
ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸುವ ಬದಲು ಆಡಳಿತಾಧಿಕಾರಿ ನೇಮಿಸುವುದು ಸರಿಯಲ್ಲ. ಅದು ಸಾಂವಿಧಾನಿಕ ವ್ಯವಸ್ಥೆಯ ಸ್ಪಷ್ಟ ಉಲ್ಲಂಘನೆ.
ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಯವರು, 2026–2031ರ ಅವಧಿಗೆ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಿಸುವ ಕುರಿತು ಆದೇಶ ಹೊರಡಿಸಿದ್ದಾರೆ. ಈ ಆದೇಶದಲ್ಲಿ, ಈಗಾಗಲೇ ಅಸ್ತಿತ್ವದಲ್ಲಿರುವ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದು ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯುವವರೆಗೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 8(iii)ರ ಅನ್ವಯ ಜಿಲ್ಲಾಧಿಕಾರಿಯು ಆಡಳಿತಾಧಿಕಾರಿಗಳನ್ನು ನೇಮಿಸಬಹುದೆಂದು ಹೇಳಲಾಗಿದೆ. ಆದರೆ, ಈ ಆದೇಶವೇ ಕಾನೂನಿನ ತಪ್ಪು ವ್ಯಾಖ್ಯಾನವಾಗಿದೆ ಮತ್ತು ಸಾಂವಿಧಾನಾತ್ಮಕ ವ್ಯವಸ್ಥೆಯ ಉಲ್ಲಂಘನೆಯಾಗಿದೆ. ಪ್ರಕರಣ 8 ಅನ್ವಯವಾಗುವುದು ಗ್ರಾಮ ಪಂಚಾಯಿತಿಗಳ ‘ಸ್ಥಾಪನೆ’ ಸಂದರ್ಭದಲ್ಲಿ ಮಾತ್ರವೇ ವಿನಾ ಅಸ್ತಿತ್ವದಲ್ಲಿರುವ ಪಂಚಾಯಿತಿಗಳಿಗಲ್ಲ.
ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ಪ್ರಕರಣ 8 ಅನ್ವಯವಾಗುವುದು ಗ್ರಾಮ ಪಂಚಾಯಿತಿ ಸ್ಥಾಪನೆಯಾದ ತರುವಾಯ ಕೂಡಲೇ, ಯಾವುದೋ ಕಾರಣದಿಂದಾಗಿ ಪಂಚಾಯಿತಿ ರಚಿಸಲು ಸಾಧ್ಯವಾಗದ ಸಂದರ್ಭಗಳಲ್ಲಿ ಮಾತ್ರ. ಅಂದರೆ, ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ, ಜನರಿಂದ ಚುನಾಯಿತ ಸಂಸ್ಥೆಗಳಾಗಿರುವ ಗ್ರಾಮ ಪಂಚಾಯಿತಿಗಳಿಗೆ ಈ ಪ್ರಕರಣವನ್ನು ಬಳಸುವ ಅವಕಾಶವೇ ಇಲ್ಲ.
ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಿರುವಂತೆ ಕಾಯ್ದೆಯಲ್ಲಿ ‘ಪ್ರಕರಣ 8(iii)’ ಎಂಬ ಸ್ವತಂತ್ರ ಪ್ರಕರಣವೇ ಇಲ್ಲ. ನಿಖರವಾಗಿ ಹೇಳುವುದಾದರೆ, ಅದು ಪ್ರಕರಣ 8(1)(ಎ)(iii) ಆಗಿರಬೇಕು. ಕಾಯ್ದೆಯ ನಿಖರ ಪಠ್ಯ ಹೀಗೆ ಹೇಳುತ್ತದೆ:
ಗ್ರಾಮ ಪಂಚಾಯಿತಿಗಳ ಸದಸ್ಯರನ್ನು ಚುನಾಯಿಸಲು ತಪ್ಪಿದಲ್ಲಿ ಆಡಳಿತ ಸಮಿತಿಯ ಅಥವಾ ಆಡಳಿತಾಧಿಕಾರಿಯ ನೇಮಕ ಈ ಮುಂದಿನಂತೆ ಆಗಬಹುದು. ಡೆಪ್ಯುಟಿ ಕಮಿಷನರ್ ಅವರಿಗೆ ಗ್ರಾಮ ಪಂಚಾಯಿತಿಯನ್ನು ಸ್ಥಾಪಿಸಿದ ತರುವಾಯ ಕೂಡಲೇ ಗ್ರಾಮಕ್ಕಾಗಿ ಅಥವಾ ಗ್ರಾಮಗಳ ಗುಂಪಿಗಾಗಿ ಗ್ರಾಮ ಪಂಚಾಯಿತಿಯನ್ನು, ಗ್ರಾಮ ಪಂಚಾಯಿತಿಯ ಸದಸ್ಯರ ಚುನಾವಣೆಯನ್ನು ನಡೆಸುವುದಕ್ಕೆ ಯಾವುದೇ ತೊಂದರೆಯ ಕಾರಣದಿಂದಾಗಿ; 5ನೇ ಪ್ರಕರಣದ (6ನೇ) ಉಪಪ್ರಕರಣದ ಅಡಿಯಲ್ಲಿ ನಡೆಸಲಾದ ಎರಡು ಅನುಕ್ರಮ ಚುನಾವಣೆಗಳಲ್ಲಿ ಅಂಥ ಸದಸ್ಯರನ್ನು ಚುನಾಯಿಸಲು ವಿಫಲವಾಗಿರುವ ಕಾರಣದಿಂದಾಗಿ; ಇತರ ಯಾವುದೇ ಸಾಕಷ್ಟು ಕಾರಣದಿಂದಾಗಿ, ಪಂಚಾಯಿತಿ ರಚಿಸಲು ಸಾಧ್ಯವಿಲ್ಲವೆಂದು ಮನದಟ್ಟಾದರೆ; ಗ್ರಾಮ ಪಂಚಾಯಿತಿಗೆ ಚುನಾವಣೆಯಲ್ಲಿ ಯಾವುದೇ ಸದಸ್ಯನು ಚುನಾಯಿತನಾಗದಿದ್ದರೆ; ಒಟ್ಟು ಸಂಖ್ಯೆಯ ಮೂರನೇ ಎರಡರಷ್ಟಕ್ಕಿಂತಲೂ ಕಡಿಮೆ ಸದಸ್ಯರು ಚುನಾಯಿತರಾಗಿದ್ದರೆ – ಇಂಥ ಸಂದರ್ಭಗಳಲ್ಲಿ ಡೆಪ್ಯುಟಿ ಕಮಿಷನರ್ ಅವರು, ಅಧಿಸೂಚನೆಯ ಮೂಲಕ, ಚುನಾಯಿತರಾಗಲು ಅರ್ಹರಾದ ವ್ಯಕ್ತಿಗಳನ್ನು ಒಳಗೊಂಡ ಆಡಳಿತ ಸಮಿತಿಯನ್ನು ನೇಮಕ ಮಾಡತಕ್ಕದ್ದು. ಅಂಥ ವ್ಯಕ್ತಿಗಳ ಸಂಖ್ಯೆಯು 5ನೇ ಪ್ರಕರಣದ (1)ನೇ ಉಪಪ್ರಕರಣದ ಅಡಿಯಲ್ಲಿ ನಿರ್ಧರಿಸಿರುವ ಸದಸ್ಯರ ಸಂಖ್ಯೆಗೆ ಸಮನಾಗಿರತಕ್ಕದ್ದು, ಅಥವಾ ಆಡಳಿತಾಧಿಕಾರಿಯನ್ನು ನೇಮಕ ಮಾಡತಕ್ಕದ್ದು.
ಇವೆಲ್ಲವೂ ಗ್ರಾಮ ಪಂಚಾಯತ್ ಸ್ಥಾಪನೆಯಾದಾಗ ಅದರ ರಚನೆಯ ಆರಂಭಿಕ ಹಂತಕ್ಕೆ ಮಾತ್ರ ಸೀಮಿತ ಆಗಿರುವ ವಿಧಿಗಳು. ಇವುಗಳನ್ನು ಈಗಾಗಲೇ ಅಸ್ತಿತ್ವದಲ್ಲಿರುವ ಗ್ರಾಮ ಪಂಚಾಯಿತಿಗಳಿಗೆ ಅನ್ವಯಿಸುವುದು ಸಾಧ್ಯವಿಲ್ಲ.
ಒಂದೊಮ್ಮೆ ಈ ಆದೇಶವು ಪ್ರಕರಣ 8(3) ಅನ್ನು ಉಲ್ಲೇಖಿಸಿದರೂ, ಅದೂ ಕೂಡ ಪ್ರಕರಣ 8(1)ರ ಅಡಿಯಲ್ಲಿ ನಡೆದ ನೇಮಕಗಳಿಗೇ ಅನ್ವಯಿಸುತ್ತದೆ. ಪ್ರಕರಣ 8(3) ಹೇಳುವುದೇನೆಂದರೆ, (1)ನೇ ಉಪ ಪ್ರಕರಣದ ಅಡಿಯಲ್ಲಿ, ಆಡಳಿತ ಸಮಿತಿಯು ಅಥವಾ ಆಡಳಿತಾಧಿಕಾರಿಯು ನೇಮಕಗೊಂಡಾಗ, ಅಂಥ ನೇಮಕಕ್ಕೆ ಮುಂಚೆ, ಗ್ರಾಮ ಪಂಚಾಯಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದ ವ್ಯಕ್ತಿಗಳು ಯಾರಾದರೂ ಇದ್ದರೆ, ಅವರು ಗ್ರಾಮ ಪಂಚಾಯಿತಿಯ ಸದಸ್ಯರಾಗಿರುವುದು ನಿಂತುಹೋಗತಕ್ಕದ್ದು ಮತ್ತು ಆ ಗ್ರಾಮ ಪಂಚಾಯಿತಿಯ ಎಲ್ಲ ಅಧಿಕಾರಗಳನ್ನು ಮತ್ತು ಕರ್ತವ್ಯಗಳನ್ನು ಅಂಥ ಆಡಳಿತ ಸಮಿತಿಯು ಅಥವಾ ಆಡಳಿತಾಧಿಕಾರಿಯು ಚಲಾಯಿಸತಕ್ಕದ್ದು ಮತ್ತು ನೆರವೇರಿಸತಕ್ಕದ್ದು.
ಚುನಾವಣೆಯನ್ನು ಸಕಾಲದಲ್ಲಿ ನಡೆಸುವುದು ರಾಜ್ಯ ಚುನಾವಣಾ ಆಯೋಗದ ಪ್ರಾಥಮಿಕ ಕರ್ತವ್ಯ; ಅದಕ್ಕೆ ಅಗತ್ಯವಿರುವ ಎಲ್ಲಾ ಪ್ರಕ್ರಿಯೆಗಳಿಗೆ ಸಹಕಾರ ನೀಡುವುದು ರಾಜ್ಯ ಸರ್ಕಾರದ ಸಂವಿಧಾನಾತ್ಮಕ ಜವಾಬ್ದಾರಿ. ಚುನಾವಣೆ ನಡೆಸಲು ವಿಫಲವಾದುದಕ್ಕೆ ಪರಿಹಾರವಾಗಿ ಆಡಳಿತಾಧಿಕಾರಿ ನೇಮಕ ಮಾಡುವುದು ಸಂವಿಧಾನದ ಆತ್ಮಕ್ಕೇ ವಿರುದ್ಧ.
ಪಂಚಾಯತ್ ವ್ಯವಸ್ಥೆಗಳನ್ನು ಸದೃಢಗೊಳಿಸಲು ಸಂವಿಧಾನಕ್ಕೆ 73ನೇ ತಿದ್ದುಪಡಿ ತಂದು, ಪಂಚಾಯತ್‌ಗಳನ್ನು 9ನೇ ಪರಿಚ್ಛೇದದಲ್ಲಿ ಸೇರಿಸಲಾಯಿತು. ಈ ಆಶಯದ ಮೇರೆಗೆ 1993ರಲ್ಲಿ ರೂಪುಗೊಂಡ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯು ಸ್ವಯಂ ಆಡಳಿತಕ್ಕೆ ಬಲ ತುಂಬಿತು. ಆದರೆ, ಇಂದು ತಿದ್ದುಪಡಿಯ ಆಶಯವೇ ನಾಶವಾಗುತ್ತಿದೆ. ಚುನಾವಣೆ ನಡೆಸದೆಯೇ ಆಡಳಿತಾಧಿಕಾರಿಗಳ ಮೂಲಕ ಗ್ರಾಮ ಪಂಚಾಯಿತಿಗಳನ್ನು ನಡೆಸುವ ಪ್ರಯತ್ನವು ‘ಜನಾದೇಶವಿಲ್ಲದ ಸ್ಥಳೀಯ ಸರ್ಕಾರ’ ಎಂಬ ಅಪಾಯಕಾರಿ ಸ್ಥಿತಿಯನ್ನು ನಿರ್ಮಿಸುತ್ತದೆ.
ಆಡಳಿತಾಧಿಕಾರಿ ನೇಮಕದ ಆದೇಶವು ಪಂಚಾಯತ್ ರಾಜ್ ಕಾಯ್ದೆಯ ಉಲ್ಲಂಘನೆಯಾಗಿದೆ. ಸಂವಿಧಾನದ ವಿಧಿ 243ಇಗೆ ವಿರುದ್ಧವಾದ ಮತ್ತು ಪ್ರಜಾಪ್ರಭುತ್ವದ ಬೇರುಗಳನ್ನೇ ದುರ್ಬಲಗೊಳಿಸುವ ಕ್ರಮ. ಇದು ವಿಕೇಂದ್ರೀಕೃತ ಜನಾಡಳಿತದಿಂದ ಕೇಂದ್ರೀಕೃತ ಸರ್ವಾಧಿಕಾರತ್ವದತ್ತ, ಅಧಿಕಾರಶಾಹಿ ವ್ಯವಸ್ಥೆಯತ್ತ ರಾಜ್ಯವನ್ನು ಕೊಂಡೊಯ್ಯುವ ಅಪಾಯಕಾರಿ ದಾರಿಯಂತೆ ಭಾಸವಾಗುತ್ತಿದೆ. ಇಂತಹ ಆದೇಶಗಳನ್ನು ತಕ್ಷಣ ಹಿಂಪಡೆಯದೇ ಹೋದರೆ, ಗ್ರಾಮ ಸ್ವರಾಜ್ಯದ ಅಸ್ತಿತ್ವವೇ ಪ್ರಶ್ನಾರ್ಥಕವಾಗಲಿದೆ.
ಲೇಖಕಿ: ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಕಾರ್ಯಾಲಯದ ಸದಸ್ಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.