
ಸಂಗತ ಅಂಕಣ |ಸಂಚಾರ ನಿಯಮ: ಬೇಕು ನಾಗರಿಕ ಪ್ರಜ್ಞೆ
ನಮ್ಮ ದೇಶದಲ್ಲಿ ರಸ್ತೆಗಳ ಸ್ಥಿತಿಗತಿ ಬಗ್ಗೆ ವಸ್ತುನಿಷ್ಠ ಅಭಿಪ್ರಾಯ ಏನೆಂದು ಕೇಳಿದರೆ– ತಜ್ಞರು, ಸಾರ್ವಜನಿಕರು ಹಾಗೂ ವಾಹನ ಸವಾರರಿಂದ ಎದುರಾಗುವ ನಿರೀಕ್ಷಿತ ಉತ್ತರ: ‘ರಸ್ತೆಗಳು ಅತಿ ಕೆಟ್ಟದಾಗಿವೆ’ ಎನ್ನುವುದೇ ಆಗಿದೆ. ಆದರೆ, ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ರಸ್ತೆಗಳ ಗುಣಮಟ್ಟವಷ್ಟೇ ಸಾಲದು, ವಾಹನ ಓಡಿಸುವವರ ಮನಃಸ್ಥಿತಿಯೂ ಉತ್ತಮವಾಗಿರಬೇಕು. ಬಹುಪಾಲು ಸಣ್ಣಪುಟ್ಟ ರಸ್ತೆ ಅಪಘಾತಗಳಿಗೆ ರಸ್ತೆಯ ಕಡೆ ಚಾಲಕನ ಸಂಪೂರ್ಣ ಗಮನ ಇರದಿರುವುದೇ ಕಾರಣವಾಗಿರುತ್ತದೆ.
ವಾಹನ ಚಾಲನೆ ಮಾಡುವಾಗ ವ್ಯಕ್ತಿಯ ವರ್ತನೆಗಳು ಹೇಗಿರಬೇಕು ಎನ್ನುವುದನ್ನು ‘ಅಗತ್ಯ ಸಾಮಾಜಿಕ ವರ್ತನೆ’ ಎಂದು ಕಲಿಸಿಕೊಡುವ ರಾಷ್ಟ್ರಗಳಿವೆ. ಆ ದೇಶಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆ. ನಮ್ಮಲ್ಲಿ ಅಡ್ಡಾದಿಡ್ಡಿ ಗಾಡಿ ಓಡಿಸುವುದು, ಎಲ್ಲೆಂದರಲ್ಲಿ ವಾಹನ ನಿಲ್ಲಿಸುವ ವರ್ತನೆಗಳು ಸಾಮಾನ್ಯವಾಗಿವೆ. ರಸ್ತೆ ನಿಯಮಗಳ ಉಲ್ಲಂಘನೆ ಚಾಲಕರಿಂದ ಮಾತ್ರವಲ್ಲ, ರಸ್ತೆ ಬಳಸುವ ಇತರರಲ್ಲಿಯೂ ಕಾಣಬಹುದು. ಶಿಕ್ಷೆ ಮತ್ತು ಶಿಕ್ಷಣದ ಕೊರತೆಯೇ ಇಂಥ ವರ್ತನೆಗಳಿಗೆ ಮುಖ್ಯ ಕಾರಣ.
ಕೆಟ್ಟ ರಸ್ತೆಗಳಿಗಿಂತಲೂ ಹದಗೆಟ್ಟ ಮನಃಸ್ಥಿತಿಯೇ ಗಂಭೀರ ಅಪಘಾತ ಗಳಿಗೆ ಮುಖ್ಯ ಕಾರಣ ಎನ್ನುವುದನ್ನು ಅಧ್ಯಯನಗಳು ಸಾಬೀತುಪಡಿಸಿವೆ.
ದೇಶ ಎಷ್ಟೇ ಮುಂದುವರಿದಿರಲಿ, ಎಷ್ಟೇ ಜಾಗೃತ ನಾಗರಿಕಪ್ರಜ್ಞೆ ಇರಲಿ, ಕೆಲವೊಮ್ಮೆ ವ್ಯಕ್ತಿಯ ಮನಸ್ಸು ಎಲ್ಲವನ್ನು ಬದಿಗಿರಿಸಿ ಅಪಾಯಕ್ಕೆ ಆಹ್ವಾನ ನೀಡುತ್ತದೆ. ಇದಕ್ಕೆ ಉತ್ತಮ ಉದಾಹರಣೆ, ಅಮೆರಿಕದ ಲಾಸ್ ಏಂಜಲೀಸ್ ಪ್ರದೇಶದ ಸುಸಜ್ಜಿತ ಹೆದ್ದಾರಿಯಲ್ಲಿ ಇತ್ತೀಚೆಗೆ ಸಂಭವಿಸಿದ ರಸ್ತೆ ಅಪಘಾತ. ಆ ದುರಂತದಲ್ಲಿ ಅಪಘಾತಕ್ಕೀಡಾದ ದುಬಾರಿ ಬೆಲೆಯ ಕಾರಿನ ಚಾಲನೆ ಮಾಡುತ್ತಿದ್ದವರು, 55 ವರ್ಷದ ವಾನ್ಸ್ ಎನ್ನುವ ವ್ಯಕ್ತಿ. ಆತಜನಪ್ರಿಯ ವಿಡಿಯೊ ಗೇಮ್ಸ್ ‘ಕಾಲ್ ಆಫ್ ಡ್ಯೂಟಿ’ ಸೃಷ್ಟಿಕರ್ತ. ಅಪಘಾತ ನಡೆದ ಕೆಲವು ಕ್ಷಣಗಳಲ್ಲಿ ಕಾರು ಕರಕಲಾಗಿತ್ತು. ಅಪಘಾತ ನಡೆದ ಕ್ಷಣ ಮತ್ತು ಕಾರು ಹತ್ತಿ ಉರಿಯುತ್ತಿರುವ ವಿಡಿಯೊ ದೃಶ್ಯವನ್ನು ಗಮನಿಸಿದರೆ, ವಾಹನದ ವೇಗ ಮತ್ತು ಮಾನಸಿಕ ಆವೇಗ ಅಪಘಾತಕ್ಕೆ ಕಾರಣವಿರಬಹುದು ಎನ್ನಿಸುತ್ತದೆ. ಗರಿಷ್ಠ ಸುರಕ್ಷತೆಯನ್ನು ಒಳಗೊಂಡ ವಾಹನ ಹಾಗೂ ಚಾಲಕನ ಕೌಶಲವು ಅತ್ಯುತ್ತಮವಾಗಿದ್ದರೂ, ಮನಸ್ಸು ಕ್ಷಣ ಹಿಡಿತ ತಪ್ಪಿದರೂ ದುರಂತ ತಪ್ಪಿದ್ದಲ್ಲ.
ಆಟೊಮೊಬೈಲ್ ಯಂತ್ರಗಳನ್ನು ಮನುಷ್ಯನ ಹತೋಟಿಗೆ ಸಿಗುವಂತೆಯೇ ರಚಿಸಲಾಗಿದ್ದರೂ, ಅವುಗಳ ಕಾರ್ಯಕ್ಷಮತೆಗೂ ಇತಿಮಿತಿಗಳಿವೆ. ಮನಸ್ಸು ಮತ್ತು ಶರೀರ ಸುಸ್ಥಿತಿಯಲ್ಲಿ ಇದ್ದಾಗಲೂ ನೆನಪುಗಳು ಯಾವುದೇ ಕಡಿವಾಣಕ್ಕೆ ಸಿಗದೆ ಪ್ರಜ್ಞೆಯನ್ನು ಸೆಳೆದಿಟ್ಟುಕೊಳ್ಳಬಲ್ಲವು. ಪರವಶತೆ ವ್ಯಕ್ತಿಯ ಅರಿವಿಗೆ ಬಂದು ನಿಯಂತ್ರಣದ ಪ್ರಯತ್ನಕ್ಕೂ ಮೊದಲೇ ದುರಂತ ಸಂಭವಿಸಿಬಿಡುತ್ತದೆ.
ಇತ್ತೀಚೆಗೆ ಬೆಂಗಳೂರಿನ ಹೊರವಲಯದ ಹೆದ್ದಾರಿ ಯೊಂದರಲ್ಲಿ ದ್ವಿಚಕ್ರ ವಾಹನ ಸವಾರನೊಬ್ಬ ಗಮನಸೆಳೆದ. ಆತನ ವಾಹನದ ಕಾಲಬಳಿಯ ಪುಟ್ಟ ಸ್ಥಳದ ಎರಡೂ ಕಡೆಗಳಲ್ಲಿ ಸಾಕುನಾಯಿಗಳ ತಲೆಗಳು ಕಾಣಿಸುತ್ತಿದ್ದವು. ಅವುಗಳ ಬಾಲ ಆಗಾಗ್ಗೆ ನೆಲಕ್ಕೆ ತಾಗುತ್ತಿತ್ತು. ಅವಸರದಲ್ಲಿ ಇರುವವನಂತೆ ವೇಗವಾಗಿ ವಾಹನ ಓಡಿಸುತ್ತಿದ್ದ ಆ ವ್ಯಕ್ತಿ ಮಧ್ಯವಯಸ್ಸಿನವರು. ಪ್ರಾಣಿಪ್ರಿಯರ ಪಾಲಿಗೆ ಅದು ಪ್ರಾಣ ಬಾಯಿಗೆ ಬರುವಂತಹ ಕೆಟ್ಟ ದೃಶ್ಯ.
ವಾಹನ ಚಾಲನೆ ಬರೀ ಅಭ್ಯಾಸದಿಂದ ಹೆಚ್ಚಾಗುವ ಕೌಶಲ ಎನ್ನುವುದು ಜನಪ್ರಿಯ ನಂಬಿಕೆ. ಆದರೆ, ರಸ್ತೆಯ ಸ್ಥಿತಿಗತಿ ಮತ್ತು ವ್ಯಕ್ತಿಯ ಮಾನಸಿಕತೆ ಬದಲಾಗುತ್ತಲೇ ಇರುತ್ತದೆ. ವ್ಯಕ್ತಿಯ ಬಲವಾದ ಅಭ್ಯಾಸಗಳಿಗೂ ಸವಾಲಾಗಿ ನಿಲ್ಲುವ ಸಹಜ ಮಾನಸಿಕ ಲಕ್ಷಣಗಳಾದ ಒಳಪ್ರೇರಣೆ, ಭಾವೋದ್ವೇಗ ಮತ್ತು ಅವಸರದ ಪ್ರತಿಕ್ರಿಯೆಗಳು ಚಾಲನೆಯ ಮೇಲಿನ ಹತೋಟಿಯನ್ನು ಕ್ಷಣದಲ್ಲಿ ತಪ್ಪಿಸಬಲ್ಲವು.
ವಿವಿಧ ಗಾತ್ರದ ವಾಹನಗಳು, ಅವುಗಳ ನಡುವೆಯೇ ಓಡಾಡುವ ಜನರು, ವಾಹನ ಚಲಾಯಿಸುತ್ತಾ ಮೊಬೈಲಿನಲ್ಲಿ ಮಾತನಾಡುವವರು, ಸತತವಾಗಿ ಹಾರ್ನ್ ಮಾಡುವವರು, ಕೊಂಚ ಸಂದು ಸಿಕ್ಕಿದರೂ ಮುನ್ನುಗ್ಗುವ ವಾಹನ ಸವಾರರು,ಸಂಚಾರ ನಿಯಂತ್ರಣದ ದೀಪಗಳಿಗೆ ಬೆಲೆ ಕೊಡದಿರುವ
ವರು, ಇಂಥ ವಿಭಿನ್ನ ಮನಃಸ್ಥಿತಿಯ ಜನರು ನಮ್ಮ ಚಾಲನೆಯ ಮೇಲೆ ಪ್ರಭಾವ ಬೀರುತ್ತಾರೆ. ಮುಂದೆ ಇರುವವರನ್ನು ಹಿಂದೆ ಹಾಕುವುದೇ ಬದುಕಿನ ಗುರಿ ಎಂದು ವರ್ತಿಸುವವರೂ ಇದ್ದಾರೆ. ಇಂಥ ಸನ್ನಿವೇಶಗಳಲ್ಲಿ ಮನಸ್ಸನ್ನು ಸ್ಥಿರವಾಗಿ ಇರಿಸಿಕೊಳ್ಳುವುದು ಯಾರಿಗಾದರೂ ಸಾಹಸವೇ ಸರಿ. ದಿನನಿತ್ಯವೂ ಇಂತಹ ಪರಿಸ್ಥಿತಿಯನ್ನು ಎದುರಿಸಲೇಬೇಕಾದ ನಾಗರಿಕರು ತಮ್ಮ ಮಾನಸಿಕ ಸಮತೋಲನ ಕಾಪಾಡಿಕೊಳ್ಳುವುದು ಸುಲಭವಲ್ಲ.
ತಳಮಳ, ಆತಂಕ, ಅವಸರ ಹೆಚ್ಚಿದಷ್ಟೂ ಮಾನಸಿಕ ಹಾಗೂ ದೈಹಿಕ ಆರೋಗ್ಯ ಹದಗೆಡುವ ಸಾಧ್ಯತೆಗಳು ಹೆಚ್ಚುತ್ತವೆ. ಹಾಗಾಗಿಯೇ ವಾಹನ ಓಡಿಸುವಾಗ ಸಾವಧಾನ, ಸಮಾಧಾನದ ಮನಃಸ್ಥಿತಿ ಕಲಿಸುವ ಪ್ರಯತ್ನ ಬಾಲ್ಯದಿಂದಲೇ ಆರಂಭವಾಗಬೇಕು. ಅನುಕರಣೆ ಎಂಬ ಕಲಿಕೆಯ ಕ್ರಮದ ಮೂಲಕವೇ ಮಕ್ಕಳಲ್ಲಿ ಸಂಚಾರಪ್ರಜ್ಞೆ ಮೂಡಿಸುವ ಅಗತ್ಯವಿದೆ. ಈ ಕಲಿಕೆ ಮಕ್ಕಳಿಗೆ ಮಾತ್ರ ಸೀಮಿತವಲ್ಲ. ಇದೊಂದು ಅಗತ್ಯ ನಾಗರಿಕ ಪ್ರಜ್ಞೆಯಾಗಿ ರೂಪುಗೊಳ್ಳಬೇಕು.
ಲೇಖಕ: ಮನೋವಿಜ್ಞಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.