ADVERTISEMENT

ಸಂಗತ: ನದಿಗಳ ಹೆಗಲ ಮೇಲೆ ಸರ್ಕಾರದ ಸವಾರಿ

ನದಿಗಳ ನೀರು ಸಮುದ್ರ ಸೇರುವುದನ್ನು ‘ವ್ಯರ್ಥ’ ಎಂದು ಭಾವಿಸುವವರಿಗೆ ಪರಿಸರದ ಸೂಕ್ಷ್ಮಗಳ ಅರಿವಿಲ್ಲ. ಲಾಭ–ನಷ್ಟದ ಲೆಕ್ಕಾಚಾರ ಪರಿಸರಕ್ಕೆ ಹಾನಿಕರ.

ಕೆ.ಎಚ್.ಓಬಳೇಶ್
Published 26 ಡಿಸೆಂಬರ್ 2025, 22:30 IST
Last Updated 26 ಡಿಸೆಂಬರ್ 2025, 22:30 IST
ಬೇಡ್ತಿ ನದಿ
ಬೇಡ್ತಿ ನದಿ   

ಅತಿ ಪ್ರಾಚೀನ ಹಾಗೂ ಅಭಿವೃದ್ಧಿ ಹೊಂದಿರುವ ಮಹಾನಗರಗಳೆಲ್ಲ ನದಿಗಳ ತಟದಲ್ಲಿವೆ ಎನ್ನುವುದು ಕಾಕತಾಳೀಯವಲ್ಲ; ಲಂಡನ್‌, ರೋಮ್‌, ಪ್ಯಾರೀಸ್‌, ಕೈರೊ ಮತ್ತು ದೆಹಲಿ – ಇವುಗಳ ಮೂಲಕ ಹರಿಯುವ ಜೀವಜಲವೇ ಆ ನಗರಗಳ ಉಚ್ಛ್ರಾಯ ಸ್ಥಿತಿಗೆ ಕಾರಣ. ನಾಗರಿಕತೆ ಬೆಳೆದಂತೆ ಮನುಷ್ಯ ಹರಿಯುವ ನದಿಗಳಿಗೆ ಅಣೆಕಟ್ಟುಗಳನ್ನು ನಿರ್ಮಿಸಿದ್ದಾನೆ. ಹಾಗಾಗಿಯೇ, ಇಂದು ಜಗತ್ತಿನ ಯಾವುದೇ ನದಿಯು ಸ್ವತಂತ್ರವಾಗಿ ಹರಿಯುತ್ತಿಲ್ಲ. ಪ್ರಸ್ತುತ ಆಳುವ ವರ್ಗವು ಅಭಿವೃದ್ಧಿಯ ಹಣೆಪಟ್ಟಿ ಅಂಟಿಸಿಕೊಂಡಿದ್ದು, ಅದರ ಹೆಸರಿನಲ್ಲಿ ಎಲ್ಲವನ್ನೂ ಧ್ವಂಸ ಮಾಡುತ್ತಿದೆ. ಇದಕ್ಕೆ ನದಿಗಳ ಜೋಡಣೆಯೂ ಸೇರ್ಪಡೆಯಾಗಿದೆ.

ರಾಷ್ಟ್ರಮಟ್ಟದಲ್ಲಿ ಈಗ ನದಿ ಜೋಡಣೆಯದ್ದೇ ಚರ್ಚೆ. ಈ ವಿಚಾರವಾಗಿ ‘ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ’ಯನ್ನೂ ರಚಿಸಲಾಗಿದೆ. ಇದರಡಿ ಎಲ್ಲಾ ರಾಜ್ಯಗಳಿಗೂ ಸದಸ್ಯತ್ವವಿದೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದಂತೆ ಗೋದಾವರಿ-ಕಾವೇರಿ ಹಾಗೂ ಬೇಡ್ತಿ-ವರದಾ ನದಿಗಳ ಜೋಡಣೆ ಕುರಿತು ಚರ್ಚಿಸಲಾಗಿದೆ. ‘ಬೇಡ್ತಿ-ವರದಾ‌ ಜೋಡಣೆಯಿಂದ ರಾಜ್ಯದ ಜನರಿಗೆ ಉಪಯೋಗವಾಗಲಿದೆ. ಕೇಂದ್ರವೇ ಯೋಜನೆಯ ಬಹುಪಾಲು ವೆಚ್ಚ ಭರಿಸಲಿದೆ. ಸಮುದ್ರಕ್ಕೆ ವ್ಯರ್ಥವಾಗಿ ಹರಿಯುವ ನೀರನ್ನು ಜನರ ಅನುಕೂಲಕ್ಕೆ ಬಳಸುವುದರಲ್ಲಿ ತಪ್ಪೇನು’ ಎಂಬುದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಪ್ರಶ್ನೆ.

ನದಿಗಳೆಂದರೆ ಬರೀ ನೀರು, ಮರಳು, ಕಲ್ಲುಬಂಡೆಗಳಲ್ಲ. ಇಂದಿಗೂ ನಾವು ಅವುಗಳನ್ನು ಮೂರ್ತ ಸ್ವರೂಪದಲ್ಲಿ ನೋಡುತ್ತಿರುವುದೇ ಇಂತಹ ಪ್ರಶ್ನೆಗಳ ಹುಟ್ಟಿಗೆ ಕಾರಣ. ದೇಶದಲ್ಲಿ ನದಿ
ಗಳಿಗೆ ಧಾರ್ಮಿಕವಾಗಿ ಪೂಜನೀಯ ಸ್ಥಾನ ನೀಡಿದರೂ ಅವುಗಳ ದಯನೀಯ ಸ್ಥಿತಿ ಕುರಿತು ನಮಗೆ
ಎಳ್ಳಷ್ಟೂ ಲಕ್ಷ್ಯವಿಲ್ಲ. ವೇದಿಕೆಗಳಲ್ಲಿಧಾರ್ಮಿಕ ಹಾಗೂ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಅವುಗಳ ಬಗ್ಗೆ ಮಾತನಾಡಿದರೂ ಅಂತಿಮವಾಗಿ ಎಲ್ಲವೂ ವ್ಯಾವಹಾರಿಕವಾಗಿ ಪರ್ಯಾವಸಾನ ಹೊಂದುತ್ತವೆ. ನದಿಗಳ ನೈಜ ಸಮಸ್ಯೆ ಏನು, ಅವುಗಳೇಕೆ ಸೊರಗುತ್ತಿವೆ ಎಂದು ಯೋಚಿಸುವುದಿಲ್ಲ. ಜನಪ್ರಿಯ ಕಾರ್ಯಕ್ರಮಗಳಲ್ಲಿ ತೇಲುತ್ತಿರುವ ಸರ್ಕಾರಗಳಿಗೆ ಅವುಗಳ ಆರ್ತನಾದ ಕೇಳಿಸುತ್ತದೆಯೆ? ಸಮುದ್ರಕ್ಕೆ ವ್ಯರ್ಥವಾಗಿ ಹರಿಯುವ ನದಿಗಳ ನೀರು ತಡೆಯಲು ಕ್ರಮ ತೆಗೆದುಕೊಳ್ಳುವಂತೆ ಪುಕ್ಕಟೆ ಸಲಹೆ ನೀಡುವವರೇ ಹೆಚ್ಚಿದ್ದಾರೆ. ಆದರೆ, ನದಿಗಳು ಸಮುದ್ರದ ಒಡಲು ಸೇರದಿದ್ದರೆ ಅವುಗಳ ಸೂಕ್ಷ್ಮ ಜೀವಪರಿಸರದಲ್ಲಾಗುವ ಪಲ್ಲಟದ ಅರಿವು ಎಷ್ಟು ಮಂದಿಗಿದೆ?

ADVERTISEMENT

ಸಮುದ್ರಕ್ಕೆ ಹರಿಯುವ ನದಿಗಳ ನೀರನ್ನು ಟಿಎಂಸಿ ಅಡಿಯಲ್ಲಷ್ಟೇ ನಾವು ಲೆಕ್ಕ ಹಾಕುತ್ತೇವೆ. ಆದರೆ, ಆ ನೀರು ತನ್ನ ಹಾದಿಯುದ್ದಕ್ಕೂ ಸೃಷ್ಟಿಸಿರುವ ಜೀವಪರಿಸರದ ಅರಿವು ನಮಗಿಲ್ಲ. ಜಲಸಸ್ಯ, ಮೀನು, ಸಸ್ತನಿ, ಸರೀಸೃಪ, ಮೃದ್ವಂಗಿ, ಸೀಗಡಿ, ಏಡಿ, ಕಪ್ಪೆ, ಜೇಡ ಇತ್ಯಾದಿ ಜೀವಿಗಳ ವಿಕಸನ ಹಾಗೂ ಅವುಗಳೊಂದಿಗೆ ಪರಾವಲಂಬಿ ಜೀವಿಗಳು ಬೆಸೆದುಕೊಂಡಿರುವ ಸರಪಳಿ ವಿಶಿಷ್ಟವಾದುದು. ನದಿ ತನ್ನ ಪಯಣದುದ್ದಕ್ಕೂ ಅಗಾಧ ಪ್ರಮಾಣದಲ್ಲಿ ಮರಳಿನ ರಾಶಿಯನ್ನು ಸೃಷ್ಟಿಸುತ್ತದೆ. ಆದರೆ, ಜತನದಿಂದ ಮರಳು ಗಣಿಗಾರಿಕೆ ಮಾಡಿ ಜೇಬು ತುಂಬಿಸಿಕೊಳ್ಳುವ ಬಗ್ಗೆಯಷ್ಟೆ ಕೆಲವರಿಗೆ ಚಿಂತೆ. ಜೀವಪರಿಸರದಲ್ಲಿ ಈ ಮರಳಿಗೂ ವಿಶಿಷ್ಟ ಸ್ಥಾನವಿದೆ. ನದಿಗಳ ಸಮೀಪದ ಭೂಪ್ರದೇಶಗಳಲ್ಲಿ ತೇವಾಂಶ ಹೆಚ್ಚಿಸುವಲ್ಲಿ ಇದರ ಪಾತ್ರ ಹಿರಿದು. ಆದರೆ, ನದಿಗಳ ಆಯಕಟ್ಟಿನ ಈ ಪ್ರದೇಶವು ಗುಣಮಟ್ಟ ಕಳೆದುಕೊಳ್ಳುತ್ತಿದೆ.

ಔದ್ಯೋಗಿಕ ಚಟುವಟಿಕೆಗಳಿಗೆ ಅತಿಹೆಚ್ಚಾಗಿ ನದಿಗಳ ನೀರು ಬಳಕೆ ಆಗುತ್ತದೆ. ಇದರಿಂದ ಸಮುದ್ರಕ್ಕೆ ಹರಿಯುವ ಸಿಹಿನೀರಿನ ಪ್ರಮಾಣ ಗಣನೀಯವಾಗಿ ತಗ್ಗಿದೆ. ಸಿಹಿನೀರು ಮತ್ತು ಉಪ್ಪುನೀರು ಸಮ್ಮಿಲನಗೊಳ್ಳುವ ಸಮುದ್ರತೀರ ಅಪೂರ್ಣ ಜೀವವೈವಿಧ್ಯದ ತಾಣ. ಈ ಉಪ್ಪುನೀರು ವಿಶಿಷ್ಟ
ವಾದ ಮ್ಯಾಂಗ್ರೋವ್‌ ಕಾಡುಗಳಿಗೆ ನೆಲೆ. ಅಲ್ಲಿನ ಸಸ್ಯಸಂಕುಲದ ಬೇರುಗಳು, ಕೆಸರು ನೀರು ವಿವಿಧ ಪ್ರಭೇದದ ಸೀಗಡಿ, ಏಡಿ, ಚಿಪ್ಪುಮೀನು, ಹಾವುಮೀನುಗಳಿಗೆ ಆವಾಸ.
ಬಿಳಿಹೊಟ್ಟೆಯ ಮೀನುಗಿಡುಗ, ಕಪ್ಪುತಲೆಯ ಮಿಂಚುಳ್ಳಿ, ಕಡಲಗೊರವ, ಕಡಲಕ್ಕಿಗಳು ಈ ಕೆಸರು ನೀರಿನಲ್ಲಿಯೇ ಆಹಾರ ಹೆಕ್ಕುತ್ತವೆ; ಮ್ಯಾಂಗ್ರೋವ್ ನೆಲೆಯಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ.

ನದಿಗಳ ಜೋಡಣೆಯಿಂದ ಮೀನುಗಳಿಗೇನು ತೊಂದರೆ ಎಂಬ ಪ್ರಶ್ನೆ ಸಹಜ. ಸ್ಥಳೀಯ ಮೀನುಗಳ ಜೀವಪರಿಸರ ಅಷ್ಟೊಂದು ಸರಳವಾಗಿಲ್ಲ. ಇದನ್ನು ಅರಿಯಬೇಕಾದರೆ ಹಾವುಮೀನುಗಳ ಜೀವನಚಕ್ರವನ್ನು ಅರ್ಥೈಸಿಕೊಳ್ಳಬೇಕು. ನದಿಗಳಲ್ಲಿ ವಾಸಿಸುವ ಹಾವುಮೀನುಗಳು ಸಂತಾನೋತ್ಪತ್ತಿಗೆ
ಸಮುದ್ರತೀರಕ್ಕೆ ಹೋಗುತ್ತವೆ. ಅಲ್ಲಿ ಮೊಟ್ಟೆಯಿಟ್ಟು ನದಿಗಳಿಗೆ ಹಿಂದಿರುಗುವಾಗ ಜಲಪಾತಗಳನ್ನು ಹಾರುತ್ತವೆ, ಬಂಡೆಗಳ ಮೇಲೆ ತೆವಳುತ್ತವೆ, ಒದ್ದೆಯಾದ ಹುಲ್ಲುಗಾವಲುಗಳನ್ನು ದಾಟುತ್ತವೆ; ತೇವಗೊಂಡಿರುವ ಮರಳನ್ನೂ ಅಗೆಯುತ್ತವೆ. ಅವುಗಳ ಹುಟ್ಟು-ಸಾವು ನಡುವಿನ ಅಂತರದಲ್ಲಿರುವ ಈ
ವಲಸೆ ಸಂಕೀರ್ಣವಾದುದು. ಜಲಾಶಯ ನಿರ್ಮಾಣ, ನದಿಗಳ ಜೋಡಣೆಯಿಂದ ಲಕ್ಷಾಂತರ ವರ್ಷಗಳಿಂದ ವಿಕಸಿತಗೊಂಡಿರುವ ಅವುಗಳ ಈ ಪಯಣ ಅಸ್ತವ್ಯಸ್ತಗೊಳ್ಳುತ್ತದೆ.

ನದಿಗಳು ಸಮುದ್ರ ಸೇರುವ ಉದ್ದಕ್ಕೂ ಮೀನುಗಾರಿಕೆ ನಡೆಯುತ್ತದೆ. ಮೀನು ಸಂತತಿ ನಾಶವಾದರೆ ಈ ವೃತ್ತಿ ನಂಬಿದ ಲಕ್ಷಾಂತರ ಬೆಸ್ತರ ಕುಟುಂಬಗಳ ಬದುಕು ಹಳಿ ತಪ್ಪುತ್ತದೆ. ಸರ್ಕಾರ ಅವರಿಗೆ ಪರ್ಯಾಯ ಉದ್ಯೋಗ ಕಲ್ಪಿಸಲು ಸಾಧ್ಯವೇ? ಆಳುವ ವರ್ಗದ ಚಿಂತನೆಗಳಲ್ಲಿ ಪ್ರಾಮಾಣಿಕತೆ ಮತ್ತು ಬದ್ಧತೆ ಇಲ್ಲದಿದ್ದರೆ ನದಿ ಜೋಡಣೆಯಂತಹ ಅವೈಜ್ಞಾನಿಕ ಯೋಜನೆಗಳು ಜೀವ ತಳೆಯುತ್ತವೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಲಾಭ-ನಷ್ಟವನ್ನು ಬದಿಗಿರಿಸಿ ಭವಿಷ್ಯದ ದಿನಗಳ ಬಗ್ಗೆ ಚಿಂತಿಸುವುದು ಯಾವಾಗ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.