ರಸ್ತೆ ಗುಂಡಿ
ಗೆಳೆಯರೊಬ್ಬರು ಜಪಾನ್ ಪ್ರವಾಸಕ್ಕೆ ಹೋದಾಗ ನಡೆದ ಪ್ರಸಂಗ ಇದು. ಟೋಕಿಯೊದಿಂದ ಹತ್ತಿರದಲ್ಲಿದ್ದ ಪ್ರವಾಸಿ ತಾಣವೊಂದನ್ನು ನೋಡಲು ಹೋಗುತ್ತಿದ್ದಾಗ ಅವರ ವಾಹನದ ವೇಗ ಇದ್ದಕ್ಕಿದ್ದಂತೆ ತಗ್ಗಿತು. ಇಣುಕಿ ನೋಡಿದರೆ ಕಾರ್ಮಿಕರ ಪುಟ್ಟ ತಂಡವೊಂದು ರಸ್ತೆಗುಂಡಿಯನ್ನು ಮುಚ್ಚುತ್ತಿತ್ತು. ಸ್ಥಳೀಯ ಆಡಳಿತದ ಸಿಬ್ಬಂದಿ ತಮ್ಮಿಂದ ಏನೋ ಮಹಾಪರಾಧವಾಗಿದೆ ಎಂಬ ಭಾವದಿಂದ ವಾಹನದಲ್ಲಿದ್ದ ಪ್ರತಿಯೊಬ್ಬರ ಬಳಿ ಬಂದು, ‘ಕ್ಷಮಿಸಿ, ರಸ್ತೆ ಗುಂಡಿ ಮುಚ್ಚುತ್ತಿದ್ದೇವೆ. ನಿಮಗೆ ಆಗಿರುವ ಅನನುಕೂಲಕ್ಕೆ ವಿಷಾದಿಸುತ್ತೇವೆ’ ಎಂದು ಹೇಳಿ, ಎಲ್ಲರಿಗೂ ಒಂದೊಂದು ಚಾಕೊಲೇಟ್ ಕೊಟ್ಟರು. ವಾಹನದಲ್ಲಿದ್ದವರು ಪ್ರವಾಸಿ ತಾಣವನ್ನು ನೋಡಿಕೊಂಡು ಬರುವ ಹೊತ್ತಿಗೆ ರಸ್ತೆ ದುರಸ್ತಿಯಾಗಿತ್ತು. ಸಿಬ್ಬಂದಿ ಮಾತ್ರ ಅಲ್ಲಿಯೇ ಇದ್ದರು. ಅವರ ಕೈಯಲ್ಲೊಂದು ಫಲಕ ಇತ್ತು. ‘ರಸ್ತೆ ಗುಂಡಿಯಿಂದ ನಿಮಗಾಗಿದ್ದ ಅನನುಕೂಲದ ಅರಿವು ನಮಗಿದೆ. ದುರಸ್ತಿಗೆ ಸಹಕರಿಸಿದ ನಿಮಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ’ ಎಂಬ ಸಂದೇಶ ಅದರಲ್ಲಿತ್ತು.
ಜಪಾನ್‌ನಲ್ಲಿ ನಡೆದ ಈ ಪ್ರಸಂಗದ ಕುರಿತು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಉರುಫ್ ಬಿಬಿಎಂಪಿ ಅಧಿಕಾರಿಗಳ ಮುಂದೇನಾದರೂ ನಾವು ಹೇಳಿದರೆ, ‘ಜಗತ್ತಿನ ಎಲ್ಲಾ ಚಾಕೊಲೇಟ್ ಫ್ಯಾಕ್ಟರಿಗಳಿಗೂ ನಾವೇ ಗ್ರಾಹಕರಾಗಬೇಕಾಗುತ್ತದೆ. ಧನ್ಯವಾದ ಹೇಳಲು ಸಾವಿರ ಸಾವಿರ ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ನೇಮಕ ಮಾಡಬೇಕಾಗುತ್ತದೆ’ ಎಂದು ನಕ್ಕುಬಿಟ್ಟಾರು. ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಎದುರು ಈ ಪ್ರಸಂಗ ಎತ್ತಿದರೆ, ‘ಜಪಾನ್‌ನವರಿಗೆ ಬುದ್ಧಿ ಇದೆಯೇನ್ರಿ? ಗುಂಡಿ ಬಿದ್ದಿದ್ದರಲ್ಲಿ ನಮ್ಮ ತಪ್ಪೇನಿದೆ? ಆ ಗುಂಡಿಯಲ್ಲಿ ಬೀಳದಂತೆ ಜಾಗ್ರತೆ ವಹಿಸಬೇಕಾದವರು ಜನ ತಾನೇ? ಚಾಕೊಲೇಟ್ ಕೊಡಲ್ಲ, ಬ್ಲ್ಯಾಕ್‌ಮೇಲ್ ತಂತ್ರ ನಡೆಯಲ್ಲ’ ಎಂದು ಕೋಪ ಮಾಡಿಕೊಂಡಾರು.
ಜಿಬಿಎಯು– ಹಿಂದಿನ ಬಿಬಿಎಂಪಿ– ಪ್ರಜೆಗಳ ತಲೆಯ ಮೇಲೆ ಕುಳಿತು ತೆರಿಗೆ ವಸೂಲಿ ಮಾಡುತ್ತದೆ. ತೆರಿಗೆ ತುಂಬಲು ತಡ ಮಾಡಿದವರಿಂದ ಬಡ್ಡಿಯನ್ನೂ ಪೀಕುವಂತೆ ಮಾಡಿ, ದಂಡವನ್ನು ಕೂಡ ಕಟ್ಟಿಸಿಕೊಳ್ಳುತ್ತದೆ. ಜನರಿಂದ ಅಷ್ಟೊಂದು ಹೊಣೆಗಾರಿಕೆ ಬಯಸುವ ಆಡಳಿತ ತನ್ನ ಹೊಣೆ ಮರೆತರೆ ಹೇಗೆ? ಸರಾಗ ಸಂಚಾರಕ್ಕೆ ಸುವ್ಯವಸ್ಥಿತ ರಸ್ತೆ, ದೈನಂದಿನ ಅಗತ್ಯಕ್ಕೆ ಬೇಕಾದಷ್ಟು ಶುದ್ಧ ನೀರಿನ ಪೂರೈಕೆ, ಬಳಸಿದ ನೀರು ಹಾಗೂ ತ್ಯಾಜ್ಯದ ಸಮರ್ಪಕ ವಿಲೇವಾರಿಗೆ ವ್ಯವಸ್ಥೆ – ಇಷ್ಟನ್ನೇ ಜನ ಸ್ಥಳೀಯ ಆಡಳಿತದಿಂದ ಬಯಸುವುದು. ದುರದೃಷ್ಟವಶಾತ್ ನಮ್ಮ ಯಾವ ನಗರ, ಪಟ್ಟಣ, ಗ್ರಾಮದ ಸ್ಥಳೀಯ ಆಡಳಿತದ ವ್ಯಾಪ್ತಿಯಲ್ಲೂ ಈ ಕನಿಷ್ಠ ಬೇಡಿಕೆ ಈಡೇರಿಸಲು ಸಾಧ್ಯವಾಗಿಲ್ಲ.
ರಸ್ತೆ ಗುಂಡಿಗಳಿಂದ, ಸಂಚಾರಕ್ಕೆ ಅಲ್ಲಿ ಎದುರಾಗುವ ಅಡೆತಡೆಗಳಿಂದ ಲಕ್ಷಾಂತರ ಮಾನವ ಗಂಟೆಗಳು ರಸ್ತೆಯಲ್ಲಿಯೇ ಪೋಲಾಗುತ್ತವೆ ಎಂಬುದನ್ನು ಟೋಕಿಯೊ ಮಾತ್ರವಲ್ಲ, ಏಷ್ಯಾದ ಹಲವು ನಗರಗಳು ಅರ್ಥ ಮಾಡಿಕೊಂಡಿವೆ. ಸಿಂಗಪುರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಸಂಚಾರಿ ಘಟಕಗಳು ನಗರದ ತುಂಬಾ ಗಸ್ತು ತಿರುತ್ತಲೇ ಇರುತ್ತವೆ. ವಿಯೆಟ್ನಾಂನ ಹೋ ಚಿ ಮಿನ್ ಸಿಟಿಯಲ್ಲಿ ಎಲ್ಲಿ ಓಡಾಡಿದರೂ ಗುಂಡಿಗಳು ಕಾಣುವುದಿಲ್ಲ. ‘ಇಲ್ಲಿ ರಸ್ತೆ ನಿರ್ವಹಣೆ ಹೇಗೆ’ ಎಂದು ಸ್ಥಳೀಯರನ್ನು ಕೇಳಿದರೆ, ‘ಎಲ್ಲಿಯಾದರೂ ಗುಂಡಿಗಳು ಗೋಚರಿಸಿದರೆ ಆ ರಾತ್ರಿಯೇ ಮುಚ್ಚಿಬಿಡುತ್ತಾರೆ’ ಎಂಬ ಉತ್ತರ ಸಿಗುತ್ತದೆ. ಆ ನಗರದ ರಸ್ತೆ ಬಳಕೆಯ ಆದ್ಯತೆ ಕೂಡ ಮೆಚ್ಚುಗೆ ಸೂಸುವಂತಿದೆ. ಪಾದಚಾರಿಗಳಿಗೆ ಅಲ್ಲಿ ಆದ್ಯತೆ. ನಂತರ ಸೈಕಲ್ ಸವಾರರು, ದ್ವಿಚಕ್ರ ವಾಹನಗಳ ಸವಾರರು, ಕಾರುಗಳು ಹಾಗೂ ದೊಡ್ಡ ವಾಹನಗಳಿಗೆ ಅನುಕ್ರಮವಾಗಿ ಮಹತ್ವ ನೀಡಲಾಗುತ್ತದೆ. ಚೀನಾದ ಸೆಂಜೆನ್‌ನಲ್ಲೂ ರಸ್ತೆಗಳ ನಿರ್ವಹಣೆಗೆ ಹೆಚ್ಚಿನ ಪ್ರಾಮುಖ್ಯ ನೀಡಲಾಗುತ್ತದೆ. ಇಚ್ಛಾಶಕ್ತಿ ಇದ್ದರೆ ಸಂಚಾರ ವ್ಯವಸ್ಥೆ ಸುಧಾರಣೆಗೆ ಬೇಕಾದಷ್ಟು ದಾರಿಗಳು, ಮಾದರಿಗಳು ನಮ್ಮ ಕಣ್ಣಮುಂದಿವೆ.
ರಸ್ತೆ ಇತಿಹಾಸದ ವಹಿ ನಿರ್ವಹಣೆ ಮಾಡಿದರೆ ಎಲ್ಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂಬ ಯೋಚನೆಯಿಂದ ಬಿಬಿಎಂಪಿ ಆಡಳಿತದ ಅವಧಿಯಲ್ಲಿ ಅದಕ್ಕಾಗಿ ಯತ್ನಗಳು ನಡೆದವು. ರಸ್ತೆಯನ್ನು ಯಾವಾಗ ದುರಸ್ತಿ ಮಾಡಲಾಗಿದೆ, ಗುತ್ತಿಗೆದಾರರ ಹೊಣೆ ಎಷ್ಟು ಸಮಯದವರೆಗೆ ಇದೆ ಎಂಬೆಲ್ಲಾ ವಿವರ ಅದರಲ್ಲಿ ಸಿಗುವಂತಹ ವ್ಯವಸ್ಥೆಯನ್ನು ರೂಪಿಸಲಾಗಿತ್ತು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಒಟ್ಟಿಗೆ ಸೇರಿ ಈ ಯೋಜನೆ ಹಳ್ಳ ಹಿಡಿಯುವಂತೆ ಮಾಡಿದರು. ಹೀಗಾಗಿ ರಸ್ತೆ ನಿರ್ವಹಣೆಯ ಒಳ್ಳೆಯ ಮಾದರಿಯೊಂದು ಶೈಶವಾವಸ್ಥೆಯಲ್ಲೇ ಕಣ್ಣುಮುಚ್ಚಿತು. ಈಗ ಎಲ್ಲಿ ನೋಡಿದರೂ ಗುಂಡಿಗಳೇ! ಸಾರ್ವಜನಿಕರ ಒತ್ತಡ ಹೆಚ್ಚಾದಾಗ ಜಿಬಿಎಯಿಂದ ಕೆಲವೊಂದು ಗುಂಡಿಗಳನ್ನೇನೋ ಮುಚ್ಚಲಾಯಿತು. ಗುಂಡಿಗಳಿಗೆ ಹಾಕಿದ ಜಲ್ಲಿಕಲ್ಲು ಎಲ್ಲಾ ಕಡೆಗೆ ಚೆಲ್ಲಾಪಿಲ್ಲಿಯಾಗಿ ಗುಂಡಿಗಳು ಇದ್ದ ಸ್ಥಿತಿಗಿಂತಲೂ ಮುಚ್ಚಿದ ಸನ್ನಿವೇಶ ಮತ್ತೂ ಭಯಾನಕವಾಯಿತು. ಈ ಅವ್ಯವಸ್ಥೆ ಜನರ ಜೀವದೊಂದಿಗೆ ಚೆಲ್ಲಾಟವಲ್ಲದೆ ಮತ್ತೇನು?
ಜಪಾನ್‌ನ ಫುಕುವೊಕಾದಲ್ಲಿ ಭೂಕಂಪನದಿಂದ ಕುಸಿದು 30 ಮೀಟರ್‌ನಷ್ಟು ದೊಡ್ಡ ಕಂದಕವಾಗಿ ಮಾರ್ಪಟ್ಟಿದ್ದ ರಸ್ತೆಯನ್ನು ಅಲ್ಲಿನ ಸರ್ಕಾರ ಆರೇ ದಿನಗಳಲ್ಲಿ ಮರುನಿರ್ಮಿಸಿ, ಸುಸ್ಥಿತಿಗೆ ತಂದಿತ್ತು. ನಾಗರಿಕರ ಕುರಿತು ತನ್ನ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ಅಲ್ಲಿನ ಆಡಳಿತ ಹೇಗೆ ಕೆಲಸ ಮಾಡುತ್ತಿದೆ ಎಂಬುದರ ದ್ಯೋತಕ ಇದು. ಇಂತಹ ಉತ್ತರದಾಯಿ ಆಡಳಿತವನ್ನು ಬೆಂಗಳೂರಿಗರು ಬಯಸುವುದು ತಪ್ಪೇ, ‘ಜಿಬಿಎ’ ನಿರ್ಮಾತೃಗಳೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.