ADVERTISEMENT

ಸಂಗತ: ಪಿಎಚ್.‌ಡಿ ‘ಸಂಶೋಧನೆ’ ಮತ್ತು ವೇದನೆ..

ನಾಡು–ನುಡಿಯನ್ನು ವಿವೇಕದ ರೂಪದಲ್ಲಿ ನೋಡಬೇಕಾದ ಉನ್ನತ ಶಿಕ್ಷಣ ಕ್ಷೇತ್ರ ಹಾಗೂ ಪಿಎಚ್‌.ಡಿ ಸಂಶೋಧನೆಗಳು ಭ್ರಷ್ಟಾಚಾರದ ಕೆಸರನ್ನು ಮೆತ್ತಿಕೊಂಡಿವೆ.

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 23:56 IST
Last Updated 19 ಆಗಸ್ಟ್ 2025, 23:56 IST
<div class="paragraphs"><p>ಸಂಗತ: ಪಿಎಚ್.‌ಡಿ ‘ಸಂಶೋಧನೆ’ ಮತ್ತು ವೇದನೆ..</p></div>

ಸಂಗತ: ಪಿಎಚ್.‌ಡಿ ‘ಸಂಶೋಧನೆ’ ಮತ್ತು ವೇದನೆ..

   

ಕನ್ನಡದಲ್ಲಿ ನಡೆಯುತ್ತಿರುವ ಸಂಶೋಧನೆಗಳ ಗುಣಮಟ್ಟ ಕುಸಿಯುತ್ತಿದೆ ಎನ್ನುವ ಆತಂಕ ಆಗಾಗ ವ್ಯಕ್ತವಾಗುತ್ತಿದೆ. ಬೆಂಗಳೂರಿನಲ್ಲಿ ನಡೆದ, ಪಂಪನನ್ನು ಕುರಿತ ಎರಡು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲೂ ಈ ಆತಂಕ ವ್ಯಕ್ತವಾಗಿದೆ (ಪ್ರ.ವಾ., ಆಗಸ್ಟ್‌ 18). ಕನ್ನಡ ಸಂಶೋಧನೆಯ ಗುಣಮಟ್ಟ ಕುಸಿಯುತ್ತಿರುವ ವಿಚಾರಕ್ಕೆ ಮತ್ತು ಅದರಲ್ಲಿ ಹಣ ವಹಿಸುತ್ತಿರುವ ಪಾತ್ರದ ಕುರಿತು ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅವರು, ವಿಷಾದದಿಂದ ಆಡಿರುವ ಮಾತುಗಳಲ್ಲಿ ಉತ್ಪ್ರೇಕ್ಷೆಯ ಅಂಶವೇನಿಲ್ಲ (ಕೆಲವೇ ಅಪವಾದಗಳನ್ನು ಹೊರತುಪಡಿಸಿ). ಆದರೆ, ಈ ಗುಣಮಟ್ಟದ ಕುಸಿತ ಕನ್ನಡ ಅಧ್ಯಾಪಕರಿಗೆ ಮತ್ತು ಕರ್ನಾಟಕಕ್ಕೆ ಮಾತ್ರ ಸೀಮಿತವಾದ ಸಂಗತಿಯೇನಲ್ಲ.  

ಬಡ್ತಿ ಪಡೆಯಲಿಕ್ಕೆ ಪಿಎಚ್.ಡಿ ಕಡ್ಡಾಯ ಎಂದು ‘ವಿಶ್ವವಿದ್ಯಾಲಯ ಅನುದಾನ ಆಯೋಗ’ (ಯುಜಿಸಿ) ಯಾವಾಗ ಆದೇಶ ಹೊರಡಿಸಿತೋ ಅಂದೇ ಎಲ್ಲ ವಿಷಯಗಳ ಸಂಶೋಧನಾ ಪ್ರಬಂಧಗಳ ಗುಣಮಟ್ಟ ಕುಸಿತ ಆರಂಭಗೊಂಡಿತು ಮತ್ತು ಭ್ರಷ್ಟಾಚಾರಕ್ಕೆ ಬೀಜಾಂಕುರ ಆಯಿತು.

ADVERTISEMENT

ಹಣ ತೆಗೆದುಕೊಂಡು ಪಿಎಚ್‌.ಡಿ ಪ್ರಬಂಧ ಬೇರೆಯವರಿಗೆ ಬರೆದುಕೊಡುವ ಮತ್ತು ಅದರ ಗುಣಮಟ್ಟ ಹೇಗೇ ಇದ್ದರೂ ಅದಕ್ಕೆ ಪದವಿ ನೀಡುವ ದಂಧೆ ಮೊದಲು ಶುರುವಾದದ್ದು ಉತ್ತರದ ರಾಜ್ಯಗಳಲ್ಲಿ, ಈಗ್ಗೆ ಸುಮಾರು  ಮೂವತ್ತು ವರ್ಷಗಳ ಹಿಂದೆಯೇ ಎಂಬುದು ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಪಡಸಾಲೆಯಲ್ಲಿ  ಓಡಾಡುವವರೆಲ್ಲ ಮಾತನಾಡುತ್ತಿದ್ದ ಮತ್ತು ತಿಳಿದ ಸಂಗತಿಯಾಗಿತ್ತು. ಕ್ರಮೇಣ ಆ ಪಿಡುಗು ದೇಶ ವ್ಯಾಪಿಯಾಯಿತು, ಕರ್ನಾಟಕದಲ್ಲೂ ಕಾಣಿಸಿಕೊಂಡಿತು.

ಬಡ್ತಿಗೆ ಪಿಎಚ್.‌ಡಿ ಅಗತ್ಯವಾಗಿರದೆ, ಕೇವಲ ಅಪೇಕ್ಷಣೀಯವಷ್ಟೇ ಆಗಿದ್ದಾಗ ಸಂಶೋಧನೆಯಲ್ಲಿ ನಿಜಕ್ಕೂ ಆಸಕ್ತಿ ಇದ್ದವರು ಮತ್ತು ಅಧ್ಯಯನಶೀಲರು ಮಾತ್ರ ಪಿಎಚ್‌.ಡಿ ಅಧ್ಯಯನಕ್ಕೆ ಹೆಸರು ನೋಂದಣಿ ಮಾಡಿಸುತ್ತಿದ್ದರು. ಆಗ ಮಾರ್ಗದರ್ಶಕರು (ಗೈಡ್‌ಗಳು) ಸಿಕ್ಕುವುದೂ ಕಷ್ಟವಾಗಿತ್ತು. ಆದರೆ, ಎಂ.ಫಿಲ್ ಮತ್ತು ಪಿಎಚ್‌.ಡಿ.ಗಳು ಬಡ್ತಿಗೆ ಅನಿವಾರ್ಯವೆಂದು ಯುಜಿಸಿ ಕಡ್ಡಾಯ ಮಾಡಿದ ಕೂಡಲೇ, ಎಲ್ಲರಿಗೂ ಹೇಗಾದರೂ ಮಾಡಿ ಡಾಕ್ಟರೇಟ್‌ ಗಿಟ್ಟಿಸುವುದೇ ಧ್ಯೇಯವಾಗಿಬಿಟ್ಟಿತು. ಸಂಶೋಧನೆಗಳ ಸಂಖ್ಯೆ ಹೆಚ್ಚಿದಂತೆ ಗುಣಮಟ್ಟದ ಅಧಃಪತನ ಶುರುವಾಯಿತು.

ಕನ್ನಡದ ಹೆಸರು ಹೇಳಿಕೊಂಡೇ ಹುಟ್ಟಿದ ವಿಶ್ವ ವಿದ್ಯಾಲಯವಂತೂ ತನ್ನ ಕೇಂದ್ರ ಸಂಸ್ಥೆ ಮತ್ತು ಹಲವಾರು ಅಧ್ಯಯನ ಕೇಂದ್ರಗಳ ಮೂಲಕ ಪಿಎಚ್‌.ಡಿ.ಗಳನ್ನು ಬೃಹತ್‌ ಪ್ರಮಾಣದಲ್ಲಿ ತಯಾರು ಮಾಡುವ ಕಾರ್ಖಾನೆಯೇ ಆಗಿಬಿಟ್ಟಿರುವುದನ್ನು ನಾವೆಲ್ಲ ಕಾಣುತ್ತಿದ್ದೇವೆ. ಹಾಗಾಗಿ, ಸಹಜವಾಗಿಯೇ ಗುಣಮಟ್ಟ ಕುಸಿಯತೊಡಗಿ ಈಗ ಅಧಃಪಾತಾಳವನ್ನು ಮುಟ್ಟಿದೆ. ಇನ್ನು ಸಂಶೋಧನೆಯಲ್ಲಿ ಹಣ ಸೇರಿಕೊಂಡಿ ರುವುದಕ್ಕೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರನ್ನಷ್ಟೇ ಗುರಿ ಮಾಡಿ ದೂರುವುದರಲ್ಲೇನೂ ಅರ್ಥವಿಲ್ಲ. ವಿಶ್ವವಿದ್ಯಾಲಯ ಮಟ್ಟದಲ್ಲಾಗಲಿ, ಕೆಪಿಎಸ್‌ಸಿ ಮಟ್ಟದಲ್ಲಾಗಲಿ, ಖಾಸಗಿ ಕಾಲೇಜುಗಳ ಹಂತದಲ್ಲಾಗಲಿ, ಅಧ್ಯಾಪಕರ ನೇಮಕಾತಿಗಳಲ್ಲಿ ಹಾಗೂ ಉಳಿದ ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರಾಟ್‌ ರೂಪವನ್ನು ನಿತ್ಯವೂ ಪತ್ರಿಕೆಗಳಲ್ಲಿ ಓದುತ್ತಿದ್ದೇವೆ. ಹಣ ಕೊಡದೆ ಸಾರ್ವಜನಿಕ ಕೆಲಸ ಮಾಡಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎನ್ನುವಂತಾಗಿದೆ. ಇನ್ನು ರಾಜಕೀಯ ಭ್ರಷ್ಟಾಚಾರಕ್ಕಂತೂ ಕೊನೆ ಮೊದಲಿಲ್ಲ. ಜನ ಭ್ರಷ್ಟಾಚಾರದ ಬಗ್ಗೆ ರೋಸಿ ಹೋಗಿ, ಇದೆಲ್ಲ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸರ್ವೇಸಾಮಾನ್ಯ ಮತ್ತು ಸಹಜ ಎಂದು ಒಪ್ಪಿಕೊಳ್ಳುವ  ಹಂತಕ್ಕೆ ಬಂದುಬಿಟ್ಟಿರುವುದು ದುರ್ದೈವವೇ ಸರಿ. ಪ್ರಜಾಪ್ರಭುತ್ವ ವ್ಯವಸ್ಥೆಯ ಬೇರುಗಳ ರೂಪದಲ್ಲಿ ನೋಡಬಹುದಾದ ಚುನಾವಣೆಗಳು ಈಗ ಎಷ್ಟರಮಟ್ಟಿಗೆ ಪಾವಿತ್ರ್ಯ ಉಳಿಸಿಕೊಂಡಿವೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಬೇರುಗಳಿಗೇ ಹುಳು ಬಿದ್ದಿರುವ ಸನ್ನಿವೇಶದಲ್ಲಿ, ಕೊಂಬೆ ರೆಂಬೆ, ಹೂವು ಕಾಯಿ ಆರೋಗ್ಯದಿಂದ ಇರಲು ಸಾಧ್ಯವೆ?

ಕರ್ನಾಟಕದಲ್ಲೇ ಹಿಂದೆ ಇದ್ದ ರಾಜ್ಯಪಾಲರೊಬ್ಬರು ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ಆಯ್ಕೆ ಮಾಡಲು ಸೂಟ್‌ಕೇಸ್‌ಗಳನ್ನು ತೆಗೆದುಕೊಳ್ಳುವ ಪದ್ಧತಿಗೆ ನಾಂದಿ ಹಾಡಿದರೆಂಬುದೇನೂ ಈಗ ಗುಟ್ಟಿನ ಸಂಗತಿಯಾಗಿಲ್ಲ. ರಾಜ್ಯದ ಯಾವುದಾದರೂ ವಿಶ್ವವಿದ್ಯಾಲಯ ಭ್ರಷ್ಟಾಚಾರ ಮುಕ್ತವಾಗಿ ಇದೆಯೇ? ಕುಲಪತಿಗಳ ನೇಮಕಾತಿಯೇ ಹಣದೊಂದಿಗೆ ತಳಕು ಹಾಕಿಕೊಂಡಿರುವಾಗ, ಭ್ರಷ್ಟಾಚಾರಮುಕ್ತ ವಿಶ್ವವಿದ್ಯಾಲಯಗಳನ್ನು ಹೇಗೆ ನಿರೀಕ್ಷಿಸುವುದು?

ಭ್ರಷ್ಟಾಚಾರ, ಪಿಎಚ್.‌ಡಿ ಪದವಿಗಳ ಗೈಡ್‌ಗಳು ಹಣ ತೆಗೆದುಕೊಳ್ಳುವುದಕ್ಕಷ್ಟೇ ಇದು ನಿಂತಿಲ್ಲ. ವಿಶ್ವವಿದ್ಯಾಲಯಗಳಿಗೆ ಜೂನಿಯರ್‌ ಹಾಗೂ ಸೀನಿಯರ್‌ ರಿಸರ್ಚ್‌ ಫೆಲೋಗಳು, ತಮಗೆ ಸಂದಾಯವಾಗುವ ಸ್ಕಾಲರ್‌ಶಿಪ್‌ ಹಣದಲ್ಲೂ ಹವಿರ್ಭಾಗವನ್ನು ಕೇಳುವ ವಿಭಾಗ ಮುಖ್ಯಸ್ಥರ ಬಗ್ಗೆ ಮಾತಾಡಿಕೊಳ್ಳುವುದೂ ಈಗ ಬಹಿರಂಗವೇ ಆಗಿಬಿಟ್ಟಿದೆ.

ಪಿಎಚ್‌.ಡಿ ವಿದ್ಯಾರ್ಥಿಗಳನ್ನು ಗೈಡ್‌ಗಳು ಬೇರೆ ಬೇರೆ ರೂಪದಲ್ಲಿ ಶೋಷಿಸುತ್ತಿರುವ ದೂರುಗಳೂ ಇವೆ. ಇಂಥ ಭ್ರಷ್ಟಾಚಾರ, ಮುಖ್ಯವಾಗಿ ವೈಯಕ್ತಿಕ ಪ್ರಾಮಾಣಿಕತೆಯನ್ನು ಸಮಾಜ ನಿರೀಕ್ಷಿಸುವ, ಉನ್ನತ ವ್ಯಾಸಂಗ ಮಾಡಿ ಲಕ್ಷಗಟ್ಟಲೆ ಸಂಬಳ ಪಡೆಯುವವರವರೆಗೂ ಬಂದು ಹಲವು ವರ್ಷಗಳೇ ಆಗಿದೆಯೆಂಬ ಸಂಗತಿ ಅತ್ಯಂತ ಕಟುವಾದರೂ ವಾಸ್ತವ. ಅದನ್ನು ನಿಲ್ಲಿಸುವುದು ಹೇಗೆಂಬ ಬಗ್ಗೆ ಶಿಕ್ಷಣ ಕ್ಷೇತ್ರದ ಬಗ್ಗೆ ಕಾಳಜಿಯುಳ್ಳ ಎಲ್ಲರೂ ಗಂಭೀರವಾಗಿ  ಚಿಂತಿಸಬೇಕಾಗಿದೆ.

⇒ (ಲೇಖಕ: ನಿವೃತ್ತ ಕನ್ನಡ ಪ್ರಾಧ್ಯಾಪಕ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.