ADVERTISEMENT

ಕನ್ನಡ: ಆಯ್ಕೆಯಲ್ಲ, ಅನಿವಾರ್ಯ

ಗೋಕಾಕ್‌ ಮಾದರಿಯ ಚಳವಳಿಯಿಂದ ಪೋಷಕರಲ್ಲಿ ದಿಗಿಲು ಮೂಡಿಸಬಹುದೇ ವಿನಾ ಅವರ ಮನವೊಲಿಸಲು ಸಾಧ್ಯವಿಲ್ಲ

ಎಂ.ಅಬ್ದುಲ್ ರೆಹಮಾನ್ ಪಾಷ
Published 26 ಡಿಸೆಂಬರ್ 2018, 19:59 IST
Last Updated 26 ಡಿಸೆಂಬರ್ 2018, 19:59 IST
   

ಇತ್ತೀಚೆಗೆ ಮತ್ತೆ ಮೇಲೆದ್ದಿರುವ ಶಿಕ್ಷಣ ಮಾಧ್ಯಮದ ಸಂವಾದ ಬಹಳ ಬೇಗ ತಣ್ಣಗಾಗುವುದರಲ್ಲಿ ಅನುಮಾನವಿಲ್ಲ. ಏಕೆಂದರೆ ಇದು ಹೊಸದಲ್ಲ. ಆದರೂ ಕೆಲವು ಅನುಭವದ ಮಾತುಗಳು. ಈ ಚರ್ಚೆಯಲ್ಲಿ ಭಾಗವಹಿಸುವ ಹೆಚ್ಚಿನವರು ‘ಭಾಷೆ’ ಮತ್ತು ‘ಶಿಕ್ಷಣ ಮಾಧ್ಯಮ’ ಇವರೆಡರ ನಡುವೆ ಸ್ಪಷ್ಟವಾದ ವ್ಯತ್ಯಾಸವನ್ನು ಕಾಣುವುದರಲ್ಲಿ ಸೋಲುತ್ತಾರೆ. ‘ಮಾತೃಭಾಷೆ’ ಎನ್ನುವುದನ್ನು ಸ್ವಲ್ಪ ಹೊತ್ತು ಬದಿಗಿರಿಸೋಣ. ಏಕೆಂದರೆ ಅದನ್ನು ಎತ್ತಿಕೊಂಡರೆ ಕರ್ನಾಟಕದಲ್ಲಿಯೇ ಇರುವ ಪ್ರಮುಖವಾದ 56 ಮಾತೃಭಾಷೆಗಳನ್ನು ಚರ್ಚೆಯ ತೆಕ್ಕೆಯಲ್ಲಿ ಬಾಚಿಕೊಂಡಂತಾಗುತ್ತದೆ. ತೀರ್ಮಾನ ಹೆಚ್ಚು ಮರೀಚಿಕೆಯಾಗುತ್ತದೆ. ಆದ್ದರಿಂದ ನಮ್ಮ ಚರ್ಚೆಯನ್ನು ಇಂಗ್ಲಿಷ್ ಮತ್ತು ಕನ್ನಡಕ್ಕೆ ಸೀಮಿತಗೊಳಿಸಿಕೊಳ್ಳೋಣ.

ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಕಳಿಸುವ ಹೆಚ್ಚಿನ ಪೋಷಕರಿಗೆ ಗೊತ್ತಿಲ್ಲದ ಒಂದು ಮಹತ್ವದ ವಿಚಾರವೆಂದರೆ, ‘ಮುಂದಿನ ಬದುಕಿನ ಯಶಸ್ಸಿಗಾಗಿ ಬೇಕಾಗುವಷ್ಟು ಇಂಗ್ಲಿಷ್ ಭಾಷಾ ಕೌಶಲ, ಪರಿಣತಿ ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿಯೂ ಸಿಗುವುದಿಲ್ಲ’ ಎಂಬುದು. ಕೆಲವೇ ಕೆಲವು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಓದುವವರು ಮತ್ತು ಮನೆಯಲ್ಲಿ ಇಂಗ್ಲಿಷ್ ಮಾತಾಡುವ, ಇಂಗ್ಲಿಷ್ ಓದುವ, ಇಂಗ್ಲಿಷ್ ಕಾರ್ಯಕ್ರಮ, ಸಿನಿಮಾಗಳನ್ನು ನೋಡುವ ಮಕ್ಕಳು ಅಂಥ ಪರಿಣತಿಯನ್ನು ಪಡೆಯಲು ಸಾಧ್ಯ. ಆಗಲೂ ಉನ್ನತ ಇಂಗ್ಲಿಷ್ ಕೌಶಲಗಳನ್ನು ಅವರೂ ರೂಢಿಸಿಕೊಳ್ಳುವುದು ವೃತ್ತಿ, ವ್ಯವಹಾರಕ್ಕೆ ಇಳಿದ ನಂತರವೇ. ಹೀಗಿರುವಾಗ ಮನೆ, ಸಮುದಾಯದಲ್ಲಿ ಇಂಗ್ಲಿಷ್‌ರಹಿತ ಪರಿಸರದಲ್ಲಿ ಬೆಳೆದಿರುವ ಮಕ್ಕಳು ಕೇವಲ ಶಾಲೆಯಲ್ಲಿ ಇಂಗ್ಲಿಷನ್ನು ಬದುಕಿನ ಯಶಸ್ಸಿಗಾಗಿ ಬಳಸುವುದನ್ನು ಕಲಿಯುತ್ತಾರೆ ಎಂಬುದು ಬರೀ ಭ್ರಮೆ. ಆದರೂ, ಮುಂದೆ ಇಂಗ್ಲಿಷ್ ಬೇಕಲ್ಲ! ಹೌದು. ಅದಕ್ಕಾಗಿ ನಾವು ಮಾಧ್ಯಮವನ್ನೇ ಇಂಗ್ಲಿಷ್ ಮಾಡಬೇಕಾಗಿಲ್ಲ. ‌

ಇನ್ನು ಕಲಿಕೆಯ ಮಾಧ್ಯಮದ ಭಾಷೆಯ ಪ್ರಶ್ನೆಗೆ ಬರೋಣ. ಮೊದಲ ಐದು ವರ್ಷದಲ್ಲಿ ಮಗು ತನ್ನ ಮನೆಮಾತಿನಲ್ಲಿ ಶೇ 90ರಷ್ಟು ಭಾಷಾಪ್ರೌಢಿಮೆಯನ್ನು ಬೆಳೆಸಿಕೊಂಡಿರುತ್ತದೆ ಎಂದು ಹೇಳುತ್ತದೆ ಮನೋಭಾಷಾವಿಜ್ಞಾನ. ಎಲ್ಲ ಕಡೆ ಜೀವಂತವಾಗಿ ಲಭ್ಯವಿರುವ ಕನ್ನಡಕ್ಕೆ ಒಡ್ಡಿಕೊಂಡ ಮಕ್ಕಳು ಆ ಭಾಷೆಯನ್ನು ಸಹಜವಾಗಿ ಗಳಿಸಿಕೊಂಡಿರುವುದರಿಂದ ಅದು ಅಷ್ಟು ಸಮರ್ಥವಾಗಿರುತ್ತದೆ. ಶಾಲೆಗೆ ಬಂದ ನಂತರ ಮನೆಮಾತು ಕನ್ನಡವನ್ನು ಶಾಲಾ ಕನ್ನಡದ ಶೈಲಿಗೆ ಉನ್ನತೀಕರಿಸುವುದು, ಓದು ಬರಹ ಕಲಿಸುವುದು ಇಷ್ಟು ಮಾಡಿದರೆ ಸಾಕು ಇತರ ವಿಷಯಗಳ ಕಲಿಕೆಯ ಮಾಧ್ಯಮವನ್ನಾಗಿ, ಸಾಧನವನ್ನಾಗಿ ಬಳಸಲು ಕನ್ನಡ ಸಜ್ಜಾಗಿಬಿಡುತ್ತದೆ.

ADVERTISEMENT

ಇಷ್ಟು ಅನುಕೂಲವಿರುವ ಕನ್ನಡವನ್ನು ಬಿಟ್ಟು, ಇಂಗ್ಲಿಷನ್ನು ಶಿಕ್ಷಣ ಮಾಧ್ಯಮವನ್ನಾಗಿ ಮಾಡುವುದು ಅತ್ಯಂತ ಅವೈಜ್ಞಾನಿಕ. ಇಂಗ್ಲಿಷ್ ಕಲಿಕೆ ಶುರುವಾಗುವುದೇ ಶಾಲೆಯಲ್ಲಿ, ಮೊದಲ ತರಗತಿಯಿಂದ. ಇಲ್ಲಿ ಆಲಿಸುವಿಕೆಯಿಂದ ಹಿಡಿದು ಅರ್ಥ ಮಾಡಿಕೊಳ್ಳುವವರೆಗೆ ಮಗು ಕಲಿಯಬೇಕು; ಅದು ರೂಢಿಯಾದ ನಂತರ ಅದನ್ನು ಆಧರಿಸಿ ಓದುವುದನ್ನು ಕಲಿಯಬೇಕು. ಇದರಲ್ಲಿ ಕೌಶಲ ಕುದುರಿದ ನಂತರ ಇಂಗ್ಲಿಷ್‍ನಲ್ಲಿ ಬರೆಯುವುದನ್ನು, ಅನ್ನಿಸುವುದನ್ನು ಅಭಿವ್ಯಕ್ತಿಪಡಿಸುವುದನ್ನು ಕಲಿಯಬೇಕು. ಇಂಗ್ಲಿಷ್ ಮಾತೃಭಾಷೆ ಅಥವಾ ಮನೆಭಾಷೆ ಇರಬಹುದಾದ ಮಗುವೂ ಈ ಮಟ್ಟದ ಸಾಮರ್ಥ್ಯವನ್ನು ಗಿಟ್ಟಿಸಿಕೊಳ್ಳಲು ಐದು ವರ್ಷ ತೆಗೆದುಕೊಂಡಿರುತ್ತದೆ. ಆದರೆ ಕನ್ನಡದ ಮಗು ಈ ವಿದ್ಯೆಯನ್ನು ಕೆಲವೇ ಕೆಲವು ತಿಂಗಳಲ್ಲಿ ಸಾಧಿಸಬೇಕು, ಅದೂ ತನಗೇ ಲಕ್ಷಣವಾಗಿ ಇಂಗ್ಲಿಷ್ ಮಾತಾಡಲು, ಕಲಿಸಲು ಬಾರದ ಶಿಕ್ಷಕರಿಂದ, ಅಂಥದ್ದೇ ಪರಿಸರದಿಂದ! ಅಷ್ಟೇ ಅಲ್ಲ, ಇನ್ನೂ ಮೂಲಭೂತ ಸಾಮರ್ಥ್ಯವೂ ಸಾಧಿಸಿರದ ಮಗು ದಿಢೀರನೆ ಶಿಕ್ಷಣವನ್ನೂ ಅದೇ ಭಾಷೆಯಲ್ಲಿ ಪಡೆಯಬೇಕು. ಇಂಥ ಅದ್ಭುತ ಪವಾಡ ಸಾಧ್ಯವೆಂದು ನಂಬುತ್ತೆ, ನಮ್ಮ ಸರ್ಕಾರ!

ಇನ್ನು, ಶಿಕ್ಷಣವು ಲಾಭದಾಯಕ ಉದ್ಯಮವಾಗಿರುವ ಇಂದಿನ ಪರಿಸ್ಥಿತಿಯಲ್ಲಿ ನಾವು ಬೌದ್ಧಿಕ ಸಂವಾದದಲ್ಲಿ ತೊಡಗುವುದು ಏನೂ ಪ್ರಯೋಜನಕ್ಕೆ ಬರುವುದಿಲ್ಲ ಎಂಬುದೂ ನನಗೆ ಗೊತ್ತು. ಶಿಕ್ಷಣ ಮಾಧ್ಯಮವಾಗಿ ಕನ್ನಡ ಆಯ್ಕೆಯಲ್ಲ, ಅನಿವಾರ್ಯ ಎನ್ನುವ ವಿಚಾರ ಮನದಟ್ಟು ಆಗಬೇಕಾಗಿರುವುದು ಇಂಥ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸುತ್ತಿರುವ ಪೋಷಕರಿಗೆ. ಅವರೇ ಅಂತಿಮ ನಿರ್ಣಾಯಕರು. ನಮಗೆ ಹೊಳೆಯುವ ತರ್ಕ ಅವರಿಗ್ಯಾಕೆ ಹೊಳೆಯುತ್ತಿಲ್ಲ? ಪೋಷಕರಲ್ಲಿ ಸರಿಯಾದ ಜಾಗೃತಿಯನ್ನು ಮೂಡಿಸುವ ಕೆಲಸ ಆಗಬೇಕು. ‘ಗೋಕಾಕ್’ ಮಾದರಿಯ ಚಳವಳಿಯಿಂದಂತೂ ಖಂಡಿತ ಅಲ್ಲ. ಇಂಥ ಚಳವಳಿ, ತಮ್ಮ ಪ್ರಾಮಾಣಿಕ ಅರಿವನ್ನು ನಂಬಿ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಕಳಿಸುತ್ತಿರುವ ಜನರನ್ನು ದಿಗಿಲುಪಡಿಸಬಹುದು. ಅವರನ್ನು ಅವಹೇಳನ ಮಾಡಬಹುದೇ ವಿನಾ ಅವರ ಮನವೊಲಿಸಲು ಸಾಧ್ಯವಿಲ್ಲ. ಈ ಹಿಂದೊಮ್ಮೆ ನಾವು ‘ಸಂಪೂರ್ಣ ಸಾಕ್ಷರತಾ ಆಂದೋಲನ’ ಮಾಡಿದ್ದೆವು. ಸಾಹಿತಿಗಳನ್ನು ಬೇಕಾದರೆ ಕೈಬಿಟ್ಟು, ಉಳಿದೆಲ್ಲಾ ಕ್ಷೇತ್ರಗಳ ಜನರೂ ಭಾಗವಹಿಸುವ ರೀತಿಯ ಅಂಥ ಒಂದು ಬೃಹತ್ ಆಂದೋಲನ ರೂಪುಗೊಳ್ಳಬೇಕು. ಉತ್ತಮ ಮಾದರಿ ಮತ್ತು ನೈಜ ತರ್ಕದಿಂದ ಬಹುಶಃ ಅಮಾಯಕ ಪೋಷಕರಿಗೆ ಅರಿವು ಮೂಡಿದರೂ ಮೂಡಬಹುದು. ಕಲಿಕೆಯ ಮಾಧ್ಯಮವಾಗಿ ಕನ್ನಡವು ಜನರ ವಿವೇಚನೆಯ ಆಯ್ಕೆಯಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.