ಹೌದು, ಶ್ರಮದ ಬದುಕೇ ಸಭ್ಯ ಬದುಕು. ಶರಣರು ‘ಕಾಯಕವೇ ಕೈಲಾಸ’ ಎಂದು ಶ್ರಮ ಸಂಸ್ಕೃತಿಗೆ ಹೆಚ್ಚು ಒತ್ತು ಕೊಟ್ಟಿದ್ದರು. ಹಿಂದೆಲ್ಲಾ ಹಿರೀಕರು ದುಡಿಮೆಯನ್ನೇ ದೇವರೆಂದು ನಂಬಿ ಮೈಮುರಿ ದುಡಿತದಲ್ಲಿ ಸುಖ ಕಾಣುತ್ತಿದ್ದರು. ದೈಹಿಕ ಶ್ರಮವಿರದೆ, ಬೆವರಿನ ಬೆಲೆ ತೆರದೆ ಅನಾಯಾಸವಾಗಿ ಒದಗುವ ಸುಖ-ಸವಲತ್ತುಗಳು ನೈಜ ಸಂತೃಪ್ತಿಯನ್ನು ತರಲಾರವು ಎಂಬ ಸತ್ಯ ತಿಳಿದಿತ್ತು. ಒಂದು ಲೋಟ ನೀರನ್ನು ಎ.ಸಿ. ರೂಮಿನಲ್ಲಿ ಕುಳಿತು ಕುಡಿಯುವವನಿಗೆ ಆಗುವ ಅನುಭವಕ್ಕಿಂತಲೂ ಬಿಸಿಲಲ್ಲಿ ದಣಿದು ಬಾಯಾರಿ ಬರುವ ಶ್ರಮಿಕನೊಬ್ಬ ನೀರು ಕುಡಿಯುವಾಗ ಸಿಗುವ ಅನುಭವವೇ ಭಿನ್ನ!
ಹೊಸ ತಲೆಮಾರು ಹಸಿವು, ನೀರಡಿಕೆಯನ್ನೇ ಮರೆತಂತಿದೆ. ಯಾವ ಕೊರತೆಯೂ ಕಾಡದಂತೆ, ಜಗತ್ತಿನ ಸಕಲ ಸುಖ-ಸವಲತ್ತುಗಳೂ ತಮ್ಮ ಮಕ್ಕಳಿಗೆ ಇರಬೇಕೆಂಬ ಪೋಷಕರ ಹಪಹಪಿಯ ಕಾರಣಕ್ಕೆ ಮಕ್ಕಳು ಹಸಿವನ್ನೂ ಶ್ರಮವನ್ನೂ ಕುತೂಹಲವನ್ನೂ ಇದ್ದುದರಲ್ಲೇ ಸಂಭ್ರಮಿಸುವ ಔದಾರ್ಯವನ್ನೂ ಮರೆತಿರುತ್ತಾರೆ. ಓದು-ಬರಹ, ಕಲಿಕೆ-ಹೊಣೆಗಾರಿಕೆ ಗಳಲ್ಲಿ ವಿಪರೀತ ಔದಾಸೀನ್ಯ ತೋರುತ್ತಿರುವ ಮಕ್ಕಳ ಭವಿಷ್ಯದ ಕುರಿತೂ ಆತಂಕ ಹೆಚ್ಚುತ್ತಿದೆ. ಹೊಟ್ಟೆ ಹಸಿಯುವ ಮುನ್ನ ಮಾಡುವ ಊಟ, ಬಾಯಾರುವ ಮೊದಲೇ ಕುಡಿಯುವ ನೀರು, ದೇಹ, ಮನಸ್ಸು ವಿಶ್ರಾಂತಿ ಬಯಸುವ ಮೊದಲೇ ನಿದ್ದೆಗೆ ಒದಗುವ ಹಾಸಿಗೆ, ಬೇಡುವ ಮೊದಲೇ ಕೈಗೆಟಕುವ ಸವಲತ್ತುಗಳು ನಮಗೆ ವಾಸ್ತವದ ಅನುಭವವನ್ನು ನೀಡಲಾರವು. ಹಸಿವು, ನೋವು, ಅವಮಾನ ಕಲಿಸುವ ಪಾಠವನ್ನು ಜಗತ್ತಿನ ಯಾವ ವಿಶ್ವವಿದ್ಯಾಲಯವೂ ಕಲಿಸಲಾರದು.
ಬದಲಾದ ಕಾಲಘಟ್ಟದಲ್ಲಿ ಮನುಷ್ಯ ಯಂತ್ರಾವ ಲಂಬಿ ಜೀವಿಯಾಗಿದ್ದಾನೆ. ಮನೆಯ ಒಳಹೊರಗೂ ಈಗ ಯಂತ್ರಗಳದ್ದೇ ಪಾರುಪತ್ಯ. ದೈತ್ಯ ಯಂತ್ರಗಳು ದಾಳಿ ಇಟ್ಟ ದಿನದಿಂದಲೇ ಭೂಮಿಯ ಮೇಲಿನ ಅಂಕುಡೊಂಕಿನ ಸೌಂದರ್ಯವಾದ ಗುಡ್ಡಬೆಟ್ಟಗಳು ಮಕಾಡೆ ಮಲಗಿದವು! ಅರಣ್ಯನಾಶಕ್ಕೆ ಹೊಸ ಭಾಷ್ಯ ಬರೆದಂತಾಯಿತು. ಶಸ್ತ್ರಾಸ್ತ್ರ ತಯಾರಿಕೆ, ಸರಬರಾಜು, ಮಾರಾಟ, ಬಳಕೆಯಲ್ಲೂ ಯಂತ್ರೋಪಕರಣಗಳು ಆಧಿಪತ್ಯ ಸ್ಥಾಪಿಸಿಬಿಟ್ಟಿವೆ. ವೋಟು-ಅಧಿಕಾರಕ್ಕಾಗಿ ಸೃಷ್ಟಿಸುವ ಹಿಂಸೆ, ಗಲಭೆಗಳ ಹಾಗೆಯೇ ಬಲಾಢ್ಯ ರಾಷ್ಟ್ರಗಳು ಉತ್ಪಾದಿಸುವ ಶಸ್ತ್ರಾಸ್ತ್ರ, ಯುದ್ಧ ಸಾಮಗ್ರಿಗಳ ಬೃಹತ್ ಮಾರುಕಟ್ಟೆಗಾಗಿ ಅವು ಯುದ್ಧಗಳನ್ನು ಪ್ರಾಯೋಜಿಸುತ್ತಿವೆ!
ಮನುಷ್ಯನ ದೇಹ-ಮನಸ್ಸು ತಮ್ಮ ಆನಂದ ಮತ್ತು ಆರೋಗ್ಯಕ್ಕಾಗಿ ಶ್ರಮದ ದುಡಿಮೆಯನ್ನು ಬೇಡುತ್ತವೆ. ದೇಹಕ್ಕೆ ಆಹಾರ, ವಿಶ್ರಾಂತಿ, ವಿಸರ್ಜನೆ ಯಂತೆ ವ್ಯಾಯಾಮವೂ ಅಗತ್ಯಗಳಲ್ಲಿ ಒಂದು. ಅಗತ್ಯವಿರುವಷ್ಟು ಮಾತ್ರ ತಿನ್ನುವ ಕಳಕಳಿಯಾಗಲಿ, ತಿಳಿವಳಿಕೆಯಾಗಲಿ ನಮಗಿಲ್ಲ. ರಾಶಿಗಟ್ಟಲೆ ತಿನ್ನುವ, ತಿಂದಿದ್ದನ್ನು ಸೂಕ್ತ ಬಗೆಯಲ್ಲಿ ಆರಗಿಸಿಕೊಳ್ಳಲೂ ಮನಸ್ಸು ಮಾಡದ ಹೊಣೆಗೇಡಿ ಮನಃಸ್ಥಿತಿ. ಅನಗತ್ಯ ಕೊಲೆಸ್ಟ್ರಾಲ್, ಸಕ್ಕರೆಯ ಮಟ್ಟ ನಿಯಂತ್ರಿಸಿಕೊಳ್ಳಲು ಮಾತ್ರೆಯ ಮೊರೆ ಹೋಗುವ ನಮಗೆ ದೈಹಿಕ ಶ್ರಮವೆಂದರೆ ಅಪಥ್ಯ. ನಮ್ಮದೇ ಮನೆಯ ಸ್ವಚ್ಛತೆ, ಹಿತ್ತಲ ಗಿಡಗಡ್ಡೆಗಳ ಆರೈಕೆ, ಸುತ್ತಲ ಪರಿಸರದ ಶುಚಿತ್ವದಂತಹ ಸಣ್ಣಪುಟ್ಟ ಕೆಲಸಗಳಲ್ಲಿ ನಿರತರಾದರೆ ದೇಹ–ಮನಸ್ಸು ಉಲ್ಲಸಿತಗೊಳ್ಳುತ್ತವೆ. ಅದಿಲ್ಲದೆ ನಿರುದ್ಯೋಗ ತಾಂಡವವಾಡುತ್ತಿರುವ ಹೊತ್ತಿನಲ್ಲಿ ಇಡೀ ದಿನ ಟಿ.ವಿಗೆ ಆತುಕೂತು, ಇಲ್ಲವೇ ಮೊಬೈಲ್ ಫೋನ್‌ನಲ್ಲಿ ರೀಲ್ಸ್‌ಗೆ ಜೋತುಬಿದ್ದು ಕಾಲಹರಣ ಮಾಡುವುದೇ ದಿನಚರಿಯಾದರೆ ಅಪಾಯ. ಪುಸ್ತಕ ಓದು, ದೈಹಿಕ ಚಟುವಟಿಕೆ, ವೈಜ್ಞಾನಿಕ ದೃಷ್ಟಿಕೋನ ಗಳಿಲ್ಲದೆ ಮನೆ-ಮನಸ್ಸನ್ನು ಹಾಳುಗೆಡವುವ, ಸುಳ್ಳು, ಮೌಢ್ಯ ಹರಡುವ, ದ್ವೇಷವನ್ನು ಬಿತ್ತಿ ಬೆಳೆಯುವ ಸರಕಿಗೆ ನಾವು ಗಿರಾಕಿಗಳಾಗುತ್ತಿದ್ದೇವೆ.
ಈಗೀಗ ಹಳ್ಳಿಗರು, ಕೃಷಿಕರ ಮನಸ್ಸು ಕೂಡ ತಮ್ಮ ಅಗತ್ಯ ಕೆಲಸ ಕಾರ್ಯಗಳನ್ನು ಮರೆತು ಅನಗತ್ಯ ದೇಹಸಾಕಣೆಗೆ ಮುಂದಾಗಿದೆ! ತೋರಿಕೆಗಷ್ಟೇ ಜಿಮ್ಮು, ಯೋಗ, ವಾಕಿಂಗ್, ಜಾಗಿಂಗ್ ಅಂತೆಲ್ಲಾ ಪಟ್ಟಣದ ಶೋಕಿ ನಡೆಯತ್ತ, ಕೃತಕತೆಯತ್ತ ಹೊರಳುತ್ತಿದೆ. ತಮ್ಮ ಶೌಚಾಲಯ, ಪರಿಸರವನ್ನು ಸ್ವತಃ ಶುಚಿಗೊಳಿಸುತ್ತಿದ್ದ ಸ್ವಾವಲಂಬಿ ಬದುಕಿನ ಕಥನವಾಗಿ ಗಾಂಧೀಜಿ ಮಾದರಿಯೊಂದು ಎದುರಿಗಿದ್ದಾಗಲೂ ನಾವು ವಿಲಾಸಿ ಸಂಸ್ಕೃತಿಯ ದಾಸರಾಗುತ್ತಿರುವುದು ದುರ್ದೈವ. ಮೇಲುಕೀಳೆನ್ನದೆ ಪ್ರತಿಯೊಬ್ಬರೂ ದೈಹಿಕವಾಗಿ ಕ್ರಿಯಾಶೀಲ ರಾಗಿರುವುದು ವೈಯಕ್ತಿಕ ಮತ್ತು ಸಾಮಾಜಿಕ ಸ್ವಾಸ್ಥ್ಯಕ್ಕೆ ಹೆಚ್ಚು ಸೂಕ್ತ ಎಂಬುದನ್ನು ಮನಗಾಣಬೇಕು. ಪ್ರತಿಯೊಬ್ಬರೂ ಶ್ರಮ ಸಂಸ್ಕೃತಿಯ ಭಾಗವಾಗಬೇಕು ಮತ್ತು ದೈಹಿಕ ಶ್ರಮಕ್ಕೆ ದೊಡ್ಡ ಗೌರವ ಸಲ್ಲಬೇಕು.
ವೈಯಕ್ತಿಕ ಕೆಲಸಗಳನ್ನು ಸಾಧ್ಯವಿದ್ದಷ್ಟೂ ತಾನೇ ನಿರ್ವಹಿಸುವ ಮನಃಸ್ಥಿತಿ ಬೇಕು. ಕೆಲಸದವರನ್ನು, ಯಂತ್ರಗಳನ್ನು ಅನಗತ್ಯವಾಗಿ ಆಶ್ರಯಿಸುವ, ಆಜ್ಞಾಪಿಸುವ ಪ್ರವೃತ್ತಿಯನ್ನು ಸೋಮಾರಿತನವೆಂದೇ ಭಾವಿಸಬೇಕು. ಪ್ರಸ್ತುತ ಮನುಷ್ಯ ಮನುಷ್ಯನನ್ನೇ ನಂಬಲಾರ, ಯಂತ್ರಗಳಷ್ಟೇ ಸದ್ಯ ವಿಶ್ವಾಸಾರ್ಹ. ಸಿ.ಸಿ. ಟಿ.ವಿ. ಕ್ಯಾಮೆರಾ, ವೆಬ್‌ಕ್ಯಾಮೆರಾ, ಆನ್‌ಲೈನ್ ಹಾಜರಾತಿ ಹಾಗೂ ಬಯೊ ಮೆಟ್ರಿಕ್ ವ್ಯವಸ್ಥೆಗಳನ್ನಷ್ಟೇ ನಂಬುವಂತಹ ದಾರುಣ ಸ್ಥಿತಿ ನಮಗೊದಗಿದೆ. ವಿಕಸಿತ ಪಥದಲ್ಲಿ ನಡೆದಂತೆಲ್ಲಾ ಸತ್ಯ, ನಂಬುಗೆ, ನಿಷ್ಠೆಯನ್ನು ಮರೆತ ಮನುಷ್ಯ ಯಾಂತ್ರಿಕವಾಗುತ್ತಾ ಹೋಗುವಾಗ ಅವನನ್ನು ಕೈಹಿಡಿಯಬೇಕಾದದ್ದು ಸರಳ ಜೀವನ, ಮುಕ್ತ ಮನೋಭಾವ ಮತ್ತು ಶ್ರಮ ಸಂಸ್ಕೃತಿ ಎಂಬ ಸಭ್ಯ ಮಾರ್ಗಗಳು. ಹಾಗಾಗಲಿ, ಬದುಕು ಬೆಳಕಿನತ್ತ, ಬಯಲಿನತ್ತ ಮುಖ ಮಾಡಲಿ ಎಂಬ ಆಶಯ ಹೊಂದೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.