ADVERTISEMENT

ಸಂಗತ: ಬದಲಾಗಿದೆ ಅಭಿವೃದ್ಧಿಯ ಪರಿಕಲ್ಪನೆ!

ಅಭಿವೃದ್ಧಿಯ ಹೆಸರಿನಲ್ಲಿ ಅನಾರೋಗ್ಯಕರ ಸ್ಪರ್ಧೆಗೆ, ಅಂಧ ಪೈಪೋಟಿಗೆ ನಾವು ಇಳಿದಿದ್ದೇವೆ

ಜಯಂತ ಕೆ.ಎಸ್.
Published 20 ಅಕ್ಟೋಬರ್ 2022, 23:15 IST
Last Updated 20 ಅಕ್ಟೋಬರ್ 2022, 23:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಜಕೀಯ ರಂಗದಲ್ಲಿರುವ ಸ್ನೇಹಿತನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಹಂಚಿಕೊಂಡ ಸುದ್ದಿಯೊಂದು ನನ್ನನ್ನು ಯೋಚನೆಗೆ ಹಚ್ಚಿತು. ‘ಅಭಿವೃದ್ಧಿಯ ಪರ್ವ ಆರಂಭ, ನಮ್ಮ ಊರಿಗೆ ಪೊಲೀಸ್ ಠಾಣೆ ಮಂಜೂರು’. ಊರಿಗೆ ಪೊಲೀಸ್ ಠಾಣೆ ಅಗತ್ಯವಿಲ್ಲ ಎಂಬುದು ಅಭಿವೃದ್ಧಿಯ ಮಾನದಂಡವೋ ಅಥವಾ ಪೊಲೀಸ್ ಠಾಣೆ ಮಂಜೂರಾಗಿದೆ ಎಂಬುದು ಅಭಿವೃದ್ಧಿಯ ಸಂಕೇತವೋ? ಅಭಿವೃದ್ಧಿಯ ವ್ಯಾಖ್ಯಾನವೇ ಒಂದು ರೀತಿಯಲ್ಲಿ ಈಗ ಅರ್ಥವಾಗದ ಸಂಗತಿ.

ನಾಲ್ಕಾರು ವರ್ಷಗಳ ಹಿಂದೆ ಧಾರವಾಡ ನಗರದ ಪ್ರಮುಖ ವೃತ್ತವೊಂದರಲ್ಲಿ ಹೈಮಾಸ್ಟ್‌ ದೀಪ ಅಳವಡಿಸಲಾಯಿತು. ಆ ದೀಪದ ಕಂಬದ ಕೆಳಗೆ ವಿಶಾಲವಾಗಿ ಹರಡಿಕೊಂಡ ಮರಗಳಿದ್ದವು. ಆ ಮರಗಳ ಮೇಲೆ ನೂರಾರು ಪಕ್ಷಿಗಳು ಗೂಡು ಕಟ್ಟಿ ವಾಸ ಮಾಡುತ್ತಿದ್ದವು. ಪ್ರತಿದಿನ ಮುಂಜಾನೆ ಮರದ ಕೆಳಗೆ ಮೂರು– ನಾಲ್ಕು ಪಕ್ಷಿಗಳು ಸತ್ತು ಬಿದ್ದಿರುತ್ತಿದ್ದವು. ಪಕ್ಷಿಗಳ ಸಾವಿಗೆ ಕಾರಣ ಏನು ಎಂದು ಹುಡುಕಿದಾಗ, ಕಣ್ಣು ಕುಕ್ಕುವ ಬೆಳಕು ಬೀಳುವುದರಿಂದ ಪಕ್ಷಿಗಳಿಗೆ ನಿದ್ದೆ ಮಾಡಲು ಸಾಧ್ಯವಾಗದೆ ಸತ್ತು ಬೀಳುತ್ತಿವೆ ಎಂಬುದು ತಿಳಿಯಿತು.

ದೊಡ್ಡ ನಗರಗಳಲ್ಲಿ ಸುರಕ್ಷತೆ ದೃಷ್ಟಿಯಿಂದ ಪ್ರಮುಖ ವೃತ್ತಗಳಲ್ಲಿ ನಲವತ್ತು – ಐವತ್ತು ಅಡಿ ಎತ್ತರದ ಹೈಮಾಸ್ಟ್‌ ದೀಪ ಅಳವಡಿಸಲಾಗಿದೆ. ಇದರ ಅಗತ್ಯ ಏನು, ಇದನ್ನು ಎಲ್ಲಿ ಅಳವಡಿಸಬೇಕು ಎಂಬುದರ ಬಗ್ಗೆ ಯೋಚಿಸುವುದಕ್ಕಿಂತ ಕೆಲವರು ಇದನ್ನು ಪ್ರತಿಷ್ಠೆ, ಅಭಿವೃದ್ಧಿಯ ಸಂಕೇತ ಎಂದು ಭಾವಿಸಿದ್ದಾರೆ! ಇದೀಗ ಈ ಹೈಮಾಸ್ಟ್‌ ದೀಪಗಳು ಉದ್ಯಾನಗಳಿಗೂ ಕಾಲಿಟ್ಟಿವೆ. ಪರಿಣಾಮವಾಗಿ, ಪಕ್ಷಿ ಸಂಕುಲವು ಉದ್ಯಾನಗಳ ಮರಗಳ ಮೇಲೂ ಜೀವಿಸಲಾಗದ ಪರಿಸ್ಥಿತಿ ಸೃಷ್ಟಿಯಾಗಿದೆ.

ADVERTISEMENT

ಅಭಿವೃದ್ಧಿ ಹೆಸರಿನಲ್ಲಿ ಅನಾರೋಗ್ಯಕರ ಸ್ಪರ್ಧೆಗೆ ನಾವು ಇಳಿದಿದ್ದೇವೆ. ಒಂದು ನಿರ್ದಿಷ್ಟ ಕಾರಣಕ್ಕೆ ಯಾವುದಾದರೂ ವೃತ್ತದಲ್ಲೋ ಅಥವಾ ಉದ್ಯಾನದಲ್ಲೋ ಹೈಮಾಸ್ಟ್‌ ದೀಪ ಅಳವಡಿಸಿದರೆ, ಪಕ್ಕದ ವಾರ್ಡ್‌ನವರು, ‘ಆ ವಾರ್ಡಲ್ಲಿ ಹೈಮಾಸ್ಟ್‌ ದೀಪ ಅಳವಡಿಸಿದ್ದಾರೆ, ನಮ್ಮಲ್ಲಿ ಏಕಿಲ್ಲ? ನಿಮಗೆ ಅದನ್ನು ತರುವ ತಾಕತ್ತು ಇಲ್ಲವೇ’ ಎಂದು ಅಲ್ಲಿನ ಜನಪ್ರತಿನಿಧಿಯನ್ನು ಹೀಯಾಳಿಸುವ ಮಟ್ಟಿಗೆ ಈಗ ಪರಿಸ್ಥಿತಿ ಹದಗೆಟ್ಟಿದೆ. ಇಂತಹ ಮೂದಲಿಕೆಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿಯಾದರೂ ಆತ ಅಗತ್ಯ ಇಲ್ಲದಿದ್ದರೂ ತನ್ನ ವಾರ್ಡ್‌ನಲ್ಲಿ ಒಂದು ಹೈಮಾಸ್ಟ್‌ ದೀಪ ಹಾಕಿಸುತ್ತಾನೆ. ಇದರ ಸಾಧಕ–ಬಾಧಕದ ಬಗ್ಗೆ ಗಮನಹರಿಸುವ ವ್ಯವಧಾನ ಯಾರಲ್ಲೂ ಉಳಿದಿಲ್ಲ.

ಹಳ್ಳಿಗಳಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಿಸಲು ಈಗ ಪೈಪೋಟಿ ಉಂಟಾಗಿರುವುದರ ಹಿಂದೆಯೂ ಅಭಿವೃದ್ಧಿ ಕುರಿತ ಇಂತಹ ಅಪಕ್ವ ಮನೋಧೋರಣೆಯೇ ಕಾರಣ. ಹಳ್ಳಿಯ ಯಾವುದಾದರೂ ಒಂದು ಬೀದಿಗೆ ಯಾವುದೋ ಒಂದು ಕಾರಣಕ್ಕೆ ಅಗತ್ಯ ಎಂದು ಅನ್ನಿಸಿ ಕಾಂಕ್ರೀಟ್‌ ರಸ್ತೆ ಮಾಡಿಸಿದರೆ ಮುಗಿಯಿತು; ಉಳಿದ ಬೀದಿಯವರ ಕಣ್ಣು ಕೆಂಪಾಗುತ್ತದೆ. ಅವರನ್ನು ಸಮಾಧಾನಪಡಿಸಲು ಅಗತ್ಯ ಇದೆಯೋ ಇಲ್ಲವೋ ಅಲ್ಲಿಯೂಕಾಂಕ್ರೀಟ್ ರಸ್ತೆ ಮಾಡಿಸಬೇಕಾದ ಅನಿವಾರ್ಯವು ಸ್ಥಳೀಯ ಜನಪ್ರತಿನಿಧಿಗಳಿಗೆ ಎದುರಾಗುತ್ತದೆ. ಜನರಿಗೆ ತಿಳಿಹೇಳುವ ನೈತಿಕತೆಯನ್ನು ಜನಪ್ರತಿನಿಧಿಗಳು ಉಳಿಸಿಕೊಂಡಿಲ್ಲವೋ ಅಥವಾ ಅರ್ಥ ಮಾಡಿಕೊಳ್ಳುವ ವಿನಯವು ಜನರಲ್ಲಿ ಉಳಿದಿಲ್ಲವೋ ಗೊತ್ತಾಗುವುದಿಲ್ಲ. ಅಂತೂ ಅಂಧ ಪೈಪೋಟಿ ಮುಂದುವರಿದಿದೆ! ಇಂತಹ ಸ್ಥಿತಿ ಒದಗಲು ಕಾರಣ ಏನು, ಇದರಲ್ಲಿ ಯಾರ ಪಾತ್ರ ಎಷ್ಟು ಎಂಬುದರ ಕುರಿತು ಬೇರೆ ಬೇರೆ ಕ್ಷೇತ್ರಗಳ ತಜ್ಞರು ಕೂಲಂಕಷವಾಗಿ ಅಧ್ಯಯನ ನಡೆಸಿದರೆ ಕುತೂಹಲಕರ ಅಂಶಗಳು ಹೊರಗೆ ಬರಬಹುದು.

ಮಾನವಕೇಂದ್ರಿತ ಅಭಿವೃದ್ಧಿಯ ಬೆನ್ನುಹತ್ತಿರುವ ಕಾರಣಕ್ಕೆ ಪ್ರಕೃತಿಯೇ ನಮಗೆ ಪಾಠ ಕಲಿಸುತ್ತಿದೆ. ಬೆಂಗಳೂರಿನಲ್ಲಿ ಈಚೆಗೆ ಆಗಿರುವ ಮಳೆಯ ಅವಾಂತರ, ಕೊಡಗಿನಲ್ಲಿ ಆಗುತ್ತಿರುವ ಭೂಕುಸಿತ... ಇವೆಲ್ಲ ನಮಗೆ ಪಾಠಗಳಾಗಬೇಕು. ಅಭಿವೃದ್ಧಿಯ ಹೆಸರಿನಲ್ಲಿ ನಮ್ಮಲ್ಲಿ ಆಗುತ್ತಿರುವ ಕಾರ್ಯಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕಲಿಯುವ ಆಸಕ್ತಿಯೇ ನಮ್ಮಲ್ಲಿ ಕಾಣಿಸುತ್ತಿಲ್ಲ ಎಂಬುದು ಹೆಜ್ಜೆ ಹೆಜ್ಜೆಗೂ ಮನವರಿಕೆ ಆಗುತ್ತದೆ. ಸುಸ್ಥಿರ ಅಭಿವೃದ್ಧಿ ಸಾಧ್ಯತೆಗಳನ್ನು ಶೋಧಿಸುವ ಕೆಲಸ ಈಗಲಾದರೂ ಆಗಬೇಕು. ಅದಕ್ಕೆ ಜನರ ಮನೋಧೋರಣೆಯನ್ನು ಒಗ್ಗಿಸುವಂತಹ ಪ್ರಯತ್ನಗಳು ಬಿರುಸು ಪಡೆಯಬೇಕು.

ಮೂಲಸೌಕರ್ಯಗಳನ್ನು ಒದಗಿಸುವುದು ಅಗತ್ಯವಾಗಿ ಆಗಬೇಕಾಗಿರುವ ಕೆಲಸ. ಆದರೆ, ಈ ವಿಚಾರದಲ್ಲಿ ಆದ್ಯತೆಗಳನ್ನು ಸರಿಯಾಗಿ ಗುರುತಿಸಬೇಕಾಗಿದೆ. ಕೆಲವರು ಮೂಲ ಸೌಕರ್ಯ ಒದಗಿಸುವುದನ್ನೇ ಸಮಗ್ರ ಅಭಿವೃದ್ಧಿ ಎಂದು ಭಾವಿಸಿಕೊಂಡಿದ್ದಾರೆ. ಶಾಲೆ, ಆಸ್ಪತ್ರೆ, ಆಟದ ಮೈದಾನ, ಗ್ರಂಥಾಲಯ ಇಂಥವುಗಳನ್ನು ಒದಗಿಸುವುದಕ್ಕೆ ಪ್ರಾಮುಖ್ಯ ಸಿಗಬೇಕು. ಆದರೆ ನಮ್ಮಲ್ಲಿ ರಸ್ತೆ ನಿರ್ಮಿಸುವುದೊಂದೇ ಮೂಲ ಸೌಕರ್ಯ ಎಂಬಂತಾಗಿದೆ. ಮೂಲಸೌಕರ್ಯ ವೃದ್ಧಿಯ ಜೊತೆಗೆ ಸಮುದಾಯದ ಉತ್ಪಾದಕ ಸಾಮರ್ಥ್ಯವೂ ವೃದ್ಧಿಯಾಗಬೇಕು. ಶೈಕ್ಷಣಿಕವಾಗಿ, ಆರ್ಥಿಕವಾಗಿ ಒಂದು ಸಮುದಾಯದ ಸಬಲೀಕರಣವನ್ನೂ ಅದು ಒಳಗೊಂಡಿರಬೇಕು.

ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆ ಏನು ಎಂಬುದನ್ನು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಮುದಾಯಕ್ಕೆ ಅರ್ಥ ಮಾಡಿಸುವ ಕೆಲಸ ಹಿಂದೆಂದಿಗಿಂತ ಇಂದು ಜರೂರಾಗಿ ಆಗಬೇಕಿದೆ.

ಲೇಖಕ: ಸಾಮಾಜಿಕ ಕಾರ್ಯಕರ್ತ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.