ADVERTISEMENT

ಸಂಗತ | ಭಾಗ್ಯನಗರ! ಎಲ್ಲಿಹುದು ಭಾಗ್ಯ?

ಚಿಕ್ಕಬಳ್ಳಾಪುರದಲ್ಲಿ ನೈಸರ್ಗಿಕ ಸಂಪತ್ತನ್ನು ಸೂರೆಯಾಗಲು ಬಿಟ್ಟು, ಊರೊಂದಕ್ಕೆ ‘ಭಾಗ್ಯನಗರ’ ಎಂದು ಹೆಸರಿಡುವುದು ಬಹು ದೊಡ್ಡ ವಿಪರ್ಯಾಸ.

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 21:40 IST
Last Updated 2 ಜುಲೈ 2025, 21:40 IST
   

ನಂದಿಬೆಟ್ಟದ ಪರಿಸರದಲ್ಲಿನ ಜೀವರಾಶಿ ಹಾಗೂ ಸಸ್ಯವೈವಿಧ್ಯ ಸ್ಥಳೀಯ ಅನನ್ಯತೆ ಹೊಂದಿದ್ದು, ಅಂಥ ಜೀವ ಸಂಪತ್ತನ್ನು ವಿಶ್ವದ ಬೇರೆಲ್ಲೂ ಕಾಣುವುದು ಸಾಧ್ಯವಿಲ್ಲ. ಶ್ರೀಗಂಧ, ರಕ್ತಚಂದನ ಒಳಗೊಂಡ ಅಪರೂಪದ ಹಸುರು ಸಿರಿ ಅಲ್ಲಿ ಹೇರಳವಾಗಿದೆ. ಮಾಕಳಿ ಬೇರು, ವಿಷ್ಣುಕ್ರಾಂತಿ, ಶಿವಕ್ರಾಂತಿ, ಪುರುಷರತ್ನ, ಶತಾವರಿ ಮುಂತಾದ ಔಷಧೀಯ ಸಸ್ಯಗಳೂ ಅಲ್ಲಿವೆ.

ಬೇರೆಲ್ಲೂ ಕಾಣಸಿಗದ ಒಂದು ಅಡಿ ಉದ್ದದ ಎರೆಹುಳುವನ್ನು ನಂದಿಬೆಟ್ಟದ ಪರಿಸರದಲ್ಲಿ ಬೆಂಗಳೂರಿನ ಜಿಕೆವಿಕೆಯ ಕೀಟಶಾಸ್ತ್ರಜ್ಞರಾದ ಡಾ. ರಾಧಾ ಕಾಳೆ ಅವರು ಗುರ್ತಿಸಿದ್ದಾರೆ. ದುರದೃಷ್ಟವಶಾತ್, ನಂದಿಬೆಟ್ಟದ ಪರಿಸರವನ್ನು ಗಾಸಿಗೊಳಿಸುವ ನಗರೀಕರಣದ ಭರಾಟೆ ಪ್ರಸ್ತುತ ಜೋರಾಗಿದೆ. ದಶಕದ ಹಿಂದೆ ಇದ್ದ ಹಸಿರು ಪರಿಸರ ಮಾಯವಾಗಿ, ದೂಳು ತುಂಬಿದ ವಾತಾವರಣ ರೂಪುಗೊಳ್ಳುತ್ತಿದೆ. ಹಿಂದಿದ್ದ ತಂಪು ಹವೆಯಲ್ಲಿ ವ್ಯತ್ಯಾಸ ಉಂಟಾಗಿದೆ.

‘ಘಟಂ’ ಅಥವಾ ‘ಘಟ’ ದಕ್ಷಿಣ ಭಾರತದ ಪ್ರಾಚೀನ ಲಯವಾದ್ಯ. ಮಣ್ಣಿನ ಮಡಕೆಯ ಈ ವಾದ್ಯ ತಯಾರಿಸಲು ಇಲ್ಲಿನ ಮಣ್ಣನ್ನು ಬಳಸಲಾಗುತ್ತಿತ್ತು. ಬೇರೆಡೆಯ ಮಣ್ಣಿನಲ್ಲಿ ಘಟ ವಾದ್ಯ ತಯಾರಿಸಿದರೆ ಅದರಲ್ಲಿ ವಿಶಿಷ್ಟ ನಾದ ಹೊಮ್ಮಿಸಲು ಸಾಧ್ಯವಾಗುವುದಿಲ್ಲ ಎಂಬುದು ಸಂಗೀತಗಾರರ ಅಭಿಪ್ರಾಯ. ಇಂದು, ಆ ನಾದಮಯ ಮಣ್ಣೂ ಕಲುಷಿತಗೊಂಡಿದೆ.

ADVERTISEMENT

ದೇವನಹಳ್ಳಿಯ ಚಕ್ಕೋತಕ್ಕೆ ಬಹಳ ಹಿಂದೆಯೇ ಭೌಗೋಳಿಕ ಸೂಚ್ಯಂಕ ಪಟ್ಟ (ಜಿಐ ಟ್ಯಾಗ್‌) ದೊರೆತಿದೆ. ಪ್ರಸ್ತುತ ಈ ಪರಿಸರದಲ್ಲಿ ಯಾರೂ ಚಕ್ಕೋತ ಬೆಳೆಯುತ್ತಿಲ್ಲ. ಕೃಷಿ ಭೂಮಿಯೇ ನಾಶವಾಗಿರುವಾಗ ಚಕ್ಕೋತ ಬೆಳೆಯುವುದಾದರೂ ಎಲ್ಲಿ? ಕೇರಳದಿಂದ ಬರುವ ಚಕ್ಕೋತವನ್ನು ‘ದೇವನಹಳ್ಳಿಯ ಚಕ್ಕೋತ’ ಎಂದು ಬಿಂಬಿಸಿ ಮಾರಾಟ ಮಾಡಲಾಗುತ್ತಿದೆ.

ನಂದಿಬೆಟ್ಟ ಪರಿಸರದ ಶಿಲಾನಿರ್ಮಿತಿಗಳಿಗೆ ‘ಧರ‍್ವಾಡ್ ಕ್ರೇಟನ್’ ಎಂಬ ಹೆಸರಿದೆ. ಇವು ರೂಪುಗೊಂಡು ಮೂರೂವರೆ ಬಿಲಿಯನ್ ವರ್ಷಗಳಾಗಿವೆ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯ. ಬೇರೆಲ್ಲೂ ಕಾಣಸಿಗದ ಇಲ್ಲಿನ ಅಪರೂಪದ ಶಿಲೆ ಇಂದು ನಾನಾ ಕಾರಣಗಳಿಗೆ ಮಾಯವಾಗುತ್ತಿದೆ. ಮರಳಿಗೆ ಪರ್ಯಾಯವಾಗಿ
ಬಳಕೆಯಲ್ಲಿರುವ ಎಂ–ಸ್ಯಾಂಡ್ ತಯಾರಿಸುವುದಕ್ಕೆ ಕಲ್ಲುಗಳನ್ನು ಸ್ಫೋಟಕ ಬಳಸಿ ಸಿಡಿಸಲಾಗುತ್ತಿದೆ. 

ಕಳೆದ ಮೂರ್ನಾಲ್ಕು ದಶಕಗಳಲ್ಲಿ ಘಟಿಸಿದ ವಿದ್ಯಮಾನಗಳು ನಂದಿಯ ಪರಿಸರವನ್ನು ತೀವ್ರವಾಗಿ ಗಾಸಿಗೊಳಿಸಿವೆ. ನಂದಿಬೆಟ್ಟದ ಪರಿಸರದಲ್ಲಿ ಹುಟ್ಟಿ ಹರಿಯುತ್ತಿದ್ದ ಅರ್ಕಾವತಿ, ಕುಮುದ್ವತಿ, ಪಾಪಾಗ್ನಿ, ಪಾಲಾರ್, ಪೆನ್ನಾರ್ ನದಿಗಳು ಸುತ್ತಲ ಪರಿಸರಕ್ಕೆ ನೀರೊದಗಿಸುತ್ತಿದ್ದವು. ಆ ಜಲಮೂಲಗಳೀಗ ಬತ್ತಿಹೋಗಿವೆ.

ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಮಹಾತ್ಮ ಗಾಂಧಿಯವರು ಅನಾರೋಗ್ಯದಿಂದ ಬಳಲುತ್ತಿದ್ದಾಗ, ನಂದಿ ಗಿರಿಧಾಮಕ್ಕೆ ಬಂದು ಆರೋಗ್ಯವನ್ನು ಸುಧಾರಿಸಿಕೊಂಡು ಹೋದ ಉದಾಹರಣೆಯೂ ಇದೆ. ಆದರೆ, ನಂದಿಬೆಟ್ಟದ ಆರೋಗ್ಯವೇ ಈಗ ಹದಗೆಟ್ಟಿದೆ. ಚಿಕ್ಕಬಳ್ಳಾಪುರದ ಭೂಭಾಗ ರಾಜಕಾರಣಿಗಳು, ಭೂಗಳ್ಳರ ಮಾಫಿಯಾದಲ್ಲಿ ನಲುಗಿಹೋಗಿದೆ. ಸ್ಫೋಟಕಗಳ ಸದ್ದು ದಿನನಿತ್ಯ ಕೇಳಿಬರುತ್ತಿದೆ. ಇಲ್ಲಿ ಕಾಮಗಾರಿ ನಡೆಸುತ್ತಿರುವ ಬಹುತೇಕರು ಅರಣ್ಯ ಇಲಾಖೆಯ ನಿಯಮಗಳನ್ನು ಅನುಸರಿಸುತ್ತಿಲ್ಲ.  

ನಂದಿಬೆಟ್ಟಕ್ಕೆ ರೋಪ್ ವೇ ನಿರ್ಮಾಣದಿಂದ ಪರಿಸರಕ್ಕೆ ಆಗುವ ಹಾನಿ ಏನು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಉದ್ದೇಶಿತ ಯೋಜನೆಯಡಿ ಬೆಟ್ಟದ ತಳಭಾಗದಲ್ಲಿ ನಿರ್ಮಾಣ ಮಾಡಲಾಗುವ ಟವರ್‌ನ ಗಾತ್ರ ಮತ್ತು ಸ್ವರೂಪವನ್ನು ಗಮನಿಸಿದರೆ ಅದರಿಂದ ಪರಿಸರಕ್ಕೆ ಯಾವ ಪ್ರಮಾಣದಲ್ಲಿ ಧಕ್ಕೆ ಉಂಟಾಗುತ್ತದೆ ಎಂದು ಕಲ್ಪಿಸಿಕೊಳ್ಳುವುದೇ ಗಾಬರಿ ಹುಟ್ಟಿಸುತ್ತದೆ. ಬರೀ ಪ್ರವಾಸೋದ್ಯಮವನ್ನಷ್ಟೇ ಗಮನದಲ್ಲಿಟ್ಟುಕೊಂಡು ಪರಿಸರವನ್ನು ಅವಗಣನೆ ಮಾಡಿದಾಗ ಆಗುವ ಅನಾಹುತಗಳಿಗೆ ಬೆಲೆ ಕಟ್ಟಲಾಗದು.

ನಂದಿಬೆಟ್ಟದ ಪರಿಸರವು ರಕ್ಷಿತಾರಣ್ಯ, ರಾಷ್ಟ್ರೀಯ ಉದ್ಯಾನ, ವನ್ಯಜೀವಿಧಾಮ, ಆನೆ ಕಾರಿಡಾರ್ ಹೀಗೆ ನಾನಾ ಬಗೆಯ ಅರಣ್ಯ ಭೂಮಿಗಳ ವರ್ಗೀಕರಣಕ್ಕೆ ಸೇರತಕ್ಕಂತಹ ಪ್ರದೇಶವಾಗಿದೆ. 1911ರಲ್ಲೇ ಈ ಪ್ರದೇಶವನ್ನು ಬ್ರಿಟಿಷ್ ಸರ್ಕಾರ ‘ಜೈವಿಕ ಪರ್ವತಧಾಮ’ ಎಂದು ಘೋಷಿಸಿತ್ತು. ‘ನ್ಯಾಷನಲ್ ಲಾ ಸ್ಕೂಲ್ ಯೂನಿವರ್ಸಿಟಿ’ಯ ಪ್ರೊ. ಎಂ.ಕೆ. ರಮೇಶ್ ಮತ್ತವರ ಪಿಎಚ್.ಡಿ. ವಿದ್ಯಾರ್ಥಿಗಳ ತಂಡ, ನಂದಿಬೆಟ್ಟವನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಪುರಾತತ್ವ ಇಲಾಖೆಯನ್ನು ಒತ್ತಾಯಿಸಿದೆ. ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರುವ ಮೂಲಕವಾದರೂ ನಂದಿಬೆಟ್ಟದ ಪರಿಸರದಲ್ಲಿ ನಡೆಯುತ್ತಿರುವ ವಿನಾಶಕಾರಿ ಕಾಮಗಾರಿಗಳನ್ನು ತಡೆಯಬಹುದೇನೋ?

ನಂದಿಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಹೆಸರನ್ನು ‘ಭಾಗ್ಯನಗರ’ ಎಂದು ಬದಲಾಯಿಸುವ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿದೆ. ನಂದಿಬೆಟ್ಟವೂ ಸೇರಿದಂತೆ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ನೈಸರ್ಗಿಕ ಸಂಪತ್ತನ್ನು ಸೂರೆಯಾಗಲು ಬಿಟ್ಟು, ಊರೊಂದಕ್ಕೆ ‘ಭಾಗ್ಯನಗರ’ ಎಂದು ಹೆಸರಿಡುವುದು ಬಹು ದೊಡ್ಡ ವಿಪರ್ಯಾಸ. ಇಲ್ಲಿ ಯಾವ ಭಾಗ್ಯವೂ ಇಲ್ಲ, ಇರುವುದು ಹತಭಾಗ್ಯರಷ್ಟೇ. ಭಾಗ್ಯನಗರ ಎಂಬ ಹೆಸರಿಡುವುದು ಪರಿಸ್ಥಿತಿಯ ಕ್ರೂರ ಅಣಕದಂತೆ ಕಾಣಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.