ADVERTISEMENT

ಚರ್ಚೆ: ಮತ್ತು, ಗಮ್ಮತ್ತು ಮತ್ತು ಸಿನಿಮಾ

ಪ್ರಜಾವಾಣಿ ವಿಶೇಷ
Published 4 ಸೆಪ್ಟೆಂಬರ್ 2020, 20:00 IST
Last Updated 4 ಸೆಪ್ಟೆಂಬರ್ 2020, 20:00 IST
   

ಚರ್ಚೆ ಕೆಲ ದಿನಗಳ ಮಟ್ಟಿಗೆ ಕಾವು ಉಳಿಸಿಕೊಳ್ಳುತ್ತದೆ, ಕ್ರಮೇಣ ತಣ್ಣಗಾಗುತ್ತದೆ. ತಿಪ್ಪೆ ಸಾರಿಸುವ ಕೆಲಸ ನಡೆಯುತ್ತದೆ

ಘಮಘಮ ಪರಿಮಳ ಸೂಸುವ ಶ್ರೀಗಂಧದ ಹೆಸರಿನಲ್ಲಿ ಮನರಂಜನೆಯ ಮಾರುಕಟ್ಟೆಯಲ್ಲಿ ವಿಜೃಂಭಿಸುತ್ತಿರುವ ಕನ್ನಡ ಚಿತ್ರರಂಗದ ಕೆಲವರ ಹೆಸರು ಇದೀಗ ಮಾದಕ ದ್ರವ್ಯದ ಜೊತೆ ತಳಕು ಹಾಕಿಕೊಂಡಿದೆ. ಆದರೆ, ಇದರಲ್ಲಿ ಅಚ್ಚರಿಪಡುವಂತಹುದು ಏನೂ ಇಲ್ಲ. ಕೆಲವು ನಟ– ನಟಿಯರು ಈಗ ಪ್ರೇಕ್ಷಕರ ದೃಷ್ಟಿಯಲ್ಲಿ ಸಣ್ಣವರಾಗಿ ಕಾಣುತ್ತಿರಬಹುದು ಅಷ್ಟೆ.

ಇಂದ್ರಜಿತ್ ಲಂಕೇಶ್ ಅವರ ಸ್ಫೋಟಕ ಮಾಹಿತಿಯಿಂದ ಯಾವುದೇ ‘ಸ್ಫೋಟ’ ಸಂಭವಿಸದಿದ್ದರೂ ಸುದ್ದಿಮನೆಗಳ ಸ್ಟುಡಿಯೊಗಳಲ್ಲಿ ಸದ್ದು ಜೋರಾಗಿಯೇ ಕೇಳಿಸುತ್ತಿದೆ. ಆದರೆ ಡಿಜಿಟಲ್ ಯುಗದ ಈಗಿನ ವ್ಯವಸ್ಥೆಯಲ್ಲಿ ಇದಾವುದೂ ಅಚ್ಚರಿ ಮೂಡಿಸುವ ವಿಚಾರವಲ್ಲ.

ADVERTISEMENT

ಮಾದಕ ದ್ರವ್ಯದ ದಂಧೆ ಇತ್ತೀಚೆಗಷ್ಟೇ ತಲೆದೋರಿದೆ ಎಂದು ಭಾವಿಸುವುದು ಮೂರ್ಖತನವಾಗುತ್ತದೆ. ಕುಗ್ರಾಮಗಳಲ್ಲೂ ಮಹಾನಗರದ ಪ್ರತಿಷ್ಠಿತ ಮಾಲ್‌ಗಳಲ್ಲೂ ಪಟ್ಟಣಗಳ ಸಣ್ಣಪುಟ್ಟ ಪೆಟ್ಟಿಗೆ ಅಂಗಡಿಗಳಲ್ಲೂ ಮೂಗಿನ ಮೂಲಕ ಏರಿಸುವ, ಬಾಯಿಯ ಮೂಲಕ ಸೇವಿಸುವ, ಪಾನೀಯದ ಮೂಲಕ ಬಳಸುವ ಮಾದಕ ದ್ರವ್ಯ ಲಭ್ಯವಿರುವುದು ಜನರಿಗೂ ತಿಳಿದಿದೆ, ಪೊಲೀಸ್ ಇಲಾಖೆಗೂ ತಿಳಿದಿದೆ. ಕೆಲವು ಪಬ್, ಬಾರ್, ರೆಸ್ಟೊರೆಂಟ್‌ಗಳಲ್ಲಿ ಡ್ರಗ್ಸ್ ಸರಬರಾಜು ಆಗುತ್ತಿಲ್ಲ ಎಂಬ ಖಾತರಿ ಆಡಳಿತ ವ್ಯವಸ್ಥೆಗೆ ಇದೆಯೇ? ಆದರೆ ಇದರ ವಿರುದ್ಧ ಕ್ರಮ ಜರುಗಿಸುವ ಸ್ಥೈರ್ಯ ಅದಕ್ಕೆ ಇಲ್ಲ ಎನ್ನುವುದೂ ಸ್ಪಷ್ಟ. ಏಕೆಂದರೆ, ಇಲ್ಲಿ ಹಣದ ಹರಿವು ಮುಖ್ಯ ಪಾತ್ರ ವಹಿಸುತ್ತದೆ.

ಹಣ ಯಾವ ಮೂಲದಿಂದ ಹರಿದುಬಂದರೂ ಅಭ್ಯಂತರ ಇಲ್ಲ, ಮೌಲ್ಯ ಎಂಬುದು ಈ ಉದ್ಯಮದಲ್ಲಿನ ಹೂಡಿಕೆಗೆ ಅನ್ವಯಿಸುವುದಿಲ್ಲ ಎನ್ನುವುದು ಸಿನಿಮಾ ಜಗತ್ತಿನ ನಿಯಮ. ಹಿಂದಿ ಚಿತ್ರರಂಗದ ಜೊತೆ ಮಾಫಿಯಾ ಮತ್ತು ಭೂಗತ ದೊರೆಗಳು ಹೊಂದಿದ್ದಾರೆ ಎನ್ನಲಾದ ನಂಟು ಇದನ್ನು ನಿರೂಪಿಸಿದೆ. ನಮ್ಮ ಕನ್ನಡ ಚಿತ್ರರಂಗ ಸಹ ಇದಕ್ಕೆ ಪೂರ್ತಿ ಅಪವಾದವಾಗಿರಲು ಸಾಧ್ಯವಿಲ್ಲ. ಪರದೆಯ ಮೇಲೆ ಮೌಲ್ಯ ಮತ್ತು ನೀತಿಯನ್ನು ಬೋಧಿಸುವ ನಾಯಕನಟರು ನಿಜಜೀವನದಲ್ಲಿಯೂ ಅವುಗಳಲ್ಲಿ ಕೆಲವಾದರೂ ಆದರ್ಶಗಳನ್ನು
ಪಾಲಿಸುವಂತವರಾಗಿರಬೇಕು ಎಂಬ ಕಲ್ಪನೆಗೆ ಮಾರುಕಟ್ಟೆಯ ಜಗುಲಿಯಲ್ಲಿ ಈಗ ಜಾಗವೇ ಇಲ್ಲ.

ನಾಯಕ ಐದೂ ಬೆರಳುಗಳನ್ನು ಅಗಲಿಸಿ, ಒಮ್ಮೆ ಮುಷ್ಟಿ ಬಿಗಿದರೆ ಖಳನಾಯಕನ ಸೇನಾನಿಗಳು ಗಗನ ಚುಂಬಿಸುವವರಂತೆ ಹಾರಿ ಮೈಲುಗಟ್ಟಲೆ ದೂರ ಧೊಪ್ಪನೆ ಬೀಳುವ ದೃಶ್ಯವನ್ನು ಕಲ್ಪಿಸಿಕೊಂಡಾಗ, ಇದೊಂದು ರೂಪಕದಂತೆ ಕಾಣುತ್ತದೆ. ಬಂಡವಾಳದ ಮಾರುಕಟ್ಟೆಯನ್ನು ಈ ಮುಷ್ಟಿಯ ರೂಪದಲ್ಲಿ ಕಾಣಬಹುದು. ಪ್ರತಿಭೆಯನ್ನಷ್ಟೇ ನೆಚ್ಚಿಕೊಂಡು ಬಂದವರನ್ನು, ‘ಗಿಲೀಟು’ ಗೊತ್ತಿಲ್ಲದೆ ಅವಕಾಶಕ್ಕಾಗಿ ಎದುರು ನೋಡುವವರನ್ನು ನೆಲಕ್ಕುದುರುವ ಸೇನಾನಿಗಳ ರೂಪದಲ್ಲಿ ಕಾಣಬಹುದು. ನಷ್ಟ ಕಟ್ಟಿಟ್ಟಬುತ್ತಿ ಎಂಬುದು ಗೊತ್ತಿದ್ದರೂ ಬಂಡವಾಳ ಹೂಡುವ ಈ ಆಟದಲ್ಲಿ ಬೇರೆ ಬೇರೆ ವಲಯದ ಮಾಫಿಯಾ ಕೈವಾಡ ಇರುವುದನ್ನು ಕಾಣಲಾಗದಿದ್ದರೆ ಅದು ನಮ್ಮ ದೃಷ್ಟಿದೋಷವಷ್ಟೇ. ಮನರಂಜನೆಯು ಮಾರುಕಟ್ಟೆಯ ಸರಕಿನಂತೆ ಬಿಕರಿಯಾದಾಗ, ಮಾರುಕಟ್ಟೆಯ ಎಲ್ಲ ಕೊಳಚೆಯನ್ನೂ ಸಹಿಸಿಕೊಂಡೇ ಮುನ್ನಡೆಯಬೇಕಾಗುತ್ತದೆ.

ನಾ.ದಿವಾಕರ, ಮೈಸೂರು

ಕಾಣದ ಕೈಗಳ ಆಟ

ಮಾದಕವಸ್ತು ಬಳಕೆಗೆ ಸಂಬಂಧಿಸಿದಂತೆ ಇಂದ್ರಜಿತ್ ಈಗ ಎತ್ತಿರುವ ಪ್ರಶ್ನೆಯಲ್ಲಿ ಹೊಸ ಅಂಶ ಏನೂ ಇಲ್ಲ. ಅದರ ಬಳಕೆ ಹಿಂದೆಯೂ ಇದ್ದಿರಬಹುದು. ಈಗಲೂ ಇದೆ, ಮುಂದೆಯೂ ಇರುತ್ತದೆ. ಪರ, ವಿರೋಧದ ಚರ್ಚೆಯಲ್ಲಿ ಕೆಲವರ ಹೆಸರಿಗೆ ಮಸಿ ಅಂಟಬಹುದು. ಈ ಚರ್ಚೆ ಕೂಡ ಕೆಲವು ದಿನಗಳ ಮಟ್ಟಿಗೆ ಕಾವು ಉಳಿಸಿಕೊಳ್ಳುತ್ತದೆ. ಕ್ರಮೇಣ ತಣ್ಣಗಾಗುತ್ತದೆ. ಪ್ರಭಾವಿಗಳು ಮತ್ತು ಸಿನಿಮಾದವರು ಪರಸ್ಪರ ಕೈಜೋಡಿಸುತ್ತಾರೆ. ತಿಪ್ಪೆ ಸಾರಿಸುವ ಕೆಲಸ ನಡೆಯುತ್ತದೆ.

ಚಟ ಅಂಟಿಸಿಕೊಳ್ಳಲು ಬಡವ–ಬಲ್ಲಿದ ಎಂಬ ಭೇದ ಇಲ್ಲ. ಆದರೆ, ಹೆಚ್ಚಿಗೆ ಹಣ ಹೊಂದಿರುವವರು ಇದರ ಸೆಳೆತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಇದು, ಸಿನಿಮಾ ರಂಗದಲ್ಲಿ ಮಾತ್ರ ಇದೆ ಎಂಬಂತಹ ಆರೋಪ ಸರಿಯಲ್ಲ. ಜನರಿಗೆ ಬೇಕಾಗಿರುವುದು ಸಿನಿಮಾ. ಇಷ್ಟವಾದರೆ ನೋಡುತ್ತಾರೆ ಇಲ್ಲವಾದರೆ ಬಿಡುತ್ತಾರೆ. ನಟ–ನಟಿಯರ ವೈಯಕ್ತಿಕ ಸಂಗತಿಗಳನ್ನು ತುಲನೆ ಮಾಡಿ ಈಗ ಯಾರೂ ಸಿನಿಮಾ ನೋಡಲು ಹೋಗುವುದಿಲ್ಲ. ಕನ್ನಡ ಚಿತ್ರನಟರ ಅನೇಕ ಖಾಸಗಿ ಸಂಗತಿಗಳ ಕುರಿತು ಮಾಧ್ಯಮದಲ್ಲಿ ಚರ್ಚೆಯಾದರೂ ಅಂತಹವರು ನಟಿಸಿದ ಸಿನಿಮಾಗಳಿಗೇನೂ ಪ್ರೇಕ್ಷಕರ ಕೊರತೆ ಎದುರಾಗಿಲ್ಲ.

ಮಾದಕವಸ್ತುಗಳಿಗೆ ಸಂಬಂಧಿಸಿದ ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆದು, ಯಾರಿಗಾದರೂ ಶಿಕ್ಷೆ ಆಗುತ್ತದೆ ಎಂಬ ಭರವಸೆ ಯಾರಿಗೂ ಇಲ್ಲ. ಇದೂ ಒಂದು ವಿವಾದ. ಇದರ ಹಿಂದೆಯೂ ಕಾಣದ ಕೈಗಳು ಕೆಲಸ ಮಾಡಿರಬಹುದು. ಆ ಕೈಗಳು ಆಡಿಸುವ ಆಟ ನಿಂತ ಮೇಲೆ ಎಲ್ಲವೂ ತಣ್ಣಗಾಗುತ್ತವೆ. ಪ್ರಭಾವ ಮತ್ತು ಹಣದ ಬಲದಿಂದ ಸೆಲೆಬ್ರಿಟಿಗಳು ಸೆಲಿಬ್ರಿಟಿಗಳಾಗಿಯೇ ಉಳಿಯುತ್ತಾರೆ. ಜನ ಒಂದಿಷ್ಟು ಪುಕ್ಕಟೆ ಮನರಂಜನೆ ತೆಗೆದುಕೊಂಡು ಸುಮ್ಮನಾಗುತ್ತಾರೆ. ಯಾವುದಾದರೂ ಇನ್ನೊಂದು ವಿಷಯ ಚರ್ಚೆಯ ಮುನ್ನೆಲೆಗೆ ಬಂದ ಕೂಡಲೇ ಇದನ್ನು ಮರೆತುಬಿಡುತ್ತಾರೆ.

ಸಿದ್ದು ಯಾಪಲಪರವಿ, ಕಾರಟಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.