ADVERTISEMENT

ಬಂಡವಾಳ ತೊಡಿಸುವ ನೈತಿಕ ಮುಸುಕು

ಎಚ್.ಕೆ.ಶರತ್
Published 6 ಜನವರಿ 2019, 20:15 IST
Last Updated 6 ಜನವರಿ 2019, 20:15 IST
   

ಕಳೆದ ಆರು ವರ್ಷಗಳಿಂದ ಖಾಸಗಿ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಕಾರ್ಯನಿರ್ವಹಿಸುತ್ತಿರುವ ಸ್ನೇಹಿತ, ಇತ್ತೀಚೆಗೆ ಈ ವೃತ್ತಿಯಲ್ಲಿ ಮುಂದುವರಿಯಬೇಕೋ ಬೇಡವೋ ಎಂಬ ಜಿಜ್ಞಾಸೆ ಕಾಡುತ್ತಿರುವುದಾಗಿ ತಿಳಿಸಿದ.

ತಾನು ಕಾಲೇಜು ವಿದ್ಯಾರ್ಥಿಯಾಗಿದ್ದಾಗ, ತರಗತಿಯ ಇತರ ಹಲವು ವಿದ್ಯಾರ್ಥಿಗಳು ಅವಕಾಶ ಸಿಕ್ಕರೆ ಸಾಕು ನಕಲು ಮಾಡಲು ಇನ್ನಿಲ್ಲದ ಉತ್ಸಾಹ ತೋರುತ್ತಿದ್ದಾಗ್ಯೂ, ತನಗೆ ಗೊತ್ತಿರುವಷ್ಟನ್ನೇ ಬರೆಯುವೆನೆಂಬ ನಿಲುವಿಗೆ ಅಂಟಿಕೊಂಡಿದ್ದ ಅವನ ಕುರಿತು ನಮ್ಮೆಲ್ಲರಲ್ಲೂ ಮೆಚ್ಚುಗೆ ಹಾಗೂ ಗೌರವವಿತ್ತು. ಇದೀಗ ಅವನು ಅಧ್ಯಾಪನ ವೃತ್ತಿ ತೊರೆಯುವ ಕುರಿತು ಚಿಂತಿಸಲು ಕಾರಣವಾಗಿರುವುದು ಕೂಡ ಇದೇ ‘ನೈತಿಕ ಪ್ರಜ್ಞೆ’ ಎಂಬುದು ಅವನೊಂದಿಗಿನ ಮಾತುಕತೆಯ ಮೂಲಕ ಮನದಟ್ಟಾಯಿತು.

ಸ್ನೇಹಿತ ಕಾರ್ಯನಿರ್ವಹಿಸುವ ಕಾಲೇಜು ಇದೀಗ ಖಾಸಗಿ ವಿಶ್ವವಿದ್ಯಾಲಯ ಆಗಿರುವುದರಿಂದ, ಪರೀಕ್ಷೆ ಮತ್ತು ಮೌಲ್ಯಮಾಪನದ ವಿಷಯದಲ್ಲೂ ಕಾಲೇಜು ಆಡಳಿತ ಮಂಡಳಿ ಮೂಗು ತೂರಿಸಲು ಮುಂದಾಗುತ್ತಿರುವುದು ಅವನಲ್ಲಿ ಬೇಸರ ತರಿಸಿದೆ. ತಾವು ಕೇಳಿದಷ್ಟು ಡೊನೇಷನ್ ಹಾಗೂ ಶುಲ್ಕ ಪಾವತಿಸಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು, ಹೇಗಾದರೂ ಸರಿ ಪಾಸ್ ಆಗುವಂತೆ ನೋಡಿಕೊಳ್ಳಬೇಕಿರುವುದು ಅಧ್ಯಾಪಕರ ಜವಾಬ್ದಾರಿ ಎಂಬ ನಿಲುವಿಗೆ ಜೋತುಬಿದ್ದಿರುವ ಕಾಲೇಜು ಆಡಳಿತ ಮಂಡಳಿ, ‘ಪಾಸ್ ಮಾಡಿ ಮುಂದಕ್ಕೆ ತಳ್ಳಲು ನಿಮಗೇನು ತೊಂದರೆ’ ಎಂದು ಪ್ರಶ್ನಿಸಲಾರಂಭಿಸಿರುವುದು ಸ್ನೇಹಿತನಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ADVERTISEMENT

ಇದು ಇವನೊಬ್ಬನದೇ ವ್ಯಥೆ ಅಲ್ಲ ಎಂಬುದು ಇದೇ ರೀತಿಯ ಅನುಭವಗಳನ್ನು ಹಂಚಿಕೊಳ್ಳುವವರ ಮಾತಿಗೆ ಅದಾಗಲೇ ಕಿವಿಯಾಗಿದ್ದ ನನಗೆ ಮನದಟ್ಟಾಯಿತು. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (ಎಐಸಿಟಿಇ) ಮಾನದಂಡಗಳಿಗೆ ಅನುಗುಣವಾಗಿಯೇ ತಮ್ಮ ಅನುಕೂಲಕ್ಕೆ ತಕ್ಕಂತೆ ಪಠ್ಯಕ್ರಮದಲ್ಲಿ ಮಾರ್ಪಾಡು ಮಾಡಿಕೊಳ್ಳುವ ಹಾಗೂ ಸ್ವತಂತ್ರವಾಗಿ ಪರೀಕ್ಷೆ ನಡೆಸುವ ಸ್ವಾತಂತ್ರ್ಯ ದಕ್ಕಿಸಿಕೊಂಡ ಖಾಸಗಿ ಸ್ವಾಯತ್ತ ಕಾಲೇಜುಗಳು ಹಾಗೂ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಕೆಲವು, ಹಣವುಳ್ಳ ವಿದ್ಯಾರ್ಥಿಗಳನ್ನು ಸೆಳೆಯಲು ಅನುಸರಿಸುವ ಕಾರ್ಯತಂತ್ರ ನೈತಿಕತೆಯ ಎಲ್ಲೆಗಳನ್ನು ಮೀರುವ ಹಾದಿಯಲ್ಲಿರುವುದು ಗೋಚರಿಸುತ್ತಿದೆ.

ಹಣವುಳ್ಳ ವಿದ್ಯಾರ್ಥಿಗಳಿಗೆ ಸೀಟುಗಳ ಜೊತೆಜೊತೆಗೆ ಅಂಕಗಳನ್ನೂ ಮೀಸಲಿರಿಸುವ ಪ್ರವೃತ್ತಿ ‘ಖಾಸಗೀಕರಣ’ದೊಂದಿಗೆ ವ್ಯಾಪಕವಾಗುತ್ತಿದೆ. ಹೆಚ್ಚು ಪರಿಶ್ರಮ ಹಾಕದೆ ಪದವಿ ದಕ್ಕಿಸಿಕೊಳ್ಳುವ ಇಂಥ ವಿದ್ಯಾರ್ಥಿಗಳು ತಮ್ಮ ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆ ಕೊಡಮಾಡುವ ‘ರೆಫರೆನ್ಸ್’ ಎಂಬ ಸೋಷಿಯಲ್ ಕ್ಯಾಪಿಟಲ್ ಬಳಸಿಕೊಂಡು ಉದ್ಯೋಗಗಳನ್ನೂ ದಕ್ಕಿಸಿಕೊಳ್ಳುತ್ತಿರುವುದು ಕಣ್ಣೆದುರಿನ ವಾಸ್ತವವೇ ಆಗಿದೆ.

ಎಲ್ಲ ಸ್ವಾಯತ್ತ ಕಾಲೇಜುಗಳು ಹಾಗೂ ಖಾಸಗಿ ವಿಶ್ವವಿದ್ಯಾಲಯಗಳು ಹೀಗೆಯೇ ವರ್ತಿಸುತ್ತಿವೆ ಎಂದು ಹೇಳಲಾಗದಿದ್ದರೂ, ಇಂತಹ ಪ್ರವೃತ್ತಿಯೊಂದರ ಪೋಷಣೆಗೆ ಶಿಕ್ಷಣ ಕ್ಷೇತ್ರದ ಅನಿಯಂತ್ರಿತ ಖಾಸಗೀಕರಣ ನೀರು-ಗೊಬ್ಬರ ಎರೆಯುತ್ತಿರುವುದಂತೂ ನಿಜ. ತಮಗೆ ದೊರೆತಿರುವ ಸ್ವಾತಂತ್ರ್ಯವನ್ನು ಬಳಸಿಕೊಂಡು ಪದವಿ ಶಿಕ್ಷಣದಗುಣಮಟ್ಟ ವೃದ್ಧಿಸಲು ಅಗತ್ಯವಿರುವ ಪಠ್ಯಕ್ರಮ ಹಾಗೂ ಪರೀಕ್ಷಾ ವಿಧಾನದ ಮಾರ್ಪಾಡಿಗೆ ಮುಂದಾಗಿ, ಶೈಕ್ಷಣಿಕ ಗುಣಮಟ್ಟದ ಮೂಲಕವೇ ವಿದ್ಯಾರ್ಥಿಗಳನ್ನು ತಮ್ಮತ್ತ ಸೆಳೆಯುವುದು ಖಾಸಗಿ ವಿಶ್ವವಿದ್ಯಾಲಯಗಳಎದುರು ಇರುವ ಒಂದು ಆಯ್ಕೆಯಾದರೆ, ಇಲ್ಲಿ ಸುಲಭವಾಗಿ ಪದವಿ ಪಡೆಯಬಹುದೆಂಬ ಇಮೇಜ್ ಬೆಳೆಸಿಕೊಂಡು ಹಣವುಳ್ಳ ವಿದ್ಯಾರ್ಥಿಗಳನ್ನು ಆಕರ್ಷಿಸುವುದು ಮತ್ತೊಂದು ಸಾಧ್ಯತೆ. ಎರಡನೇ ಸಾಧ್ಯತೆಯತ್ತ ಮುಖ ಮಾಡಿರುವ ಕೆಲವು ಖಾಸಗಿ ವಿಶ್ವವಿದ್ಯಾಲಯಗಳಿಂದಾಗಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳು ಉದ್ಯೋಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಲ್ಪ ಅವಕಾಶಗಳನ್ನು ದಕ್ಕಿಸಿಕೊಳ್ಳಲಾಗದೆ ಹತಾಶರಾಗುವುದು ಮತ್ತಷ್ಟು ತೀವ್ರಗೊಳ್ಳಲಿದೆ.

‘ಜಾತಿ ಆಧರಿತ ಮೀಸಲಾತಿಯಿಂದ ಪ್ರತಿಭೆಗೆ ಮನ್ನಣೆ ದೊರೆಯುತ್ತಿಲ್ಲ, ಕಡಿಮೆ ಅಂಕ ಪಡೆದವರೂ ಮೀಸಲಾತಿ ಸೌಲಭ್ಯ ಬಳಸಿಕೊಂಡು ಸೀಟು ಪಡೆಯುತ್ತಿದ್ದಾರೆ’ ಅಂತೆಲ್ಲ ಅಳಲು ತೋಡಿಕೊಳ್ಳುತ್ತಿದ್ದವರು, ಶಿಕ್ಷಣ ಸಂಸ್ಥೆಗಳು ತಮಗೆ ದೊರೆಯುವ ಸ್ವಾಯತ್ತ ಸ್ಥಾನಮಾನ ಬಳಸಿಕೊಂಡು ಹಣವುಳ್ಳವರಿಗೆ ಸೀಟಿನ ಜೊತೆಗೆ ಅಂಕಗಳನ್ನೂ ಮೀಸಲಿರಿಸುತ್ತಿರುವ ಈ ಹೊಸ ನಮೂನೆಯ ಮೀಸಲಾತಿ ಕುರಿತು ತುಟಿ ಬಿಚ್ಚದೆ ಇರುವುದು ಏನನ್ನು ಸೂಚಿಸುತ್ತದೆ? ಬಂಡವಾಳ ಹೂಡಿ ಏನನ್ನೇ ದಕ್ಕಿಸಿಕೊಂಡರೂ ಅದು ಅನೈತಿಕವಲ್ಲವೆಂಬ ನಿಲುವಿಗೆ ನಾವು ಜೋತು ಬೀಳಲಾರಂಭಿಸಿದ್ದೇವೆಯೇ?

ಮೊದಲಿನಿಂದಲೂ ಜಾತಿ ಆಧರಿತ ಮೀಸಲಾತಿ ಕುರಿತು ತೀರಾ ಅಸಹನೆ ತೋರುತ್ತಿದ್ದ, ವಿವಿಧ ಖಾಸಗಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಕೆಲ ಸ್ನೇಹಿತರು ಇದೀಗ ದುಬಾರಿ ಮೊತ್ತ ಪಾವತಿಸಿ ಸೀಟು ಪಡೆದವರಿಗೆ ‘ಅಂಕ ಮೀಸಲಿರಿಸುವುದು’ ತೀರಾ ಸಹಜ ಪ್ರಕ್ರಿಯೆ ಎಂದೇ ಭಾವಿಸಿದ್ದಾರೆ.

ಸರ್ಕಾರದ ನಿಯಂತ್ರಣಕ್ಕೆ ಒಳಪಡುವ ವಿಶ್ವವಿದ್ಯಾಲಯದಡಿ ಕಾರ್ಯನಿರ್ವಹಿಸುವ ಖಾಸಗಿ ಕಾಲೇಜುಗಳು ಆಂತರಿಕ ಅಂಕಗಳನ್ನಷ್ಟೇ ಮೀಸಲಿರಿಸಲು ಸಾಧ್ಯವಿದ್ದರೆ, ಸ್ವಾಯತ್ತ ಖಾಸಗಿ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳು ‘ಪದವಿ’ಯನ್ನೇ ಮೀಸಲಿರಿಸುವತ್ತ ಮುನ್ನುಗ್ಗುತ್ತಿರುವುದು ದುರಂತವೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.