ADVERTISEMENT

ಸಂಗತ: ಗದ್ದಲ- ಗೊಂದಲದ ಕಲಾಪೋಷಣೆ!

ಡಾ.ಕೆ.ಎಸ್.ಪವಿತ್ರ
Published 8 ಡಿಸೆಂಬರ್ 2022, 20:28 IST
Last Updated 8 ಡಿಸೆಂಬರ್ 2022, 20:28 IST
   

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದ ಬಗೆಗೆ ಮತ್ತೆ ಗದ್ದಲ- ಗೊಂದಲ ಎದ್ದಿದೆ. ಹಿಂದಿನಿಂದಲೂ ಇಲಾಖೆಯ ಧನಸಹಾಯ ಯೋಜನೆ ಹಾಗೂ ಸಂಸ್ಕೃತಿಯ ವಿಷಯದಲ್ಲಿ ಗದ್ದಲ-ಗೊಂದಲ ಪಕ್ಷಾತೀತವಾಗಿ ನಡೆದುಬಂದಿದೆ! 18 ವರ್ಷಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯ ಜೊತೆಗೆ ಸ್ವತಃ ಕಲಾವಿದೆಯಾಗಿ ಕಲಾಕ್ಷೇತ್ರದಲ್ಲಿ ತೊಡಗಿಸಿ
ಕೊಂಡಿರುವ ನನಗೆ ಈ ಸ್ಥಿತಿ ಬಹುವಾದ ವ್ಯಥೆ ತರುತ್ತದೆ. ಕಲಾರಂಗ, ಕಲೆಯನ್ನು ಪೋಷಿಸಬೇಕಾದ ಆಡಳಿತ ವ್ಯವಸ್ಥೆ ಹಿಂದಿನ ಅನುಭವಗಳಿಂದ ‍ಪಾಠ ಕಲಿಯದ ಬಗೆಗೆ ಅಚ್ಚರಿ ಮೂಡುತ್ತದೆ.

ಕಲಾವಿದರು ಕಲೆಯನ್ನು ಮಾತ್ರ ಚೆನ್ನಾಗಿ ಕಲಿತು, ಪ್ರದರ್ಶಿಸುವುದನ್ನು ರೂಢಿಸಿಕೊಂಡರೆ ಸಾಲದು. ಪ್ರತಿಯೊಂದನ್ನೂ ದಾಖಲಿಸುವ ಶಿಸ್ತನ್ನು ಪ್ರಯತ್ನ
ಪೂರ್ವಕವಾಗಿ ಕಲಿಯಬೇಕು. ಅನುದಾನದ ಯೋಜನೆ ಯಾವುದೇ ಇರಲಿ, ಸರಿಯಾದ ದಾಖಲೆಗಳು, ಲೆಕ್ಕಪತ್ರಗಳು, ಸಂಸ್ಥೆಯ ದಾಖಲೆಗಳು ಕ್ರಮಬದ್ಧವಾಗಿರಬೇಕು. ನೃತ್ಯ-ಸಂಗೀತ-ನಾಟಕದ
ಬಗ್ಗೆ ಯೋಚಿಸುವ ಬದಲು ಇವುಗಳನ್ನು ಮಾಡುತ್ತಾ ಕುಳಿತಿರಬೇಕೆ ಎನ್ನುವ ಹಾಗಿಲ್ಲ. ಈ ಶಿಸ್ತಿಗೆ ಬೇಕಾದ್ದಾದರೂ ಕೊಂಚ ಮನಸ್ಸು, ಸ್ವಲ್ಪ ಪರಿಶ್ರಮ. ಒಮ್ಮೆ ವ್ಯವಸ್ಥೆಯೊಂದಿಗೆ ಹೊಂದಿಕೊಂಡರೆ ಆಮೇಲೆ ಅದನ್ನು ಅನುಸರಿಸುವುದು ಸುಲಭ.

‘ಅರ್ಜಿ ಹಾಕುವುದೇ ಇಲ್ಲ, ಬೇಕಾದರೆ ಅವರೇ ಗುರುತಿಸಲಿ’ ಎನ್ನುವಂತಿಲ್ಲ. ಭಾರತದಂತಹ ಕಲಾ ಶ್ರೀಮಂತ ದೇಶದಲ್ಲಿ ಎಷ್ಟು ಜನ ಕಲಾವಿದರು, ಎಷ್ಟು ಕಲಾಸಂಸ್ಥೆಗಳಿವೆ, ಸರ್ಕಾರ ಯಾರನ್ನು ಗುರುತಿಸೀತು, ಯಾರಿಗೆ ಅರ್ಹರೆಂದು ಧನಸಹಾಯ, ಪ್ರಶಸ್ತಿ ನೀಡಬಹುದು?! ಹಾಗಾಗಿ ಕಲಾವಿದ ಕಾರ್ಯಕ್ರಮ
ಗಳನ್ನು ಆಯೋಜಿಸಲು ಧನಸಹಾಯ ಪಡೆಯುವುದಕ್ಕೆ ಅರ್ಜಿ ಸಲ್ಲಿಸುವುದೂ ಸರಿಯಾದ ದಾಖಲೆಗಳನ್ನು ಇಟ್ಟುಕೊಳ್ಳುವುದೂ ಅಪೇಕ್ಷಣೀಯವೆ.

ADVERTISEMENT

ಇಲಾಖೆ ಅಸ್ತಿತ್ವಕ್ಕೆ ಬಂದಾಗಿನಿಂದಲೂ ‘ಕ್ರಿಯಾ ಯೋಜನೆ’ ಎಂಬ ಹೆಸರಿನಿಂದ ಕಲಾಸಂಸ್ಥೆಗಳಿಗೆ ಧನಸಹಾಯ ನೀಡುತ್ತಲೇ ಬಂದಿದೆ. ಆದರೆ ಎಂದೂ ಇದು ‘ಪಾರದರ್ಶಕ’ವಾಗಿ ನಡೆದದ್ದಿಲ್ಲ. ಅರ್ಧಮುಕ್ಕಾಲು-ಒಂದು ಕೋಟಿ ಬಿಟ್ಟುಬಿಡೋಣ, ಪ್ರತೀ ತಿಂಗಳು ಕಾರ್ಯಕ್ರಮ ಮಾಡುವ ಸಂಸ್ಥೆಗೆ ವರ್ಷಕ್ಕೆ
₹ 15,000ದಿಂದ 2 ಲಕ್ಷದವರೆಗೆ ಅನುದಾನ ಬಂದರೂ ಹೆಚ್ಚಿನ ಕಲಾವಿದರು- ಸಂಸ್ಥೆಗಳು ‘ಪಾಲಿಗೆ ಬಂದದ್ದು ಪಂಚಾಮೃತ’ ಎನ್ನುವಂತೆ ತೃಪ್ತರೇ ಆದವರು. ಆಹ್ವಾನ ಪತ್ರಿಕೆಯಲ್ಲಿ ಸಹಕಾರ, ಪ್ರಾಯೋಜನೆ ಎಂದು ಇಲಾಖೆಯ ಹೆಸರಿದ್ದರೂ, ‘ಇಲಾಖೆಯ ಹೆಸರಿಲ್ಲ’ ಎಂಬ ಷರಾ ನಮೂದಿಸಿ ಅರ್ಜಿ ತಿರಸ್ಕೃತವಾದ ಅನೇಕ ಪ್ರಕರಣಗಳಿವೆ. ಅಂತಹ ಸಮಯದಲ್ಲಿ ಸ್ಥಳೀಯ ಶಾಖೆಗಳ ಉತ್ತರ ‘ನಾವು ಸರಿಯಾಗಿಯೇ ಕಳಿಸಿದ್ದೇವೆ, ಬೆಂಗಳೂರಿನ ಮುಖ್ಯ ಕಚೇರಿಗೆ ಹೋಗಿ ಕೇಳಿ!’ ಬೆಂಗಳೂರಿಗೆ ಹೋದರೆ, ಅಲ್ಲಿಯ ಅಗಾಧ ವ್ಯವಸ್ಥೆಯಲ್ಲಿ ಯಾರನ್ನು ಕೇಳುವುದು?! ಕಲಾವಿದ ಬೇಸತ್ತು, ಸಿಕ್ಕವರನ್ನು ಮಾತನಾಡಿಸಿ, ದೈನ್ಯದಿಂದ ತನ್ನ ಪಾಡು ವಿವರಿಸಿ, ‘ಈ ವರ್ಷದ್ದು ಇನ್ನೇನು ಮಾಡೋಕ್ಕಾಗಲ್ಲ, ಮುಂದಿನ ವರ್ಷ ನೋಡೋಣ’ ಎಂಬ ಉತ್ತರ ಪಡೆದು
ಹಿಂದಿರುಗುವುದಷ್ಟೆ.

ಪ್ರತಿವರ್ಷ ಬದಲಾಗುವ ನಿಯಮಗಳು, ಕಲಾವಿದರು ಒಂದು ಕ್ರಮವನ್ನು ಅನುಸರಿಸಲು ಕಷ್ಟಪಡುವಂತೆ ಮಾಡುತ್ತಾ ಸಮಸ್ಯೆಗಳನ್ನು ಸೃಷ್ಟಿಸುತ್ತಿವೆ. ಈ ಬಾರಿಯಂತೂ ನಿಯಮಗಳನ್ನು ಮಾಡುವಾಗ ಕಲಾರಂಗದ ನೈಜಸ್ಥಿತಿಯನ್ನು ಗಣನೆಗೇ ತೆಗೆದುಕೊಂಡಿಲ್ಲ. ಜುಲೈಗಿಂತ ಮೊದಲು ನಡೆಸಿದ ಕಾರ್ಯಕ್ರಮಗಳು ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ನಡೆದಿವೆ’ ಎಂದು ಆಹ್ವಾನ ಪತ್ರಿಕೆಯಲ್ಲಿ ಅಚ್ಚಾಗಿದ್ದರೂ, ಹೊಸ ನಿಯಮಗಳ ಪ್ರಕಾರ ಈ ಕಾರ್ಯಕ್ರಮಗಳಿಗೆ ಇಲಾಖೆಯ ಸಹಕಾರ ದೊರಕದು. ನಿಯಮಗಳ ಅಸಂಗತತೆ ಹೇಗಿದೆಯೆಂದರೆ, ಆಯಾ ಜಿಲ್ಲೆಯ ಸಹಾಯಕ ನಿರ್ದೇಶಕರನ್ನು (ಏಕೆಂದರೆ ಕಲಾವಿದರ ಕೈಗೆ ಸಿಕ್ಕುವವರು ಅವರೇ!) ಕಲಾವಿದರು- ಮುಖ್ಯ ಕಚೇರಿಯ ನಡುವೆ ಅಡಕತ್ತರಿಯಲ್ಲಿ ಸಿಲುಕಿಸು
ವುದನ್ನು ಬಿಟ್ಟರೆ, ಮತ್ಯಾವ ರೀತಿಯಲ್ಲಿಯೂ ಕಲಾರಂಗದ ಉನ್ನತೀಕರಣಕ್ಕೆ, ಕಾರ್ಯಕ್ರಮಗಳ ಗುಣಮಟ್ಟಕ್ಕೆ ಸಹಾಯ ಮಾಡುವಂತೆ ಕಾಣುವುದಿಲ್ಲ.

ಹೆಚ್ಚಿನ ಕಲಾವಿದರಿಗೆ ನಿಯಮಾವಳಿಗಳ ಪ್ರತಿ ತಲುಪಿರುವುದು ಆಗಸ್ಟ್‌ನಲ್ಲಿ. ಜೂನ್‍ನಿಂದ ಜನವರಿವರೆಗೆ ನಿಯಮಾನುಸಾರವಾಗಿ ಕನಿಷ್ಠ ಮೂರು ಕಾರ್ಯಕ್ರಮಗಳನ್ನು ಮಾಡಿ, ದಾಖಲೆಗಳ ಸಹಿತ ಅಪ್‍ಲೋಡ್ ಮಾಡುವಂತೆ ಅದರಲ್ಲಿ ನಿರ್ದೇಶಿಸಲಾಗಿದೆ. ಸಹಾಯಕ ನಿರ್ದೇಶಕರ ಜೊತೆ ಜಂಟಿ ನಿರ್ದೇಶಕರನ್ನೂ ಅತಿಥಿಗಳಾಗಿ ಆಹ್ವಾನಿಸುವಂತೆ ಹೇಳಲಾಗಿದೆ. ಏಪ್ರಿಲ್-ಮೇ ತಿಂಗಳುಗಳಲ್ಲಿ ಕಾರ್ಯಕ್ರಮಗಳನ್ನು ಮಾಡಿ, ನಿರ್ದೇಶಕರಿಗೆ ಆಹ್ವಾನ ಪತ್ರಿಕೆಯನ್ನಷ್ಟೇ ನೀಡಿದ್ದರೆ ಅದು ಧನಸಹಾಯದ ನಿಯಮಾವಳಿಗಳ ಪ್ರಕಾರ ಸಿಂಧುವಲ್ಲ! ಅಷ್ಟೇ ಅಲ್ಲ ಮತ್ತೊಂದು ಗಮನಾರ್ಹ ನಿಯಮವೆಂದರೆ, ಸಂಸ್ಥೆಯೊಂದು ತನ್ನ ಕಲಾತಂಡವನ್ನು ಇಲಾಖೆಯ ಪ್ರಾಯೋಜನೆಯಿಂದ ಕಾರ್ಯಕ್ರಮ ನೀಡಲು ಕರೆದೊಯ್ದರೆ, ಬೇರೆ ಕಲಾವಿದರನ್ನು ತಾನು ಕರೆಸಿ ಕಾರ್ಯಕ್ರಮ ನಡೆಸಲು ಧನಸಹಾಯಕ್ಕೆ ಅರ್ಜಿ ಸಲ್ಲಿಸುವಂತಿಲ್ಲ! ಈ ಹಿಂದೆ, ಸಂಸ್ಥೆಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಧನಸಹಾಯ ಸಿಕ್ಕಲಾರದು ಎಂಬ ನಿಯಮವೂ ಇತ್ತು! ಎಷ್ಟೋ ಸಂಸ್ಥೆಗಳಲ್ಲಿ ಕಲಾವಿದರೇ ಸಂಸ್ಥೆಯನ್ನು ಮುನ್ನಡೆಸುವ ಮುಂದಾಳುಗಳೂ, ಆಯೋಜಕರೂ ಆಗಿರುತ್ತಾರೆ. ಈ ಬಾರಿ ಆ ನಿಯಮವಿಲ್ಲ ಎನ್ನುವುದೇ ಸಮಾಧಾನ!

ನಿಯಮಗಳು ಬೇಕು. ಆದರೆ ನಿಯಮಗಳನ್ನು ಮಾಡುವಾಗ ಕಲಾವಿದರ ಅಭಿಪ್ರಾಯ, ಕಲಾ ಆಯೋಜನೆಯ ಕಷ್ಟಗಳನ್ನು ಗಣನೆಗೆ ತೆಗೆದುಕೊಳ್ಳುವುದು ಸಂಸ್ಕೃತಿ ಕ್ಷೇತ್ರದ ಈ ಹೊತ್ತಿನ ತುರ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.