ADVERTISEMENT

ಸಂಗತ | ಗ್ರಹಣ: ಸರ್ವರಿಗೂ ಸಲ್ಲುವ ‘ಮುಕ್ತ ತರಗತಿ’

ಯೋಗಾನಂದ
Published 7 ನವೆಂಬರ್ 2022, 19:31 IST
Last Updated 7 ನವೆಂಬರ್ 2022, 19:31 IST
Sangata 08112022
Sangata 08112022   

ಅಕ್ಟೋಬರ್ 25ರಂದು ಸೂರ್ಯಗ್ರಹಣವಿತ್ತು. ಇಂದು (ನ. 8) ಚಂದ್ರಗ್ರಹಣ! ಇದೇನಿದು, ಒಂದೇ ಪಕ್ಷದಲ್ಲಿ ಎರಡು ಗ್ರಹಣಗಳೇ? ಪ್ರತೀ ಗ್ರಹಣದ ನಂತರ ಸೂರ್ಯ, ಚಂದ್ರ, ಭೂಮಿ ಹೆಚ್ಚುಕಡಿಮೆ ಅದೇ ರೇಖೆಯಲ್ಲಿರುವುದನ್ನು ಮುಂದುವರಿಸುವುದು ಸಂಭಾವ್ಯ. ಹಾಗಾಗಿ ಎರಡು ಅಥವಾ ಮೂರು ಗ್ರಹಣಗಳು ಅನುಕ್ರಮವಾಗಿ ಪರಿಣಮಿಸಬಹುದು. 2020ರಲ್ಲಿ ಜೂನ್ 5, ಜೂನ್ 21, ಜುಲೈ 5- ಕ್ರಮ
ಗತಿಯಲ್ಲಿ ಚಂದ್ರಗ್ರಹಣ, ಸೂರ್ಯಗ್ರಹಣ, ಚಂದ್ರ ಗ್ರಹಣ ಘಟಿಸಿದ್ದವು. ಅಂದರೆ ಒಂದು ಚಾಂದ್ರಮಾಸ ದಲ್ಲಿ ಮೂರು ಗ್ರಹಣಗಳು. ಗ್ರಹಣಗಳ ‘ದಿಬ್ಬಣ’ ಖಗೋಳ ವಿದ್ಯಮಾನಗಳ ಅಧ್ಯಯನ, ಸಂಶೋಧನೆಗೆ ಪ್ರೇರಣೆಯಾಗಬೇಕೇ ವಿನಾ ಇಲ್ಲಸಲ್ಲದ ಮೌಢ್ಯ, ಅಂಧಾಚರಣೆಗಳಿಗೆ ನಾಂದಿಯಾಗಬಾರದು.

ತನ್ನ ಲಿಖಿತ ಇತಿಹಾಸಕ್ಕೆ ಪೂರ್ವದಿಂದಲೇ ಮನುಕುಲವು ಗ್ರಹಣಗಳನ್ನು ವೀಕ್ಷಿಸುತ್ತ ಬಂದಿದೆ. ಈ ದೀರ್ಘ ಅವಧಿಯಾದ್ಯಂತ ಭೌತಿಕ ಜಗತ್ತಿನ ನಮ್ಮ ವೈಜ್ಞಾನಿಕ ಅರಿವು ವ್ಯಾಪಕವಾಗಿ ವೃದ್ಧಿಸಿದೆ. ಕ್ರಿ.ಪೂ. 2500ರ ಸುಮಾರಿನಲ್ಲೇ ಬ್ಯಾಬಿಲೋನಿಯನ್ನರು ಹಾಗೂ ಚೀನೀಯರು ಗ್ರಹಣ ಗಳನ್ನು ಮೊದಲೇ ಗ್ರಹಿಸುತ್ತಿದ್ದರು. ಗ್ರಹಣಗಳು ಬ್ರಹ್ಮಾಂಡದ ಅದ್ಭುತ ಗಡಿಯಾರಗಳು ಎಂದು ಮಹಾನ್ ವಿಜ್ಞಾನಿ ನ್ಯೂಟನ್ ಅಚ್ಚರಿಪಟ್ಟಿದ್ದರು. ಪ್ರತೀ ಗ್ರಹಣವು ಬಹುತೇಕ ಎಲ್ಲಾ ಆಕಾಶಕಾಯಗಳು ದುಂಡಾಗಿವೆ, ನಿಯಮಿತ ಚಲನೆಗೆ ಒಳಪಟ್ಟಿವೆ ಎನ್ನುವುದರ ಸಾಬೀತು. ಒಂದೊಂದು ಸಂಪೂರ್ಣ ಸೂರ್ಯಗ್ರಹಣವಂತೂ ಬೆಳಕು ಗುರುತ್ವಕ್ಕೆ ಬಾಗಿ ಶರಣಾಗುತ್ತದೆ ಎಂಬ ಐನ್‍ಸ್ಟೀನರ ಸಾಪೇಕ್ಷತಾ ಸಿದ್ಧಾಂತಕ್ಕೆ ಅಮೋಘ ಸಮರ್ಥನೆ.

ಇಷ್ಟಾದರೂ ಗ್ರಹಣದ ಕುರಿತು ಹಲವು ಹಳೆಯ ನಂಬಿಕೆಗಳೇ ತಾಂಡವವಾಡುತ್ತವೆ. ಯಾರೋ ಸೂರ್ಯನನ್ನು ಅಪಹರಿಸಿದ್ದಾರೆ ಅಥವಾ ನುಂಗಿದ್ದಾರೆ, ಸೂರ್ಯ– ಚಂದ್ರರು ಪರಸ್ಪರ ಸಮರ ಹೂಡಿದ್ದಾರೆ ಎನ್ನುವಂತಹ ಮಾತುಗಳು ಕೇಳಿಬರುತ್ತವೆ. ಈ ದಿಸೆ ಯಲ್ಲಿ ವಿಚಾರವಾದಿ ಡಾ. ಎಚ್.ನರಸಿಂಹಯ್ಯ ಹೇಳುತ್ತಿದ್ದರು: ‘ಚಂದ್ರನು ಸೂರ್ಯನನ್ನು ಮರೆಯಾಗಿಸಿ ಕತ್ತಲು ಆವರಿಸಿದಾಗ ಆದಿಮಾನವ ಹೆದರಿ ಗುಹೆ ಹೊಕ್ಕ. ಆಧುನಿಕ ಮಾನವ ತಾನೇನು? ಮನೆಯೆಂಬ ಗವಿ ಸೇರಿದ!’

ADVERTISEMENT

ಸೂರ್ಯನಿಂದ ಹೊರಟು ಕೋಟ್ಯಂತರ ಕಿ.ಮೀ. ಕ್ರಮಿಸಿ ಭೂಮಿಯನ್ನು ಸುರಕ್ಷಿತವಾಗಿ ತಲುಪುವ ವಿದ್ಯುತ್ ಕಾಂತೀಯ ವಿಕಿರಣಗಳನ್ನು ವಿಜ್ಞಾನಿಗಳು ಶತಮಾನಗಳಿಂದಲೂ ಅಭ್ಯಸಿಸಿದ್ದಾರೆ. ಗ್ರಹಣದಿಂದ ಭೂಮಿಯ ಜೀವಸಂಕುಲಕ್ಕೆ ಯಾವುದೇ ಕಂಟಕವಾಗದು. ಇಟಲಿಯಲ್ಲಿ ಗ್ರಹಣಗಳನ್ನು ವಿಪತ್ತುಗಳಿಗೆ ತಳುಕು ಹಾಕದೆ ವಿಶಿಷ್ಟವಾಗಿ ಬರಮಾಡಿಕೊಳ್ಳುತ್ತಾರೆ. ಚಂದ್ರಗ್ರಹಣ ನೋಡಿ ಕುಪ್ಪಳಿಸುತ್ತಾರೆ. ಸೂರ್ಯಗ್ರಹಣದ ಕಾಲದಲ್ಲಿ ಹೂ ಬಿಡುವ ಗಿಡಗಳನ್ನು ನೆಡುತ್ತಾರೆ. ಬಿಡುವ ಹೂವುಗಳು ಹೆಚ್ಚಿನ ಬಣ್ಣ ಬಣ್ಣಗಳಿಂದ ಕೂಡಿದ್ದು ಹಲ ದಿನಗಳ ವರೆಗೆ ತಾಜಾ ಇರುತ್ತವೆ ಎಂಬ ನಂಬಿಕೆ ಅವರಲ್ಲಿ.

ಇನ್ನು ಸೂರ್ಯಗ್ರಹಣವನ್ನು ನೋಡಬಾರದೆನ್ನಲು ಕಾರಣ ಸರಳವೇ ಇದೆ. ಎಂದಿನ ದಿನಗಳಲ್ಲಿ ಯಾರು ತಾನೆ ಝಳಪಿಸುವ ಸೂರ್ಯನನ್ನು ದೃಷ್ಟಿಸುತ್ತಾರೆ? ಸೂಕ್ತ ಸಲಕರಣೆಗಳನ್ನು ಧರಿಸಿ ಗ್ರಹಣ ವೀಕ್ಷಣೆಯ ಮಾತು ಬೇರೆ. ನೋಡಬಾರದ, ನೋಡಲಾಗದ ನೇಸರನನ್ನು ನೋಡಿದರೆ ಕಣ್ಣಿನ ರೆಪ್ಪೆ ತಂತಾನೇ ಮುಚ್ಚಿ ಕಣ್ಣಿಗೆ ರಕ್ಷಣೆ ನೀಡುತ್ತದೆ. ಅಂತೆಯೇ ಚಂದ್ರ ಗ್ರಹಣ ಜೀವವೈವಿಧ್ಯದ ಮೇಲೆ ಯಾವುದೇ ಮಾರಕ ಪರಿಣಾಮ ಬೀರದು.

ಚಂದ್ರನಿಗೆ ಗ್ರಹಣ ಹಿಡಿದಾಗ ಸೂರ್ಯನ ರಶ್ಮಿ ಗಳು ಭೂಮಿಯ ವಾತಾವರಣದ ಮೂಲಕ ಹಾದು ಚಂದ್ರನ ಮೇಲೆ ಬೀಳುತ್ತವೆ. ಹಾಗಾಗಿ ದೂಳು, ಕಸದ ಕಣಗಳ ಪ್ರತಿಫಲನದ ಪ್ರಭಾವದಿಂದ ಚಂದ್ರ ಯಾವುದೇ ಬಣ್ಣದಲ್ಲಿ ಕಾಣಿಸಬಹುದು. ಕೆಂಪೆಂದು ಕೇವಲ ಭಾಸವಾಗುವ ಚಂದ್ರನಿಗೆ ‘ರಕ್ತ ಚಂದ್ರ’ ಎಂದು ವ್ಯಾಖ್ಯಾನಿಸುವುದಿರಲಿ, ಇನ್ನೇನು ಪ್ರಳಯ, ವಿಪ್ಲವ ಹತ್ತಿರವೆಂಬ ಆತಂಕದ ಹಂಚಿಕೆ ಇದೆಯಲ್ಲ, ಅದು ಅಕ್ಷರಶಃ ಅಸಂಬದ್ಧ. ಯಾವುದೇ ಸನ್ನಿವೇಶವಿರಲಿ, ಚಂದ್ರ ವಿಶೇಷ ಕನ್ನಡಕದ ಮೂಲಕ ನೋಡುವಷ್ಟು ಅಪಾಯಕಾರಿ ಅಲ್ಲ. ಚಂದಿರನ ನೋಟವೇ ಭೂಮಿಯ ಪಾಲಿಗೆ ವರವೆನ್ನಿ. ಖಗೋಳದಲ್ಲಿನ ಯಾವುದೇ ಆಗು ಹೋಗುಗಳು ಮನುಷ್ಯನ ವರ್ತನೆಯನ್ನು ನಿಯಂತ್ರಿಸು ವುದಿಲ್ಲ. ಭವಿಷ್ಯದೊಂದಿಗೆ ಗ್ರಹಣಗಳನ್ನು ಹೊಂದಿಸು ವುದು ಮಾನಸಿಕ ಭ್ರಮೆಯಷ್ಟೆ.

ಕಾಕತಾಳೀಯ ವಾದ ಮತ್ತು ಭ್ರಾಂತಿ ಒಂದೇ ನಾಣ್ಯದ ಎರಡು ಮುಖಗಳು. ಕ್ರಿ.ಪೂ. 763ರ ಜೂನ್ 15ರಂದು ಇರಾಕಿನ ಅಶೂರ್ ಎಂಬಲ್ಲಿ ಪ್ರಭುತ್ವದ ವಿರುದ್ಧ ಜನ ದಂಗೆ ಎದ್ದಿದ್ದಕ್ಕೆ ಆ ದಿನ ಗೋಚರಿಸಿದ್ದ ಸೂರ್ಯಗ್ರಹಣವನ್ನು ಆರೋಪಿಸಲಾಗಿತ್ತು. 1133ರ ಆಗಸ್ಟ್ 12ರಂದು ಇಂಗ್ಲೆಂಡಿನ ದೊರೆ ಮೊದಲನೇ ಹೆನ್ರಿ ವಿಧಿವಶರಾಗಿದ್ದಕ್ಕೂ ಅಂದು ಸಂಭವಿಸಿದ್ದ ಸಂಪೂರ್ಣ ಸೂರ್ಯಗ್ರಹಣಕ್ಕೂ ಸಂಬಂಧ
ಕಲ್ಪಿಸಲಾಗಿತ್ತು.

ಇತಿಹಾಸದಲ್ಲಿ ದಾಖಲಾಗದ ಗ್ರಹಣಗಳು ಅವೆಷ್ಟೋ? ಗ್ರಹಣಗಳಿಗೆ ದಕ್ಷಿಣಧ್ರುವ, ಉತ್ತರಧ್ರುವ ಎಂಬ ತಾರತಮ್ಯವಿಲ್ಲ. ಗ್ರಹಣಗಳು ಸಂಭವಿಸದ ಭಾಗವಿಲ್ಲ. ಅವಕ್ಕೆ ಕಾಡೋ ಮೇಡೋ ಎಲ್ಲ ಒಂದೇ. ಅಂದಹಾಗೆ ಸೂರ್ಯಗ್ರಹಣವಿರಲಿ, ಚಂದ್ರಗ್ರಹಣ ಇರಲಿ ಸಂಭವಿಸಿದಾಗ ದೇಶಕ್ಕೆ, ಸಮಾಜಕ್ಕೆ ಒಳಿತು ಗಳೂ ಆಗಿವೆ. ಅಂಥವನ್ನೇಕೆ ಉದಾಹರಿಸದೆ ಚರಿತ್ರೆ ನಮ್ಮನ್ನು ಕತ್ತಲಲ್ಲಿ ಇರಿಸುತ್ತದೆ? ಗ್ರಹಣ ಎಲ್ಲರಿಗೂ ತೆರೆಯುವ ಮುಕ್ತ ತರಗತಿ. ಆಸಕ್ತಿ, ಕುತೂಹಲದಿಂದ ಹಾಜರಾಗೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.