ADVERTISEMENT

ಸಂಗತ | ಖಾದಿ: ಅರಿವಿಲ್ಲದ ದಾರಿ, ದುಡುಕು ನಡೆ

ಸಂತೋಷ ಕೌಲಗಿ
Published 31 ಜನವರಿ 2026, 0:06 IST
Last Updated 31 ಜನವರಿ 2026, 0:06 IST
...
...   
ಸರ್ಕಾರಿ ನೌಕರರು ತಿಂಗಳಿಗೊಮ್ಮೆ ಖಾದಿ ಧರಿಸಬೇಕೆನ್ನುವ ಉದ್ದೇಶ ಚೆನ್ನಾಗಿದೆ. ಆದರೆ, ದಿಢೀರ್‌ ತೀರ್ಮಾನದಿಂದ ಖಾದಿ ಉದ್ಯಮಕ್ಕೆ ಪ್ರಯೋಜನವಿಲ್ಲ.

ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ನಿಗಮ–ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಅನುದಾನಿತ ಸಂಸ್ಥೆಗಳ ಅಧಿಕಾರಿಗಳು ಹಾಗೂ ಎಲ್ಲ ನೌಕರರು ಪ್ರತಿ ತಿಂಗಳ ಮೊದಲ ಶನಿವಾರ ಸ್ವಯಂಪ್ರೇರಣೆಯಿಂದ ಖಾದಿ ಬಟ್ಟೆ ಧರಿಸಿ ಕರ್ತವ್ಯ ನಿರ್ವಹಿಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆ ಪ್ರಶಂಸಾರ್ಹ. ಆದರೆ, ಅಧಿಕಾರಿಗಳಿಗೆ ವಸ್ತುಸ್ಥಿತಿಯ ಅರಿವು ಇದ್ದಂತಿಲ್ಲ. ಈ ಪ್ರಕ್ರಿಯೆಯನ್ನು ಚಾಲ್ತಿಗೆ ತರಲು ಇರಬಹುದಾದ ಸಮಸ್ಯೆಗಳ ಕಡೆಗೆ ಅಧಿಕಾರ ನಡೆಸುವವರು ಗಮನಹರಿಸಿದಂತಿಲ್ಲ.

ಖಾದಿಯಲ್ಲಿ ಎರಡು ವಿಧ: ಒಂದು, ಅಸಲಿ, ಮತ್ತೊಂದು ನಕಲಿ. ಪ್ರಸ್ತುತ ದೇಶದಲ್ಲಿ ಮಾರಾಟವಾಗುತ್ತಿರುವ ಖಾದಿಯಲ್ಲಿ ಹೆಚ್ಚಿನ ಪ್ರಮಾಣದ್ದು ನಕಲಿಯೇ.

ಅಸಲಿ ಖಾದಿ, ಕೈಯಿಂದ ನೂತ ನೂಲಿನಿಂದ, ಕೈಮಗ್ಗದಲ್ಲಿ ತಯಾರಾಗುವ ಬಟ್ಟೆ. ಅದಕ್ಕೆ ತನ್ನದೇ ಆದ ಇತಿಮಿತಿ ಇದೆ. ಮೊದಲನೆಯದಾಗಿ ಉತ್ಪಾದನೆ. ಅಸಲಿ ಖಾದಿಯನ್ನು ಆತುರದಲ್ಲಿ ದೊಡ್ಡ ಪ್ರಮಾಣದಲ್ಲಿ ಉತ್ಪತ್ತಿ ಮಾಡಲು ಸಾಧ್ಯವಿಲ್ಲ. ಒಬ್ಬ ನೇಕಾರ ದಿನಕ್ಕೆ 7 ಮೀಟರ್‌ಗಿಂತ ಹೆಚ್ಚು ನೇಯ್ಗೆ ಮಾಡಲಾರ. ಹಾಗೆಯೇ, ಕೊಳ್ಳುಬಾಕ ಸಂಸ್ಕೃತಿಯ ಗ್ರಾಹಕರ ಬೇಡಿಕೆಗಳಾದ ಕಡಿಮೆ ಧಾರಣೆ, ಕಣ್ಣಿಗೆ ಒಪ್ಪುವ ಬಣ್ಣ ಮತ್ತು ವಿನ್ಯಾಸಗಳ ಆಯ್ಕೆಯನ್ನು ಹೇರಳವಾಗಿ ನೀಡಲು ನೈಜ ಖಾದಿ ಉದ್ಯಮಕ್ಕೆ ಸಾಧ್ಯವಿಲ್ಲ.

ADVERTISEMENT

ಅಸಲಿಯಂತೆಯೇ ಕಾಣಿಸುವ ನಕಲಿ ಖಾದಿ ಬಟ್ಟೆ, ಗಿರಣಿ ನೂಲು ಬಳಸಿ ವಿದ್ಯುತ್ ಮಗ್ಗ ಇಲ್ಲವೇ ದೊಡ್ಡ ಗಿರಣಿಗಳಲ್ಲಿ ರೂಪುಗೊಳ್ಳುತ್ತದೆ. ಇದರ ಬೆಲೆ ಕಡಿಮೆ ಮತ್ತು ವಿನ್ಯಾಸಗಳ ಆಯ್ಕೆ ಹೆಚ್ಚು. ಗ್ರಾಹಕರು ನೀಡುವ ಹಣದ ಹೆಚ್ಚಿನ ಪಾಲು ಕುಶಲಕರ್ಮಿಗಳಿಗೆ ಹೋಗದೆ ವ್ಯಾಪಾರಸ್ಥರಿಗೆ ಹೋಗುತ್ತದೆ.

ಹೆಚ್ಚಿನ ಗ್ರಾಹಕರಿಗೆ ಖಾದಿ ಬಟ್ಟೆ, ಕೈಮಗ್ಗದ ಬಟ್ಟೆ, ಗಿರಣಿ ಬಟ್ಟೆ, ಹತ್ತಿ ಬಟ್ಟೆ, ಪಾಲಿಯೆಸ್ಟರ್ ಬಟ್ಟೆಗಳ ನಡುವಿನ ವ್ಯತ್ಯಾಸ ಗೊತ್ತಿಲ್ಲ. ತಾವು ಖರೀದಿ ಮಾಡಿ ನೀಡಿದ ಹಣದ ಹೆಚ್ಚಿನ ಲಾಭ ಯಾರಿಗೆ ಹೋಗುತ್ತದೆ ಎಂಬ ಅರಿವೂ ಅವರಿಗಿಲ್ಲ.

ಗಾಂಧೀಜಿಯವರ ಕಾಲದಲ್ಲೂ ನಕಲಿ ಖಾದಿಯ ಸಮಸ್ಯೆ ಇತ್ತು. ಅವರ ಕಾಲದಲ್ಲಿ ಖಾದಿಗೆ ಬೇಡಿಕೆ ಹೆಚ್ಚಾದಾಗ ಲಾಭಬಡುಕರು ನಕಲಿ ಖಾದಿಯನ್ನು ಮಾರಲು ತೊಡಗಿದರು. ಸ್ವತಃ ಗಾಂಧಿಯವರೇ ಹಲವಾರು ದಿನ ಅಹಮದಾಬಾದಿನ ಅಂಗಡಿ ಬೀದಿಯಲ್ಲಿ ನಿಂತು ಅಸಲಿ ಖಾದಿಯ ಬಗ್ಗೆ ತಿಳಿಹೇಳುತ್ತಾ ಕರಪತ್ರವನ್ನು ಹಂಚಿ, ನಕಲಿ ಖಾದಿಯ ಹಾವಳಿಯನ್ನು ಜನರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದು ಇತಿಹಾಸದ ಭಾಗ.

ರಾಜ್ಯ ಸರ್ಕಾರಕ್ಕೆ ನಿಜವಾಗಿಯೂ ಖಾದಿ ಕ್ಷೇತ್ರವನ್ನು ಉದ್ಧಾರ ಮಾಡಬೇಕು ಎಂಬ ಕಾಳಜಿಯಿದ್ದರೆ ಈ ರೀತಿ ಆತುರದ ತೀರ್ಮಾನ ಮಾಡಬಾರದು. ಕನಿಷ್ಠ ಒಂದೆರಡು ವರ್ಷವಾದರೂ ಖಾದಿ ನೇಕಾರರು ಮತ್ತು ಖಾದಿ ಸಂಸ್ಥೆಗಳೊಂದಿಗೆ ಸಂವಾದ ನಡೆಸಿ, ತನ್ನ ಯೋಜನೆಯನ್ನು ಅವರಿಗೆ ಮನದಟ್ಟು ಮಾಡಿಕೊಡಬೇಕು. ಯೋಜನೆ ಜಾರಿಗೆ ಬಂದರೆ ಬೇಡಿಕೆ ಎಷ್ಟು ಬರುತ್ತದೆ ಎಂದು ಲೆಕ್ಕ ಹಾಕಿ, ಅದರ ಉತ್ಪಾದನೆಗೆ ನೇಕಾರರು ಮತ್ತು ಸಂಘಗಳನ್ನು ಮಾನಸಿಕವಾಗಿ ಮತ್ತು ಭೌತಿಕವಾಗಿ ತಯಾರು ಮಾಡಬೇಕು. ಗ್ರಾಹಕರ ಕನಿಷ್ಠ ಬೇಡಿಕೆಗಳಾದ ಬಟ್ಟೆಯ ಗುಣಮಟ್ಟ, ಬಣ್ಣ ಮತ್ತು ವಿನ್ಯಾಸಗಳ ಕಡೆಗೆ ಆದ್ಯತೆ ಕೊಟ್ಟು ಕೆಲಸ ಮಾಡಬೇಕು.

ಖಾದಿಯ ಮಹತ್ವ, ಅದರಿಂದಾಗಿ ಉಂಟಾಗುವ ಉದ್ಯೋಗದ ಅವಕಾಶ, ಸುಸ್ಥಿರಗೊಳ್ಳುವ ಗ್ರಾಮೀಣ ಬದುಕು, ಪರಿಸರ ಲಾಭಗಳು, ವಿಕೇಂದ್ರೀಕರಣ ಹಾಗೂ ಹಣ ಬಂಡವಾಳಶಾಹಿಗಳಿಗೆ ಹೋಗದೆ ಶ್ರಮಿಕರ ಕೈಗೆ ಹೋಗುತ್ತದೆ ಎಂಬ ವಿಷಯಗಳ ಕುರಿತು ಸರ್ಕಾರ ತನ್ನ ನೌಕರರಿಗೆ ಅರಿವು ಮೂಡಿಸಬೇಕು. ಗೌರವ ಮತ್ತು ಸಾಮಾಜಿಕ ಬದ್ಧತೆಯ ಸಂಕೇತವಾದ ಖಾದಿ, ಪರಿಸರಸ್ನೇಹಿ ಉಡುಪು ಹೌದು ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕು. ಮೇಲಿನ ಅಧಿಕಾರಿಗಳ ಆದೇಶಕ್ಕೆ ಮಣಿದು ಖಾದಿ ಕೊಳ್ಳದೆ, ಸ್ವಯಂಪ್ರೇರಣೆಯಿಂದ ಖಾದಿ ಕೊಳ್ಳುವಂತೆ ಮಾಡಬೇಕು. ಖಾದಿ ಕೇವಲ ಬಟ್ಟೆಯಲ್ಲ, ಅದೊಂದು ಮೌಲ್ಯ ಎಂಬುದು ನೌಕರರಿಗೆ ಮನದಟ್ಟಾಗಬೇಕು. ಖಾದಿ ಬಟ್ಟೆ ಧರಿಸುವ ಬಗ್ಗೆ ಕೆಲವರಿಗೆ ಪೂರ್ವಗ್ರಹಗಳು ಇರುವುದರಿಂದ, ಬದಲಿಗೆ ಮನೆಯಲ್ಲಿ ಬಳಕೆಗೆ ಬೇಕಾದ ಟವೆಲ್‌ಗಳು ಕರವಸ್ತ್ರಗಳನ್ನು ಕೊಂಡರೆ ನೂರಾರು ಮಗ್ಗಗಳಿಗೆ ಜೀವ ಕೊಡಬಹುದು. ಇದು ಮಧ್ಯಮ ದಾರಿ.

ರಾಜಕೀಯ ದೃಷ್ಟಿಯಿಂದ ಕೈಗೊಳ್ಳುವ ಆತುರದ ಆದೇಶಗಳು ಅಸಲಿ ಖಾದಿಗಾಗಲೀ, ನೇಕಾರರಿಗಾಗಲೀ, ಖಾದಿ ಸಂಸ್ಥೆಗಳಿಗಾಗಲೀ ಯಾವ ಅನುಕೂಲವನ್ನೂ ಮಾಡುವುದಿಲ್ಲ. ಸದ್ಯ ಖಾದಿ ಸಂಸ್ಥೆಗಳಲ್ಲಿ ಇರುವ ಖಾದಿ ಬಟ್ಟೆಗಳ ಗುಣಮಟ್ಟ ಶೋಚನೀಯವಾಗಿದೆ. ಅವುಗಳ ಬಣ್ಣ ಮತ್ತು ವಿನ್ಯಾಸ ಗಿರಣಿ ಬಟ್ಟೆಗಳ ಅಣಕವಾಗಿದೆ. ಖಾದಿ ಬಟ್ಟೆ ತನ್ನ ಅಸಲಿತನ ಕಳೆದುಕೊಂಡು ಪೇಲವವಾಗಿ ಕಾಣುತ್ತಿದೆ. ಹಾಗಾಗಿಯೇ ಗ್ರಾಹಕರನ್ನು ಆಕರ್ಷಿಸಲು ಸೋತಿದೆ.

ಸರ್ಕಾರದ ದಿಢೀರ್ ನಿರ್ಧಾರ ನಕಲಿ ಖಾದಿ ಉತ್ಪಾದಿಸುವ ಮತ್ತು ಮಾರುವವರಿಗೆ ಲಾಭ ಮಾಡಿಕೊಡುವಂತಿದೆ. ಮಹಾತ್ಮ ಗಾಂಧಿ ಅವರ ಬಗ್ಗೆ ಮತ್ತು ಖಾದಿಯ ಬಗ್ಗೆ ವಾಟ್ಸ್‌ಆ್ಯಪ್‌ ವಿಶ್ವವಿದ್ಯಾಲಯಗಳು ಆಗಲೇ ಸಾಕಷ್ಟು ಪಾಠ ಮಾಡಿ, ಮಹಾತ್ಮನನ್ನು ಖಳನಾಯಕನನ್ನಾಗಿ ರೂಪಿಸಿವೆ. ಆತುರದ ಹಾಗೂ ವಿವೇಚನೆ ಇಲ್ಲದ ನಿರ್ಧಾರಗಳ ಮೂಲಕ ಗಾಂಧಿಯನ್ನು ಮತ್ತಷ್ಟು ಅಪ್ರಸ್ತುತಗೊಳಿಸುವ ಕೆಲಸವನ್ನು ಸರ್ಕಾರ ಮಾಡಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.