ADVERTISEMENT

ನುಡಿ ಬೆಳಗು: ಭಯವೆಂಬ ದೆವ್ವವನ್ನು ಮನದಿಂದ ಹೊಡೆದೋಡಿಸಿ

ಪ್ರಜಾವಾಣಿ ವಿಶೇಷ
Published 11 ಆಗಸ್ಟ್ 2024, 22:34 IST
Last Updated 11 ಆಗಸ್ಟ್ 2024, 22:34 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಇದೊಂದು ಮುಲ್ಲಾ ನಸೀರುದ್ದೀನ್‌ನ ಪ್ರಸಿದ್ಧ ಹಾಸ್ಯಕತೆ. ಒಮ್ಮೆ ತೀವ್ರ ದುಃಖಿತನಾಗಿದ್ದ ವ್ಯಕ್ತಿಯೊಬ್ಬ ಮುಲ್ಲಾನ ಬಳಿ ಬಂದ. ಅವನ ಸಮಸ್ಯೆ ತೀರಾ ವಿಚಿತ್ರವಾಗಿತ್ತು. ಅದೇನೆಂದರೆ ಅವನಿಗೆ ತನ್ನ ಮಂಚದ ಕೆಳಗೆ ದೆವ್ವವೊಂದು ಅಡಗಿ ಕುಳಿತಿದೆ ಎನ್ನುವ ಭಯ ಆವರಿಸಿಬಿಟ್ಟಿತ್ತು. ಅದನ್ನು ಕೇಳಿದ ಮುಲ್ಲಾ ‘ನೀನು ಫಕೀರನ ಬಳಿ ಹೋಗು. ಅವನು ತನ್ನ ನವಿಲುಗರಿ ಅಲ್ಲಾಡಿಸಿ ಹಾಗೂ ಧೂಪದ ಹೊಗೆ ಹಾಕಿ ನಿನ್ನ ಮಂಚದ ಕೆಳಗಿರುವ ದೆವ್ವವನ್ನು ಓಡಿಸುತ್ತಾನೆ’ ಎಂದು ಸಲಹೆ ನೀಡಿದ. ಆಗ ವ್ಯಕ್ತಿ ‘ನಾನು ಫಕೀರರ ಬಳಿ ಹೋಗಿದ್ದೆ ಸ್ವಾಮಿ. ಆದರೆ ಅವರು ತುಂಬಾ ದುಬಾರಿ. ಈ ಕೆಲಸಕ್ಕೆ ನೂರು ದಿನಾರು ಸಂಭಾವನೆ ಕೇಳುತ್ತಿದ್ದಾರೆ’ ಎಂದ. ಆಗ ಮುಲ್ಲಾ ‘ನಾನೇನು ನಿನಗೆ ಉಚಿತವಾಗಿ ಸಲಹೆ ನೀಡುವುದಿಲ್ಲ. ಆದರೆ ನೀನು ಬಡವನಂತೆ ಕಾಣುತ್ತೀಯ. ಮೊದಲು ನನಗೆ ಹತ್ತು ದಿನಾರ್ ನೀಡು. ಆಗ ನನ್ನ ಸಲಹೆ ನೀಡುತ್ತೇನೆ’ ಎಂದ. ಆ ವ್ಯಕ್ತಿ ತಕ್ಷಣವೇ ತನ್ನ ಜೇಬಿನಿಂದ ಹತ್ತು ದಿನಾರ್ ತೆಗೆದು ಮುಲ್ಲಾನಿಗೆ ನೀಡಿದ. ಅದನ್ನು ಜೇಬಿಗಿಳಿಸಿದ ಮುಲ್ಲಾ, ಆ ವ್ಯಕ್ತಿಯನ್ನು ಬಳಿಗೆ ಕರೆದು ‘ಒಂದು ಕೆಲಸ ಮಾಡು, ನಿನ್ನ ಮಂಚದ ನಾಲ್ಕೂ ಕಾಲುಗಳನ್ನು ಕತ್ತರಿಸಿ ಬಿಡು. ಆಗ ದೆವ್ವಕ್ಕೆ ಅಡಗಿಕೊಳ್ಳಲು ಜಾಗವೇ ಸಿಗುವುದಿಲ್ಲ. ಆಗ ನೀನದರ ಕಾಟದಿಂದ ಖಂಡಿತ ಪಾರಾಗುತ್ತೀ’ ಎಂದು ಹೇಳಿದ.

ನಗು ತರಿಸುವ ಈ ಹಾಸ್ಯ ಚಟಾಕಿಯಲ್ಲಿ ಒಂದು ಒಳ್ಳೆಯ ಸಂದೇಶವಿದೆ. ಎಲ್ಲರಿಗೂ ಈ ಭಯವೆಂಬ ದೆವ್ವ ಸದಾ ಕಾಟ ಕೊಡುತ್ತದೆ. ಈ ದೆವ್ವಕ್ಕೆ ಮದ್ದೇನೆಂದರೆ ಭಯದ ನಿರ್ಮೂಲನೆ. ನಮ್ಮ ಮನಸ್ಸಿನಲ್ಲಿ ಭಯಕ್ಕೆ ಜಾಗ ನೀಡದಿದ್ದರೆ, ನಮಗೆ ಭಯಪಡುವ ಸನ್ನಿವೇಶವೇ ಎದುರಾಗುವುದಿಲ್ಲ. ಯಾವುದೇ ಕೆಲಸವನ್ನು ಮಾಡುವ ಮೊದಲು ನಮ್ಮಿಂದ ಅದು ಸಾಧ್ಯವಾಗದಿದ್ದರೆ, ಅಥವಾ ನಾವು ಆ ಪ್ರಯತ್ನದಲ್ಲಿ ಸೋತುಬಿಟ್ಟರೆ ಎಂಬಿತ್ಯಾದಿ ಭಯಗಳೇ ನಮ್ಮ ಕೆಲಸಕ್ಕೆ ಅಡ್ಡಗಾಲು ಹಾಕುತ್ತವೆ. ಆಗೋದು ಆಗಲಿ, ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿಯೇ ಬಿಡೋಣ ಎಂದು ಆಲೋಚಿಸಿದಾಗ ಪೂರ್ವಗ್ರಹಪೀಡಿತ ಭಯಗಳು ನಮ್ಮಿಂದ ಸಹಜವಾಗಿ ದೂರಾಗುತ್ತವೆ.

ADVERTISEMENT

ಎಷ್ಟೋ ಸಾರಿ ಮುಲ್ಲಾನ ಬಳಿ ಬಂದ ವ್ಯಕ್ತಿಯನ್ನು ಕಾಡಿದ ಮಂಚದ ಕೆಳಗಿನ ಇಲ್ಲದ ದೆವ್ವಗಳೇ ನಮ್ಮನ್ನು ಕೂಡ ಕಾಡುತ್ತಿರುತ್ತವೆ. ಇಂತಹ ಭಯವೆಂಬ ದೆವ್ವವನ್ನು ಮನದಿಂದ ಮೊದಲು ಹೊಡೆದೋಡಿಸುವುದೇ ಯಶಸ್ಸಿನ ಪ್ರಥಮ ಹೆಜ್ಜೆ.⇒v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.