ADVERTISEMENT

ಸಂಗತ: ಕೇಳುತ್ತಿದೆಯೇ?... ಆತ್ಮಸಾಕ್ಷಿಯ ಪಿಸುಮಾತು

ಆತ್ಮಸಾಕ್ಷಿಯನ್ನು ಜಾಗೃತಗೊಳಿಸಬೇಕಾಗಿರುವುದು ವರ್ತಮಾನದ ತುರ್ತು

ಡಾ.ಜ್ಯೋತಿ
Published 4 ಏಪ್ರಿಲ್ 2021, 19:31 IST
Last Updated 4 ಏಪ್ರಿಲ್ 2021, 19:31 IST
   

ನಮ್ಮ ಸುತ್ತಲಿನ ಜಗತ್ತಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ವರ್ತಮಾನದ ಕಾಲಘಟ್ಟದಲ್ಲಿ ಮನುಷ್ಯನ ಆತ್ಮಸಾಕ್ಷಿಯ ಪಿಸು ಮಾತು ಉಚ್ಚಸ್ವರ ಪಡೆಯಬೇಕಾದ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎನಿಸುತ್ತದೆ. ಆದರೆ, ಪ್ರಸ್ತುತದ ಅಬ್ಬರ ಮತ್ತು ವಸ್ತುಮೋಹಿ ಪ್ರಪಂಚದಲ್ಲಿ ಮನುಷ್ಯನ ಪರಮೋಚ್ಚ ಶಕ್ತಿಯಾದ ಆತ್ಮಸಾಕ್ಷಿ ಮೌನವಾಗಿರುವುದು ಸ್ಪಷ್ಟವಾಗುತ್ತದೆ.

ಹಾಗಿದ್ದಲ್ಲಿ, ಆತ್ಮಸಾಕ್ಷಿಯೆಂದರೇನು? ಇದನ್ನು ಮನುಷ್ಯನ ನೈತಿಕ ಪ್ರಜ್ಞೆ, ಸ್ವಅರಿವು, ವೈಚಾರಿಕತೆ ಮತ್ತು ಸ್ವವಿಶ್ಲೇಷಣಾ ಸಾಮರ್ಥ್ಯದ ಮಿಶ್ರಣವೆನ್ನಬಹುದು. ಈ ಪ್ರಜ್ಞೆ ಮೂಲತಃ ಮನುಷ್ಯನಲ್ಲಿತ್ತೇ ಎನ್ನುವುದನ್ನು ಅರಸುತ್ತಾ ಹೋದರೆ, ಬುಡಕಟ್ಟು ಜನಾಂಗಗಳಲ್ಲಿ ಇದಕ್ಕೆ ಬಹಳಷ್ಟು ಪುರಾವೆಗಳನ್ನು ಕಾಣಬಹುದು. ಉದಾಹರಣೆಗೆ, ಬೇಟೆಗೆ ಜೊತೆಯಾಗಲು ಸಾಧ್ಯ ವಾಗದ ಅನಾರೋಗ್ಯಪೀಡಿತ ಸಹವರ್ತಿಗಳಿಗೂ ಬೇಟೆಯ ಪಾಲು ಕೊಡುತ್ತಿದ್ದುದು, ಆಹಾರಕ್ಕಾಗಿ ಕಿತ್ತ ಗೆಡ್ಡೆಯ ಜಾಗದಲ್ಲಿ ಅದರ ಮೊಗ್ಗುಗಳನ್ನು ನೆಡು ತ್ತಿದ್ದುದು, ಭೂಮಿಯಿಂದ ದೈನಂದಿನ ಅಗತ್ಯಗಳ ನ್ನಷ್ಟೇ ಪಡೆದು, ಸಲಹುತ್ತಿರುವ ಭೂಮಿಯನ್ನು ಕೃತಜ್ಞತೆಯಿಂದ ಗೌರವಿಸುತ್ತಿದ್ದುದು... ಹೀಗೆ, ಅನಕ್ಷರಸ್ಥನಾಗಿದ್ದ ಕಾಲದಲ್ಲಿ ಮನುಷ್ಯನ ಆತ್ಮಸಾಕ್ಷಿ ಜಾಗೃತವಾಗಿತ್ತು ಎನ್ನಬಹುದು.

ಆದರೆ, ಕಾಲಕಳೆದಂತೆ ಮನುಷ್ಯನು ತಂತ್ರಜ್ಞಾನ ಆಧಾರಿತ ಕೌಶಲಗಳನ್ನು ಬೆಳೆಸಿಕೊಂಡಂತೆ ಸ್ವಹಿತಾಸಕ್ತಿ ಗಳು ಹೆಚ್ಚಾಗಿ, ಆತ್ಮಸಾಕ್ಷಿ ಮಸುಕಾಗುತ್ತಿರುವುದನ್ನು ಗಮನಿಸಬಹುದು. ಈ ಪ್ರವೃತ್ತಿಯು ಮನುಷ್ಯನಿಗೆ, ಭೂಮಿಯ ಮೇಲಿನ ತನ್ನ ಜೀವನ ಅನಿಶ್ಚಿತವೆನ್ನುವ ಅರಿವಿನ ನಡುವೆಯೂ ಸ್ವಹಿತಕ್ಕಾಗಿ ಅಗಾಧ ಪ್ರಮಾಣದ ಸಂಪಾದನೆ ಮಾಡಲು ಪ್ರೇರೇಪಿಸುತ್ತದೆ. ಜೊತೆಗೆ, ಸುತ್ತಲಿನ ಜಗತ್ತಿನ ಹಸಿವು, ದಾರಿದ್ರ್ಯ, ಕಷ್ಟ ನಷ್ಟಗಳು ಆತ್ಮಸಾಕ್ಷಿಯನ್ನು ಕಾಡುವುದಿಲ್ಲ.

ADVERTISEMENT

ಪ್ರಸ್ತುತ, ಆತ್ಮಸಾಕ್ಷಿಯ ಕೊರತೆ ವರ್ತಮಾನ ಜಗತ್ತಿನ ಸಮೂಹ ಸನ್ನಿ. ಉದಾಹರಣೆಗೆ, ವರ್ತ ಮಾನದ ಹೆಚ್ಚಿನ ರಾಜಕಾರಣಿಗಳು ಸ್ವಹಿತ ಸಾಧಿಸ ಲೆಂದೇ ಪಕ್ಷಗಳನ್ನು ಸೇರುತ್ತಾರೆ ಮತ್ತು ಹಣದ ಪ್ರಭಾವ ದಿಂದ ಉನ್ನತ ಸ್ಥಾನ ಅಲಂಕರಿಸುತ್ತಾರೆ. ಹಲವರಲ್ಲಿ ಸಿದ್ಧಾಂತಗಳ ಗಂಧಗಾಳಿಯೂ ಇಲ್ಲ, ನಿರಾಯಾಸವಾಗಿ ಪಕ್ಷ ಬದಲಾಯಿಸಿ ಸ್ವಹಿತ ಕಾಪಾಡಿಕೊಳ್ಳುತ್ತಾರೆ.

ಆತ್ಮಸಾಕ್ಷಿಯ ಆಯಾಮದಿಂದ, ನಾವು ಜಗತ್ತಿನ ಭವಿಷ್ಯ ನಿರ್ಧರಿಸುವ ಮಕ್ಕಳನ್ನು ಗಮನಿಸಿ ದರೆ, ಯಾವುದೇ ಆಶಾದಾಯಕ ಬೆಳವಣಿಗೆಯನ್ನು ಕಾಣುವುದಿಲ್ಲ. ಯಾಕೆಂದರೆ, ಹೆತ್ತವರೂ ಒಳ ಗೊಂಡಂತೆ ಈಗಿನ ಪ್ರಪಂಚವು ಅವರನ್ನು ತಯಾರು ಮಾಡುತ್ತಿರುವುದು ಸ್ಪರ್ಧಾತ್ಮಕ ಪ್ರಪಂಚದಲ್ಲಿ ಉಳಿದ ವರನ್ನು ಹಿಂದಿಕ್ಕಿ ನಾಗಾಲೋಟದಲ್ಲಿ ಮುನ್ನುಗ್ಗುವುದಕ್ಕೆ ಮಾತ್ರ. ಅವರ ಆತ್ಮಸಾಕ್ಷಿ ಉದ್ದೀಪನಗೊಳಿಸುವ ಯಾವ ತರಬೇತಿಯೂ ಸಿಗುತ್ತಿಲ್ಲ. ಯಾಕೆಂದರೆ, ಇಂದಿನ ಪೋಷಕರಿಗೆ, ಮಕ್ಕಳ ತಪ್ಪು ಒಪ್ಪುಗಳನ್ನು ತಿದ್ದಲು ಸಮಯವಿಲ್ಲ. ಈ ದಿಸೆಯಲ್ಲಿ, ಮಕ್ಕಳ ಪಠ್ಯಕ್ರಮಗಳು ಬರೀ ಕೌಶಲಗಳನ್ನಷ್ಟೇ ಉದ್ದೀಪನಗೊಳಿಸದೆ, ಆತ್ಮಸಾಕ್ಷಿಯನ್ನು ಜಾಗೃತವಾಗಿ ಇಡಬೇಕಾದುದು ಇಂದಿನ ಅಗತ್ಯ. ಯಾಕೆಂದರೆ, ಆತ್ಮಸಾಕ್ಷಿರಹಿತ ವಿದ್ವತ್ತು ಸಮಾಜಕ್ಕೆ ನಿರರ್ಥಕ ಮಾತ್ರವಲ್ಲ ಅಪಾಯಕಾರಿ ಕೂಡ.

ತತ್ವಜ್ಞಾನಿ ನೀಷೆ ಪ್ರಕಾರ ಆತ್ಮಸಾಕ್ಷಿಯೆಂದರೆ, ಮೌಲ್ಯಾಧಾರಿತವಾಗಿ ಬದುಕಬೇಕೆಂಬ ಎಚ್ಚರ. ಈ ಮೌಲ್ಯಗಳೆಂದರೆ ನಮ್ಮ ಸಾಮಾಜಿಕ ಜವಾಬ್ದಾರಿಗಳ ಅರಿವು. ವಿಶೇಷವೆಂದರೆ, ನಮ್ಮ ದೈನಂದಿನ ಜೀವನದ ಹೆಚ್ಚಿನ ಘಟನಾವಳಿಗಳು ಆತ್ಮಸಾಕ್ಷಿಯನ್ನು ಕಲಕದೆ ಮರೆತು ಮುಂದೆ ಸಾಗುತ್ತೇವೆ.

ನೀಷೆ ಹೇಳುವಂತೆ, ನೋವು ಕೊಡುವ ಅನುಭವವು ಆತ್ಮಸಾಕ್ಷಿಯನ್ನು ಎಚ್ಚರಿಸುತ್ತದೆ. ಉದಾ ಹರಣೆಗೆ, ಕೆಲವೊಮ್ಮೆ ಸಾಮಾಜಿಕ ಮೌಲ್ಯಗಳು ನಮ್ಮ ವೈಯಕ್ತಿಕ ಮೌಲ್ಯಗಳೊಂದಿಗೆ ಸಂಘರ್ಷಕ್ಕಿಳಿದಾಗ, ಆತ್ಮಸಾಕ್ಷಿಯು ಎರಡು ರೀತಿಯಲ್ಲಿ ಸ್ಪಂದಿಸಲು ಪ್ರೇರೇಪಿಸಬಹುದು. ಮನುಷ್ಯ ದ್ವೀಪವಾಗಿರದೆ ಸಮುದಾಯ ಜೀವಿಯಾಗಿರುವುದರಿಂದ, ಈ ರೀತಿಯ ಸಂಘರ್ಷ ಮನುಷ್ಯನಿಂದ ವಿಧ್ವಂಸಕ ಕೃತ್ಯಗಳನ್ನು ಮಾಡಿಸಬಹುದು. ಉದಾಹರಣೆಗೆ, ಇತಿಹಾಸದಲ್ಲಿ ದಾಖಲಾಗಿರುವ ಎಲ್ಲ ನಿರಂಕುಶ ಪ್ರಭುಗಳ ನಡವಳಿಕೆ. ಆದರೆ ಕೆಲವೊಮ್ಮೆ ಈ ವೈಯಕ್ತಿಕ ಸಂಘರ್ಷವು ಸಾಮಾಜಿಕ ಸುಧಾರಣೆಗೆ ಮುನ್ನುಡಿಯಾಗಬಹುದು. ಉದಾಹರಣೆಗೆ, ಬುದ್ಧ, ಯೇಸು ಕ್ರಿಸ್ತ, ಬಸವಣ್ಣ, ಗಾಂಧಿ... ಹೀಗೆ, ಒಬ್ಬ ವ್ಯಕ್ತಿಯ ಆತ್ಮಸಾಕ್ಷಿಯು ಜನಸಮೂಹವನ್ನು ಬಡಿದೆಬ್ಬಿಸಿ ಹೊಸ ಶಕೆಗೆ ಕಾರಣ ವಾಗಬಹುದು. ಉದಾಹರಣೆಗೆ, ಅಮೆರಿಕದಲ್ಲಿ ಇತ್ತೀಚೆಗೆ ಜಾರ್ಜ್ ಫ್ಲಾಯ್ಡ್ ಹತ್ಯೆಯ ನಂತರ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಜನಜಾಗೃತಿ ಆಂದೋಲನ ಆರಂಭ ವಾದಂತೆ, ಸದ್ಯ ಭಾರತದಲ್ಲಿ ಕೃಷಿ ಕಾಯ್ದೆ ವಿರುದ್ಧ ಆರಂಭವಾದ ಪ್ರತಿಭಟನೆಯು ದೇಶದಾದ್ಯಂತ ಪಸರಿಸುತ್ತಿರುವ ಹಾಗೆ, ಮನುಷ್ಯನ ಆತ್ಮಸಾಕ್ಷಿಯ ಜಾಗೃತಿ ಸಾಮಾಜಿಕ ಅಥವಾ ರಾಜಕೀಯ ಪರಿವರ್ತನೆ ಗಳನ್ನು ತರಬಲ್ಲದು.

ಕೊನೆಯದಾಗಿ, ಕುವೆಂಪು ಅವರ ಸಾಲು ‘ಯಾವ ಕಾಲದ ಶಾಸ್ತ್ರವೇನು ಹೇಳಿದರೇನು? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?’ ಕೂಡ ಆತ್ಮಸಾಕ್ಷಿಯ ಮಹತ್ವವನ್ನು ಹೇಳುತ್ತದೆ. ಏಪ್ರಿಲ್ 5 ಅನ್ನು ‘ವಿಶ್ವ ಆತ್ಮಸಾಕ್ಷಿಯ ದಿನ’ವೆಂದು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯು 2020ರ ಏಪ್ರಿಲ್ 5ರಂದು ಪ್ರಥಮ ವಿಶ್ವ ಆತ್ಮಸಾಕ್ಷಿಯ ದಿನವನ್ನು ಆಚರಿಸಿತು.

ಜಗತ್ತಿನಲ್ಲಿ ನಡೆಯುತ್ತಿರುವ ಬಹುತೇಕ ಅಪರಾಧಗಳು ಮನುಷ್ಯನ ಆತ್ಮಸಾಕ್ಷಿಯ ಕೊರತೆಯಿಂದಲೇ ಆಗುತ್ತಿರುವುದೆಂದು ಮನಗಂಡು, ಶಾಂತಿ ಮತ್ತು ಪ್ರೀತಿಯ ಮೂಲಕ ಆತ್ಮಸಾಕ್ಷಿಯನ್ನು ಜಾಗೃತಗೊಳಿಸುವ ದಿಸೆಯಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ. ಈ ಜಾಗೃತಿಯು ಜನರಲ್ಲಿ ಸಹನೆ, ಸಹಬಾಳ್ವೆ ಮತ್ತು ಬಹುತ್ವದ ಸ್ವೀಕಾರವನ್ನು ಉದ್ದೀಪನಗೊಳಿಸಲಿ ಎನ್ನುವುದೇ ಈ ದಿನಾಚರಣೆಯ ಮೂಲ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.