ADVERTISEMENT

ಸಂಗತ: ಭೂ ಒತ್ತುವರಿ– ಅರಣ್ಯ ಇಲಾಖೆಯದ್ದು ಕುಂಭಕರ್ಣ ನಿದ್ರೆ?

ರಾಜ್ಯದಲ್ಲಿ ಅರಣ್ಯ ಒತ್ತುವರಿ ಅವ್ಯಾಹತವಾಗಿ ನಡೆದಿದೆ. ಅರಣ್ಯ ಇಲಾಖೆ ಕುಂಭಕರ್ಣ ನಿದ್ದೆಯಿಂದ ಎಚ್ಚರಗೊಳ್ಳದೆ ಹೋದರೆ, ಸರಿಪಡಿಸಲು ಆಗದಷ್ಟು ಪರಿಸರ ಹಾನಿ ಖಚಿತ.

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 19:33 IST
Last Updated 17 ಆಗಸ್ಟ್ 2025, 19:33 IST
<div class="paragraphs"><p>ಭೂ ಒತ್ತುವರಿ: ಅರಣ್ಯ ಇಲಾಖೆಯದ್ದು ಕುಂಭಕರ್ಣ ನಿದ್ರೆ?</p></div>

ಭೂ ಒತ್ತುವರಿ: ಅರಣ್ಯ ಇಲಾಖೆಯದ್ದು ಕುಂಭಕರ್ಣ ನಿದ್ರೆ?

   

ರಾಜ್ಯದಲ್ಲಿ 44,812 ಅರಣ್ಯ ಒತ್ತುವರಿ ಪ್ರಕರಣಗಳು ವರದಿಯಾಗಿದ್ದವು. ಆ ಪೈಕಿ ಬರೀ 243 ಒತ್ತುವರಿಗಳನ್ನು ಅರಣ್ಯ ಇಲಾಖೆ 2024ರಲ್ಲಿ ತೆರವುಗೊಳಿಸಿದೆ ಎಂದು ವರದಿಯೊಂದು ಹೇಳುತ್ತಿದೆ. ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಗೆ ಏಕಿಷ್ಟು ಉದಾಸೀನ?

ಹವಾಮಾನ ಬದಲಾವಣೆ ಇಡೀ ವಿಶ್ವವನ್ನು ಕಾಡುತ್ತಿರುವ ಬಹುದೊಡ್ಡ ಸಂಕಟಗಳಲ್ಲೊಂದು. ಈ ಉಸಿರುಗಟ್ಟಿಸುವ ಕಾಲಘಟ್ಟದಲ್ಲಿ ಬಿಸಿಗಾಳಿ ಮತ್ತು ಅಧಿಕ ತಾಪಮಾನದ ದ್ವೀಪಗಳು ಅಲ್ಲಲ್ಲಿ ಕೇಂದ್ರೀಕೃತವಾಗಿವೆ. ವಿವೇಚನಾರಹಿತ ಗಣಿಗಾರಿಕೆ, ಮಣ್ಣಿನ ತೀವ್ರ ಸವಕಳಿ, ಬೆಟ್ಟಗುಡ್ಡಗಳಿಂದ ಮಣ್ಣಿನ ಸಹಿತ ಹರಿದು ಬರುವ ರಕ್ತದಂತಹ ಕೆಂಪು ನೀರು ಹಾಗೂ ಅಣೆಕಟ್ಟುಗಳಲ್ಲಿ ತುಂಬಿರುವ ಹೂಳು ಪರಿಸರದಲ್ಲಿನ ಬದಲಾವಣೆಗೆ ಕೆಲವು ಪ್ರಮುಖ ಕಾರಣಗಳಾಗಿವೆ.

ADVERTISEMENT

ಕಳೆದ ಕೆಲವು ದಶಕಗಳಿಂದ ಅವಿರತವಾಗಿ ವಿಧ್ವಂಸಕ ಕಾರ್ಯ ನಡೆಯುತ್ತಲೇ ಇದೆ. ಬಿಸಿಲಬೇಗೆಯಲ್ಲಿ ಅಣೆಕಟ್ಟೆ, ಕೆರೆ–ಕಾಲುವೆಗಳು ಆಟದ ಮೈದಾನಗಳಂತಾಗಿವೆ. ಉತ್ತರಕಾಶಿಯಲ್ಲಿ ಇತ್ತೀಚೆಗೆ ಮೇಘಸ್ಫೋಟದಿಂದ ಆದ ಅನಾಹುತವನ್ನು ನಾವು ಕಂಡಿದ್ದೇವೆ. ಕರ್ನಾಟಕದ ಕೆಲಭಾಗಗಳಲ್ಲೂ ಅಂತಹ ಸ್ಥಿತಿ ನಿರ್ಮಾಣವಾದರೆ ಅಚ್ಚರಿಯಿಲ್ಲ. ಸಹ್ಯಾದ್ರಿಯ ತಪ್ಪಲಲ್ಲಿ ಘನಘೋರ ಪ್ರಾಕೃತಿಕ ವಿಕೋಪಗಳಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಒತ್ತುವರಿ ತೆರವು ಮಾಡುವುದಕ್ಕೆ ದಶಕಗಳೇ ಬೇಕಾಗಬಹುದು ಎನ್ನುವುದು ಕೆಲವು ಪರಿಸರ ಸಂರಕ್ಷಣಾವಾದಿಗಳ ಅಭಿಪ್ರಾಯ. ಆದರೆ, ಅಷ್ಟು ವಿಳಂಬ ಮಾಡಿದರೆ, ಸರಿಪಡಿಸಲಿಕ್ಕೆ ಆಗದಷ್ಟು ಹಾನಿ ಆ ಪ್ರದೇಶದಲ್ಲಿ ಆಗುತ್ತದೆ. ಹಾಗಾಗಿ, ಒತ್ತುವರಿಗೆ ಸಂಬಂಧಿಸಿದಂತೆ ಸೂಕ್ತ ಸುಗ್ರೀವಾಜ್ಞೆಯನ್ನು ಸರ್ಕಾರ ಜಾರಿ ಮಾಡಬೇಕು. ದೇವರಾಜ ಅರಸು ಅವರ ಕಾಲದಲ್ಲಿ ಜಾರಿಗೆ ಬಂದಿರುವ ‘ಟ್ರೀ ಪ್ರೊಟೆಕ್ಷನ್ ಆ್ಯಕ್ಟ್’ ಮತ್ತು ಹಸಿರುಪಟ್ಟಿ ಘೋಷಣೆಗೆ ಸಂವಾದಿಯಾಗಿ ಹೊಸತೊಂದು ನಿಯಮಾವಳಿಯ ರಚನೆಯಾಗಬೇಕು.

ಈಗ ಆಗುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ, ಹಿರಿಯ ಅರಣ್ಯ ಅಧಿಕಾರಿಗಳು ಮತ್ತು ರಾಜಕೀಯ ನಾಯಕರು, ಅರಣ್ಯ ಒತ್ತುವರಿ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಸಮಸ್ಯೆ ಪರಿಹರಿಸುವ ಇಚ್ಛಾಶಕ್ತಿ ಅವರಲ್ಲಿ ಕಾಣಿಸುತ್ತಿಲ್ಲ. ರಾಷ್ಟ್ರೀಯ ಉದ್ಯಾನಗಳು ಮತ್ತು ವನ್ಯಜೀವಿಧಾಮಗಳನ್ನೂ ಬಿಡದೇ ಎಲ್ಲೆಂದರಲ್ಲಿ ಅರಣ್ಯ ಒತ್ತುವರಿ ಅವ್ಯಾಹತವಾಗಿ ನಡೆದಿದೆ.

ಬಂಡೀಪುರದಲ್ಲಿ 204, ನಾಗರಹೊಳೆ ವ್ಯಾಪ್ತಿಯಲ್ಲಿ 16, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಭಾಗದಲ್ಲಿ 636, ಮಲೆಮಹದೇಶ್ವರ ಬೆಟ್ಟದ ಭಾಗದಲ್ಲಿ 117,  ಭದ್ರಾ ಅಭಯಾರಣ್ಯದಲ್ಲಿ 43, ಕಾಳಿ ಹುಲಿ ಯೋಜನಾ ವ್ಯಾಪ್ತಿಯಲ್ಲಿ 709 ಒತ್ತುವರಿ ಪ್ರಕರಣಗಳಿವೆ. 

ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಶಿವಮೊಗ್ಗ ಜಿಲ್ಲೆಯಲ್ಲಿ 38 ಒತ್ತುವರಿ ಪ್ರಕರಣಗಳಿದ್ದು, ಭದ್ರಾವತಿಯಲ್ಲಿ 53, ಸಾಗರದಲ್ಲಿ 69 ಪ್ರಕರಣಗಳಿವೆ. ಅರಣ್ಯ ಸಚಿವರ ಸ್ವಕ್ಷೇತ್ರವಿರುವ ಬೀದರ್‌ ಜಿಲ್ಲೆಯಲ್ಲೇ 7 ಒತ್ತುವರಿ ಪ್ರಕರಣಗಳಿವೆ. ಕೆನರಾ ವೃತ್ತದಲ್ಲಿ 69, ಬೆಳಗಾವಿಯಲ್ಲಿ 49, ಚಿಕ್ಕಮಗಳೂರು ಜಿಲ್ಲೆಯಲ್ಲಿ 41, ಕಲಬುರಗಿಯಲ್ಲಿ 18 ಪ್ರಕರಣಗಳಿವೆ. ಕಾಲಮಿತಿ ನಿಗದಿಪಡಿಸಿಕೊಂಡು ಒತ್ತುವರಿ ತೆರವಿಗೆ ಕ್ರಮ ಜರುಗಿಸದೇ ಇದ್ದಲ್ಲಿ ಅರಣ್ಯ ಪ್ರದೇಶ ರೋಗಗ್ರಸ್ತ ಆಗಲಿದೆ. 

ಅರಣ್ಯ ಒತ್ತುವರಿಗಳ ಕುರಿತಾಗಿ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಯಾವ ಉಲ್ಲೇಖವನ್ನೂ ಮಾಡುವುದಿಲ್ಲ. ಏಕೆಂದರೆ, ಅದು ತಮ್ಮ ಮತಬುಟ್ಟಿಗೆ ಧಕ್ಕೆ ತರಬಹುದು ಎಂಬ ಆತಂಕ ಅವರದ್ದಾಗಿರುತ್ತದೆ. 

ಅರಣ್ಯ ಪ್ರದೇಶವನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕಾಗಿದೆ. ಪರಿಸರಾತ್ಮಕವಾಗಿ ಸುಸ್ಥಿರತೆಯನ್ನು ನೀಡುವ ಮತ್ತು ಆರ್ಥಿಕವಾಗಿ ಕಾರ್ಯಸಾಧ್ಯವಾದ ಉಪಕ್ರಮಗಳನ್ನು ಜರುಗಿಸಿ, ಸಹ್ಯಾದ್ರಿಯ ಪರಿಸರ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವುದು ಸರ್ಕಾರಕ್ಕೆ ಆದ್ಯತೆಯ ವಿಷಯ ಆಗಬೇಕು. ಒತ್ತುವರಿ ಆಗಿರುವ ಅರಣ್ಯ ಪ್ರದೇಶದಲ್ಲಿ ಸಂಬಾರ ಬೆಳೆಗಳು, ಕಾಳುಮೆಣಸು, ಔಷಧೀಯ ಸಸ್ಯಗಳು ಮತ್ತು ಇತರೆ ಹಣ್ಣಿನ ಬೆಳೆಗಳನ್ನು ಬೆಳೆದು ವರಮಾನ ಗಳಿಸಬಹುದಾಗಿದೆ. ಇದರಿಂದ ರಾಜ್ಯಕ್ಕೆ ಆದಾಯ ಬರುವಂತೆ ಮಾಡಬಹುದು. ಆದರೆ, ಸರ್ಕಾರಕ್ಕೆ ಅತ್ತ ಗಮನ ಹರಿಸಲು ಮನಸ್ಸಿಲ್ಲ. ಅರಣ್ಯ ಪ್ರದೇಶವನ್ನು ವರಮಾನ ತರುವ ಪರಿಸರವನ್ನಾಗಿ, ಹಸುರಿನ ಸಮೃದ್ಧ ಮೂಲವಾಗಿಸುವ ಬದಲು, ಒತ್ತುವರಿದಾರರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಹೊರಟಂತಿದೆ. 

ಅರಣ್ಯ ಇಲಾಖೆಯಲ್ಲಿ ಈಗ ಅಧಿಕಾರಿಗಳ ಸಂಖ್ಯೆ ಹಿಂದಿಗಿಂತ ಹೆಚ್ಚೇ ಇದೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಇದ್ದಾರೆ; 32 ಹೆಚ್ಚುವರಿ ಅರಣ್ಯ ಸಂರಕ್ಷಣಾಧಿಕಾರಿಗಳು ಇದ್ದಾರೆ. ಇಷ್ಟೊಂದು ದೊಡ್ಡ ಅಧಿಕಾರಿ ಪಡೆ ಇರುವಾಗಲೂ, ಅರಣ್ಯ ಒತ್ತುವರಿ ತೆರವಿಗೆ ಕ್ರಮವಹಿಸದೆ, ಕುಂಭಕರ್ಣ ನಿದ್ದೆಗೆ ಜಾರಿರುವುದು ಏಕೆ?

ಒತ್ತುವರಿ ತೆರವು ಸಂದರ್ಭದಲ್ಲಿ ಸೂಕ್ಷ್ಮವೊಂದನ್ನು ಗಮನಿಸಬೇಕು. ಅರಣ್ಯ ಒತ್ತುವರಿ ಮಾಡಿರುವವರಲ್ಲಿ ಬಹುತೇಕರು ಬಡವರು, ತಳಸಮುದಾಯದವರು ಮತ್ತು ಸಮಾಜದಲ್ಲಿ ದನಿ ಎತ್ತಲಾಗದ ಸ್ಥಿತಿಯಲ್ಲಿರುವವರೇ ಆಗಿರುತ್ತಾರೆ. ಅಂಥವರನ್ನು ಇದ್ದಕ್ಕಿದ್ದಂತೆ ಒತ್ತುವರಿ ಪ್ರದೇಶದಿಂದ ಹೊರದೂಡುವುದು ಮಾನವೀಯ ನಡೆ ಆಗಲಾರದು. ಅವರಿಗೆ ಹೆಚ್ಚಿನ ಪರಿಹಾರ ನೀಡಿ ಬೇರೆಡೆಗೆ ಸ್ಥಳಾಂತರಿಸುವ ಘೋಷಣೆಯನ್ನು ಸರ್ಕಾರ ಮಾಡಬೇಕು. ಮತ್ತೆ ಒತ್ತುವರಿಗಳಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.