ಇತ್ತೀಚೆಗೆ ಒಂದು ದಿನ ಬೆಳಿಗ್ಗೆ ಆರೂಕಾಲಿಗೆ ವಾಕಿಂಗ್ ಮುಗಿಸಿ ಮನೆಗೆ ಮರಳುತ್ತಿದ್ದೆ. ನೀಲಿ ಬಣ್ಣದ ಕಾರೊಂದು ನನ್ನೆದುರಿನಿಂದ ವೇಗವಾಗಿ ಹಾದುಹೋಯಿತು. ಒಳಗೆ ಚಾಲಕನ ಜಾಗ ಖಾಲಿ ಕಂಡಂತೆನಿಸಿ ಮತ್ತೊಮ್ಮೆ ನೋಡಿದರೆ, ಆರೋ ಏಳೋ ತರಗತಿಯವನಾಗಿರಬಹುದಾದ ಪುಟಾಣಿ ಬಾಲಕ! ಒಂದು ಸಲ ನನ್ನ ಹೃದಯ ಸ್ತಬ್ಧವಾದಂತಾಯಿತು. ಕಾರಿನ ನಂಬರ್ ನೋಡುವಷ್ಟರಲ್ಲಿ ಕಾರು ಹೋಗೇಬಿಟ್ಟಿತು.
ದೇಶದ ವಿವಿಧೆಡೆ ಬಾಲಕರು ವಾಹನ ಚಲಾಯಿಸಿ ಸಾವುನೋವಿಗೆ ಕಾರಣರಾದ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಅತಿಯಾಗಿಯೇ ಕೇಳಿಬರುತ್ತಿವೆ. 2016ರಲ್ಲಿ ಪುಣೆಯಲ್ಲಿ ಕುಡಿದು ಕಾರು ಚಲಾಯಿಸುತ್ತಿದ್ದ ಬಾಲಕ, ಬೈಕಿನಲ್ಲಿ ಹೋಗುತ್ತಿದ್ದ ಇಬ್ಬರು ಸಾಫ್ಟ್‌ವೇರ್ ಎಂಜಿನಿಯರುಗಳ ಸಾವಿಗೆ ಕಾರಣನಾಗಿದ್ದ. 2023ರ ಮೇ ತಿಂಗಳಿನಲ್ಲಿ ದೆಹಲಿಯಲ್ಲಿ ಹದಿನೇಳರ ಹುಡುಗ ಐಷಾರಾಮಿ ಕಾರೊಂದನ್ನು ಇಬ್ಬರು ವ್ಯಕ್ತಿಗಳ ಮೇಲೆ ಹಾಯಿಸಿ ಕೊಂದಿದ್ದ. ಇಂತಹ ಉದಾಹರಣೆಗಳು ನೂರಾರು.
ಹದಿನೆಂಟು ವರ್ಷವಾಗುವುದಕ್ಕಿಂತ ಮೊದಲು ವಾಹನ ಚಲಾಯಿಸಲು ಕಾನೂನು ಏಕೆ ಸಮ್ಮತಿಸುವುದಿಲ್ಲ ಎಂಬ ಮೂಲಭೂತ ವಿಚಾರವೇ ಬಹುತೇಕರಿಗೆ ಗೊತ್ತಿಲ್ಲ. ಕಾರು ಓಡಿಸುವುದೇನು ಬ್ರಹ್ಮವಿದ್ಯೆಯಲ್ಲ,
ಆದರೆ ರಸ್ತೆಯಲ್ಲಿ ಅನಿರೀಕ್ಷಿತ ಸಮಸ್ಯೆಗಳಾದಾಗ ನಿರ್ಧಾರ ತೆಗೆದುಕೊಳ್ಳುವ ಕ್ಷಮತೆ ಹದಿನೆಂಟಕ್ಕಿಂತ ಮೊದಲು ಇರುವುದಿಲ್ಲ.
ವಿವಾಹಕ್ಕಾಗಲೀ ವೋಟು ಹಾಕಲಾಗಲೀ ವ್ಯವಹಾರಕ್ಕಾಗಲೀ ಒಂದು ವಯಸ್ಸು ನಿಗದಿಯಾಗಿ
ರುವುದು ಕೂಡ ಅದಕ್ಕೇ. ಚಿಕ್ಕ ವಯಸ್ಸಿನ ಮಕ್ಕಳ ವಾಹನ ಚಾಲನೆ ಬೇರೆಯವರ ಜೀವವನ್ನು ಮಾತ್ರವಲ್ಲ, ವಾಹನ ಓಡಿಸುತ್ತಿರುವವರ ಬದುಕನ್ನೂ ಕೊನೆಗಾಣಿಸಿದ ಉದಾಹರಣೆಗಳಿವೆ. ಕೆಲವು ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಹೈಸ್ಕೂಲ್ ಓದುತ್ತಿದ್ದ ಅಕ್ಕ, ತಂಗಿ ಸ್ಕೂಟರ್‌ನಲ್ಲಿ ಹೋಗುವಾಗ ಅಪಘಾತಕ್ಕೀಡಾಗಿ ಸ್ಥಳದಲ್ಲೇ ಮೃತಪಟ್ಟಿದ್ದರು. ಹೆಲ್ಮೆಟ್ ಇಲ್ಲದೇ ವೇಗದ ಮಿತಿ ಇಲ್ಲದೇ ಮೂರ್ನಾಲ್ಕು ಹುಡುಗರು ಬೈಕು, ಸ್ಕೂಟರ್ ಓಡಿಸುವುದನ್ನು ದಿನನಿತ್ಯ ನಮ್ಮ ನಮ್ಮ ಊರುಗಳಲ್ಲಿ ನೋಡುತ್ತಲೇ ಇರುತ್ತೇವೆ.
ಮೊದಲೆಲ್ಲ ಮಹಾನಗರಗಳಲ್ಲಿದ್ದ ಈ ಪಿಡುಗು ಇದೀಗ ಹಳ್ಳಿಗಳಿಗೂ ವ್ಯಾಪಿಸಿರುವುದು ಸಮಾಜಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದೆ. ತಮ್ಮ ಕಿರಿವಯಸ್ಸಿನ ಮಕ್ಕಳಿಗೆ ಮುಖ್ಯ ಬೀದಿಗಳಲ್ಲಿ ಕಾರು, ಬೈಕು
ಓಡಿಸಲು ಬಿಡುವ ಬುದ್ಧಿಹೀನ ಪಾಲಕರಿಗೆ ಇದು ಗಂಭೀರ ಸಮಸ್ಯೆ ಎಂಬ ಅರಿವೇ ಆಗುತ್ತಿಲ್ಲ. ಅವರಿಗೋ ತಮ್ಮ ಮಕ್ಕಳ ವಾಹನ ಚಾಲನಾ ಕೌಶಲದ ಬಗ್ಗೆ ಹೇಳಿಕೊಳ್ಳುವ ಹುಚ್ಚು. ಇನ್ನು ಸ್ನೇಹಿತರ ಗುಂಪಿನಲ್ಲಿ ಬೈಕ್, ಕಾರು ಓಡಿಸಿ ಹೀರೊ ಆಗುವ ತವಕ ಈಗಿನ ಮಕ್ಕಳಿಗೆ. ಪಾಲಕರಿಗೆ ಬೆದರಿಕೆ ಹಾಕಿ ವಾಹನ ಓಡಿಸುವ ಮಕ್ಕಳೂ ಇದ್ದಾರೆ.
ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ ವರದಿ ಪ್ರಕಾರ, 2021ರಲ್ಲಿ 6,500 ಅಪಘಾತಗಳು 15ರಿಂದ 18 ವಯಸ್ಸಿನೊಳಗಿನವರಿಂದ ನಡೆದಿವೆ ಮತ್ತು 2,200 ಜನ ಸಾವನ್ನಪ್ಪಿದ್ದಾರೆ. 2023 ಮತ್ತು 2024ರಲ್ಲಿ ಸುಮಾರು ಹನ್ನೆರಡು ಸಾವಿರ ಅಪಘಾತಗಳು ಮಕ್ಕಳಿಂದ ನಡೆದಿವೆ. ಇನ್ನು ದಾಖಲಾಗದೇ ಇರುವ ಪ್ರಕರಣಗಳ ಸಂಖ್ಯೆ ಎಷ್ಟಿದೆಯೋ?
ಮೋಟರು ವಾಹನ ಕಾಯ್ದೆ– 1988ರ ಸೆಕ್ಷನ್ 199ಎ ಪ್ರಕಾರ, 18 ವರ್ಷಕ್ಕಿಂತ ಚಿಕ್ಕ ಮಕ್ಕಳು ವಾಹನ ಚಲಾಯಿಸಿದರೆ ಅಥವಾ ಅಪಘಾತ ಮಾಡಿದರೆ ಅವರ ಪಾಲಕರೇ ತಪ್ಪಿತಸ್ಥರೆಂದು ಪರಿಗಣಿಸಲ್ಪಡುತ್ತಾರೆ. ವಾಹನಕ್ಕೆ ವಿಮೆ ಏನಾದರೂ ಇಲ್ಲದೇ ಹೋದರಂತೂ ದಂಡ ಕಟ್ಟಲು ಪಡಿಪಾಟಲು ಅನುಭವಿಸಬೇಕಾ ಗುತ್ತದೆ. ಇಂತಹ ಗಂಭೀರ ವಿಷಯವಿದ್ದಾಗಲೂ ಕೆಲವು ಲೋಪದೋಷಗಳನ್ನು ಉಪಯೋಗಿಸಿಕೊಂಡು ತಪ್ಪಿತಸ್ಥರು ಬಚಾವಾಗಿ ಬಿಡುತ್ತಾರೆ.
ಪೂನಾದ ಪ್ರಕರಣದಲ್ಲಿ ಹುಡುಗನ ಪಾಲಕರು ಕಾನೂನಿನಲ್ಲಿರುವ ಲೋಪಗಳನ್ನು ಉಪಯೋಗಿಸಿ ಕೊಂಡು ಸುಲಭದಲ್ಲಿ ತಪ್ಪಿಸಿಕೊಂಡರು. ದೆಹಲಿಯ ಪ್ರಕರಣದಲ್ಲಿ ಹುಡುಗನ ಶ್ರೀಮಂತ ತಂದೆತಾಯಿ ಹಣ
ದಿಂದ ಇಡೀ ಪ್ರಕರಣವನ್ನೇ ಮುಚ್ಚಿಹಾಕುವ ಪ್ರಯತ್ನ ಮಾಡಿದ್ದರು. ಶ್ರೀಮಂತರನ್ನು ರಕ್ಷಿಸಲು ಇಡೀ ವ್ಯವಸ್ಥೆಯೇ ಟೊಂಕ ಕಟ್ಟಿ ನಿಲ್ಲುವುದು ಸಮಾಜದ ಕಟು ವ್ಯಂಗ್ಯ.
ಹಾಗಂತ ಪೊಲೀಸ್ ಇಲಾಖೆ ಸುಮ್ಮನೆ ಕುಳಿತಿಲ್ಲ. ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸುತ್ತಿದೆ. ಹೈದರಾಬಾದ್‌ನಲ್ಲಿ ಈ ಒಂದು ವರ್ಷದ ವರೆಗಿನ ಅವಧಿಯಲ್ಲಿ 1,275 ಪ್ರಕರಣಗಳನ್ನು
ದಾಖಲಿಸಿ ಮೂವತ್ತೈದು ವಾಹನಗಳ ನೋಂದಣಿ ಯನ್ನು ಸಂಚಾರ ಪೊಲೀಸರು ರದ್ದುಗೊಳಿಸಿದ್ದಾರೆ.
ಸಿಕ್ಕಿಹಾಕಿಕೊಂಡ ಬಾಲಕರಿಗೆ ಇಪ್ಪತ್ತೈದು ವರ್ಷ ತುಂಬುವವರೆಗೂ ಚಾಲನಾ ಪರವಾನಗಿ ಕೊಡುವುದಿಲ್ಲ ಎಂದೂ ಇಲಾಖೆ ಕಟ್ಟುನಿಟ್ಟಾಗಿ ಹೇಳಿದೆ. ಎಲ್ಲ ಕಡೆ ಈ ರೀತಿಯ ಶಿಸ್ತುಕ್ರಮ ಜರುಗಬೇಕು.
ಇದು ಕಾನೂನಿನ ವಿಷಯ ಮಾತ್ರವಲ್ಲ ಬದಲಾಗಿ ಒಂದು ಸಾಮಾಜಿಕ ವೈಫಲ್ಯ ಕೂಡ ಹೌದು. ಏಕೆಂದರೆ ಮಕ್ಕಳು ವಾಹನ ಓಡಿಸದಂತೆ ಗಮನ ಹರಿಸುವುದು ಸಮಾಜದ ಸಂಘಟಿತ ಜವಾಬ್ದಾರಿ. ರಸ್ತೆ ಅಪಘಾತದಲ್ಲಿ ಪ್ರತಿ ಗಂಟೆಗೆ ಕನಿಷ್ಠ ಇಪ್ಪತ್ತು ಜನ ದೇಶದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. 2030ರಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುವವರ ಸಂಖ್ಯೆಯನ್ನು ಅರ್ಧದಷ್ಟು ಇಳಿಸಲೇಬೇಕೆಂದು ಸರ್ಕಾರ ಗುರಿ ಇರಿಸಿಕೊಂಡಿದೆ. ಹೀಗಾಗಿ, ಚಿಕ್ಕ ಮಕ್ಕಳ ಕೈಗೆ ಕಾರು, ಬೈಕು ಸಿಗದಂತೆ ನೋಡಿಕೊಳ್ಳಲೇಬೇಕಾದ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.