
ಸಂಗತ: ಸಿನಿಮಾ ಗೆಲ್ಲಲು ಕಥೆ–ಸರಳತೆಯೇ ಶಕ್ತಿ
ಸಿನಿಮಾ ನೋಡುವ ಬಹುತೇಕ ಸಹೃದಯರು ತೆರೆಯ ಮೇಲೆ ಬಯಸುವುದು ಅರ್ಥಪೂರ್ಣವಾದ ಸರಳ ಕಥೆ, ಮನಸ್ಸಿಗೆ ಹತ್ತಿರವಾಗುವ ಪಾತ್ರಗಳು ಹಾಗೂ ಮನರಂಜನೆ. ಇಂಥ, ಗೆಲುವಿನ ಸೂತ್ರಗಳ ಸಮೀಕರಣದಂತಿರುವ ಮಲಯಾಳದ ‘ಸರ್ವಂ ಮಾಯ’ ಚಲನಚಿತ್ರ, ಕನ್ನಡ ಸಿನಿಮಾಗಳ ಸಮಸ್ಯೆಗಳನ್ನು ಎತ್ತಿ ತೋರಿಸುವಂತೆಯೂ ಇದೆ.
ಕಳೆದ ವರ್ಷಾಂತ್ಯದಲ್ಲಿ ಮೂರು ಬಿಗ್‌ಬಜೆಟ್ ಕನ್ನಡ ಸಿನಿಮಾಗಳು ತೆರೆಗೆ ಬಂದವು. ಇವು ಫ್ಯಾನ್ ವಾರ್, ಪೈರಸಿ ವಿಷಯದಲ್ಲಷ್ಟೇ ಸುದ್ದಿಯಾದವು. ಪೈರಸಿ ಬರೀ ಒಂದೆರಡು ಸಿನಿಮಾಗಳನ್ನು ಗುರಿಯಾಗಿಸಿ ಆಗುತ್ತಿಲ್ಲ. ಬಿಡುಗಡೆಯಾದ ಬಹುತೇಕ ಸಿನಿಮಾಗಳು ಪೈರಸಿ ಆಗುತ್ತಿವೆ. ‘ಬ್ಲಾಕ್‌ಎಕ್ಸ್’ ಕಂಪನಿಯು ‘ಕೆಜಿಎಫ್ ಚಾಪ್ಟರ್– 2’ ಸಿನಿಮಾದ 4 ಲಕ್ಷಲಿಂಕ್‌ಗಳನ್ನು ಬ್ಲಾಕ್ ಮಾಡಿತ್ತು. ಆ ಪೈಕಿ ಇಡೀ ಸಿನಿಮಾವಿದ್ದ75 ಸಾವಿರ ಲಿಂಕ್‌ಗಳಿದ್ದವು. ‘ಸು ಫ್ರಮ್ ಸೋ’ಗೂ ಪೈರಸಿ ತಟ್ಟಿತ್ತು. ಇಡೀ ಸಿನಿಮಾವಿದ್ದ 22 ಸಾವಿರ ಲಿಂಕ್‌ಗಳನ್ನುನಿರ್ಮಾಣ ಸಂಸ್ಥೆ ತೆಗೆದುಹಾಕಿತ್ತು. ಪೈರಸಿ ಸಮಸ್ಯೆ ನಡುವೆಯೂ ಈ ಸಿನಿಮಾಗಳು ಗೆದ್ದವು. ಪೈರಸಿ ಸಿನಿಮಾದಆದಾಯಕ್ಕೆ ಪೆಟ್ಟು ಕೊಡಬಹುದೇ ವಿನಾ ಇಡೀ ಸಿನಿಮಾವನ್ನು ನಾಶ ಮಾಡಲಾರದು. ಹೀಗಾಗಿ, ಒಂದು ಸಿನಿಮಾ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ ಎಂದರೆ ಅವುಗಳ ಕಥೆ, ನಿರೂಪಣೆಯ ಬಗ್ಗೆ ವಿಶ್ಲೇಷಣೆ ಅಗತ್ಯ.
‘ಡೆವಿಲ್’ ಒನ್‌ಲೈನ್ ಕಥೆ ಚೆನ್ನಾಗಿದ್ದರೂ, ಅದರ ನಿರೂಪಣೆಯಲ್ಲಿ ಎಡವಿತು. ‘ಮಾರ್ಕ್’ನಲ್ಲಿ ಕಥೆಯತ್ತ ಗಮನ ಕೊಡದ ನಿರ್ದೇಶಕರು ನಾಯಕನ ಅಭಿಮಾನಿಆದರು, ‘45’ ಮೇಕಿಂಗ್‌ನತ್ತಲೇ ವಾಲಿತು. ಹಲವರು ಎಡವಿ ಬಿದ್ದಿರುವ ಕಲ್ಲು ಗೋಚರಿಸುತ್ತಿದ್ದರೂ ಮತ್ತದೇ ದಾರಿಯಲ್ಲಿ ಹೋಗಿ ಎಡವುತ್ತಿದ್ದಾರೆ. ಅತ್ತ ಡಿ. 25ರಂದೇ ತೆರೆಕಂಡ ಮಲಯಾಳದ ‘ಸರ್ವಂ ಮಾಯ’ ಸಿನಿಮಾ ಇಲ್ಲಿಯವರೆಗೆ ವಿಶ್ವದಾದ್ಯಂತ ₹125 ಕೋಟಿಗೂ ಹೆಚ್ಚು ಗಳಿಸಿದೆ ಎಂದು ಅದರ ನಿರ್ಮಾಣ ಸಂಸ್ಥೆ ಹೇಳಿದೆ. ‘ಯು’ ಪ್ರಮಾಣಪತ್ರ ಹೊಂದಿರುವ ಈ ಸಿನಿಮಾ– ಸರಳ ಕಥೆ, ನಿರೂಪಣೆ, ನಟನೆಯಿಂದಲೇ ಗೆದ್ದಿದೆ. ಬೇರೆ ಯಾವ ಮ್ಯಾಜಿಕ್ ಅನ್ನೂ ಅವರು ಮಾಡಿಲ್ಲ. ‘ಸರ್ವಂ ಮಾಯ’ ₹10–₹15 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸಿನಿಮಾ. ದಿನ ಉರುಳಿದಂತೆ ಅದರ ಗಳಿಕೆಯೂ ಏರುತ್ತಿದೆ. ಈ ಭಾಗ್ಯ ಕನ್ನಡದ ಇತ್ತೀಚಿನ ಸಿನಿಮಾಗಳಿಗಿಲ್ಲ.
ಬಿಗ್ ಬಜೆಟ್ ಸಿನಿಮಾಕ್ಕೆ ₹50ರಿಂದ ₹100 ಕೋಟಿ ಸುರಿಯುವುದು ಇತ್ತೀಚೆಗೆ ಕನ್ನಡದಲ್ಲಿ ಸಾಮಾನ್ಯ ಎಂಬಂತಾಗಿದೆ. ಹೀಗೆ ಸುರಿದು ಅದರ ಎರಡರಷ್ಟು ಪಡೆಯುವುದರಲ್ಲಿ ಸಿನಿಮಾದ ಅಥವಾ ಚಿತ್ರರಂಗದ ಗೆಲುವಿಲ್ಲ. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’, ‘ಕಾಂತಾರ’, ‘ಸು ಫ್ರಮ್ ಸೋ’ ರೀತಿಯಲ್ಲಿ, ಹತ್ತು–ಇಪ್ಪತ್ತು ಕೋಟಿಯೊಳಗೆ ಸಿನಿಮಾ ಮಾಡಿ ಅದರ ಹತ್ತರಷ್ಟು ಮರಳಿ ಪಡೆಯುವುದೇ ವಹಿವಾಟು, ಜಾಣತನ. ಇದಕ್ಕೆ ಉತ್ತಮ ಕಥೆಯ ಆಯ್ಕೆಯೇ ಮೊದಲ ಹೆಜ್ಜೆ.
ಕನ್ನಡದಲ್ಲಿ ‘ಫೀಲ್ ಗುಡ್’ ಸಿನಿಮಾಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಇಳಿಕೆಯಾಗುತ್ತಿದೆ. ‘ಯು’ ಪ್ರಮಾಣ ಪತ್ರವಿರುವ ಸಿನಿಮಾಗಳು ವಿರಳವಾಗುತ್ತಿವೆ. ‘ಮುಂಗಾರು ಮಳೆ’, ‘ಗಾಳಿಪಟ’, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ನಂಥ ಪದೇ ಪದೇ ನೋಡಿದರೂ ಬೇಸರ ತರಿಸದ ಸೀದಾ ಸಾದಾ ಸಿನಿಮಾಗಳು ಬರುತ್ತಿಲ್ಲ. ಕನ್ನಡ ಚಿತ್ರರಂಗ ಕುಗ್ಗುತ್ತಿರಲು ಇದೂ ಒಂದು ಕಾರಣ.
ಮಲಯಾಳ ಚಿತ್ರರಂಗವು ನಿರಂತರವಾಗಿ ಒಳ್ಳೆಯ ಸಿನಿಮಾಗಳನ್ನು ನೀಡುವ ಮೂಲಕ ಗ್ಯಾರಂಟಿ ಪ್ರೇಕ್ಷಕರನ್ನು ರೂಪಿಸಿದೆ. ಇತ್ತೀಚಿನ ಅವರ ಸಿನಿಮಾ ಪಟ್ಟಿ ನೋಡಿ. ಕಳೆದಆಗಸ್ಟ್‌ನಲ್ಲಿ ‘ಲೋಕಾ’, ಅಕ್ಟೋಬರ್‌ನಲ್ಲಿ ‘ಡಿಯಸ್ ಇರೇ’,ನವೆಂಬರ್‌ನಲ್ಲಿ ‘ಇಕೊ’, ಡಿಸೆಂಬರ್‌ನಲ್ಲಿ ‘ಕಲಮ್ ಕಾವಲ್’
ಹಾಗೂ ‘ಸರ್ವಂ ಮಾಯ’ ಹೀಗೆ ಸರಾಸರಿ ತಿಂಗಳಿಗೊಂದರಂತೆ ಹಿಟ್ ಸಿನಿಮಾಗಳು ಅಲ್ಲಿ ಬಂದಿವೆ. ‘ಲೋಕ’ ಕರ್ನಾಟಕದಲ್ಲೇ ₹5 ಕೋಟಿವರೆಗೆ ಲಾಭ ಗಳಿಸಿದೆ. ‘ಇಕೊ’ ಸುಮಾರು ₹1 ಕೋಟಿ ಲಾಭ ಪಡೆದಿದೆ. ಇದಕ್ಕೆ ಪ್ರತಿಯಾಗಿ, ಕಳೆದೊಂದು ವರ್ಷದಲ್ಲಿ ಕೇರಳದಲ್ಲಿ ಹಣ ಗಳಿಸಿದ ಕನ್ನಡ ಸಿನಿಮಾಗಳು ಒಂದೆರಡಷ್ಟೇ. ಕರ್ನಾಟಕದಲ್ಲಿ ‘ಗ್ಯಾರಂಟಿ ಪ್ರೇಕ್ಷಕರು’ ಸಿದ್ಧಗೊಳ್ಳದ ಕಾರಣದಿಂದಾಗಿಯೇ ‘ರೂಪಾಂತರ’, ‘ಶಿವಮ್ಮ’, ‘ಫೋಟೋ’, ‘ಪಪ್ಪಿ’, ‘ಹೆಬ್ಬುಲಿ ಕಟ್’ನಂಥ ಉತ್ತಮ ಸಿನಿಮಾಗಳು ಬಂದರೂ ಜನ ಚಿತ್ರಮಂದಿರದತ್ತ ಬರಲಿಲ್ಲ. ಒಟಿಟಿಯಲ್ಲಿ ಬಂದ ಬಳಿಕವಷ್ಟೇ ಇವು ಮೆಚ್ಚುಗೆ ಪಡೆದವು.
ನಿರ್ದೇಶಕರು ಅಭಿಮಾನಿಗಳಿಗಾಗಿ, ಜೊತೆಗೆ ಹೀರೊ ಅಭಿಮಾನಿಯಾಗಿ ಸಿನಿಮಾ ಮಾಡುವುದನ್ನು ನಿಲ್ಲಿಸಬೇಕು. ಮೊದಲು ಹೀರೊ ಅಂತಿಮಗೊಳಿಸಿಕೊಂಡು ಕಥೆ ಮಾಡುವುದು, ಹೀರೊಗಳು ಕಥೆಗೆ ಕೈ ಹಾಕುವುದೂ ಕಡಿಮೆಯಾಗಬೇಕು.
ಅಭಿಮಾನಿಗಳು ಸಿನಿಮಾವನ್ನು ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲಿ ಓಡಿಸಬಹುದು. ಮುಂದಿನ ಇಡೀ ಓಟಕ್ಕೆ ಬೇಕಾಗುವುದು ನೈಜ ಸಿನಿಮಾ ಅಭಿಮಾನಿಗಳೇ! ಗೆದ್ದ ಎಲ್ಲಾ ಸಿನಿಮಾಗಳನ್ನು ಗೆಲ್ಲಿಸಿದ್ದು ಸಾಮಾನ್ಯ ಪ್ರೇಕ್ಷಕನೇ! ಈ ಚಿತ್ರರಸಿಕನಿಗೆ ಅದ್ದೂರಿ ಟ್ರೇಲರ್ ಲಾಂಚ್, ಪ್ರಿರಿಲೀಸ್ ಕಾರ್ಯಕ್ರಮ, ಹತ್ತಾರು ಸುದ್ದಿಗೋಷ್ಠಿಗಳು ಬೇಕಿಲ್ಲ. ಬೇಕಿರುವುದು ಒಳ್ಳೆಯ ಕಥೆ, ಮನರಂಜನೆ ನೀಡುವ ಸಿನಿಮಾವಷ್ಟೇ. ಅಷ್ಟನ್ನೂ ನೀಡದೇ ಹೋಗುವುದು ಸಿನಿಮಾ ನಿರ್ಮಾತೃಗಳು ಮಾಧ್ಯಮಕ್ಕೆ ಮಾಡುವ ವಂಚನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.