
‘ಮದ್ಯಪಾನದಿಂದ ಸಾವು ಸಂಭವಿಸುತ್ತದೆ. ಧೂಮಪಾನದಿಂದ ಕ್ಯಾನ್ಸರ್ ಬರುತ್ತದೆ’. ಶಾಸನ ವಿಧಿಸಿದ ಈ ಎಚ್ಚರಿಕೆ ಸಿನಿಮಾ ಆರಂಭದಲ್ಲಿ ತೆರೆಯ ಮೇಲೆ ಬರುತ್ತದೆ; ನಂತರ ಸಿನಿಮಾದಲ್ಲಿ ಏನೆಲ್ಲ ತೋರಿಸಲಾಗುತ್ತದೆ ಎನ್ನುವ ಪ್ರಶ್ನೆಯನ್ನು ಕೇಳುವುದೇ ಬೇಡ.
ಧಾರಾವಾಹಿಗಳಲ್ಲಿ ‘ಹೆಲ್ಮೆಟ್ ಇಲ್ಲದ ವಾಹನ ಚಾಲನೆ ಕಾನೂನುಬಾಹಿರ’ ಎನ್ನುವ ಅಡಿಟಿಪ್ಪಣಿಯೊಂದಿಗೆ ನಾಯಕನಟನ ಚಂದದ ಹೇರ್‌ಸ್ಟೈಲ್ ತೋರಿಸಲಾಗುತ್ತದೆ. ಜೂಜಾಟದ ಆ‍್ಯಪ್‌ಗಳನ್ನು ಸ್ಟಾರ್‌ಗಳು ಎಗ್ಗಿಲ್ಲದೆ ಪ್ರಚಾರ ಮಾಡುತ್ತಿದ್ದಾರೆ. ಅಂಥ ಜಾಹೀರಾತುಗಳ ಕೊನೆಯಲ್ಲಿಯೂ ‘ಜೂಜಾಟವು ಗೀಳಾಗಬಹುದು’ ಎನ್ನುವ ಸಾಲು ಇರುತ್ತದೆ.
‘ಶಾಸನ ವಿಧಿಸಿದ ಎಚ್ಚರಿಕೆ’ ಎನ್ನುವ ಸಾಲಿನೊಂದಿಗೆ ಅದರ ಉಲ್ಲಂಘನೆಯನ್ನೂ ಒಟ್ಟಾಗಿ ತೋರಿಸುವುದರಿಂದ ಸಮಾಜದ ಮೇಲಾಗುತ್ತಿರುವ ಪರಿಣಾಮ ಯಾವ ರೀತಿಯದು? ಒಂದು ಉದಾಹರಣೆ ನೋಡಿ:
ದೊಡ್ಡಬಳ್ಳಾಪುರದ ರಮೇಶ ಅವರ ಮನೆಯಲ್ಲಿ ನಾಲ್ಕು ಮಗ್ಗಗಳಿದ್ದವು. ಅಪ್ಪ ತೀರಿಹೋದ ನಂತರ ಮಗ್ಗ ಬಿಡುತ್ತಲೇ ತಂಗಿಯ ಮದುವೆಗೆ ಆತ ಹಣ ಹೊಂದಿಸಿದ್ದ. ನಂತರದ ದಿನಗಳಲ್ಲಿ ಅವನೂ ಮದುವೆಯಾದ; ಇಬ್ಬರು ಮುದ್ದಾದ ಹೆಣ್ಣುಮಕ್ಕಳು ಮನೆಗೆ ಬಂದರು. ಐದು ವರ್ಷಗಳ ಹಿಂದೆ ಅಮ್ಮ, ಹೆಂಡತಿ, ಇಬ್ಬರು ಮಕ್ಕಳ ಜೊತೆಗೆ ನೆಮ್ಮದಿಯಾಗಿದ್ದ ಕುಟುಂಬ ಈಗ ಊರು ಬಿಟ್ಟು ಹೊರಟುಹೋಗಿದೆ.
ಗೆಳೆಯರ ಸಹವಾಸದಲ್ಲಿ ರಮೇಶ ಕುಡಿತ ಕಲಿತ. ಅವನು ಆರಾಧಿಸುತ್ತಿದ್ದ ಸಿನಿಮಾ ನಟ ಸಹ ತೆರೆಯ ಮೇಲೆ, ತೆರೆಯ ಹಿಂದೆ ಹೀಗೆಯೇ ಕುಡಿತವನ್ನು ಮೆಚ್ಚಿಕೊಳ್ಳುವ ಮಾತುಗಳನ್ನೇ ಆಡುತ್ತಿದ್ದ. ರಮೇಶನಿಗೂ ಅಷ್ಟೇ, ಈ ಚಟವು ವ್ಯಸನವಾಗಲು ಅವನ ಇಷ್ಟದ ನಟನ ವರ್ತನೆಯೇ ವೇಗವರ್ಧಕವಾಯಿತು. ಕುಡಿತ ಹೆಚ್ಚಾದಂತೆ ದುಡಿಮೆ ಕಡಿಮೆಯಾಯಿತು. ಸಾಲಗಾರರು ಮನೆ ಮುಂದೆ ನಿಲ್ಲತೊಡಗಿದರು. ಮನೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಾಗ, ರಮೇಶನ ತಾಯಿ ನಡುಬೀದಿಯಲ್ಲಿಯೇ ಕಣ್ಣೊರೆಸಿಕೊಂಡಿದ್ದರು. ಕರೆಂಟ್ ಹೋದ ಮೇಲೆ ಮಗ್ಗಗಳಿಗೇನು ಕೆಲಸ? ಆರುಕಾಸು, ಮೂರುಕಾಸಿಗೆ ಮಗ್ಗಗಳನ್ನು ಮಾರಲಾಯಿತು. ರಮೇಶನ ಹೆಂಡತಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಲು ಶುರು ಮಾಡಿದರು.
ಸ್ವಲ್ಪ ದಿನಕ್ಕೆ ರಮೇಶನ ತಾಯಿ ಮಗನನ್ನು ಉಪಾಯವಾಗಿ ಬೆಂಗಳೂರಿಗೆ ಕರೆದೊಯ್ದು, ಅಲ್ಲೊಂದು ‘ವ್ಯಸನ ಮುಕ್ತಿ ಕೇಂದ್ರ’ಕ್ಕೆ ದಾಖಲಿಸಿದರು. ಅಲ್ಲಿ ತಿಂಗಳಿಗೆ ₹30 ಸಾವಿರ ಶುಲ್ಕ. ಅಡ ಇಟ್ಟಿದ್ದ ಒಡವೆಗಳು ವಾಪಸ್ ಬರಲಿಲ್ಲ. ರಮೇಶನ ಅಮ್ಮ ಮನೆಯನ್ನು ಮಾರಾಟಕ್ಕೆ ಇಟ್ಟರು. ಇದೆಲ್ಲ ಆಗಿ ಸುಮಾರು 3 ತಿಂಗಳಾಗಿದೆ. ಈಗ ರಮೇಶ ಕುಡಿತ ಬಿಟ್ಟಿದ್ದಾನೆ. ಅವನು ವಾಪಸ್ ಊರಿಗೆ ಬಂದರೆ ಮತ್ತೆ ಕುಡಿಯಲು ಶುರು ಮಾಡುತ್ತಾನೆಂದು ಇಡೀ ಕುಟುಂಬ ಊರು ಬಿಟ್ಟು ಹೊರಟುಬಿಟ್ಟಿದೆ.
ಯಾವುದು ಅಸಹಜವಾಗಬೇಕಿತ್ತೋ ಅದನ್ನು ಸಹಜಗೊಳಿಸಿದ್ದಕ್ಕೆ, ಯಾವುದನ್ನು ಹೀಗಳೆಯಬೇಕಿತ್ತೋ ಅದನ್ನು ವಿಜೃಂಭಿಸಿದ ಪರಿಣಾಮ ಇದು. ಸಮಾಜ ಜಾಗೃತವಾಗಿದ್ದರೆ, ಸಿನಿಮಾ–ಧಾರಾವಾಹಿಗಳ ಮಂದಿಗೆ ಸ್ವಲ್ಪವಾದರೂ ತಮ್ಮ ಕಂಟೆಂಟ್ ಬಗ್ಗೆ, ಅದರಲ್ಲಿ ಅಡಗಿರುವ ಮೆಸೇಜುಗಳು ಸಮಾಜದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಎಚ್ಚರವಿದ್ದಿದ್ದರೆ, ತಪ್ಪಿಸಬಹುದಾಗಿದ್ದ ದುರಂತ ಇದು. ನಾವೆಲ್ಲರೂ ‘ನಮ್ಮ ನೆಲದ ಸಿನಿಮಾಗಳು’ ಎಂದು ಸಂಭ್ರಮಿಸುತ್ತಿರುವ ಸಿನಿಮಾಗಳಲ್ಲಿಯೂ ಕುಡಿತದ ವಿಜೃಂಭಣೆ ಇದೆ.
ತೆರೆಯ ಮೇಲೆ ಧೂಮಪಾನ, ಮದ್ಯಪಾನ ಮಾಡುವ ದೃಶ್ಯಗಳಿಂದ ದೂರವಿದ್ದ ರಾಜ್‌ಕುಮಾರ್ ಅವರ ವೃತ್ತಿ ಬದುಕಿನ ಬಗ್ಗೆ ಇನ್ನಾದರೂ ನಮ್ಮ ಸಿನಿಮಾ ಮಂದಿ ತಿರುಗಿ ನೋಡಬೇಕಿದೆ. ‘ಬಂಗಾರದ ಮನುಷ್ಯ’ದಂಥ ಸಿನಿಮಾಗಳು ಮತ್ತೆ ಬರಬೇಕಿದೆ, ಗೆಲ್ಲಬೇಕಿದೆ.
ಧಾರಾವಾಹಿ ಸೇರಿದಂತೆ ಎಲ್ಲ ಬಗೆಯ ಕಂಟೆಂಟ್ ಮತ್ತು ಮೆಸೇಜ್ ವಿಚಾರದಲ್ಲಿ ಈ ಉದ್ಯಮದಲ್ಲಿರುವವರು ಇನ್ನಾದರೂ ಸಮಾಜದ ಮೇಲೆ ಏನು ಪರಿಣಾಮವಾದೀತು ಎನ್ನುವ ಎಚ್ಚರದ ಕಣ್ಣು ಬೆಳೆಸಿಕೊಳ್ಳಬೇಕಾಗಿದೆ. ಹೆಲ್ಮೆಟ್ ಧರಿಸದ ಧಾರಾವಾಹಿ ಹೀರೊಗಳಿಗೆ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ ರಸೀದಿಗಳು ಬಹಿರಂಗವಾಗಬೇಕಿದೆ. ‘ಶಾಸನ ವಿಧಿಸಿದ ಎಚ್ಚರಿಕೆ’ಯ ಸಾಲು ಹಾಕಿದರೆ ಸಾಲದು, ಶಾಸನ ಹೇಳಿದಂತೆಯೂ ಇವರು ನಡೆದುಕೊಳ್ಳಬೇಕು. ಸರ್ಕಾರಗಳು ಅದನ್ನು ಖಾತರಿಪಡಿಸಬೇಕು.
ಇಂಥದ್ದೇ ಇನ್ನೊಂದು ದುರಂತದಲ್ಲಿ ನಮ್ಮೂರಿನ ಓರ್ವ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ. 6 ವರ್ಷದ ಹೆಣ್ಣುಮಗು, ಹೆಂಡತಿ, ಅಪ್ಪ, ಅಮ್ಮ, ಅಣ್ಣ ಎಲ್ಲರೂ ಇದ್ದ ತುಂಬು ಕುಟುಂಬ ಅದು. ಐಪಿಎಲ್ ಬೆಟ್ಟಿಂಗ್ ಚಟಕ್ಕೆ ಬಿದ್ದಿದ್ದ ಹುಡುಗನನ್ನು ಒಮ್ಮೆ ಅವನ ಕುಟುಂಬದವರು ಸಾಲದ ಬಲೆಯಿಂದ ಕಾಪಾಡಿದ್ದರು. ಮತ್ತದೇ ವರ್ತುಲದಲ್ಲಿ ಸಿಲುಕಿಕೊಂಡಾಗ ಬಿಡಿಸಲು ಬೇಕಾಗುವಷ್ಟು ಸಂಪನ್ಮೂಲ ಹೊಂದಿಸಲು ಅವರಿಗೆ ಸಾಧ್ಯವಾಗಲಿಲ್ಲ. ನಳನಳಿಸಬೇಕಿದ್ದ ಕುಟುಂಬವನ್ನು ಬೆಟ್ಟಿಂಗ್ ಭೂತ ನುಂಗಿಹಾಕಿದ ಪರಿಯಿದು. ದೊಡ್ಡಬಳ್ಳಾಪುರದಂಥ ಪಟ್ಟಣದಲ್ಲಿ ಹೆಜ್ಜೆಗೊಂದರಂತೆ ಇಂಥ ಉದಾಹರಣೆಗಳು ಸಿಗುವಾಗ ರಾಜ್ಯ, ದೇಶದಲ್ಲಿ ಅದೆಷ್ಟು ಕುಟುಂಬಗಳು ಈ ಪಿಡುಗುಗಳಿಂದ ಹಿಂಸೆ ಅನುಭವಿಸಿರಬಹುದು.
ಯಾವುದು ಅಸಹಜವೋ, ವ್ಯಸನವೋ ಅದೆಂದಿಗೂ ಸಹಜವಾಗಬಾರದು. ಕುಡಿತ, ಬೆಟ್ಟಿಂಗ್, ಕಾನೂನು ಉಲ್ಲಂಘನೆಯನ್ನು ಮನರಂಜನೆಯ ನೆಪದಲ್ಲಿ ಪ್ರೋತ್ಸಾಹಿಸಬಾರದು ಎನ್ನುವ ಬದ್ಧತೆಯನ್ನು ದೃಶ್ಯ ಮಾಧ್ಯಮಗಳು ಪ್ರಜ್ಞಾಪೂರ್ವಕವಾಗಿ ರೂಢಿಸಿಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.