ಓದುವಿಕೆ ಎಂದೊಡನೆ, ‘ಕವಿರತ್ನ ಕಾಳಿದಾಸ’ ಚಿತ್ರದಲ್ಲಿ ಡಿಂಡಿಮ ಕವಿಯು ‘ಕವಿತಾ ಪ್ರೌಢಿಮೆಯು ವಾಗ್ದೇವಿಯ ಭಂಡಾರದ ಬೀಗಮುದ್ರೆಯನ್ನು ತಲೆಯಿಂದ ಕುಟ್ಟಿ ಕೆಡವಿದರಷ್ಟೇ ಲಭ್ಯವಾಗುವುದು’ ಎಂದು ಹೇಳುವ ಮಾತು ನೆನಪಿಗೆ ಬರುತ್ತದೆ. ಈ ಮಾತನ್ನು ಆಳವಾಗಿ ಅರ್ಥೈಸಿದರೆ, ಓದು ಎಂದರೆ ಕಲಿಯುವಿಕೆ, ಅರ್ಥೈಸುವಿಕೆ ಮತ್ತು ಜ್ಞಾನ ಪಡೆಯುವ ಪವಿತ್ರ ಪ್ರಕ್ರಿಯೆ ಎಂಬುದು ತಿಳಿಯುತ್ತದೆ. ಕೇಳುವುದು, ಚಿಂತಿಸುವುದು ಮತ್ತು ಅನುಭವಿಸುವುದು ಕ್ರಮಬದ್ಧ ಓದಿನ ಪ್ರಮುಖ ಅಂಗಗಳು. ಇಂತಹ ಶ್ರದ್ಧಾಪೂರ್ವಕ ಓದುವಿಕೆಯು ವ್ಯಕ್ತಿಯನ್ನು ಬುದ್ಧಿವಂತನನ್ನಾಗಿ ಮಾಡಿ, ತನ್ನ ಜೀವನದ ಅರ್ಥವನ್ನು ಹುಡುಕುವಂತೆ ಮಾಡುತ್ತದೆ ಎಂಬ ನಂಬಿಕೆಯಿದೆ.
ಹೀಗೆ ಓದಿನ ಪ್ರಕ್ರಿಯೆಯ ಕುರಿತಾಗಿ ಬಹಳಷ್ಟು ಸಾಂಪ್ರದಾಯಿಕ ನಿಲುವುಗಳಿವೆ. ಓದುವಿಕೆ ಎಂದರೆ ಬಹಳ ಗಂಭೀರವಾದ ಜ್ಞಾನಸಂಪ್ರಾಪ್ತಿಯ ಚಟುವಟಿಕೆ. ಅದು ಸಾಧ್ಯವಾಗುವುದು, ಪುಸ್ತಕಗಳ ಮುಂದೆ ಶ್ರದ್ಧೆಯಿಂದ ಕುಳಿತು, ಕಾಗದದ ಪ್ರತಿ ಪುಟವನ್ನೂ ಓದಿದಾಗ ಮಾತ್ರ, ಓದು ಒಂದು ಕಠಿಣವಾದ ಬೌದ್ಧಿಕ ಕಸರತ್ತು ಎಂಬುದು ಇಂತಹ ನಿಲುವುಗಳಲ್ಲಿ ಪ್ರಮುಖವಾದವು. ಇವನ್ನು ಆಧಾರವಾಗಿಟ್ಟು ನೋಡಿದರೆ, ಇಂದಿನ ತಲೆಮಾರಿನ ಮಕ್ಕಳು ಓದುವ ಸಂಸ್ಕೃತಿಯಿಂದ ವಿಮುಖರಾಗಿದ್ದಾರೆ ಎನಿಸುವುದು ಸಹಜ. ಇದು ಪೋಷಕರು ಮತ್ತು ಮೇಷ್ಟ್ರುಗಳ ಅಳಲು ಕೂಡ ಆಗಿದೆ. ಓದು ಎಂಬುದು ಹಿಂದಿನ ತಲೆಮಾರುಗಳ ಜೊತೆಯಲ್ಲೇ ಮರೆಯಾಯಿತು ಎಂಬುದು ಎಲ್ಲರ ಬಾಯಲ್ಲಿ ಬರುವ ಮಾತು. ಹಿಂದೆಲ್ಲ, ಓದುವಿಕೆಯು ಗದ್ಯ-ಪದ್ಯಕ್ಕೆ ಮಾತ್ರ ಸೀಮಿತವಾಗಿರದೆ, ಬದುಕಿನ ಸಂದೇಶಗಳು, ಜೀವನದ ಮೌಲ್ಯಗಳು ಮತ್ತು ಜ್ಞಾನವನ್ನು ನೀಡುವ ವಿಶಿಷ್ಟ ಸಾಧನದಂತಿತ್ತು. ಈಗ ಇಂತಹ ಓದಿನ ಸಂಸ್ಕೃತಿ ಸಂಪೂರ್ಣ ಮರೆಯಾಗಿದೆ ಎಂಬ ನಂಬಿಕೆ ಬಲವಾಗಿ ತಳವೂರಿದೆ.
ಹಾಗಾದರೆ ಹೊಸ ತಲೆಮಾರಿನ ವಿದ್ಯಾರ್ಥಿಗಳು ಓದುವುದೇ ಇಲ್ಲವೆ? ಹೀಗೆ ದೂರುವ ಬದಲು, ಅವರ ಆಲೋಚನೆ, ಓದಿನ ಕ್ರಮಗಳು ಮತ್ತು ಅಭ್ಯಾಸಗಳು ಮೂಲಭೂತವಾಗಿ ಬದಲಾಗಿರುವುದನ್ನು ಅರಿತುಕೊಳ್ಳಬೇಕಿದೆ. ತಂತ್ರಜ್ಞಾನ, ಡಿಜಿಟಲ್ ಜಗತ್ತು ಹಾಗೂ ವೇಗದ ಜೀವನಶೈಲಿಯು ಈ ತಲೆಮಾರಿನ ಓದುಗರನ್ನು ಪ್ರಭಾವಿತಗೊಳಿಸುತ್ತಿವೆ. ಈ ಓದುಗರಿಗೆ ಸಾಂಪ್ರದಾಯಿಕ ಓದಿನ ಕ್ರಮಕ್ಕಿಂತ ಹೆಚ್ಚು ವೇಗ, ತಾತ್ಕಾಲಿಕ ಮಾಹಿತಿ ಮತ್ತು ನವೀನ ಆಸಕ್ತಿಗಳ ಬಗ್ಗೆ ಹಸಿವು ಹೆಚ್ಚಾಗಿದೆ. ಓದುವಿಕೆಯು ಹಲವಾರು ಬೆಳವಣಿಗೆಗಳ ಪ್ರಭಾವದಿಂದ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ.
ಹೊಸ ತಲೆಮಾರಿನ ಓದುಗರು ತಂತ್ರಜ್ಞಾನವನ್ನು ಅಳವಡಿಸಿಕೊಂಡು ಓದುವಿಕೆಯ ಅನುಭವವನ್ನು ತಮ್ಮ ಅನುಕೂಲಕ್ಕೆ ಅನುಗುಣವಾಗಿ ವಿನ್ಯಾಸ ಮಾಡಿ ಕೊಳ್ಳುತ್ತಿದ್ದಾರೆ. ತ್ವರಿತ ಓದು ಮತ್ತು ಶೀಘ್ರ ಮಾಹಿತಿ ಲಭ್ಯತೆಯ ಹಾದಿಯಲ್ಲಿ ಸಾಗುವ ಓದುಗರು, ಆಳವಾದ ಜ್ಞಾನ ಮತ್ತು ಚಿಂತನೆಗಳಿಗೆ ಅಲಕ್ಷ್ಯ ತೋರುತ್ತಾರೆ ಎಂದು ಅನ್ನಿಸುವುದು ಸಹಜ. ಇಟಾಲಿಯನ್ ಚಿಂತಕ ಫ್ರಾಂಕೊ ಮೊರೆಟ್ಟಿ ‘ಡಿಸ್ಟಂಟ್ ರೀಡಿಂಗ್’ ಎಂಬ ಪರಿಕಲ್ಪನೆಯನ್ನು ಕೆಲ ವರ್ಷಗಳ ಹಿಂದೆ ಪರಿಚಯಿಸಿದ್ದು, ಆಧುನಿಕ ಸಾಹಿತ್ಯ ಅಧ್ಯಯನದಲ್ಲಿ ಅದು ಮಹತ್ವ ಪಡೆದಿದೆ.
ಹಿಂದಿನ ತಲೆಮಾರಿನವರಂತೆ ಒಂದು ಗ್ರಂಥವನ್ನು ಆಳವಾಗಿ ವಿಶ್ಲೇಷಿಸುವ ವಿಧಾನಕ್ಕೆ ಪರ್ಯಾಯವಾಗಿ ಸಾಹಿತ್ಯ ಗ್ರಂಥಗಳನ್ನು ಸಮೂಹವನ್ನಾಗಿ ಪರಿಗಣಿಸಿ, ಅವುಗಳ ರಚನಾ ವಿಧಾನವನ್ನು ಅರ್ಥ ಮಾಡಿಕೊಳ್ಳುವುದು ಡಿಸ್ಟಂಟ್ ರೀಡಿಂಗ್ ಕ್ರಮದ ಉದ್ದೇಶವಾಗಿದೆ. ಇಂದಿನ ತಂತ್ರಜ್ಞಾನ ಈ ರೀತಿಯ ಓದುವಿಕೆಯನ್ನು ಸಾಧ್ಯಗೊಳಿಸಿದೆ. ಹೊಸ ತಲೆಮಾರಿನ ಓದುಗರು ಕಾಗದದ ಪುಸ್ತಕಗಳ ಬದಲಾಗಿ ತಮ್ಮ ಹೆಚ್ಚಿನ ಗಮನವನ್ನು ಇ–ಪುಸ್ತಕಗಳು, ಆಡಿಯೊ ಬುಕ್‌ಗಳು ಮತ್ತು ಡಿಜಿಟಲ್ ಪೋಸ್ಟ್‌ಗಳಿಗೆ ತೋರಿಸುತ್ತಿದ್ದಾರೆ. ಡಿಜಿಟಲ್ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ವಿಶ್ವದ ಅಪಾರ ಸಾಹಿತ್ಯವು ಬರೀ ಕೆಲವು ಕ್ಲಿಕ್ಕುಗಳಲ್ಲಿ ಲಭ್ಯ ಇರುತ್ತದೆ. ಹೀಗಾಗಿ, ಹೆಚ್ಚಿನ ಸಂಖ್ಯೆಯ ಪುಸ್ತಕಗಳ ಮೇಲ್ಮಟ್ಟದ ಜ್ಞಾನವನ್ನು ಕಡಿಮೆ ಅವಧಿಯಲ್ಲಿ ಪಡೆಯುವುದು ಓದುಗರ ಆದ್ಯತೆಯಾಗಿರುವುದನ್ನು ಗಮನಿಸಬೇಕಿದೆ.
ಬಹಳಷ್ಟು ಸಾಂಪ್ರದಾಯಿಕ ಚಿಂತಕರಿಗೆ ಈ ವಿಧಾನ ಅಷ್ಟು ತೃಪ್ತಿಕರ ಅನ್ನಿಸುವುದಿಲ್ಲವಾದರೂ ಗಣನೀಯ ಪ್ರಮಾಣದಲ್ಲಿ ವಿದ್ಯಾರ್ಥಿಗಳು ತ್ವರಿತಗತಿಯಲ್ಲಿ ಮಾಹಿತಿಯ ಲಭ್ಯತೆಗಾಗಿ ಡಿಜಿಟಲ್ ಮಾಧ್ಯಮವನ್ನು ಅವಲಂಬಿಸುತ್ತಿದ್ದಾರೆ. ಬೃಹತ್ ಗಾತ್ರದ ಗ್ರಂಥಗಳನ್ನು ಓದಿ ಅವನ್ನು ಆಳವಾದ ಅಧ್ಯಯನ ಮಾಡುವ ವ್ಯವಧಾನ ಇಂದಿನ ತಲೆಮಾರಿನಲ್ಲಿ ಕಣ್ಮರೆಯಾಗಲು ಮೂಲ ಕಾರಣ, ತಂತ್ರಜ್ಞಾನ ಲಭ್ಯಗೊಳಿಸುವ ಬ್ಲಾಗ್‌ಗಳಲ್ಲಿ ಸಿಗುವ ಕಿರು ಲೇಖನಗಳು, ಡಿಜಿಟಲ್ ಕಥೆಗಳು ಮತ್ತು ವಿಡಿಯೊ ದೃಶ್ಯಗಳು. ಇವು ಗ್ರಂಥಾಲಯಗಳಿಗೆ ಹೋಗಿ ಪುಸ್ತಕಗಳನ್ನು ಹುಡುಕುವ ಪರಿಶ್ರಮವನ್ನು ತಪ್ಪಿಸಿ, ಓದುಗರಿಗೆ ಕಡಿಮೆ ಸಮಯದಲ್ಲಿ ಹೆಚ್ಚು ವಿಷಯವನ್ನು ನೀಡುತ್ತಿವೆ. ಹೊಸ ತಲೆಮಾರಿನ ಓದುಗರನ್ನು ವೈಶಿಷ್ಟ್ಯಪೂರ್ಣವಾಗಿ ಆಕರ್ಷಿಸುತ್ತಿವೆ.
ಉನ್ನತ ಶಿಕ್ಷಣ ಸಂಸ್ಥೆಗಳು ಈ ಸಂದರ್ಭದಲ್ಲಿ, ಓದುಗರು ಕಣ್ಮರೆಯಾಗಿದ್ದಾರೆ ಎಂದು ಕೊರಗುವ ಬದಲು, ಹೊಸ ಬಗೆಯ ಓದುಗರನ್ನು ಪರಿಗಣಿಸಿ ತಮ್ಮ ಪಾಠಕ್ರಮಗಳು, ಓದುವ ವಾತಾವರಣ ಮತ್ತು ಕಲಿಕಾ ವಿಧಾನಗಳಲ್ಲಿ ಹೊಸತನ ಅಳವಡಿಸಿಕೊಳ್ಳಲು ಸಜ್ಜಾಗುವುದು ಅವಶ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.