ಸಂಗತ
ನಮ್ಮ ನ್ಯಾಯಾಂಗ ವ್ಯವಸ್ಥೆಯು ಸಂವಿಧಾನದ ಆಶಯದಂತೆ ಕಾರ್ಯ ನಿರ್ವಹಿಸುತ್ತಿದೆ. ನಾನು ಬಾಲ್ಯದಲ್ಲಿ ಕಂಡಂತೆ ನಮ್ಮೂರಿನ ತಂಟೆ–ತಕರಾರು (ವ್ಯಾಜ್ಯಗಳು), ಕುಟುಂಬ ಕಲಹ, ಜಮೀನಿನ ಒತ್ತುವರಿ ಮತ್ತು ಆಸ್ತಿ ವಿಂಗಡಣೆ ಮುಂತಾದ ವಿಚಾರಗಳನ್ನು ಊರಿನ ಪ್ರಮುಖ ಪಂಗಡಗಳ ಮುಖ್ಯಸ್ಥರು ಸೇರಿ ನ್ಯಾಯ ಪಂಚಾಯಿತಿ ಮೂಲಕ ಇತ್ಯರ್ಥಪಡಿಸುತ್ತಿದ್ದರು. ಕಾಲ ಬದಲಾದಂತೆ, ನ್ಯಾಯಾಂಗ ವ್ಯವಸ್ಥೆಯಲ್ಲೂ ಬದಲಾವಣೆ ಆಗಿದೆ.
ಹಿಂದೆಲ್ಲ, ಗ್ರಾಮದ ಆಂತರಿಕ ಸಮಸ್ಯೆಗಳು ಮತ್ತು ಸಣ್ಣಪುಟ್ಟ ವ್ಯಾಜ್ಯಗಳು ಪೊಲೀಸ್ ಠಾಣೆ ಮತ್ತು ಕೋರ್ಟ್ ಮೆಟ್ಟಿಲು ಹತ್ತುತ್ತಿರಲಿಲ್ಲ. ಗ್ರಾಮದ ನ್ಯಾಯ ಪಂಚಾಯಿತಿ ನೀಡುತ್ತಿದ್ದ ತೀರ್ಪುಗಳನ್ನು ಊರಿನ ಜನರು ಸಾಮಾನ್ಯವಾಗಿ ಪಾಲಿಸುತ್ತಿದ್ದರು. ಆದರೆ, ಈಗಿನ ವ್ಯವಸ್ಥೆಯಲ್ಲಿ ಸಂವಿಧಾನದ ಅನುಸಾರ ನ್ಯಾಯಾಂಗ ವ್ಯವಸ್ಥೆಯಲ್ಲಿ ವಿವಿಧ ಹಂತಗಳ ನ್ಯಾಯಾಲಯಗಳು ರಚನೆಗೊಂಡು ಕಾರ್ಯ ನಿರ್ವಹಿಸುತ್ತಿವೆ. ಈ ನ್ಯಾಯಾಲಯಗಳಲ್ಲಿ ಭಾರತೀಯ ನ್ಯಾಯಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಮುಂತಾದ ನ್ಯಾಯ ಸಂಹಿತೆಗಳ ಮೂಲಕ ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ.
ಭಾರತದ ಜನಸಂಖ್ಯೆ ಹೆಚ್ಚಿದಂತೆಲ್ಲ ನ್ಯಾಯಾಲಯದ ಪ್ರಕರಣಗಳು ಎಲ್ಲಾ ಹಂತದಲ್ಲೂ ಹೆಚ್ಚಾಗುತ್ತಿವೆ. ಸಾರ್ವಜನಿಕರು ತಮ್ಮ ವ್ಯಾಜ್ಯಗಳ ಇತ್ಯರ್ಥಕ್ಕಾಗಿ ನ್ಯಾಯಾಲಯಗಳ ಮೊರೆ ಹೋಗುವುದು ಹೆಚ್ಚಾಗಿದೆ. ಹಾಗಾಗಿ, ಎಲ್ಲಾ ಹಂತದ ನ್ಯಾಯಾಲಯಗಳಲ್ಲಿ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಭಾರತದ ಸುಪ್ರೀಂ ಕೋರ್ಟ್ ಮತ್ತು ರಾಜ್ಯಗಳ ಹೈಕೋರ್ಟ್‌ಗಳು ಸೇರಿದಂತೆ ಎಲ್ಲಾ ಹಂತದ ನ್ಯಾಯಾಲಯಗಳಲ್ಲಿ ತ್ವರಿತವಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ಆದ್ಯತೆ ನೀಡಲಾಗುತ್ತಿದೆ; ಆ ನಿಟ್ಟಿನಲ್ಲಿ, ವಿಶೇಷ ನ್ಯಾಯಾಲಯ, ಜನತಾ ನ್ಯಾಯಾಲಯ, ಮುಂತಾದವುಗಳನ್ನು ರಚಿಸಲಾಗಿದೆ. ಆದರೂ ಅನೇಕ ನ್ಯಾಯಾಲಯಗಳಲ್ಲಿ ಪ್ರಕರಣಗಳು ಅನೇಕ ವರ್ಷಗಳವರೆಗೆ ಬಾಕಿ ಇರುವುದು ಕಂಡುಬರುತ್ತಿದೆ.
ಪ್ರಕರಣವೊಂದರಲ್ಲಿ ಸಾಕ್ಷಿಯಾಗಿ ಬೆಂಗಳೂರು ನಗರದ ಸಿವಿಲ್ ಕೋರ್ಟ್ ಸಂಕೀರ್ಣದ ಒಂದು ನ್ಯಾಯಾಲಯದಲ್ಲಿ ಇತ್ತೀಚೆಗೆ ನಾನು ಹಾಜರಿದ್ದೆ. ಅಲ್ಲಿ ಕಂಡುಬಂದ ದೃಶ್ಯಗಳು ನಮ್ಮ ನ್ಯಾಯಾಲಯಗಳ ಸಂಕೀರ್ಣ ಸಮಸ್ಯೆಗಳಿಗೆ ಉದಾಹರಣೆಯಂತೆ ಕಾಣಿಸಿದವು. ಕಕ್ಷಿದಾರರು ಮತ್ತು ವಕೀಲರಿಂದ ಕಿಕ್ಕಿರಿದ ಕೋರ್ಟ್ ಸಂಕೀರ್ಣ, ನ್ಯಾಯದಾನ ಪ್ರಕ್ರಿಯೆ ಏಕೆ ನಿಧಾನವಾಗುತ್ತಿದೆ ಎನ್ನುವುದನ್ನು ಮನವರಿಕೆ ಮಾಡುವಂತಿತ್ತು.
ಬಹುತೇಕ ಎಲ್ಲಾ ನ್ಯಾಯಾಲಯಗಳಲ್ಲಿ ಪ್ರಕರಣಗಳ ಸಂಖ್ಯೆ ಸಾಕಷ್ಟಿರುತ್ತದೆ ಹಾಗೂ ಪ್ರತಿದಿನ ಪ್ರಕರಣಗಳ ವಿಚಾರಣೆಗಳ ಸಂಖ್ಯೆಯೂ ಅಧಿಕವಾಗಿರುತ್ತದೆ. ಇದರಿಂದ ನ್ಯಾಯಾಲಯದ ಆವರಣದಲ್ಲಿ ವಕೀಲರು ಮತ್ತು ಕಕ್ಷಿದಾರರ ಸಂಖ್ಯೆಯು ಸಹ ಅಧಿಕವಾಗಿದೆ. ನ್ಯಾಯಾಲಯದ ಸಭಾಂಗಣದಲ್ಲಿ ವಕೀಲರ ಸಂಖ್ಯೆ ಹೆಚ್ಚುತ್ತಿದ್ದು, ಅವರಿಗೆ ಕುಳಿತುಕೊಳ್ಳಲು ಸಹ ಆಸನದ ವ್ಯವಸ್ಥೆ ಸಾಕಷ್ಟಿಲ್ಲ. ಅನೇಕ ಪ್ರಕರಣಗಳು ವಿಚಾರಣೆಗೆ ಬರುತ್ತಿರುವುದರಿಂದ, ವಾದಿ-ಪ್ರತಿವಾದಿಗಳ ವಕೀಲರು ಮತ್ತು ಅವರ ಕಿರಿಯ ಸಹೋದ್ಯೋಗಿಗಳು ಸೇರಿದಂತೆ ಕೋರ್ಟ್ ಸಭಾಂಗಣ ಜನಜಂಗುಳಿಯಿಂದ ತುಂಬಿರುತ್ತಿದೆ.
ಪ್ರತಿದಿನದ ವಿಚಾರಣಾ ಪ್ರಕರಣಗಳ ಸಂಖ್ಯೆ ಹೆಚ್ಚಿರುವುದರಿಂದ, ಬಹುತೇಕ ಪ್ರಕರಣಗಳಲ್ಲಿ ವಾದಿ ಅಥವಾ ಪ್ರತಿವಾದಿ ವಕೀಲರು ಸಮಯ ಕೇಳುವುದಿದೆ. ದಾಖಲೆಗಳ ಹಾಜರಾತಿ ಮುಂತಾದ ವಿಚಾರಗಳಿಂದಲೂ ಹೆಚ್ಚಿನ ಪ್ರಕರಣಗಳು ಮುಂದಕ್ಕೆ ಹೋಗುತ್ತಿರುತ್ತವೆ. ಇದರಿಂದ ವಕೀಲರು ಸಹ ತಮ್ಮ ಪ್ರಕರಣ ವಿಚಾರಣೆಗೆ ಬರುವವರೆಗೆ ಕಾಯ್ದು, ನ್ಯಾಯಾಧೀಶರ ಮುಂದೆ ತಮ್ಮ ಮನವಿ/ಪ್ರತಿಪಾದನೆಯನ್ನು ಮಂಡಿಸುತ್ತಾರೆ. ನ್ಯಾಯಾಧೀಶರು ಅವರ ಮನವಿಯನ್ನು ಕೇಳಿ ಮುಂದಿನ ವಿಚಾರಣೆಯ ಬಗ್ಗೆ ತೀರ್ಮಾನಿಸುತ್ತಾರೆ.
ನ್ಯಾಯಾಧೀಶರು ವಕೀಲರ ವಾದ ಮತ್ತು ಪ್ರತಿವಾದಗಳನ್ನು ಸಾವಧಾನದಿಂದ ಕೇಳಿ ಸೂಕ್ತ ದಿನಾಂಕ ಮತ್ತು ವಿಚಾರಣೆಯನ್ನು ನಿಗದಿಪಡಿಸುತ್ತಾರೆ. ಈ ರೀತಿ ನ್ಯಾಯಾಲಯಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಪ್ರತಿಯೊಂದು ಪ್ರಕರಣದ ವಿಚಾರಣೆ ತಾರ್ಕಿಕ ಹಂತ ಮುಟ್ಟಿ, ತೀರ್ಪು ಕೊಡಲು ಅನೇಕ ತಿಂಗಳು ಅಥವಾ ವರ್ಷಗಳೇ ಬೇಕಾಗುತ್ತದೆ.
ಸಮಯದ ಜೊತೆಗೆ ವಿಚಾರಣೆಗಳು ಪದೇ ಪದೇ ಮುಂದಕ್ಕೆ ಹೋಗುವುದು ಆರ್ಥಿಕ ನಷ್ಟವೂ ಹೌದು. ವಿಚಾರಣಾ ಸಂದರ್ಭದಲ್ಲಿ ಕಕ್ಷಿದಾರರರು ತಮ್ಮ ವಕೀಲರ ಜೊತೆ ಹಾಜರಾಗಲು ಹಣ ಖರ್ಚು ಮಾಡಬೇಕಾಗುತ್ತದೆ. ಅನಿಯಮಿತ ಕಾಲದವರೆಗೆ ನಡೆಯುವ ವಿಚಾರಣೆ ಕಕ್ಷಿದಾರರಿಗೆ ಆರ್ಥಿಕ ಹೊರೆಯನ್ನು ಉಂಟು ಮಾಡುತ್ತದೆ.
ನ್ಯಾಯಾಂಗದ ಮೇಲೆ ಹಾಗೂ ಕಕ್ಷಿದಾರರ ಮೇಲೆ ಒತ್ತಡ ಹೆಚ್ಚುತ್ತಿರುವ ಸಂದರ್ಭವಿದು. ಈ ಒತ್ತಡವನ್ನು ಕಡಿಮೆ ಮಾಡುವುದಕ್ಕಾಗಿ, ಹೆಚ್ಚುವರಿ ನ್ಯಾಯಾಲಯಗಳನ್ನು ಸ್ಥಾಪಿಸಿ ನ್ಯಾಯದಾನ ವಿಧಾನಕ್ಕೆ ವೇಗ ನೀಡುವುದು ಅಗತ್ಯ. ಇದರಿಂದ ಕಕ್ಷಿದಾರರಿಗೆ ಸಮಯ ಮತ್ತು ಹಣದ ಉಳಿತಾಯವಾಗುತ್ತದೆ ಹಾಗೂ ನ್ಯಾಯಾಲಯಗಳಿಗೆ ಒತ್ತಡ ಕಡಿಮೆಯಾಗುತ್ತದೆ.
ನಮ್ಮ ನ್ಯಾಯಾಲಯಗಳಲ್ಲಿ ಇರುವ ಪ್ರಕರಣಗಳು ಶೀಘ್ರವಾಗಿ ಇತ್ಯರ್ಥಗೊಳ್ಳಲು ನ್ಯಾಯಾಂಗ ವ್ಯವಸ್ಥೆಯ ಸುಧಾರಣೆ ತುರ್ತು ಅಗತ್ಯವಾಗಿದೆ. ಕೆಲವು ಸಂದರ್ಭಗಳಲ್ಲಿ ವಿಳಂಬ ನ್ಯಾಯ ಎನ್ನುವುದು ನ್ಯಾಯದ ನಿರಾಕರಣೆಯೇ ಆಗಿರುತ್ತದೆ. ಆದುದರಿಂದ, ಆದಷ್ಟು ಅನಗತ್ಯ ವಿಳಂಬವಿಲ್ಲದೆ ತೀರ್ಪು ದೊರೆಯುವಂತಹ ನ್ಯಾಯಾಂಗ ವ್ಯವಸ್ಥೆ ರೂಪುಗೊಳ್ಳಬೇಕಾಗಿದೆ.
(ಲೇಖಕ: ನಿವೃತ್ತ ಐಎಎಸ್ ಅಧಿಕಾರಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.