ADVERTISEMENT

ಯಕ್ಷಗಾನದಲ್ಲಿ ಸಲಿಂಗ ಪ್ರೇಮ: ಪೂರ್ವಗ್ರಹಗಳೇ ಹೆಚ್ಚು– ನಡಹಳ್ಳಿ ವಸಂತ್‌ ಅವರ ಲೇಖನ

ಸಲಿಂಗ ಪ್ರೇಮ ಸುಲಭ ವ್ಯಾಖ್ಯಾನಕ್ಕೆ ದಕ್ಕುವಂತಹದ್ದಲ್ಲ. ಅದರ ಕುರಿತ ಸಾರ್ವಜನಿಕ ಚರ್ಚೆಯ ಬಹುತೇಕ ಅಭಿಪ್ರಾಯಗಳು ತಿಳಿವಳಿಕೆಯ ಕೊರತೆಯಿಂದ ಕೂಡಿವೆ.

ನಡಹಳ್ಳಿ ವಂಸತ್‌
Published 24 ನವೆಂಬರ್ 2025, 19:00 IST
Last Updated 24 ನವೆಂಬರ್ 2025, 19:00 IST
<div class="paragraphs"><p>ಸಲಿಂಗ ಪ್ರೇಮ: ಪೂರ್ವಗ್ರಹಗಳೇ ಹೆಚ್ಚು– ನಡಹಳ್ಳಿ ವಸಂತ್‌ ಅವರ ಲೇಖನ</p></div>

ಸಲಿಂಗ ಪ್ರೇಮ: ಪೂರ್ವಗ್ರಹಗಳೇ ಹೆಚ್ಚು– ನಡಹಳ್ಳಿ ವಸಂತ್‌ ಅವರ ಲೇಖನ

   

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆಯವರು ‘ಯಕ್ಷಗಾನದಲ್ಲಿ ಸಲಿಂಗಕಾಮ’ದ ಕುರಿತು ಆಡಿದ ಮಾತಿನಲ್ಲಿ ಕೆಲವು ತಪ್ಪು ತಿಳಿವಳಿಕೆಗಳಿವೆ. ಅವುಗಳನ್ನು ನಿವಾರಿಸುವ ಉದ್ದೇಶ ಈ ಬರಹದ್ದು.

‘ಕಾಮ’ ಎನ್ನುವ ಶಬ್ದಕ್ಕೆ ಧಾರ್ಮಿಕವಾಗಿ ಮತ್ತು ಸಾಮಾಜಿಕವಾಗಿ ಒಂದು ಮಟ್ಟದ ಕಳಂಕವನ್ನು ಅಂಟಿಸುತ್ತಾ ಬರಲಾಗಿದೆ. ಮೈಥುನ ಮೇಲ್ನೋಟಕ್ಕೆ ಒಂದು ದೈಹಿಕ ಕ್ರಿಯೆ ಎನ್ನುವುದೇನೋ ನಿಜ. ಆದರೆ, ಮಾನವರ ಲೈಂಗಿಕ ಪ್ರಪಂಚ ಬರೀ ಮೈಥುನ ಕ್ರಿಯೆಗೆ ಸೀಮಿತವಾಗಿರದೆ, ಅತ್ಯಂತ ಅನೂಹ್ಯವಾದ ಆಯಾಮಗಳನ್ನು ಒಳಗೊಂಡಿದೆ. ಇದರ ಆಳ ಅಗಲಗಳು ಸರಳ ವಿವರಣೆಗೆ ದಕ್ಕುವುದಿಲ್ಲ. ಹಾಗಾಗಿ, ಸಲಿಂಗಕಾಮದ ಬದಲಾಗಿ ‘ಸಲಿಂಗ ಪ್ರೇಮ’ ಎನ್ನುವ ಶಬ್ದವನ್ನು ಬಳಸುವುದು ಸೂಕ್ತ.

ADVERTISEMENT

‘ಯಕ್ಷಗಾನದಲ್ಲಿ ಹೋಮೋಸೆಕ್ಸ್‌ ಬೆಳಿತದೆ’ ಎನ್ನುವ ಮಾತುಗಳು ಯಾವುದೇ ವೈಜ್ಞಾನಿಕ ಮಾನದಂಡಗಳಿಗೆ ಹೊಂದುವುದಿಲ್ಲ. ಯಕ್ಷಗಾನ ಕಲಾವಿದರು ವರ್ಷದಲ್ಲಿ 6–8 ತಿಂಗಳು ತಮ್ಮ ಕುಟುಂಬದಿಂದ ದೂರವಿರುತ್ತಾರೆ. ಹಾಗಾಗಿ, ತಮ್ಮ ಲೈಂಗಿಕ ಒತ್ತಡವನ್ನು ನಿವಾರಿಸಿಕೊಳ್ಳಲು ಸಲಿಂಗ ಪ್ರೇಮಕ್ಕೆ ಮೊರೆಹೋಗುತ್ತಾರೆ ಎನ್ನುವುದು ಬಿಳಿಮಲೆ ಅವರ ಹೇಳಿಕೆಯಲ್ಲಿ ಮೇಲುನೋಟಕ್ಕೆ ಕಾಣಿಸುತ್ತದೆ. ಆದರೆ, ಸಲಿಂಗ ಪ್ರೇಮ ಎನ್ನುವುದು ಸಾಂದರ್ಭಿಕವಾಗಿರುವುದಿಲ್ಲ. ಪ್ರವೃತ್ತಿಯಿಂದ ಸಲಿಂಗ ಪ್ರೇಮಿಯಾದವರು ಮಾತ್ರ ತನ್ನದೇ ಲಿಂಗದ ವ್ಯಕ್ತಿಗಳೊಡನೆ ಲೈಂಗಿಕ ಸಂಪರ್ಕ ಹೊಂದಬಲ್ಲರು. ಕೆಲವರು ಹೆಣ್ಣು ಮತ್ತು ಗಂಡು ಇಬ್ಬರ ಕಡೆಗೂ ಸಮಾನವಾದ ಲೈಂಗಿಕ ಆಸಕ್ತಿ ಹೊಂದಿರಬಹುದು. ಇವರನ್ನು ದ್ವಿಲಿಂಗ ಪ್ರೇಮಿಗಳು ಎನ್ನುತ್ತಾರೆ. ಉಳಿದಂತೆ ಹೆಚ್ಚಿನವರು ಭಿನ್ನಲಿಂಗ ಪ್ರೇಮಿಗಳೇ. ಇಂಥವರಿಗೆ ಭಿನ್ನಲಿಂಗದ ಸಂಗಾತಿ ಸಿಗದಿದ್ದಾಗ ಸಲಿಂಗ ಪ್ರೇಮಕ್ಕೆ ಮೊರೆಹೋಗುತ್ತಾರೆ ಎನ್ನುವುದು ಸತ್ಯವಲ್ಲ. ಹಾಗಾಗಿ ಸಲಿಂಗ ಪ್ರೇಮ, ದ್ವಿಲಿಂಗ ಪ್ರೇಮ ಅಥವಾ ಭಿನ್ನಲಿಂಗ ಪ್ರೇಮಗಳೆಲ್ಲಾ ಸಾಂದರ್ಭಿಕವಲ್ಲ. ಅದು ಆಯಾ ವ್ಯಕ್ತಿಯ ಮೂಲಭೂತ ಪ್ರವೃತ್ತಿ ಮಾತ್ರ ಆಗಿರುತ್ತದೆ.

ಮಾನವರಲ್ಲಿ ಎಷ್ಟು ಜನ ಸಲಿಂಗ ಪ್ರೇಮಿಗಳಿರಬಹುದು ಮತ್ತು ದ್ವಿಲಿಂಗ ಪ್ರೇಮಿಗಳಿರಬಹುದು ಎನ್ನುವುದನ್ನು ನಿಖರವಾಗಿ ಹೇಳಲಾಗುವುದಿಲ್ಲ. ಬೇರೆ ಬೇರೆ ದೇಶದ ಸಮೀಕ್ಷೆಗಳಲ್ಲಿ ಭಿನ್ನ ಭಿನ್ನ ಅಂಕಿಸಂಖ್ಯೆಗಳು ಕಂಡುಬಂದಿವೆ. ಜೊತೆಗೆ ಗಂಡೋ ಹೆಣ್ಣೋ ಎನ್ನುವುದರ ಆಧಾರದ ಮೇಲೆಯೂ ಈ ಅಂಕಿಸಂಖ್ಯೆಗಳಲ್ಲಿ ವ್ಯತ್ಯಾಸವಾಗುತ್ತದೆ. ಆದರೆ, ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಶೇ 4ರಷ್ಟು
ಸಲಿಂಗ ಪ್ರೇಮಿಗಳಿರಬಹುದು ಮತ್ತು ಇನ್ನೂ ಶೇ 4ರಷ್ಟು ಜನ ದ್ವಿಲಿಂಗ ಪ್ರೇಮಿಗಳಾಗಿರಬಹುದು ಎನ್ನುವುದು ಒಂದು ಅಂದಾಜು. ದ್ವಿಲಿಂಗ ಪ್ರೇಮಿಗಳ ಒಂದು ಭಾಗದ ಜನಸಂಖ್ಯೆ ಸಲಿಂಗ ಪ್ರೇಮಿಗಳ ಅಂಕಿಸಂಖ್ಯೆಯಲ್ಲಿಯೂ ಬೆರೆತುಹೋಗುವ ಸಾಧ್ಯತೆಗಳಿವೆ. ಬರೀ ಭಿನ್ನಲಿಂಗದವರೊಡನೆ ಲೈಂಗಿಕ ಆಸಕ್ತಿ ಹೊಂದಿಲ್ಲದ (ವಿಭಿನ್ನ ಲೈಂಗಿಕ ಪ್ರವೃತ್ತಿ ಹೊಂದಿರುವವರು) ಎಲ್ಲರನ್ನೂ ಒಟ್ಟಾಗಿ ಸೇರಿಸಿ ‘ಎಲ್‌ಜಿಬಿಟಿಕ್ಯೂ’ ಎಂದು ವರ್ಗೀಕರಿಸಲಾಗುತ್ತದೆ. ಹೊಸ ಹೊಸ ಮಾಹಿತಿಗಳು ದೊರೆತಂತೆ ಈ 5 ಅಕ್ಷರಗಳಿಗೆ ಹೊಸ ಹೊಸ ಅಕ್ಷರಗಳು ಸೇರಿಕೊಳ್ಳುತ್ತಾ ಹೋಗುತ್ತಿವೆ. ಹಾಗಾಗಿ, ಕೆಲವು ದೇಶಗಳಲ್ಲಿ ಮುಂದೆ ಗುರುತಿಸಬಹುದಾದ ವಿಭಿನ್ನ ಲೈಂಗಿಕ ಆಸಕ್ತಿ ಹೊಂದಿರುವವರನ್ನೆಲ್ಲಾ ಸೇರಿಸಿ ‘ಎಲ್‌ಜಿಬಿಟಿಕ್ಯೂ+’ ಎಂದು ಕರೆಯಲಾಗುತ್ತದೆ. ಇಂತಹವರ ಸಂಖ್ಯೆ ಒಟ್ಟು ಜನಸಂಖ್ಯೆಯ ಶೇ 10ರಷ್ಟು ಇರಬಹುದು ಎನ್ನುವುದು ಸಾಮಾನ್ಯವಾಗಿ ಒಪ್ಪುವ ಮಾತು.

ಯಕ್ಷಗಾನ ಕಲಾವಿದರಲ್ಲಿಯೂ ಇಂತಹ ಶೇ 10ರಷ್ಟು ಜನರು ಇದ್ದೇ ಇರುತ್ತಾರೆ. ಇಂಥವರು ಒಂದು ಮೇಳದ ಅಧಿಕಾರ ಸ್ಥಾನದಲ್ಲಿದ್ದಾಗ, ಸಹಕಲಾವಿದರಿಗೆ ಲೈಂಗಿಕ ಕಿರುಕುಳ ನೀಡಿರುವ ಸಾಧ್ಯತೆಗಳನ್ನೂ ಒಪ್ಪಿಕೊಳ್ಳಬಹುದು. ಅಂತಹ ಸಂದರ್ಭಗಳಲ್ಲಿ ಸಹಕಲಾವಿದರು ಲೈಂಗಿಕ ಹಿಂಸಾಚಾರವನ್ನು ಅನುಭವಿಸಿರುತ್ತಾರೆ. ಹೀಗೆ ಹಿಂಸಾಚಾರಕ್ಕೆ ಒಳಗಾದವರು ಸಿದ್ಧರಾಗಿದ್ದರೆ ಕಾನೂನಿನ ದೃಷ್ಟಿಯಿಂದ ಪರಿಹಾರ ಹುಡುಕಬಹುದು. ಆದರೆ, 6–8 ತಿಂಗಳು ಕುಟುಂಬದಿಂದ ದೂರವಿರುವ ಕಾರಣಕ್ಕಾಗಿ ‘ಯಕ್ಷಗಾನದಲ್ಲಿ ಹೋಮೋಸೆಕ್ಸ್‌ ಬೆಳಿತದೆ’ ಎನ್ನುವುದು ತಪ್ಪು ತಿಳಿವಳಿಕೆಗೆ ಎಡೆಮಾಡಿಕೊಡುತ್ತದೆ.

ಬಿಳಿಮಲೆ ಅವರ ಹೇಳಿಕೆಗೆ ಬಂದ ಉಗ್ರವಾದ ಪ್ರತಿಕ್ರಿಯೆ, ಎಫ್‌ಐಆರ್‌– ಎಲ್ಲವೂ ಸಲಿಂಗ ಪ್ರೇಮದ ಕುರಿತು ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿರುವ ತಪ್ಪುಗ್ರಹಿಕೆಗಳ ಮತ್ತು ಹೀನಭಾವಗಳ ಪ್ರದರ್ಶನವೇ ಆಗಿವೆ. ಬಹುಸಂಖ್ಯಾತ ಭಿನ್ನಲಿಂಗ ಪ್ರೇಮಿಗಳು ಧರ್ಮ–ಸಂಸ್ಕೃತಿಗಳ ಹಣೆಪಟ್ಟಿಯಲ್ಲಿ ವಿಭಿನ್ನ ಲೈಂಗಿಕ ಆಸಕ್ತಿ ಹೊಂದಿರುವವರನ್ನು ಸಾಮಾಜಿಕ ಕಳಂಕಕ್ಕೆ ಒಳಪಡಿಸುತ್ತಲೇ ಬಂದಿದ್ದಾರೆ. ಸಲಿಂಗ ಪ್ರೇಮ ಒಂದು ಕಾಯಿಲೆ, ಅದನ್ನು ಗುಣಪಡಿಸಿಕೊಡುತ್ತೇವೆ ಎಂದು ಹೇಳುವ ಧಾರ್ಮಿಕ ಮುಖಂಡರು, ನಕಲಿ ವೈದ್ಯರು ನಮ್ಮ ನಡುವೆಯೇ ಸಕ್ರಿಯರಾಗಿದ್ದಾರೆ.

ಸರ್ಕಾರದ ಕಾನೂನುಗಳು, ನ್ಯಾಯಾಲಯದ ಆದೇಶಗಳು ಜನಸಾಮಾನ್ಯರಲ್ಲಿ ಶತಶತಮಾನಗಳಿಂದ ಬೇರೂರಿರುವ ತಪ್ಪುಗ್ರಹಿಕೆಗಳನ್ನು ದೂರಮಾಡಲು ಸಾಧ್ಯವಾಗುತ್ತಿಲ್ಲ. ‘ಎಲ್‌ಜಿಬಿಟಿಕ್ಯೂ+’ ಸಮುದಾಯದ ಕುರಿತಾಗಿ ಈಗಾಗಲೇ ಇರುವ ಹೀನಭಾವವನ್ನು ಹೋಗಲಾಡಿಸಲು ಬಿಳಿಮಲೆಯವರ ಅಸಾಂದರ್ಭಿಕ ಹಾಗೂ ಅಪೂರ್ಣವಾದ ಹೇಳಿಕೆಗಳು ಯಾವುದೇ ರೀತಿಯ ಸಹಾಯ ಮಾಡುವುದಿಲ್ಲ. ಸಲಿಂಗ ಪ್ರೇಮದ ವಿಚಾರವನ್ನು ಆ ಕ್ಷೇತ್ರದ ತಜ್ಞರಿಗೆ ಮತ್ತು ಅವರನ್ನು ಸಮಾಜದ ಮುಖ್ಯಧಾರೆಗೆ ತರಲು ಶ್ರಮಿಸುತ್ತಿರುವವರಿಗೆ ಬಿಟ್ಟರೆ ಅಂತಹ ಪ್ರಯತ್ನಗಳಿಗೆ ಸಹಾಯ ಮಾಡಿದಂತಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.