಿಟ್’ ಸಂಸ್ಥೆ ಈ ಸೇವೆಯನ್ನು 2013ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಪ್ರಾರಂಭಿಸಿತು.
ಬೆಂಗಳೂರಿನಂತಹ ಪಟ್ಟಣಗಳಲ್ಲಿ ‘ಇನ್‌ಸ್ಟಂಟ್ ಡೆಲಿವರಿ’ ಕಂಪನಿಗಳು ಪ್ರತಿ ಬಡಾವಣೆಯಲ್ಲೂ ತಮ್ಮ ‘ಡಾರ್ಕ್ ಸ್ಟೋರ್’ಗಳನ್ನು ಹೊಂದಿವೆ. ಆ‍್ಯಪ್ ತಂತ್ರಜ್ಞಾನದ ಮೂಲಕ ಗ್ರಾಹಕರಿಗೆ ಸೇವೆ ಒದಗಿಸುತ್ತಿವೆ. ಆದರೆ, ವಸ್ತುಗಳನ್ನು ತಲುಪಿಸಲು ತಂತ್ರಜ್ಞಾನವಷ್ಟೇ ಸಾಲದು. ನಮಗೆ ಇಷ್ಟವಾದ ವಸ್ತುವನ್ನು ಮತ್ತೊಬ್ಬ ವ್ಯಕ್ತಿಯೇ ನಾವಿರುವ ಕಡೆಗೆ ತಂದು ತಲುಪಿಸಬೇಕು.
ಈ ಕಂಪನಿಗಳ ವ್ಯಾಪಾರ ಸೃಜನಶೀಲತೆಯನ್ನು ಮೆಚ್ಚಿ ನಮ್ಮ ದೇಶದ ನವೋದ್ಯಮಗಳ (ಸ್ಟಾರ್ಟ್‌ಅಪ್) ಬೆಳವಣಿಗೆಯನ್ನು ಶ್ಲಾಘಿಸುವುದರ ಹಿಂದೆ ಯಾರ ಲಾಭವಿದೆ ಎಂಬುದನ್ನೂ ನೋಡಬೇಕು. ಅನೇಕ ಗಿಗ್ ಕಂಪನಿಗಳು ಕಾರ್ಮಿಕರ ಹಕ್ಕುಗಳು ಮತ್ತು ಯೋಗಕ್ಷೇಮಕ್ಕೆ ಅನುಸರಿಸ ಬೇಕಾದ ಕಾನೂನುಗಳನ್ನೂ ಪಾಲಿಸುವುದಿಲ್ಲ. ಉದ್ಯೋಗಿಗೆ ‘ಕನಿಷ್ಠ ವೇತನ’ವನ್ನೂ ನೀಡುವುದಿಲ್ಲ.
ಉದ್ಯೋಗದ ಕೊರತೆಯಿಂದ ನಲುಗಿರುವ ವಿದ್ಯಾವಂತ ಯುವಜನ ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆಗಾಗಿ ‘ಗಿಗ್’ ಉದ್ಯೋಗಗಳ ಮೊರೆ ಹೋಗುತ್ತಾರೆ. ಸರ್ಕಾರಿ ಕೆಲಸಗಳು ಅಥವಾ ಒಳ್ಳೆಯ ಸಂಬಳದ ಖಾಸಗಿ ಕೆಲಸ ಎಲ್ಲರಿಗೂ ಸಿಗುವುದಿಲ್ಲ. ಕುಟುಂಬವನ್ನು ನಿಭಾಯಿಸಲು ಯಾವುದಾದರೂ ಕೆಲಸವಿರಬೇಕು ಎನ್ನುವ ಅನಿವಾರ್ಯತೆಯಲ್ಲಿ ‘ಡೆಲಿವರಿ’ ಕೆಲಸ ಒಂದು ಅವಕಾಶದಂತೆ ಕಾಣಿಸುತ್ತದೆ. ಆದರೆ, ಆ ಕೆಲಸದಲ್ಲಿ ದಿನಕ್ಕೆ 14–15 ಗಂಟೆ ಕೆಲಸ ಮಾಡಿಯೂ ಕುಟುಂಬಕ್ಕೆ ಭದ್ರತೆಯಿರುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಬದುಕುತ್ತಿರುವ ವರಿಗೆ ‘ಡೆಲಿವರಿ ಬಾಯ್/ ಗರ್ಲ್’ ಎಂಬ ಹಣೆಪಟ್ಟಿಯನ್ನು ಕೊಡುತ್ತೇವೆ. ಹತ್ತೇ ನಿಮಿಷದಲ್ಲಿ ಮನೆ ಬಾಗಿಲಿಗೆ ನಮಗೆ ಬೇಕಾದ ವಸ್ತು ಪಡೆವ ಅವಸರದ ಬದುಕನ್ನು ಅಭಿವೃದ್ಧಿ ಎಂದು ನಂಬಿದ್ದೇವೆ.
ವಸ್ತುಗಳನ್ನು ತ್ವರಿತವಾಗಿ ಪಡೆಯುವ ಆರ್ಥಿಕ ಸ್ಥಿತಿ ವಂತಿಕೆಯನ್ನು ಯಶಸ್ಸು ಎಂದು ಭ್ರಮಿಸುತ್ತೇವೆ. ನಮ್ಮ ಈ ಮನಃಸ್ಥಿತಿ ಇನ್ನೊಬ್ಬರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಮತ್ತು ಸ್ಪಂದಿಸುವ ಕ್ಷಮತೆಯನ್ನೇ ಕೊಂದು ಹಾಕುತ್ತಿದೆ. ಹಿಂದೆ, ಅಂಗಡಿಯವರ ಜೊತೆಗಿನ ಮಾತುಕತೆ ಒಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂವಹನ ಕ್ರಿಯೆಯಾಗಿ ನಡೆದು ವ್ಯಕ್ತಿತ್ವವನ್ನು ರೂಪಿಸುತ್ತಿದ್ದವು. ಸಣ್ಣ ಪುಟ್ಟ ಕೆಲಸಗಳಿಗೆ ನೆರೆಹೊರೆಯವರನ್ನು ಅವಲಂಬಿಸುತ್ತಿದ್ದೆವು. ಪರಸ್ಪರ ಅವಲಂಬನೆಗೆ ಬೇಕಾದ ವ್ಯಕ್ತಿ ಗೌರವವಿರುತ್ತಿತ್ತು.
ಈಗ ಎಲ್ಲದಕ್ಕೂ ಅತಿಯಾದ ಅವಸರ, ಅತೃಪ್ತಿ, ಅಶಾಂತಿ. ಹಾಗಾಗಿಯೇ, ಡೆಲಿವರಿ ಮಾಡುವ ವ್ಯಕ್ತಿಗಳ ಜೊತೆ ರಸ್ತೆಯಲ್ಲಿ ಜಗಳವಾಡುವುದು, ಮನೆ ಬಾಗಿಲಿಗೆ ಬಂದಾಗ ಕ್ಷುಲ್ಲಕ ವಿಷಯಕ್ಕೆ ರೇಗುವುದು ಹೆಚ್ಚಾಗಿದೆ. ನಮ್ಮ ಹಣದಿಂದ ಡೆಲಿವರಿ ಆರ್ಡರ್ ಮಾಡಿರಬಹುದು. ಆದರೆ, ಅದನ್ನು ನಮ್ಮ ಕೈಗೆ ತಲುಪಿಸಲು ಆತನ/ ಆಕೆಯ ಶಕ್ತಿ ಮತ್ತು ಸಮಯ ವ್ಯಯವಾಗಿರುತ್ತದೆ. ಇದನ್ನು ನಾವು ಪರಿಗಣಿಸಬೇಡವೆ?
ವೇಗವಾಗಿ ಬದಲಾಗುತ್ತಿರುವ ಜೀವನಶೈಲಿ ಯಾವ ವಿಚಾರವನ್ನೂ ಮಾಡಲಾಗದ ‘ಗಮನದ ಮತ್ತು ಸಮಯದ ಕೊರತೆ’ಯನ್ನು ತಂದೊಡ್ಡಿದೆ. ಇದರಿಂದ ನಮ್ಮ ಮಾನಸಿಕ ಆರೋಗ್ಯವಷ್ಟೇ ಅಲ್ಲದೆ, ಸಾಮಾಜಿಕ ಸ್ವಾಸ್ಥ್ಯವೂ ಹಾಳಾಗುತ್ತಿದೆ. ಪರಸ್ಪರ ಅವಲಂಬನೆಗೆ ಬೇಕಾದ ತಾಳ್ಮೆ, ಪ್ರೀತಿ, ಅಂತಃಕರಣ ಮತ್ತು ವೈಚಾರಿಕತೆ ನಮ್ಮಲ್ಲಿ ಕ್ಷೀಣಿಸುತ್ತಿದೆ. ಸಮಾಜದಲ್ಲಿ ಅವಸರ ಮತ್ತು ಅಸಹನೆ ಹೆಚ್ಚಿದಂತೆ, ದೇಶದ ಆರ್ಥಿಕ ಪ್ರಗತಿಯೂ ಕುಸಿಯುತ್ತದೆ.
ಒಂದು ಸಮಾಜದ ಸಾಂಸ್ಕೃತಿಕ ಗುರಿ, ಸಹಬಾಳ್ವೆ, ಶಾಂತಿ ಮತ್ತು ಪ್ರೀತಿಯನ್ನು ಉಸಿರಾಡುವಂತೆ ನೋಡಿಕೊಳ್ಳುವುದು. ಆಧುನಿಕ ತಂತ್ರಜ್ಞಾನದಿಂದ ಉದಯವಾಗಿರುವ ನವೋದ್ಯಮಗಳು ಈ ಸಾಮಾಜಿಕ ಗುರಿ ಸಾಧನೆಗೆ ವಿಮುಖವಾಗಿರಬಾರದು. ಉದ್ಯೋಗಿಗಳ ವ್ಯಕ್ತಿ ಘನತೆಯನ್ನು ಎತ್ತಿಹಿಡಿಯುವ ನೀತಿಗಳು ಇರುವಂತೆ ರಾಜಕೀಯ ನಾಯಕತ್ವವು ಕಾರ್ಯ ನಿರ್ವಹಿಸಬೇಕು. ಸಮಸಮಾಜದ ತಾತ್ವಿಕತೆಯ ತಳಹದಿಯಲ್ಲೇ ಸಾಮಾಜಿಕ ಅಭಿವೃದ್ಧಿ ರೂಪುಗೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.