ADVERTISEMENT

ಸಂಗತ: ಇಲಾಖೆಗೆ ಜ್ವರ, ಶಿಕ್ಷಕರಿಗೆ ಬರೆ

ಎಂ.ಅಬ್ದುಲ್ ರೆಹಮಾನ್ ಪಾಷ
Published 28 ಜೂನ್ 2025, 0:59 IST
Last Updated 28 ಜೂನ್ 2025, 0:59 IST
   

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 60ಕ್ಕಿಂತ ಕಡಿಮೆ ಫಲಿತಾಂಶ ಬಂದ ಶಾಲೆಗಳ ಶಿಕ್ಷಕರ ವೇತನ, ಪದ ಬಡ್ತಿಯನ್ನು ತಡೆ ಹಿಡಿಯಲಾಗುವುದು ಎಂದು ಬೆದರಿಸುವ ಸುತ್ತೋಲೆಯನ್ನು ‘ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ’ಯು ಹೊರಡಿಸಿದೆ. ಈ ಸುತ್ತೋಲೆ, ರಾಜ್ಯದ ಶಿಕ್ಷಕ ವಲಯ ಮತ್ತು ಪ್ರಜ್ಞಾವಂತರಲ್ಲಿ ಆತಂಕ, ಅಸಮಾಧಾನವನ್ನು ಸೃಷ್ಟಿಸಿದೆ.

ಶಾಲಾ ಹಂತದಲ್ಲಿ ಶಿಕ್ಷಣವು ಮಕ್ಕಳಿಗೆ ಮತ್ತು ಸಮಾಜಕ್ಕೆ ಪ್ರಯೋಜನಕಾರಿ ಆಗುವಲ್ಲಿ ಸಕ್ಷಮವಾಗಿ ದುಡಿಯಬೇಕಾದ ಅಂಗಗಳು ಮೂರು: ಶಿಕ್ಷಣ ಇಲಾಖೆ, ಶಾಲೆಯ ಶಿಕ್ಷಕರು ಮತ್ತು ಮಕ್ಕಳ ಪೋಷಕರು.

ಸರ್ಕಾರಿ ಶಾಲೆಗಳಿಂದ ತಮ್ಮ ಮಕ್ಕಳ ಅಭ್ಯುದಯ ಅಸಾಧ್ಯವೆಂದು (ಅದೊಂದು ಭ್ರಮೆಯಾಗಿದ್ದರೂ) ಅಚಲವಾಗಿ ನಂಬಿರುವ ಅಲ್ಪಸ್ವಲ್ಪ ಸ್ಥಿತಿವಂತ ಪೋಷಕರೂ, ತಮ್ಮ ಮಕ್ಕಳನ್ನು ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗೆ ಸೇರಿಸುತ್ತಾರೆ. ಉಳಿದ ಅಸಹಾಯಕ, ತೀರಾ ಬಡವರಾದ, ಮಕ್ಕಳ ಭವಿಷ್ಯದ ಬಗ್ಗೆ ಯಾವುದೇ ಕನಸನ್ನು ಕಾಣಲು ಅಶಕ್ತರಾದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಅನಿವಾರ್ಯವಾಗಿ ಸೇರಿಸುತ್ತಾರೆ; ಮಧ್ಯಾಹ್ನ ಬಿಸಿ ಊಟವಾದರೂ ಸಿಗುತ್ತದೆ ಎನ್ನುವ ಕಾರಣವೂ ಇರಬಹುದು. ಹೀಗಾಗಿ, ಪೋಷಕರ ಕಡೆಯಿಂದ ಸಿಗಬೇಕಾದ ಬೆಂಬಲ, ಪ್ರೇರಣೆ, ಉತ್ತೇಜನವು ಸರ್ಕಾರಿ ಶಾಲೆಯ ಮಕ್ಕಳಿಗೆ ಸಾಮಾನ್ಯವಾಗಿ ಸಿಗುವುದಿಲ್ಲ.

ADVERTISEMENT

ಶಿಕ್ಷಣ ಕ್ಷೇತ್ರದ ಪ್ರಗತಿಯಲ್ಲಿ ಕೊಡುಗೆ ನೀಡುವ ಎರಡನೆಯ ಘಟಕ ಶಿಕ್ಷಕರದ್ದು. ಇಂತಿಷ್ಟು ಮಕ್ಕಳಿಗೆ ಇಂತಿಷ್ಟು ಶಿಕ್ಷಕರು ಎಂಬ ನಿಯಮವಿದೆ. ಆದರದು ನೆಲಮಟ್ಟದಲ್ಲಿ ಬರೀ ಮರೀಚಿಕೆ. ಸರ್ಕಾರಿ ಶಾಲೆಗಳಲ್ಲಿ ಶೇ 30ಕ್ಕಿಂತಲೂ ಹೆಚ್ಚು ಶಿಕ್ಷಕರ ಕೊರತೆ ಇದೆ. ವರ್ಷಗಳಿಂದ ನೇಮಕಾತಿ ಆಗಿಲ್ಲ. ಕನಿಷ್ಠ ಸಂಬಳಕ್ಕೆ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಬೇರೆ ಕಡೆ ತಮ್ಮ ಅರ್ಹತೆಗೆ ತಕ್ಕ ಹಾಗೆ ಉದ್ಯೋಗ ಸಿಗದೆ ಹತಾಶರಾಗಿ, ಇಷ್ಟಾದರೂ ಇರಲಿ ಎಂದು ಬಂದ ಅತಿಥಿ ಶಿಕ್ಷಕರಿಗೆ ಇಲ್ಲಿಯೂ ಉದ್ಯೋಗದ ಖಾತರಿ ಇಲ್ಲ. ಇನ್ನು ಇವರಿಂದ ಎಷ್ಟು ಗುಣಮಟ್ಟದ ಸೇವೆಯನ್ನು ನಿರೀಕ್ಷಿಸಬಹುದು?

ಇನ್ನು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ ಅದಕ್ಕೆ ಶಿಕ್ಷಕರು ಹೊಣೆಗಾರರೇ? ಇಲ್ಲ, ಇಡೀ ಶಾಲಾ ವ್ಯವಸ್ಥೆ ಅದಕ್ಕೆ ಜವಾಬ್ದಾರಿ. ಈ ವ್ಯವಸ್ಥೆಯಲ್ಲಿ ಶಿಕ್ಷಕರು ಒಂದು ಭಾಗವಷ್ಟೆ. ಶಿಕ್ಷಕರ ಕೆಲಸ ಮಕ್ಕಳಿಗೆ ಪಾಠವನ್ನು ಹೇಳಿಕೊಡುವುದಾಗಿದೆ. ಆದರೆ, ಸರ್ಕಾರಿ ಶಿಕ್ಷಕರು ಬೋಧನೆಗಿಂತಲೂ ಹೆಚ್ಚು ಸಮಯವನ್ನು ಮಕ್ಕಳಿಗೆ ಮಧ್ಯಾಹ್ನದ ಊಟ, ಚಿಕ್ಕಿ, ಹಾಲು, ಮೊಟ್ಟೆ ಕೊಡುವುದರಲ್ಲಿ, ಪ್ರತಿ ಮೊಟ್ಟೆಯ ಲೆಕ್ಕವನ್ನು ಬಿಇಒಗೆ ಕೂಡಲೇ ಸಲ್ಲಿಸುವುದರಲ್ಲಿ ಕಳೆಯುತ್ತದೆ.

ಪದವಿ ನಂತರ ಶಿಕ್ಷಕರಾಗಬಯಸುವವರು ಓದುವ ಬಿ.ಇಡಿ. ಕೋರ್ಸ್‌ನಲ್ಲಿ ಮಕ್ಕಳಿಗೆ ಪರಿಣಾಮಕಾರಿಯಾದ ಶಿಕ್ಷಣ ಕೊಡುವುದು ಹೇಗೆ ಎನ್ನುವುದರ ಕುರಿತು ಅಧ್ಯಯನ, ಅಭ್ಯಾಸ, ತರಬೇತಿ ಇರುತ್ತದೆಯೇ ವಿನಾ, ಮೊಟ್ಟೆಯನ್ನು ಎಣಿಸುವುದು ಹೇಗೆ, ಮಾರುಕಟ್ಟೆಯಿಂದ ಅಡುಗೆಗಾಗಿ ತರಕಾರಿ ತರುವುದು ಹೇಗೆ, ಇದೆಲ್ಲರ ಲೆಕ್ಕವನ್ನು ಇಟ್ಟು ಸರ್ಕಾರಕ್ಕೆ ಕೊಡುವುದು ಹೇಗೆ ಎನ್ನುವುದರ ತರಬೇತಿ ಇರುವುದಿಲ್ಲ.

ಶೈಕ್ಷಣಿಕ ಅರ್ಹತೆ ಆಧಾರದ ಮೇಲೆ ಶಿಕ್ಷಕರನ್ನು ನೇಮಕ ಮಾಡುವಾಗ ಅವರ ನಿರೀಕ್ಷಿತ ಕರ್ತವ್ಯಗಳ ಪಟ್ಟಿಯಲ್ಲಿ ಅಥವಾ ಜಾಬ್ ಚಾರ್ಟಿನಲ್ಲಿ ಈ ಎಲ್ಲಾ ಕೆಲಸಗಳ ಉಲ್ಲೇಖವಿರುವುದಿಲ್ಲ. ಶಾಲೆಯ ಇತರ ಕೆಲಸಗಳಿಗೆ ಆಡಳಿತ ಸಿಬ್ಬಂದಿ, ಪ್ರಯೋಗಾಲಯ ಮತ್ತು ಗ್ರಂಥಾಲಯಕ್ಕೆ ಸಹಾಯಕ ಸಿಬ್ಬಂದಿ ಇರಬೇಕು. ಹೆಚ್ಚು ಕಡೆ ಈ ಕೆಲಸಗಳನ್ನೂ ಶಿಕ್ಷಕರೇ ಮಾಡಬೇಕು. ಮುಂದೆ, ಶಾಲೆಯಲ್ಲಿ ‘ಡಿ’ ದರ್ಜೆಯ ನೌಕರರ ಕೊರತೆ ಇದೆ. ಮಕ್ಕಳು ಬರುವ ಮುಂಚೆ ಶಾಲೆಯ ಕಸವನ್ನೂ ಶಿಕ್ಷಕರೇ ಗುಡಿಸಬೇಕು ಎಂದರೆ ಅಚ್ಚರಿಯೇನಲ್ಲ. ಇಷ್ಟು ಮಾತ್ರವಲ್ಲದೆ, ಜನಗಣತಿ, ಜಾತಿ ಜನಗಣತಿ, ಚುನಾವಣೆ ಇತ್ಯಾದಿ ಕೆಲಸಗಳನ್ನೂ ಶಿಕ್ಷಕರೇ ಮಾಡಬೇಕು. ಇದೆಲ್ಲದರ ನಡುವೆ ಸಮಯ, ವ್ಯವಧಾನ ಇದ್ದರೆ ಶಿಕ್ಷಕರು ಪಾಠವನ್ನೂ ಮಾಡಬೇಕು.

ಮಕ್ಕಳ ಶಿಕ್ಷಣದ ಅಭ್ಯುದಯದಲ್ಲಿ ಮೂರನೇ ಮತ್ತು ಅತ್ಯಂತ ನಿರ್ಣಾಯಕ ಭಾಗ ಶಿಕ್ಷಣ ಇಲಾಖೆ. ಶಾಲಾ ಶಿಕ್ಷಣ ಆಯುಕ್ತಾಲಯದ ಹಿಂದಿನ ಕಾರ್ಯದರ್ಶಿ ನಳಿನ್ ಅತುಲ್ ನೇತೃತ್ವದಲ್ಲಿ ಸರ್ಕಾರಿ ಶಾಲೆಗಳ ಸುಧಾರಣೆ ಬಗೆಗಿನ ವರದಿ ಕೊಟ್ಟು ನಾಲ್ಕು ವರ್ಷ ಆಗಿದೆ. ಸರ್ಕಾರ ಈ ಕುರಿತು ಯಾವುದೇ ಕ್ರಮ ವಹಿಸಿಲ್ಲ. ಸರ್ಕಾರ ತನಗೆ ಬಂದಿರುವ ಜ್ವರಕ್ಕೆ ಶಿಕ್ಷಕರಿಗೆ ಬರೆ ಕೊಡುವ ಬದಲಿಗೆ ಶೇ 60ಕ್ಕೂ ಕಡಿಮೆ ಫಲಿತಾಂಶ ಬಂದಿರುವ ಶಾಲೆಗಳನ್ನು ಗುರುತಿಸಿ, ಆ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪೋಷಕರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಿನ್ನೆಲೆ, ಶಿಕ್ಷಕರ ಕೊರತೆ, ಅನ್ಯಕಾರ್ಯಗಳಿಗಾಗಿ ಅವರ ಬಳಕೆ, ಅದರಿಂದ ಕಲಿಕೆ, ಫಲಿತಾಂಶದ ಮೇಲೆ ಆಗುವ ನಕಾರಾತ್ಮಕ ಪರಿಣಾಮ ಇತ್ಯಾದಿಗಳ ಕುರಿತು ಪ್ರಾಮಾಣಿಕ ಸಮೀಕ್ಷೆ ಮಾಡಲಿ, ಅದರಲ್ಲಿ ಹೊಮ್ಮುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.