ಕರ್ನಾಟಕದ ಬಾಲತಾಯಂದಿರ ಅಂಕಿ-ಅಂಶಗಳು ದಿಗಿಲು ಮೂಡಿಸುವಂತಿವೆ. ಹಿಂದಿನ ಮೂರೂವರೆ ವರ್ಷಗಳಲ್ಲಿ ಅಂದಾಜು 50 ಲಕ್ಷ ಬಾಲಕಿಯರು ತಾಯಂದಿರಾಗಿದ್ದಾರೆ. ಇದು ಕೋವಿಡ್ ಸಂದರ್ಭಕ್ಕಿಂತ ಹೆಚ್ಚು ಎನ್ನುವುದು ಗಮನಾರ್ಹ ಮತ್ತು ಕುತೂಹಲಕಾರಿ ಸಂಗತಿ.
‘ಬಾಲತಾಯಂದಿರು ಅಂದರೆ ಯಾರು’ ಎಂಬ ಪ್ರಶ್ನೆಗೆ ಮೊದಲು ನಾವು ಉತ್ತರಿಸುವುದು ಸೂಕ್ತ. 18 ವರ್ಷವಾಗದೆ ಮದುವೆಯಾಗುವಂತಿಲ್ಲ ಎಂಬುದು ಭಾರತೀಯ ಕಾನೂನಷ್ಟೆ. ದೈಹಿಕ ಸಂಪರ್ಕಕ್ಕೆ ಅನುಮತಿ ನೀಡುವ ಹಕ್ಕನ್ನು, ಪ್ರಬುದ್ಧತೆಯನ್ನು ‘ಬಾಲಕಿ’ ಪಡೆದುಕೊಳ್ಳುವುದು 18ರ ವಯಸ್ಸಿನ ಮೇಲಷ್ಟೆ. ವೈದ್ಯಕೀಯ ವಿಜ್ಞಾನ ‘ಹದಿಹರೆಯ’ವನ್ನು ವ್ಯಾಖ್ಯಾನಿಸುವುದು 12ರಿಂದ 19ರ ವಯಸ್ಸು ಎಂದೇ. ಈ ಮೂರೂ ಕಾರಣಗಳಿಂದ ಬಾಲತಾಯಂದಿರು ಅಂದರೆ 18 ವರ್ಷ ವಯಸ್ಸಿನ ಮೊದಲೇ ತಾಯ್ತನದ ಜವಾಬ್ದಾರಿ ಹೊರಬೇಕಾದ ಮಕ್ಕಳು ಎಂದಿಟ್ಟುಕೊಳ್ಳುವುದು ಸೂಕ್ತ.
ಹದಿಹರೆಯದ ತಾಯ್ತನ ಜಗತ್ತಿನಾದ್ಯಂತ ಒಂದು ಮುಖ್ಯ ಆರೋಗ್ಯದ ಸಮಸ್ಯೆಯೇ. ಪುಟ್ಟ ತಾಯಿಗೆ, ಅವಳ ಪುಟ್ಟ ಮಗುವಿಗೆ, ಇಡೀ ಕುಟುಂಬಕ್ಕೆ ಆರೋಗ್ಯ, ಸಾಮಾಜಿಕ, ಆರ್ಥಿಕ ಸಮಸ್ಯೆಗಳನ್ನು ತರುವಲ್ಲಿ ಇದು ಕಾರಣವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಇದಕ್ಕೆ ಕಾರಣಗಳನ್ನಾಗಿ, ಸಿಇಎಫ್‌ಎಂ- ಚೈಲ್ಡ್ ಮ್ಯಾರೇಜ್, ಅರ್ಲಿ ಮ್ಯಾರೇಜ್ ಆ್ಯಂಡ್ ಫೋರ್ಸ್ಡ್ ಮ್ಯಾರೇಜ್– ಬಾಲ್ಯವಿವಾಹ, ಶೀಘ್ರವಿವಾಹ ಮತ್ತು ಬಲವಂತವಾಗಿ ಮಾಡುವ ವಿವಾಹಗಳನ್ನು ಗುರುತಿಸುತ್ತದೆ. ಈ ಮೂರೂ ರೀತಿಯ ವಿವಾಹಗಳು ಸಾಮಾನ್ಯವಾಗಿ ನೇರವಾಗಿ ದಾರಿಯಾಗುವುದೇ ತತ್‍ಕ್ಷಣದ ಬಸಿರಿಗೆ. ಅಂದರೆ, ಮದುವೆಯಾಗಿ ಒಂದು ವರ್ಷದೊಳಗೆ ಪಕ್ಕದಲ್ಲಿ ಗಂಡನಿರುತ್ತಾನೆಯೋ ಇಲ್ಲವೋ, ಆದರೆ ಕಂಕುಳಲ್ಲಿ ಮಗುವಂತೂ ಇರುತ್ತದೆ ಎಂಬ ರೀತಿ.
ಮಾತೃಮರಣ, ಶಿಶುಮರಣ, ಅವಧಿಪೂರ್ವ ಪ್ರಸವ, ಮಗುವಿಗೆ ಜನನದ ಸಮಯದಲ್ಲಿ ಆಮ್ಲಜನಕದ ಕೊರತೆ ಈ ಎಲ್ಲ ಅಂಶಗಳಿಗೂ ಬಾಲತಾಯಿಯ ಮಕ್ಕಳು ತುತ್ತಾಗುವ ಸಾಧ್ಯತೆಯು ಪ್ರಬುದ್ಧ ತಾಯಂದಿರ ಮಕ್ಕಳಿಗಿಂತ ಹೆಚ್ಚು.
ಯುನಿಸೆಫ್‍ನ ವರದಿಯ ಪ್ರಕಾರ, ಜಗತ್ತಿನ ಪ್ರತಿ ಮೂರು ಬಾಲ ವಧುಗಳಲ್ಲಿ ಭಾರತದ ಬಾಲವಧು ಒಬ್ಬಳಾಗಿರುತ್ತಾಳೆ. 15 ವರ್ಷಕ್ಕೆ ಮೊದಲೇ ಮಾಡುವ ಬಾಲ್ಯವಿವಾಹಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದೇನೋ ನಿಜ. ಆದರೆ ಅದೇ 15ರಿಂದ 18ರ ನಡುವಣ ಮದುವೆಗಳು ಏರಿಕೆಯಾಗಿವೆ. ಎಲ್ಲಕ್ಕಿಂತ ಆತಂಕಕಾರಿ ವಿಷಯವೆಂದರೆ, ಹೆಣ್ಣುಮಕ್ಕಳ ಹಕ್ಕು, ಅವರಿಗೆ ಇರಬೇಕಾದ ಅವಕಾಶಗಳು, ಅವರ ಶಿಕ್ಷಣದ ಬಗೆಗಿನ ನಮ್ಮ ಸಾಮಾಜಿಕ ನಂಬಿಕೆ, ಧೋರಣೆ, ಮನೋಧರ್ಮಗಳಲ್ಲಿ ಯಥಾಸ್ಥಿತಿ ಮುಂದುವರಿಯುತ್ತಲೇ ಇದೆ.
ಹದಿಹರೆಯದ ಗಂಡು-ಹೆಣ್ಣು ಮಕ್ಕಳು ಅವ್ಯಾಹತವಾಗಿ, ವ್ಯಾಪಕವಾಗಿ ಬಳಸುವ ಸಾಮಾಜಿಕ ಮಾಧ್ಯಮಗಳಿಗೂ ಹದಿಹರೆಯದಲ್ಲಿ ಗರ್ಭಧಾರಣೆಗೂ ಸಂಬಂಧವಿದೆಯೇ ಎಂಬುದನ್ನು ಅಧ್ಯಯನಗಳು ಪರಿಶೀಲಿಸಬೇಕಾಗಿದೆ. ವಿವಾಹಪೂರ್ವ ಲೈಂಗಿಕತೆಯನ್ನು ಪ್ರಬಲವಾಗಿ ವಿರೋಧಿಸುವ ನಮ್ಮ ಸಮಾಜ, ಸಹಜವಾಗಿ ಗರ್ಭನಿರೋಧಕ ಬಳಕೆಯ ಮಾಹಿತಿಯನ್ನೂ ಯುವಜನರಿಂದ ತಡೆಹಿಡಿಯುತ್ತದೆ.
ವಿವಾಹಪೂರ್ವ ಲೈಂಗಿಕತೆಯಾಗಲಿ, ತತ್ಪರಿಣಾಮವಾಗಿ ನಡೆಯುವ ಗರ್ಭ ಧರಿಸುವಿಕೆ, ಅಸುರಕ್ಷಿತ ಗರ್ಭಪಾತಗಳಾಗಲಿ, ನಿಸ್ಸಂದೇಹವಾಗಿ ಹೆಚ್ಚು ದೈಹಿಕ, ಭಾವನಾತ್ಮಕ ಸಮಸ್ಯೆಗಳನ್ನು ತಂದೊಡ್ಡುವುದು ಹೆಣ್ಣು ಜೀವಕ್ಕೆ. ಆದ್ದರಿಂದ ಇಂದು ವ್ಯಾಪಕವಾಗಿ ಪ್ರಚಾರದಲ್ಲಿರುವ ಮಾಧ್ಯಮಗಳ ಮೂಲಕ ಸರಿಯಾದ ಮಾಹಿತಿ ನೀಡುವುದು, ರೋಚಕತೆಯನ್ನು ಬದಿಗಿರಿಸಿ ಆಸಕ್ತಿ ಹುಟ್ಟಿಸುವ ರೀತಿಯ ಲೈಂಗಿಕ ಶಿಕ್ಷಣ ನೀಡುವುದು ಈ ಹೊತ್ತು ನಾವು ಅಗತ್ಯವಾಗಿ ಮಾಡಬೇಕಾದ ಕಾರ್ಯ.
ಆರೋಗ್ಯ-ನೈತಿಕ ಶಿಕ್ಷಣವನ್ನೂ ನಾವು ಯುವಜನರು ಹೆಚ್ಚಾಗಿ ಬಳಸುವ ಮಾಧ್ಯಮಗಳ ಮೂಲಕವೇ ನೀಡಲು ಪ್ರಯತ್ನಿಸುವುದು ಸೂಕ್ತ. ಇಂತಹ ಮಾಹಿತಿ ನೀಡುವ ನವಕರ್ನಾಟಕ –ಮ್ಯಾಕ್ಸ್‌ಮುಲ್ಲರ್ ಕಿಂಡರ್‌ಕಥಾ ಯೋಜನೆಯಲ್ಲಿ ಬಂದ ಮಕ್ಕಳ ಪುಸ್ತಕಗಳು ಉತ್ತಮ ನಿದರ್ಶನ.
ಭಾವನಾತ್ಮಕವಾಗಿಯೂ ತಾಯ್ತನದ ಹೊಣೆ ಸುಲಭವಾದದ್ದಲ್ಲ. ತಾಯಂದಿರಲ್ಲಿ ಬರುವ ಹಲವು ಮಾನಸಿಕ ಸಮಸ್ಯೆಗಳು ಎಳೇ ತಾಯಂದಿರಲ್ಲಿ ಮತ್ತಷ್ಟು ಹೆಚ್ಚು. ಮಗುವಿನೊಡನೆ ಭಾವನಾತ್ಮಕವಾಗಿ ಹೊಂದಿಕೊಳ್ಳದಿರುವುದು, ಅಪಾರ ದಣಿವು, ಆತಂಕ, ತಪ್ಪಿತಸ್ಥ ಭಾವನೆ, ಖಿನ್ನತೆ ಇವೆಲ್ಲವೂ ಬಾಲ ತಾಯಂದಿರಲ್ಲಿ, ಅದೇ ವಯಸ್ಸಿನ ಇನ್ನೂ ತಾಯಿಯಾಗದ ಹೆಣ್ಣುಮಕ್ಕಳಿಗೆ ಮತ್ತು 18ರ ನಂತರ ತಾಯಿಯಾಗುವ ಹೆಣ್ಣುಮಕ್ಕಳಿಗೆ ಹೋಲಿಸಿದರೆ ಹೆಚ್ಚಾಗಿ ಕಂಡುಬರುತ್ತವೆ. ಸಹಜವಾಗಿ ಇಂಥ ಮಾನಸಿಕ ಸ್ಥಿತಿ ಮತ್ತು ದೈಹಿಕವಾಗಿ ಕುಗ್ಗಿದ ಆರೋಗ್ಯದ ತಾಯಿಯಿಂದ ಆರೋಗ್ಯವಂತ ಮಕ್ಕಳ ಬೆಳವಣಿಗೆ ದೂರದ ಮಾತಾಗಿಯೇ ಉಳಿಯುತ್ತದೆ. ಸ್ವತಃ ತನಗೆ ಶಿಕ್ಷಣವಿರದ-ಆರ್ಥಿಕ ಸ್ವಾತಂತ್ರ್ಯವಿರದ ಬಾಲತಾಯಿ ತನ್ನಂತೆಯೇ ತನ್ನ ಹೆಣ್ಣು ಮಕ್ಕಳಿಗೂ ಬೇಗ ಮದುವೆ ಮಾಡುವ, ಬೇಗ ತಾಯಿಯಾಗುವಂತೆ ಒತ್ತಾಯಿಸುವ ಸಾಧ್ಯತೆಯೂ ಹೆಚ್ಚುತ್ತದೆ.
ಬಾಲತಾಯಂದಿರ ಬಗ್ಗೆ ಇಷ್ಟೊಂದು ಮಾತನಾಡುವ ನಾವು ಬಾಲ ತಂದೆಯಂದಿರ ಬಗೆಗೂ ಕೆಲವು ಅಂಶಗಳನ್ನು ಗಮನಿಸಲೇಬೇಕು! ಸಾಮಾನ್ಯವಾಗಿ ಯಾವುದೇ ವಯಸ್ಸಿನಲ್ಲಿ ಮಕ್ಕಳಾದರೂ, ಮಕ್ಕಳ ಆರೈಕೆ ತಾಯಿಯದ್ದೇ ಎಂಬ ಮನೋಭಾವ ಜಗತ್ತಿನ ಎಲ್ಲ ಸಮಾಜಗಳಲ್ಲಿ ಕಂಡುಬರುತ್ತದೆ. ಆದರೂ ಆಧುನಿಕ ಸಮಾಜದಲ್ಲಿ ಮಗುವಿನ ಆರೈಕೆಯಲ್ಲಿ ತಂದೆಯೂ ಹಿಂದೆಂದಿಗಿಂತ ಹೆಚ್ಚಾಗಿ ಇಂದು ಆಸಕ್ತಿ ತೋರಿಸುತ್ತಾರೆ. ಮಗುವಿನ ಪಾಲನೆಯಲ್ಲಿ ತಾಯಿಗೆ ಬೆಂಬಲ ನೀಡುತ್ತಾರೆ. ಅಧ್ಯಯನಗಳ ಪ್ರಕಾರ ‘ಬಾಲತಂದೆ’ಯಂದಿರು ಕಡಿಮೆ ಶಿಕ್ಷಣ, ಕಡಿಮೆ ಉದ್ಯೋಗಾವಕಾಶ, ಆರ್ಥಿಕ ಅಭದ್ರತೆಗಳಿಂದ, ಮಾದಕದ್ರವ್ಯ ವ್ಯಸನಗಳಿಂದ ಕಷ್ಟಪಡುವ ಸಾಧ್ಯತೆ ಹೆಚ್ಚು. ಬಾಲತಾಯಂದಿರಿಗೆ ಬೆಂಬಲವಾಗುವ, ತಮ್ಮ ಮಕ್ಕಳೊಡನೆ ದೀರ್ಘಕಾಲಿಕ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳುವ ಸಾಧ್ಯತೆ ಕಡಿಮೆ.
ಒಟ್ಟಿನಲ್ಲಿ ಇವೆಲ್ಲವೂ ಹೇಳುವುದು ಸ್ಪಷ್ಟವಾಗಿ ಒಂದೇ ಸತ್ಯವನ್ನು. ಹದಿಹರೆಯದ ಗರ್ಭ ಧರಿಸುವಿಕೆ, ಅಕಾಲಿಕ ತಾಯ್ತನವು ಕೌಟುಂಬಿಕ ಜೀವನವನ್ನು ನರಳಿಸುತ್ತದೆ. ಬಾಲತಾಯಂದಿರ ಬವಣೆ ಸಾಮಾಜಿಕ ನೆಲೆಗಟ್ಟನ್ನು ದುರ್ಬಲವಾಗಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.