ಪ್ಯಾನ್ ಇಂಡಿಯಾ ಸಿನಿಮಾಗಳನ್ನು ವಹಿವಾಟಿನ ದೃಷ್ಟಿಯಿಂದ ಯಶಸ್ವಿ ಪ್ರಯತ್ನ ಗಳನ್ನಾಗಿ ಗುರ್ತಿಸಲಾಗುತ್ತದೆ. ಆ ಸಿನಿಮಾಗಳು ಏಕತೆಯ ರಾಯಭಾರಿಗಳಾಗಿವೆ.
ತಮಿಳು, ತೆಲುಗು ಅಥವಾ ಮಲಯಾಳ ಚಿತ್ರಗಳು ಬೆಂಗಳೂರಿನಲ್ಲೂ ಯಶಸ್ವಿಯಾಗುವುದು ಸಹಜ. ಇಲ್ಲಿ ನೆಲಸಿರುವ ಪರ ಭಾಷಿಕರು ದೊಡ್ಡ ಸಂಖ್ಯೆಯಲ್ಲಿ ಇರುವುದರಿಂದ, ಅವರ ಭಾಷೆಯ ಸಿನಿಮಾಗಳಿಗೂ ಇಲ್ಲಿ ಮಾರುಕಟ್ಟೆ ರೂಪುಗೊಂಡಿದೆ. ಭಾಷೆಯ ಚೌಕಟ್ಟನ್ನು ಮೀರಿದ ಸೂಪರ್ ಸ್ಟಾರ್ ನಟರಿದ್ದಾಗ ಬೇರೆ ಭಾಷೆಯ ಸಿನಿಮಾಗಳನ್ನು ಕನ್ನಡಿಗರೂ ನೋಡುವುದಿದೆ. ಇದರ ಆಚೆಗೆ, ಒಂದು ಭಾಷೆಯ ಸಿನಿಮಾ ತನ್ನ ರಾಜ್ಯದ ಗಡಿ ದಾಟುವ ಸಾಧ್ಯತೆ ಇತ್ತೀಚಿನವರೆಗೂ ಕಡಿಮೆಯಿತ್ತು. ಇತ್ತೀಚಿನ ದಿನಗಳಲ್ಲಿ ‘ಪ್ಯಾನ್–ಇಂಡಿಯಾ’ ಪರಿಕಲ್ಪನೆ ಇಟ್ಟುಕೊಂಡು ದೇಶದಾದ್ಯಂತ ಬಿಡುಗಡೆ ಕಾಣುವ ಚಲನಚಿತ್ರಗಳು ಹೆಚ್ಚುತ್ತಿವೆ.
‘ಬಾಹುಬಲಿ’ ಸಿನಿಮಾದಲ್ಲಿ ಸುದೀಪ್, ‘ಜೈಲರ್’ನಲ್ಲಿ ಶಿವರಾಜ್‌ಕುಮಾರ್, ‘ಕೂಲಿ’ಯಲ್ಲಿ ಉಪೇಂದ್ರ ಮುಂತಾದ ಸೂಪರ್ ಸ್ಟಾರ್‌ಗಳು ಎಂಟ್ರಿ ಕೊಟ್ಟಾಗ ಚಿತ್ರಮಂದಿರಗಳಲ್ಲಿ ಕೇಳಿಬರುವ ಸೀಟಿ ಹಾಗೂ ಚಪ್ಪಾಳೆ ಸದ್ದು, ಸಿನಿಮಾಗಳನ್ನು ನೋಡುವ ಅಭ್ಯಾಸದಲ್ಲಿ ಆಗಿರುವ ಬದಲಾವಣೆಯನ್ನು ತೋರಿಸುತ್ತದೆ. ಏನಿದು, ‘ಪ್ಯಾನ್ ಇಂಡಿಯಾ’ ಸಿನಿಮಾ?
ಪ್ಯಾನ್–ಇಂಡಿಯಾ ಸಿನಿಮಾ ಅಂದರೆ, ಭಾರತದಲ್ಲಿ ಮಾಡಲಾದ ಯಾವುದೇ ಸಿನಿಮಾ, ಒಂದು ಭಾಷೆ ಅಥವಾ ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾಗದೇ, ಭಾರತದ ಎಲ್ಲೆಡೆ, ಎಲ್ಲ ಭಾಷೆಗಳ ಜನರು ನೋಡಲು ಮತ್ತು ಆನಂದಿಸಲು ಸಾಧ್ಯವಾಗುವಂತಹ ಸಿನಿಮಾ. ಉದಾಹರಣೆಗೆ: ‘ಬಾಹುಬಲಿ’, ‘ಆರ್‌ಆರ್‌ಆರ್’, ‘ಕೆ.ಜಿ.ಎಫ್.’, ‘ಪುಷ್ಪ’, ‘ಜೈಲರ್’, ‘ಕೂಲಿ’. ಈ ಸಿನಿಮಾಗಳು ತಮ್ಮ ಮೂಲಭಾಷೆಯ ಜೊತೆಗೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿ, ರಾಷ್ಟ್ರವ್ಯಾಪಿ ಯಶಸ್ಸು ಕಂಡವು. ಇವು ‘ಪ್ರಾದೇಶಿಕ’ ಸಿನಿಮಾಗಳಾಗಿದ್ದೂ, ‘ರಾಷ್ಟ್ರದ ಸಿನಿಮಾ’ ಆಗಿವೆ.
ಎಲ್ಲ ರಾಜ್ಯಗಳಿಗೂ ತಲಪಬೇಕಿರುವ ಸಿನಿಮಾ ಆದ್ದರಿಂದ ಪ್ಯಾನ್–ಇಂಡಿಯಾ ಸಿನಿಮಾಗಳ ಕಥೆಗಳು ಸಾಮಾನ್ಯವಾಗಿ ಕುಟುಂಬ, ಪ್ರೀತಿ, ಪ್ರತೀಕಾರ, ಶೌರ್ಯ, ನ್ಯಾಯ, ಮುಂತಾದ ಸಾರ್ವತ್ರಿಕ ವಿಷಯಗಳ ಮೇಲೆ ಆಧಾರಿತವಾಗಿರುತ್ತವೆ. ಹಾಗಾಗಿ, ಯಾವುದೇ ಪ್ರದೇಶದ ಜನರು ಈ ಸಿನಿಮಾಗಳೊಂದಿಗೆ ಸಂಬಂಧ ಕಲ್ಪಿಸಿಕೊಳ್ಳಬಹುದು. ಇಂತಹ ಸಿನಿಮಾಗಳು ದುಬಾರಿ ಬಜೆಟ್‌ನೊಂದಿಗೆ, ಭವ್ಯವಾದ ಸೆಟ್‌ಗಳು, ರೋಮಾಂಚಕ ಸಾಹಸ ದೃಶ್ಯಗಳು ಮತ್ತು ಸಮೃದ್ಧ ದೃಶ್ಯಮಾಧುರ್ಯ ಹೊಂದಿರುತ್ತವೆ.
ಪ್ರೇಕ್ಷಕನಿಗೆ ತನ್ನದೇ ಭಾಷೆಯಲ್ಲಿ ಪರಭಾಷಾ ಸಿನಿಮಾ ಲಭ್ಯವಾದಾಗ ಅದನ್ನು ಸುಲಭವಾಗಿ ಅರ್ಥ ಮಾಡಿಕೊಂಡು ಆನಂದಿಸಬಹುದು. ಅದಕ್ಕೂ ಮೀರಿದ ವಿಶೇಷ, ನಮ್ಮ ಭಾಷೆಯ ಸೂಪರ್ ಸ್ಟಾರ್, ಪರಭಾಷಾ ಸೂಪರ್ ಸ್ಟಾರ್ ಜೊತೆ ಸಮಪ್ರಮಾಣದಲ್ಲಿ ಬೆಳ್ಳಿತೆರೆಯನ್ನು ಹಂಚಿಕೊಳ್ಳುವುದು ಚಿತ್ರರಸಿಕರಿಗೆ ವರ್ಣಿಸಲಸದಳ ಆನಂದ ತರುತ್ತದೆ. ಚಲನಚಿತ್ರ ವಿಮರ್ಶಕರು ಪ್ಯಾನ್ ಇಂಡಿಯಾ ಪರಿಕಲ್ಪನೆಯನ್ನು ‘ಪ್ರಾದೇಶಿಕತೆ ಮೀರಿದ ಸಹಯೋಗ’ ಎಂದಿದ್ದಾರೆ. ಸಾಂಸ್ಕೃತಿಕ ಅಧ್ಯಯನಗಳ ದೃಷ್ಟಿಯಿಂದ ನಿಸ್ಸಿಂ ಮನ್ನತ್ತುಕ್ಕರೆನ್ ಮುಂತಾದವರು ಹೇಳುವಂತೆ, ಪ್ಯಾನ್ ಇಂಡಿಯಾ ಸಿನಿಮಾದ ಪರಿಕಲ್ಪನೆ ಮನರಂಜನೆಗಾಗಿ ಮಾತ್ರವಲ್ಲ, ಏಕತೆಗೂ ಸಂಕೇತ ಆಗಬಹುದು.
ಬೇರೆ ಬೇರೆ ಭಾಷೆಗಳ ತಾರೆಗಳು ಒಂದೇ ಪರದೆ ಮೇಲೆ ಕಾಣಿಸಿಕೊಳ್ಳುವುದು ಭಾಷೆಗಳ ನಡುವಿನ ಅಸಹಿಷ್ಣುತೆ ಕೊಂಚವಾದರೂ ಕಡಿಮೆಯಾಗಲು ಕಾರಣವಾಗಬಹುದು. ಅಂದರೆ, ಪ್ಯಾನ್ ಇಂಡಿಯಾ ಸಿನಿಮಾ ತಾರೆಯರ ಜನಪ್ರಿಯತೆಯನ್ನು ಬಳಸಿಕೊಂಡು ಪ್ರಾದೇಶಿಕ ಅಥವಾ ಸಾಮಾಜಿಕ ಅಂತರಗಳನ್ನು ಕಡಿಮೆ ಮಾಡುತ್ತ, ರಾಷ್ಟ್ರೀಯ ಅಸ್ಮಿತೆಯನ್ನು ಹೆಚ್ಚು ಸಾಧ್ಯಗೊಳಿಸುವಂತೆ ತೋರುತ್ತದೆ.
ಮೇಲ್ನೋಟಕ್ಕೆ, ಪ್ಯಾನ್–ಇಂಡಿಯಾ ಸಿನಿಮಾ ಹೆಚ್ಚಾಗಿ ಲಾಭ ಮಾಡುವತ್ತ ಮುಖ ಮಾಡಿರುವಂತೆ ತೋರುತ್ತದೆ. ಈ ಚಿತ್ರಗಳು ಬಹುಭಾಷೆಗಳಲ್ಲಿ ಬಿಡುಗಡೆಯಾಗಿ ಭಾರತದಾದ್ಯಂತ ಪ್ರೇಕ್ಷಕರಿಗೆ ತಲಪುವುದರಿಂದ, ಸಾಮಾನ್ಯ ಪ್ರಾದೇಶಿಕ ಚಿತ್ರಗಳಿಗಿಂತ ಹೆಚ್ಚಿನ ಹಣ ಗಳಿಸುತ್ತವೆ. ಹಣದ ಅಂಶವನ್ನು ಹೊರತುಪಡಿಸಿ ನೋಡಿದರೆ, ಕಲೆ ಅಥವಾ ಸಾಂಸ್ಕೃತಿಕ ಅಭಿವ್ಯಕ್ತಿಯನ್ನೂ ಪ್ಯಾನ್ ಇಂಡಿಯಾ ಸಿನಿಮಾ ಸಾಧ್ಯಗೊಳಿಸುವುದರಿಂದ ಉಳಿದ ಚಲನಚಿತ್ರಗಳಿಗಿಂತ ಹೆಚ್ಚು ಮಹತ್ವವನ್ನು ಪಡೆಯುತ್ತವೆ.
ಪ್ಯಾನ್ ಇಂಡಿಯಾ ಸಿನಿಮಾದ ಮತ್ತೊಂದು ಆಕರ್ಷಣೆ, ವಿವಿಧ ಭಾಷೆಗಳ ಸೂಪರ್ ಸ್ಟಾರ್‌ಗಳ ಜನಪ್ರಿಯತೆಯನ್ನು ಬಳಸಿಕೊಳ್ಳುವುದು. ವಿಭಿನ್ನ ಚಿತ್ರರಂಗಗಳ ಪ್ರಸಿದ್ಧ ನಟರನ್ನು ಒಟ್ಟಿಗೆ ತಂದು ಹಲವು ರಾಜ್ಯಗಳ ಪ್ರೇಕ್ಷಕರನ್ನು ಆಕರ್ಷಿಸುವುದು ಒಂದಾದರೆ, ಅದೇ ನಟರು ತಮ್ಮದೇ ಭಾಷೆಯಲ್ಲಿ ಒಂದೋ ಎರಡೋ ಸಾಲುಗಳನ್ನು ಹೇಳಿದಾಗ ಆಯಾ ರಾಜ್ಯಗಳ ಜನರಿಗೆ ರೋಮಾಂಚನವಾಗುತ್ತದೆ. ಹಾಗೆಯೇ, ಸಾಮೂಹಿಕ ಆಕರ್ಷಣೆಗೆ ಬೇಕಾದ ಹಾಡು, ಹೋರಾಟ, ಮತ್ತು ಇತರೆ ಅಂಶಗಳನ್ನು ಸೇರಿಸಿ ಪ್ರಚಾರ ಹಾಗೂ ಮಾರುಕಟ್ಟೆ ವ್ಯವಸ್ಥೆ ಪ್ರಾದೇಶಿಕ ಮಟ್ಟಕ್ಕೆ ಸೀಮಿತವಾಗದೇ ರಾಷ್ಟ್ರಮಟ್ಟದಲ್ಲಿ ನಡೆಯುತ್ತದೆ.
ಮೂಲತಃ ಒಂದು ಸಂಸ್ಕೃತಿಯ ಬೇರು ಹೊಂದಿದ್ದರೂ, ಪ್ಯಾನ್ ಇಂಡಿಯಾ ಸಿನಿಮಾ ಸಾಮಾನ್ಯವಾಗಿ ಬೇರೆ ಭಾಗಗಳ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ. ಉದಾಹರಣೆಗೆ: ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬಂದಿದ್ದ ಕರೀನಾ ಕಪೂರ್, ತಮ್ಮ ಆ ಸಮಯದಲ್ಲಿನ ನೆಚ್ಚಿನ ನಟ ಯಶ್ ಎಂದು ಹೇಳಿದ್ದರು. ಈ ರೀತಿಯಾಗಿ, ಪ್ಯಾನ್–ಇಂಡಿಯಾ ಸಿನಿಮಾ ಭಾಷೆ ಮತ್ತು ಸಂಸ್ಕೃತಿಯ ಅಂತರಗಳನ್ನು ಮೀರಿ ಚಲನಚಿತ್ರ ಲೋಕವನ್ನು ಚಲನಚಿತ್ರ ಅಭಿಮಾನಿಗಳಿಗೆ ನೀಡಲು ಪ್ರಯತ್ನಿಸುತ್ತದೆ.
ಸಿನಿಮಾ ಮಾಧ್ಯಮಕ್ಕೆ ಇರಬಹುದಾದ ಸಾಮಾಜಿಕ ಜವಾಬ್ದಾರಿಯ ಬಗೆಗಿನ ನಂಬಿಕೆಯನ್ನು ಚಿತ್ರೋದ್ಯಮವೇ ಕಳೆದುಕೊಂಡಿರುವ ಸಂದರ್ಭದಲ್ಲಿ, ‘ಪ್ಯಾನ್–ಇಂಡಿಯಾ ಸಿನಿಮಾ’ಗಳು ಏಕತೆಯ ಸಾಧ್ಯತೆಯೊಂದನ್ನು ಒಳಗೊಂಡಿರುವುದು ವಿಶೇಷ ಸಂಗತಿಯಾಗಿದೆ ಹಾಗೂ ಸಿನಿಮಾ ಮಾಧ್ಯಮಕ್ಕೆ ಸಾಮಾಜಿಕ ಹೊಣೆಗಾರಿಕೆಯ ಜವಾಬ್ದಾರಿ ಯನ್ನು ಕಸಿಮಾಡುವಂತಿದೆ. ಈ ಸಾಧ್ಯತೆಯನ್ನು ಮತ್ತಷ್ಟು ವ್ಯಾಪಕಗೊಳಿಸುವ ಬಗ್ಗೆ ಎಲ್ಲ ಭಾಷೆಗಳ ಚಿತ್ರೋದ್ಯಮಿಗಳು ಪ್ರಜ್ಞಾಪೂರ್ವಕ ಪ್ರಯತ್ನ ನಡೆಸಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.