ADVERTISEMENT

ಸಂಗತ: ಪೂರ್ವಗ್ರಹವೆಂಬ ಮುಳ್ಳುತಂತಿ ಚುಚ್ಚೀತು

ನಮಗೇ ಅರಿವಾಗದಂತೆ ನಮ್ಮ ವ್ಯಕ್ತಿತ್ವವನ್ನು ಬದಲಾಯಿಸಿಬಿಡುವ ಪೂರ್ವಗ್ರಹಗಳನ್ನು ಮೀರುವುದೇ ಈಗ ನಮ್ಮ ಮುಂದಿರುವ ದೊಡ್ಡ ಸವಾಲು

ದೀಪಾ ಹಿರೇಗುತ್ತಿ
Published 3 ಏಪ್ರಿಲ್ 2022, 19:30 IST
Last Updated 3 ಏಪ್ರಿಲ್ 2022, 19:30 IST
   

ಪೂರ್ವಗ್ರಹಗಳು ಬಹಳಷ್ಟು ಸಲ ನಮ್ಮ ಭಾವನೆಗಳನ್ನು, ಚಿಂತನೆಗಳನ್ನು, ವರ್ತನೆಗಳನ್ನು ಮಾತ್ರವಲ್ಲದೆ ನಮ್ಮ ಬದುಕನ್ನು ಕೂಡ ನಿರ್ದೇಶಿಸುತ್ತವೆ. ಅಷ್ಟೇ ಅಲ್ಲ, ದೇಶವೊಂದು ಊಹಿಸಲಾಗದಂತಹ ಸಂಕಷ್ಟದ ಪಾತಾಳದತ್ತ ಜಾರಲು ಈ ಅಡಿಪಾಯ
ಇಲ್ಲದ ಕಲ್ಪನೆಗಳು ಕಾರಣವಾಗಬಲ್ಲವು.

ತತ್ವಜ್ಞಾನಿ ವಿಲಿಯಂ ಹ್ಯಾಝ್ಲಿಟ್ ಹೇಳಿದ ಹಾಗೆ, ಅಜ್ಞಾನದ ಕೂಸು ಈ ಪೂರ್ವಗ್ರಹ. ಮಾನವ ಜಗತ್ತಿನಲ್ಲಿ ಹಿಂದಿನಿಂದಲೂ ನಡೆದ ಅನಾಹುತಗಳಿಗೆ, ರಕ್ತಪಾತಗಳಿಗೆ ಕಾರಣವಾದ ಮುಖ್ಯ ಅಂಶಗಳಲ್ಲಿ ಈ ಪೂರ್ವಗ್ರಹವೂ ಒಂದು. ತಾವೇ ಶ್ರೇಷ್ಠ, ತಮ್ಮ ನಂಬಿಕೆಗಳೇ ಅತ್ಯುತ್ತಮ ಎಂಬ ಮೂರ್ಖತನವು ಪೂರ್ವಗ್ರಹ ಜಗತ್ತಿನಲ್ಲಿ ಮಾಡಿರುವ ಅನಾಹುತಗಳಿಗೆ ಲೆಕ್ಕವಿದೆಯೇ? ಜರ್ಮನಿಯ ಬೀಭತ್ಸ ಹೊಲೋಕಾಸ್ಟ್ (holocaust) ಇರಬಹುದು, ಮನುಷ್ಯನನ್ನೇ ಮನುಷ್ಯನೆಂದು ಗುರುತಿಸಲು ಹಿಂಜರಿಯುತ್ತಿರುವ ಭಾರತದ ಜಾತಿವ್ಯವಸ್ಥೆ ಇರಬಹುದು, ಜಗತ್ತಿನ ಹಲವೆಡೆ ಜನಾಂಗೀಯ ಕಲಹಗಳು ಹರಿಸಿದ ರಕ್ತ ಇರಬಹುದು. ಗಂಡು ಶ್ರೇಷ್ಠ, ಹೆಣ್ಣು ಕನಿಷ್ಠ ಎಂಬ ಪೂರ್ವಗ್ರಹದ ಕಹಿ ಪರಿಣಾಮವನ್ನು ಇಂದಿಗೂ ಜಗತ್ತಿನಾದ್ಯಂತ ಹೆಣ್ಣುಮಕ್ಕಳು ಅನುಭವಿಸುತ್ತಿದ್ದಾರೆ!

ಈಗ ನಾವೇ ನೋಡುತ್ತಿರುವ ಹಾಗೆ ಉಡುಗೆ ತೊಡುಗೆ, ಆಹಾರ, ಆಚಾರ ವಿಚಾರಗಳನ್ನಿಟ್ಟುಕೊಂಡು ಧರ್ಮಗಳ ನಡುವೆ ಯಾರಾದರೂ ಸಣ್ಣ ಬಿರುಕನ್ನುಂಟು ಮಾಡಿದರೂ ಸಾಕು, ಅದು ಕಂದಕವಾಗಿಬಿಡಲು ಮುಖ್ಯ ಕಾರಣ ಜನರ ಮನಸ್ಸಿನಲ್ಲಿರುವ ಈ ಪೂರ್ವಗ್ರಹ!

ADVERTISEMENT

ಜನಾಂಗ, ಸಂಸ್ಕೃತಿ, ಧರ್ಮ ಮಾತ್ರವಲ್ಲ, ಪೂರ್ವಗ್ರಹದ ಬೇರುಗಳು ನಾವು ತಿಳಿದುಕೊಂಡಿದ್ದಕ್ಕಿಂತಲೂ ಬಹಳ ಆಳವಾಗಿವೆ! ವಾಸ್ತವದ ಅಗತ್ಯವೇ ಇಲ್ಲದೆ ಕ್ಷಣಾರ್ಧದಲ್ಲಿ ಅಭಿಪ್ರಾಯಗಳನ್ನು ರೂಪಿಸುವ ತಾಕತ್ತು ಪೂರ್ವಗ್ರಹಕ್ಕಲ್ಲದೇ ಬೇರೆ ಯಾವುದಕ್ಕಿದೆ? ಸಾಕ್ಷಿಯಿಲ್ಲದೇ ತೀರ್ಪು ನೀಡುವ ನ್ಯಾಯಾಧೀಶನ ಇನ್ನೊಂದು ಹೆಸರೇ ಪೂರ್ವಗ್ರಹ. ಮುಂಗುಸಿಯ ಬಾಯಲ್ಲಿ ರಕ್ತದ ಕಲೆಯನ್ನು ನೋಡಿ, ಇದೇ ತನ್ನ ಮಗುವನ್ನು ಕೊಂದಿದೆ ಎಂದು ಅದನ್ನು ಸಾಯಿಸಿದ ಗಂಗಮ್ಮನ ಪಾಡು ನಮ್ಮದು.

ವಸಾಹತುಶಾಹಿಯ ಉದ್ದೇಶವನ್ನೇ ಮರೆ ಮಾಚುವ ‘ವೈಟ್ ಮ್ಯಾನ್ಸ್ ಬರ್ಡನ್’ ಸಿದ್ಧಾಂತ ಹುಟ್ಟಿಕೊಂಡಿದ್ದು ಇದೇ ಪೂರ್ವಗ್ರಹದಿಂದ. ತಾನಾಳುವ ದೇಶಗಳ ರಕ್ತ ಹೀರಿದರೂ ತಾನು ಆ ದೇಶಗಳಿಗೆ ಉಪಕಾರ ಮಾಡುತ್ತಿದ್ದೇನೆಂಬ ಪೂರ್ವಗ್ರಹ
ವನ್ನು ಲಂಡನ್ ಹೊಂದಿತ್ತು! ಗುಲಾಮಗಿರಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದ ದಕ್ಷಿಣ ಅಮೆರಿಕದ ಜನರು ತನ್ಮೂಲಕ ತಾವು ಗುಲಾಮರಿಗೆ ಅನ್ನ ಹಾಕಿ ಬಹುದೊಡ್ಡ ಉಪಕಾರ ಮಾಡುತ್ತಿದ್ದೇವೆ ಎಂದೇ ನಂಬಿದ್ದರು. ವಾಸ್ತವದಲ್ಲಿ ಈ ಶ್ರೀಮಂತ ಪ್ಲಾಂಟರುಗಳ ಐಷಾರಾಮಿ ಬದುಕಿನ ಹಿಂದೆ ಗುಲಾಮರು ಹರಿಸಿದ ಬೆವರು, ರಕ್ತವಿತ್ತು. ಹಿಂದೆಲ್ಲ ಭಾರತದಲ್ಲೂ ದೊಡ್ಡದೊಡ್ಡ ಭೂಮಾಲೀಕರು ತಾವು ಹೊಟ್ಟೆಬಟ್ಟೆಗೆ ಕೊಟ್ಟು ಕಾಪಾಡುತ್ತಿದ್ದೇವೆ ಎಂದು ಮಕ್ಕಳನ್ನು ಜೀತಕ್ಕೆ ಇಟ್ಟುಕೊಳ್ಳುವುದನ್ನು ಸಮರ್ಥಿಸಿಕೊಳ್ಳುತ್ತಿದ್ದರು! ಈಗಲೂ ಈ ಮನೋಭಾವವನ್ನು ಹೊಂದಿರುವ ವ್ಯಕ್ತಿಗಳು ಬೇಕಾದಷ್ಟು ಜನ ಸಿಕ್ಕುತ್ತಾರೆ.

ನಮ್ಮ ಪೂರ್ವಗ್ರಹವನ್ನು ಮತ್ತೊಬ್ಬರಿಗೆ ಹಂಚುವುದು ತಪ್ಪು. ಅದನ್ನು ನಂಬಿ ಏನಾದರೂ ಮೂರ್ಖತನದ ಕಾರ್ಯಕ್ಕೆಳಸುವುದು ಮತ್ತೂ ಅಪಾಯಕಾರಿ. ನಿರ್ದಿಷ್ಟ ಧರ್ಮ, ಜಾತಿ ಗುಂಪಿನ ಜನರು ಒಂದೆಡೆ ಸೇರಿದಾಗ, ವಿದ್ಯಾವಂತರೆನಿಸಿಕೊಂಡ ಕೆಲವರು ಆಡುವ ಮಾತುಗಳನ್ನು ಕೇಳಿದರೆ ಆಘಾತವಾಗುತ್ತದೆ. ಅಂದು ನಾಲ್ಕು ಗೋಡೆಯ ನಡುವೆ ಇರುತ್ತಿದ್ದ ಇಂತಹ ಮಾತುಗಳು ಯಾವುದೇ ಹಿಂಜರಿಕೆ ಇಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗುವುದು ಕೂಡ ಆಘಾತಕಾರಿ ಬೆಳವಣಿಗೆ. ಅತಿಯಾದಾಗ ಪೂರ್ವಗ್ರಹವು ಮಾನಸಿಕ ಕಾಯಿಲೆಯಾಗಿಬಿಡುವುದು ಹೀಗೆ.

ಯಾವುದೇ ಆಹ್ವಾನವಿಲ್ಲದೆ, ನಮಗೇ ಅರಿವಾಗದಂತೆ ನಮ್ಮ ಮಿದುಳೊಳಗೆ ಸೇರಿಕೊಂಡು ನಮ್ಮ ವ್ಯಕ್ತಿತ್ವವನ್ನು ಬದಲಾಯಿಸಿಬಿಡುವ ಈ ಪೂರ್ವಗ್ರಹಗಳನ್ನು ಮೀರುವುದೇ ನಮ್ಮ ದೊಡ್ಡ ಸವಾಲು. ಯಾವುದೇ ವಿಷಯದ ಬಗ್ಗೆ ನಮ್ಮ ಪೂರ್ವಗ್ರಹಿಕೆಗಳು ಸ್ವತಃ ಬೆಳೆಯುವುದರಿಂದ ನಮ್ಮನ್ನು ತಡೆಯಬಲ್ಲವು. ಪ್ರಯತ್ನದ ಕೊರತೆಯಿಂದಲೋ ಅಥವಾ ಮಾನವಸಹಜ ತಪ್ಪುಗಳಿಂದಲೋ ಆಗುವುದಕ್ಕಿಂತ ಹೆಚ್ಚಿನ ಅಪಾಯ ಈ ಸ್ವಕಲ್ಪಿತ ಗ್ರಹಿಕೆಗಳಿಂದ ಆಗುತ್ತದೆ.

ಜ್ಞಾನದ ಬಾಗಿಲಿಗೆ ತಡೆಯಾಗಿರುವ ಪೂರ್ವಗ್ರಹವು ಪರಸ್ಪರರನ್ನು ಬೇರ್ಪಡಿಸುವ ಮುಳ್ಳುತಂತಿಯೂ ಹೌದು. ಈ ಮುಳ್ಳುತಂತಿಯನ್ನು
ಕತ್ತರಿಸಿಹಾಕದಿದ್ದರೆ ಮನುಷ್ಯ ಮನುಷ್ಯನಾಗಿ ಬದುಕಲು ಬೇಕಾದುದಕ್ಕಿಂತ ಹೆಚ್ಚಿನ ಮಹತ್ವವನ್ನು ಇವರು ಚರ್ಮದ ಬಣ್ಣಕ್ಕೆ, ಹುಟ್ಟಿದ ಧರ್ಮ, ಜಾತಿಗೆ ಕೊಟ್ಟುಬಿಟ್ಟಿದ್ದರಲ್ಲ ಎಂದು ಮುಂದೊಂದು ದಿನ ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಬೈದುಕೊಳ್ಳುವುದಂತೂ
ಗ್ಯಾರಂಟಿ. ಇಂದು ತಮ್ಮ ಕಣ್ಣಿನಿಂದ ನೋಡುವ, ನೋಡಿದ್ದನ್ನು ಪರಿಶೀಲಿಸುವ ಮತ್ತು ಹೃದಯದಿಂದ ಯೋಚಿಸುವ ಜನರ ಸಂಖ್ಯೆ ಅತ್ಯಂತ ಕಡಿಮೆ ಇದೆ. ಹಾಗಾಗಿಯೇ ಜಗತ್ತು ಪೂರ್ವಗ್ರಹಪೀಡಿತವಾಗಿದೆ.
ಒಬ್ಬರ ಜತೆ ಒಡನಾಡದೇ ಅವರ ಬಗ್ಗೆ ದ್ವೇಷ ಬೆಳೆಸಿಕೊಳ್ಳುವ ಈ ಪ್ರವೃತ್ತಿ ಅತ್ಯಂತ ನೀಚತನದ್ದು.

ಬಿಗಿದ ಮುಷ್ಟಿಯಿಂದ ನಾವು ಯಾರ ಕೈಯ್ಯನ್ನೂ ಕುಲುಕಲಾರೆವು. ಎದುರಿಗಿರುವ ನಮ್ಮದೇ ಮಗುವಿನ ಕೆನ್ನೆಯನ್ನೂ ಸವರಲಾರೆವೆಂಬ ಅರಿವು ಮೂಡಬೇಕಾಗಿರುವುದು ಸದ್ಯದ ತುರ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.