ADVERTISEMENT

ಕನ್ನಡನುಡಿ ಸೊಡರು; ಎಲ್ಲೆಡೆಯೂ ತೊಡರು!

ಶಿಕ್ಷಣ, ಸಾಹಿತ್ಯ, ಸಿನಿಮಾ, ಉದ್ಯಮ, ಎಲ್ಲ ಕ್ಷೇತ್ರಗಳಲ್ಲೂ ಕನ್ನಡ ನುಡಿ ಸವಾಲು ಎದುರಿಸುತ್ತಿದೆ. ಕನ್ನಡ ನುಡಿ ಎಲ್ಲರ ‘ಎದೆಯ ನುಡಿ’ ಆಗುವುದು ಯಾವಾಗ?

ರಾಜಕುಮಾರ ಕುಲಕರ್ಣಿ
Published 3 ನವೆಂಬರ್ 2025, 23:41 IST
Last Updated 3 ನವೆಂಬರ್ 2025, 23:41 IST
.
.   

ವರನಟ ರಾಜ್‌ಕುಮಾರ್‌ ಅವರ ಕಂಠಸಿರಿಯಲ್ಲಿ ಕನ್ನಡದ ಹಾಡೊಂದು ಅಲೆಅಲೆಯಾಗಿ ತೇಲಿಬರುತ್ತಿತ್ತು. ಕಾರ್ಮಿಕರು ಮೊಬೈಲ್ ಫೋನ್‌ನಲ್ಲಿ ಹಾಡು ಆಲಿಸುತ್ತ ರಸ್ತೆಬದಿ ಕಟ್ಟಡ ಕೆಲಸದಲ್ಲಿ ನಿರತರಾಗಿದ್ದರು. ಅವರನ್ನು ನೋಡಿ ಜೊತೆಗಿದ್ದ ಶಿಕ್ಷಕ ಮಿತ್ರರು ಹೇಳಿದರು: ‘ಭವಿಷ್ಯದಲ್ಲಿ ಕನ್ನಡ ಭಾಷೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದಾದರೆ ಅದು ಈ ಶ್ರಮಿಕ ವರ್ಗದಿಂದ ಮಾತ್ರ. ವಿದ್ಯಾವಂತರು ಕನ್ನಡ ಭಾಷೆಯಿಂದ ದೂರವಾಗುತ್ತಿರುವ ಸಂದರ್ಭದಲ್ಲಿ ತಮ್ಮ ದೈನಂದಿನ
ವ್ಯವಹಾರದಲ್ಲಿ ಕನ್ನಡ ಭಾಷೆ ಬಳಸುತ್ತಿರುವ ಶ್ರಮಿಕ ವರ್ಗದವರೇ ಈಗ ಉಳಿದಿರುವ ಏಕೈಕ ಭರವಸೆ’.

ಕನ್ನಡ ಭಾಷೆ ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಈ ಹೊತ್ತಿನಲ್ಲಿ ಮಿತ್ರರು ಹೇಳಿದ ಮಾತು ಸತ್ಯಕ್ಕೆ ಹತ್ತಿರ ಅನಿಸಿತು. ಈಗಾಗಲೇ, ಕನ್ನಡ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಒಂದೊಂದಾಗಿ ಮುಚ್ಚುತ್ತಿವೆ. ವಿದ್ಯಾರ್ಥಿಗಳು ಇಂಗ್ಲಿಷ್ ಮಾಧ್ಯಮದ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಆಸಕ್ತಿ ತೋರುತ್ತಿರುವುದೇ ಇದಕ್ಕೆ ಕಾರಣ. ಖಾಸಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಕನ್ನಡವನ್ನು ಬರೀ ಒಂದು ಭಾಷೆಯಾಗಿ ಮಾತ್ರ ಕಲಿಸುತ್ತಿರುವುದರಿಂದ ಅಲ್ಲಿ ಕನ್ನಡ ನುಡಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ನೀಡುವ ಆದ್ಯತೆಯನ್ನು ಕನ್ನಡ ಭಾಷೆಯ ಬೋಧನೆಗೆ ನೀಡುತ್ತಿಲ್ಲ. ಭಾಷೆಯನ್ನು ಹೇಗಾದರೂ ಕಲಿಯಬಹುದೆಂಬ ಕನ್ನಡ ಕುರಿತು ಅಸಡ್ಡೆ ವಿದ್ಯಾರ್ಥಿಗಳಲ್ಲಿ ಮನೆಮಾಡಿದೆ.

ವೃತ್ತಿಪರ ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಅಭ್ಯಸಿಸಲು ನಿಯಮ ರೂಪಿಸಲಾಗಿದೆ. ಆದರೆ, ವಿದ್ಯಾರ್ಥಿಗಳು ಆಸಕ್ತಿ ತೋರಿಸುತ್ತಿಲ್ಲ. ಎಂಜಿನಿಯರಿಂಗ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಶೈಕ್ಷಣಿಕ ಪರಿಸರದಾಚೆಯೂ ಬೋಧಕರೊಂದಿಗೆ ಮತ್ತು ಸಹಪಾಠಿಗಳೊಂದಿಗೆ ಇಂಗ್ಲಿಷ್‌ನಲ್ಲೇ ಮಾತನಾಡುವುದು ಸಾಮಾನ್ಯವಾಗಿದೆ. ವೈದ್ಯಕೀಯ ಕಾಲೇಜಿನ ಗ್ರಂಥಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನನ್ನೊಂದಿಗೆ ಕರ್ನಾಟಕದ ವಿದ್ಯಾರ್ಥಿಗಳೂ ಇಂಗ್ಲಿಷ್‌ನಲ್ಲೇ ವ್ಯವಹರಿಸಲು ಮುಂದಾಗುತ್ತಾರೆ. ಕನ್ನಡ ಭಾಷೆಯಲ್ಲಿ ಮಾತನಾಡಲು ಸಾಧ್ಯವಿರುವಾಗ ಸಂವಹನಕ್ಕಾಗಿ ಬೇರೆ ಭಾಷೆಯನ್ನು ಬಳಸುವ ಅಗತ್ಯವಾದರೂ ಏಕೆ? ಉತ್ತರಿಸದೆ ಮೌನವಾಗುತ್ತಾರೆ.

ADVERTISEMENT

ಕನ್ನಡಿಗರಿಗೆ ಪರಭಾಷಾ ಮೋಹವಿದೆ ಎನ್ನುವುದು ಅನೇಕ ಸಂದರ್ಭಗಳಲ್ಲಿ ರುಜುವಾತಾಗಿದೆ. ಬಳ್ಳಾರಿ ಅಥವಾ ರಾಯಚೂರು ಸೀಮೆಯ ಇಬ್ಬರು ಕನ್ನಡಿಗರು ಮಾತನಾಡಲು ತೆಲುಗು ಭಾಷೆಯನ್ನು ಬಳಸುತ್ತಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಿಂದಿ ವಾಣಿಜ್ಯ ಭಾಷೆಯಾಗಿ ಪ್ರಭುತ್ವ ಸಾಧಿಸಿದೆ. ಬೆಳಗಾವಿ ಮತ್ತು ಬೀದರ್‌ ಭಾಗದಲ್ಲಿ ಮರಾಠಿ ಭಾಷೆಯ ಪ್ರಾಬಲ್ಯವಿದೆ. ರಾಜಧಾನಿ ಬೆಂಗಳೂರು ಅನೇಕ ಭಾಷೆಗಳ ಸಂಗಮವಾಗಿದೆ. ಕನ್ನಡಿಗರು
ಅನ್ಯಭಾಷಿಕರೊಂದಿಗೆ ಮಾತನಾಡುವಾಗ ಕನ್ನಡದ ಬದಲು ಅನ್ಯಭಾಷೆಯನ್ನು ಬಳಸುವುದು ಸಹಜವಾಗಿದೆ.

ಕನ್ನಡ ಭಾಷೆಯಲ್ಲಿ ಅಸಂಖ್ಯಾತ ಪುಸ್ತಕಗಳು ಪ್ರತಿವರ್ಷ ಪ್ರಕಟವಾಗು ತ್ತಿದ್ದರೂ ಪೈರು ಮತ್ತು ಕಳೆ ಒಂದೇ ಎನ್ನುವಂತಾಗಿದೆ. ಸಾಹಿತ್ಯದಲ್ಲಿ ‘ಕೊಡು–ಕೊಳ್ಳುವಿಕೆ’ ಮುನ್ನೆಲೆಗೆ ಬಂದು ಲೇಖಕರೇ ಪರಸ್ಪರರ ಕೃತಿಗಳನ್ನು ವಿಮರ್ಶಿಸಿಕೊಳ್ಳುತ್ತಿದ್ದಾರೆ. ನೀ ನನಗಾದರೆ ನಾ ನಿನಗೆ ಎನ್ನುವ ಲಾಭ–ನಷ್ಟದ ಲೆಕ್ಕಾಚಾರದಿಂದಾಗಿ ಕೆಟ್ಟ ಕೃತಿಗಳು ಕೂಡ ಸಹಲೇಖಕರ ಮೆಚ್ಚುಗೆಗೆ ಪಾತ್ರವಾಗುತ್ತಿವೆ. ಸಾಮಾಜಿಕ ಮಾಧ್ಯಮದ ಅಬ್ಬರದ ಪ್ರಚಾರ ಉತ್ತಮ ಕೃತಿಗಳ ಜೊತೆಗೆ ಅಗ್ಗದ ಕೃತಿಗಳನ್ನೂ ಓದುಗರಿಗೆ ತಲುಪಿಸುತ್ತಿದೆ. ರಾಜಧಾನಿಯಿಂದ ಹಳ್ಳಿಯವರೆಗೆ ಪ್ರಶಸ್ತಿ ನೀಡುವ ಸಂಸ್ಥೆಗಳು ಹುಟ್ಟಿಕೊಳ್ಳುತ್ತಿದ್ದು, ಪ್ರಶಸ್ತಿಗಾಗಿಯೇ ಬರೆಯುವವರ ತಳಿಯೊಂದು ರೂಪುಗೊಳ್ಳುತ್ತಿದೆ.

ನೋವಿನ ಮೇಲೆ ಬರೆ ಎಳೆದಂತೆ ಸಿನಿಮಾ ಮಾಧ್ಯಮ ಭಾಷೆಯ ಅಂದವನ್ನು ವಿರೂಪಗೊಳಿಸುತ್ತಿದೆ. ಕನ್ನಡ ಭಾಷೆಯಲ್ಲಿ ವಿಚಿತ್ರ ಹೆಸರಿನ ಸಿನಿಮಾಗಳು ನಿರ್ಮಾಣ
ವಾಗುತ್ತಿವೆ. ಇತ್ತೀಚೆಗೆ ‘ಹಲ್ಕಾಡಾನ್’ ಎನ್ನುವ ಕನ್ನಡ ಸಿನಿಮಾದ ಹೆಸರನ್ನು ಪತ್ರಿಕೆಗಳಲ್ಲಿ ಓದಿ ಮನಸ್ಸಿಗೆ ಖೇದವಾಯಿತು. ಇಂಥ ಅನೇಕ ಹೆಸರುಗಳನ್ನು ಉಲ್ಲೇಖಿಸ ಬಹುದು. ಸಿನಿಮಾದ ಪ್ರಭಾವದಿಂದ ಕಾಲೇಜಿನ ಕಾರಿಡಾರ್‌ಗಳಲ್ಲಿ ಅರ್ಥವೇ ಇಲ್ಲದ ಪದಗಳು ಹರಿದಾಡುತ್ತಿವೆ. ಬೆಂಗಳೂರು ಕೇಂದ್ರಿತವಾದ ಸಿನಿಮಾ ರಂಗದಲ್ಲಿ ಉತ್ತರ ಕರ್ನಾಟಕದ ಭಾಷಾಶೈಲಿಯನ್ನು ಹಾಸ್ಯ, ವ್ಯಂಗ್ಯ ಮತ್ತು ಅಶ್ಲೀಲವಾಗಿ ಬಳಸಲಾಗುತ್ತಿದೆ.

ಎಲ್ಲ ಸಮಸ್ಯೆಗಳ ನಡುವೆ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ. ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಕನ್ನಡ ಭಾಷೆಯ ಕಲಿಕೆಗೆ ಆದ್ಯತೆ ನೀಡಬೇಕು. ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಸಿಗುತ್ತಿರುವ ಪ್ರಾಮುಖ್ಯತೆ ಕನ್ನಡಕ್ಕೂ ಸಿಗುವಂತಾಗಬೇಕು. ಶಾಲಾ– ಕಾಲೇಜುಗಳ ಆವರಣದಲ್ಲಿ ಕನ್ನಡ ಪದಗಳು ಕಿವಿಗಳನ್ನು ಸ್ಪರ್ಶಿಸುವಂತಾಗಲಿ. ಪಾಲಕರು ಮನೆಗಳಲ್ಲಿ ಪುಟ್ಟ ಗ್ರಂಥಾಲಯಗಳನ್ನು ಸ್ಥಾಪಿಸಿ, ಅಲ್ಲಿ ಕನ್ನಡ ಪುಸ್ತಕಗಳನ್ನು ಸಂಗ್ರಹಿಸಿಡುವಂತಾಗಲಿ. ಅನ್ಯಭಾಷೆಗಳನ್ನು ಕಲಿಯುವುದು ತಪ್ಪಲ್ಲ, ಆದರೆ, ಅದು ನಮ್ಮದೇ ಭಾಷೆಯ ಕತ್ತುಹಿಚುಕುವ ಮೋಹವಾಗಬಾರದು. ಭಾಷೆಯನ್ನು ಸಿನಿಮಾಗಳಲ್ಲಿ ವಿರೂಪಗೊಳಿಸುವುದು ಸರಿಯಲ್ಲ. ಗುಣಮಟ್ಟದ ಪುಸ್ತಕಗಳ ಪ್ರಕಟಣೆಗೆ ಪ್ರಕಾಶಕರು ಆದ್ಯತೆ ನೀಡಬೇಕು. ಪುಸ್ತಕಗಳನ್ನು ಓದಿಸುವ ಪರಿಕಲ್ಪನೆಯ ಮೂಲಕ ಓದುಗರಿಗೆ ಅತ್ಯುತ್ತಮ ಪುಸ್ತಕಗಳನ್ನು ಪರಿಚಯಿಸಬೇಕಿದೆ. ಈ ಮೂಲಕ ಉತ್ತಮ ಕೃತಿಗಳು ಮುನ್ನೆಲೆಗೆ ಬರಬೇಕು.

ಭಾಷೆ ಬಲಗೊಳ್ಳುವುದೆಂದರೆ ಅದು ಎದೆಯ ಭಾಷೆಯಾಗಿ ರೂಪುಗೊಳ್ಳುವುದು ಎಂದರ್ಥ. ಕನ್ನಡ ಎದೆಯ ಭಾಷೆಯಾಗುವ ದಿನ ಬೇಗ ಬರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.