ADVERTISEMENT

ಸಂಗತ: ಹೊರಳು ಹಾದಿಯಲ್ಲಿ ಗ್ರಂಥಪಾಲಕ

ರಾಜಕುಮಾರ ಕುಲಕರ್ಣಿ
Published 11 ಆಗಸ್ಟ್ 2025, 23:30 IST
Last Updated 11 ಆಗಸ್ಟ್ 2025, 23:30 IST
   

ಹತ್ತು ವರ್ಷಗಳ ಹಿಂದೆ ಪ್ರತಿಷ್ಠಿತ ಸಾಫ್ಟ್‌ವೇರ್ ಸಂಸ್ಥೆಯಲ್ಲಿ ಗ್ರಂಥಪಾಲಕ ಹುದ್ದೆಗೆ ನೇಮಕಗೊಂಡಿದ್ದ ನನ್ನ ಸ್ನೇಹಿತರು, ಈಗ ಅದೇ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗಕ್ಕೆ ವರ್ಗಾವಣೆಗೊಂಡಿದ್ದಾರೆ. ಹೊಸ ಪರಿಸರಕ್ಕೆ ಅವರೀಗ ಹೊಂದಿಕೊಳ್ಳಬೇಕಾಗಿದೆ. ತಮ್ಮ ಬದಲಾದ ಕಾರ್ಯಕ್ಷೇತ್ರವನ್ನು ಕುರಿತು ಅವರು ‘ಗ್ರಂಥಪಾಲಕ ವೃತ್ತಿ ಹೊರಳು ಹಾದಿಯಲ್ಲಿರುವುದರ ಸಂಕೇತ’ವಿದು ಎನ್ನುತ್ತಾರೆ.

ಸಾಫ್ಟ್‌ವೇರ್ ಸಂಸ್ಥೆಗಳು ಮಾತ್ರವಲ್ಲದೆ, ಶಿಕ್ಷಣ ಸಂಸ್ಥೆಗಳಲ್ಲೂ ಈ ಬದಲಾವಣೆಯನ್ನು ಕಾಣಬಹುದು. ಪದವಿ ಮಹಾವಿದ್ಯಾಲಯಗಳಲ್ಲಿ ಬೋಧಕರಿಗೆ ಸಮನಾಗಿ ಯುಜಿಸಿ ವೇತನ ಶ್ರೇಣಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಂಥಪಾಲಕರು, ಗ್ರಂಥಾಲಯಗಳಲ್ಲಿ ಕಾರ್ಯ ನಿರ್ವಹಿಸುವುದಕ್ಕಿಂತ ಆಡಳಿತಾತ್ಮಕ ಕೆಲಸಗಳನ್ನು ಮಾಡುವುದೇ ಹೆಚ್ಚು. ವಿದ್ಯಾರ್ಥಿಗಳ ಪ್ರವೇಶ ದಾಖಲಾತಿ, ಆದಾಯ ಹಾಗೂ ಖರ್ಚಿನ ಲೆಕ್ಕ ಬರವಣಿಗೆ ಮತ್ತು ಪರೀಕ್ಷೆ ನಿರ್ವಹಣೆಯಂತಹ ಕೆಲಸಗಳಲ್ಲಿ ಅವರನ್ನು ತೊಡಗಿಸಲಾಗುತ್ತಿದೆ. ಹಾಗಾಗಿ, ಅದೆಷ್ಟೋ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಗ್ರಂಥಾಲಯಗಳು ಪೂರ್ಣ ಪ್ರಮಾಣದಲ್ಲಿ ಸ್ಥಾಪನೆಯಾಗಿಲ್ಲ. ಒಂದೆರಡು ಅಲ್ಮೆರಾಗಳಲ್ಲಿ ಪುಸ್ತಕಗಳನ್ನಿಟ್ಟು, ಅದನ್ನೇ ಗ್ರಂಥಾಲಯವೆಂದು ಕರೆಯಲಾಗುತ್ತಿದೆ.

ಸರ್ಕಾರದ ಪದವಿ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಗಳಲ್ಲಿ ಬೇರೆ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರು ವೇತನ ಶ್ರೇಣಿಯ ಆಕರ್ಷಣೆಯಿಂದಾಗಿ ತಮ್ಮ ಹಿಂದಿನ ಸೇವಾವಧಿ ಸಮೇತ ಗ್ರಂಥಪಾಲಕರಾಗಿ ನೇಮಕಗೊಂಡಿರುವುದಕ್ಕೆ ಉದಾಹರಣೆಗಳಿವೆ. ಹೀಗೆ ನೇಮಕಗೊಳ್ಳುವ ಗ್ರಂಥಪಾಲಕರು ಮುಕ್ತ ವಿಶ್ವವಿದ್ಯಾಲಯಗಳಿಂದ ‘ಗ್ರಂಥಾಲಯ ವಿಜ್ಞಾನ ಪದವಿ’ ಪಡೆದಿರುತ್ತಾರೆ. ಹೆಚ್ಚಿನ ಸಂಬಳ ಮತ್ತು ಕಡಿಮೆ ಒತ್ತಡದ ಕೆಲಸದ ಆಕರ್ಷಣೆಯಿಂದಾಗಿ ಗ್ರಂಥಪಾಲಕರಾಗಿ ನಿಯುಕ್ತಿಗೊಳ್ಳುತ್ತಿರುವವರಿಂದ ವೃತ್ತಿಯ ಬೆಳವಣಿಗೆಯನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ.

ADVERTISEMENT

ಈ ಹಿಂದೆ ರಾಜ್ಯದಲ್ಲಿ ಪದವಿಪೂರ್ವ ಕಾಲೇಜುಗಳಲ್ಲಿ ಗ್ರಂಥಾಲಯ ವಿಜ್ಞಾನದ ವೃತ್ತಿಶಿಕ್ಷಣ ಕೋರ್ಸ್ ಜಾರಿಯಲ್ಲಿತ್ತು. ಎರಡು ವರ್ಷ ಅವಧಿಯ ಈ ವೃತ್ತಿಪರ ಕೋರ್ಸ್‌ ಅನ್ನು ಪದವಿಪೂರ್ವ ಶಿಕ್ಷಣಕ್ಕೆ ತತ್ಸಮಾನವೆಂದು ಪರಿಗಣಿಸಲಾಗುತ್ತಿತ್ತು. ವಿಪರ್ಯಾಸವೆಂದರೆ, ಸ್ವಯಂ ಉದ್ಯೋಗಕ್ಕೆ ಅವಕಾಶ ಕಲ್ಪಿಸಬೇಕಿದ್ದ ಈ ವೃತ್ತಿಪರ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಮುಂದೆ ಶಿಕ್ಷಕರ ತರಬೇತಿ ಕೋರ್ಸಿಗೆ ಪ್ರವೇಶ ಪಡೆದು ಶಿಕ್ಷಕರಾಗಿ ನಿಯುಕ್ತಿಗೊಳ್ಳುತ್ತಿದ್ದರು. ನಂತರದ ದಿನಗಳಲ್ಲಿ ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಥಿಗಳು ಶಿಕ್ಷಕರ ತರಬೇತಿ ಕೋರ್ಸಿಗೆ ಪ್ರವೇಶ ಪಡೆಯಲು ಅನರ್ಹರೆಂದು ಸರ್ಕಾರ ನಿಯಮ ಜಾರಿಗೊಳಿಸಿತು. ಪರಿಣಾಮವಾಗಿ, ಗ್ರಂಥಾಲಯ ವಿಜ್ಞಾನದ ವೃತ್ತಿಪರ ಕೋರ್ಸಿನ ಪ್ರವೇಶಕ್ಕೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಮುಖವಾಯಿತು. ನಂತರದಲ್ಲಿ ಸರ್ಕಾರ, ಪದವಿಪೂರ್ವ ಹಂತದಲ್ಲಿ ಗ್ರಂಥಾಲಯ ವಿಜ್ಞಾನ ಸೇರಿದಂತೆ ಎಲ್ಲ ವೃತ್ತಿಪರ ಕೋರ್ಸ್‌ಗಳನ್ನು ತೆಗೆದುಹಾಕಿತು.

ಎರಡು ದಶಕಗಳ ಕಾಲ ಗ್ರಂಥಾಲಯ ವಿಜ್ಞಾನವನ್ನು ವೃತ್ತಿ ಶಿಕ್ಷಣದ ಭಾಗವಾಗಿಸಿದ್ದರಿಂದ ಆದ ಪ್ರಯೋಜನವಾದರೂ ಏನು?

ವಿದ್ಯಾರ್ಥಿಗಳು ಖಾಸಗಿ ಗ್ರಂಥಾಲಯಗಳನ್ನು ಸ್ಥಾಪಿಸಿ ಸ್ವಯಂ ಉದ್ಯೋಗ ಹೊಂದಲು ಈ ಕೋರ್ಸ್ ಬಳಕೆಯಾಗಬೇಕಿತ್ತು. ಖಾಸಗಿ ಗ್ರಂಥಾಲಯಗಳ ಬಳಕೆಯೇ ಸೀಮಿತವಾಗಿರುವ ಸನ್ನಿವೇಶವಿರುವಾಗ ಗ್ರಂಥಾಲಯ ವಿಜ್ಞಾನವನ್ನು ವೃತ್ತಿಪರ ಕೋರ್ಸ್ ಎಂದು ಪರಿಗಣಿಸಿದ್ದೇ ತಪ್ಪು. ಗ್ರಂಥಾಲಯ ವಿಜ್ಞಾನ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಶಿಕ್ಷಕರ ತರಬೇತಿ ಕೋರ್ಸ್‌ಗೆ ಆಯ್ಕೆಯಾಗಿ ಮುಂದಿನ ದಿನಗಳಲ್ಲಿ ಶಿಕ್ಷಕರೆಂದು ನೇಮಕಗೊಂಡರೆ ವಿನಾ ಗ್ರಂಥಾಲಯ ಕ್ಷೇತ್ರಕ್ಕಾದ ಉಪಯೋಗ ಶೂನ್ಯ.

ಒಂದೇ ಪ್ರಕಾರದ ಪಠ್ಯಕ್ರಮವನ್ನು ಅಭ್ಯಾಸ ಮಾಡಿದವರು ಸಾರ್ವಜನಿಕ ಗ್ರಂಥಾಲಯಗಳು ಮಾತ್ರವಲ್ಲದೆ, ಶಾಲಾ– ಕಾಲೇಜು ಹಾಗೂ ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳು, ಸಾಫ್ಟ್‌ವೇರ್ ಸಂಸ್ಥೆಗಳು ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಗ್ರಂಥಪಾಲಕರೆಂದು ನೇಮಕಗೊಳ್ಳುತ್ತಿದ್ದಾರೆ. ನೇಮಕಾತಿ ನಂತರ ಆಯಾ ಸಂಸ್ಥೆಯ ವಿಷಯ ವೈವಿಧ್ಯಕ್ಕೆ ಅನುಗುಣವಾಗಿ ಗ್ರಂಥಪಾಲಕರು ರೂಪುಗೊಳ್ಳಬೇಕಾಗಿದೆ. ಇದು ಗ್ರಂಥಪಾಲಕ ವೃತ್ತಿ ಬೆಳವಣಿಗೆಗೆ ತೊಡಕಾಗಿದೆ. ವಿಶ್ವವಿದ್ಯಾಲಯಗಳಲ್ಲಿನ ಗ್ರಂಥಾಲಯ ವಿಜ್ಞಾನದ ಪಠ್ಯಕ್ರಮ ವಿಶೇಷ ಮತ್ತು ನಿಷ್ಣಾತ ಗ್ರಂಥಪಾಲಕರನ್ನು ರೂಪಿಸುವಂತಿರಬೇಕು.

ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಇಂದು ಗ್ರಂಥಪಾಲಕರ ಕಾರ್ಯವೈಖರಿಯಲ್ಲಿ ಬದಲಾವಣೆಗಳಾಗಿವೆ. ಈ ಮೊದಲಿನಂತೆ ಪುಸ್ತಕಗಳ ಖರೀದಿ, ದಾಖಲಾತಿ, ಜೋಡಣೆ ಮತ್ತು ಓದುಗರ ಸಮೂಹಕ್ಕೆ ಒದಗಿಸುವುದು ಮಾತ್ರ ಗ್ರಂಥಪಾಲಕರ ಕೆಲಸಗಳಾಗಿ ಉಳಿದಿಲ್ಲ. ತಂತ್ರಜ್ಞಾನದ ಸಹಾಯದಿಂದ ಲೇಖನಗಳ ಶೋಧನೆ, ಸಂಶೋಧನಾ ಲೇಖನಗಳಲ್ಲಿನ ನಕಲು ಪತ್ತೆ, ಗ್ರಂಥಸೂಚಿ ರಚನೆ, ಎಲೆಕ್ಟ್ರಾನಿಕ್ ಪುಸ್ತಕಗಳ ನಿರ್ವಹಣೆ, ಇತ್ಯಾದಿ ಕೆಲಸಗಳಲ್ಲಿ ಅವರು ತೊಡಗಿಸಿಕೊಳ್ಳಬೇಕಾಗಿದೆ. ನಿವೃತ್ತಿ ಅಂಚಿನಲ್ಲಿರುವ ಗ್ರಂಥಪಾಲಕರಿಗೆ ಈ ಎಲ್ಲ ಕಾರ್ಯಗಳು ಹೊರೆಯಾಗಿವೆ. ತಂತ್ರಜ್ಞಾನದ ಮೂಲಕ ಕುಳಿತಲ್ಲೇ ಅಗತ್ಯದ ಮಾಹಿತಿ ಪಡೆಯುತ್ತಿರುವ ಓದುಗರು ಗ್ರಂಥಾಲಯಗಳಿಗೆ ವಿಮುಖರಾಗುತ್ತಿರುವುದರಿಂದ ಯುವ ಗ್ರಂಥಪಾಲಕರಿಗೆ ವೃತ್ತಿಯ ಅಸ್ತಿತ್ವದ ಪ್ರಶ್ನೆ ಎದುರಾಗಿದೆ.

ಗ್ರಂಥಾಲಯ ವಿಜ್ಞಾನ ಪಿತಾಮಹ ಡಾ. ಎಸ್.ಆರ್. ರಂಗನಾಥನ್‌ ಅವರ ಜನ್ಮದಿನ (ಆಗಸ್ಟ್ 12) ‘ರಾಷ್ಟ್ರೀಯ ಗ್ರಂಥಪಾಲಕರ ದಿನ’ವೂ ಹೌದು. ಈ ಸಂದರ್ಭ, ಗ್ರಂಥಪಾಲಕರ ಆತ್ಮಾವಲೋಕನಕ್ಕೆ ಹಾಗೂ ಆ ಹುದ್ದೆಯ ಘನತೆ ಹೆಚ್ಚಿಸಲಿಕ್ಕೆ ಪ್ರೇರಣೆ ಆಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.