ADVERTISEMENT

ಸಂಗತ | ಶುದ್ಧ ಜಲ ಮರೀಚಿಕೆಯಾಗದಿರಲಿ

ಶುದ್ಧ ಕುಡಿಯುವ ನೀರಿನ ಪೂರೈಕೆ ವಿಚಾರವಾಗಿ ಸರ್ಕಾರ ಮತ್ತು ಸ್ಥಳೀಯ ಆಡಳಿತಗಳು ಪ್ರಾಮಾಣಿಕ ಹಾಗೂ ಪಾರದರ್ಶಕ ನೀತಿಯನ್ನು ಅನುಸರಿಸಬೇಕಾಗಿದೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2025, 23:30 IST
Last Updated 2 ಫೆಬ್ರುವರಿ 2025, 23:30 IST
   

ಶುದ್ಧ ಗಾಳಿ, ಶುದ್ಧ ನೀರು ಇವೆರಡೂ ಆರೋಗ್ಯಕರ ಬದುಕಿಗೆ ಬಹಳ ಅಗತ್ಯ. ಆದರೆ ಶುದ್ಧ ಗಾಳಿಯ ಕಲ್ಪನೆ ಅದೆಂದೋ ಮಾಯವಾಗಿದೆ. ಉಸಿರಾಡುವ ಗಾಳಿ ನಿಧಾನವಿಷವಾಗಿ ಪರಿಣಮಿಸಿದೆ. ಇದರ ಜೊತೆಗೆ ಗ್ರಾಮೀಣ ಮತ್ತು ಪಟ್ಟಣದ ನಿವಾಸಿಗಳಿಗೆ ಪೂರೈಕೆಯಾಗುತ್ತಿರುವ ಕುಡಿಯುವ ನೀರು ಎಷ್ಟರಮಟ್ಟಿಗೆ ಶುದ್ಧವಾಗಿದೆ ಎಂಬ ಪ್ರಶ್ನೆ ಕಾಡುತ್ತಲೇ ಇದೆ.

ಬಹುಪಾಲು ಮಂದಿ ಈಗ ಸ್ಥಳೀಯ ಆಡಳಿತಗಳು ಪೂರೈಸುವ ನೀರನ್ನೇ ಅವಲಂಬಿಸಿದ್ದಾರೆ. ಅಧಿಕಾರಿಶಾಹಿಯು ಇದನ್ನೊಂದು ಗುರುತರ ಜವಾಬ್ದಾರಿಯಾಗಿ ಭಾವಿಸಿ, ಸಮರ್ಪಕವಾಗಿ ನಿರ್ವಹಿಸಿದ್ದಿದ್ದರೆ ಜೀವಜಲ ಇಂದು ಕೆಲವೆಡೆ ಕಂಟಕವಾಗಿ ಪರಿಣಮಿಸುತ್ತಿರಲಿಲ್ಲ. ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಕುಡಿಯುವ ನೀರು ನಂಜಾಗಿ ಪರಿಣಮಿಸಿದ ಸುದ್ದಿಗಳು ಆಗಿಂದಾಗ್ಗೆ ಪ್ರಕಟವಾಗುತ್ತಲೇ ಇವೆ. ಆದರೂ ಕುಡಿಯುವ ನೀರು ಕಲುಷಿತ ಆಗದಂತೆ ನೋಡಿಕೊಳ್ಳುವ ದಿಸೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಸರ್ಕಾರವಾಗಲಿ, ಆಯಾ ಪ್ರದೇಶದ ಆಡಳಿತದ ಹೊಣೆ ಹೊತ್ತ ಗ್ರಾಮ ಪಂಚಾಯಿತಿಗಳಾಗಲಿ ಕೈಗೊಂಡಂತೆ ಕಾಣುವುದಿಲ್ಲ.

ಗ್ರಾಮೀಣ ಪ್ರದೇಶಗಳಲ್ಲಿ ನೀರು ಪೂರೈಕೆಗಾಗಿ ಯಾವುದೋ ಕಾಲದಲ್ಲಿ ಹಾಕಿದ ಪೈಪುಗಳಿವೆ. ಇವನ್ನು ತೆಗೆದು ನೋಡಿದರೆ ಒಳಗೆ ಒಂದಿಂಚು ದಪ್ಪ ಮಣ್ಣು, ಪಾಚಿಯಂತಹ ಕಲ್ಮಶಗಳು ಅಂಟಿಕೊಂಡಿರುತ್ತವೆ.
ಕೊಳವೆ ಬಾವಿಗಳಿಂದ ನೀರೆಳೆಯುವ ಕಬ್ಬಿಣದ ಪೈಪುಗಳನ್ನು ಬದಲಾಯಿಸಿ ಪಿವಿಸಿ ಪೈಪುಗಳನ್ನು ಜೋಡಿಸಬಹುದಿತ್ತು. ಕಬ್ಬಿಣದ ಪೈಪುಗಳಲ್ಲಿ ಅವ್ಯಾಹತವಾಗಿ ಬರುವ ತುಕ್ಕು, ನೀರಿನ ದುರ್ವಾಸನೆಗೆ ಕಾರಣವಷ್ಟೇ ಅಲ್ಲ, ಅದನ್ನು ಕುಡಿದವರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ನೀರು ಸರಬರಾಜಿನ ಪೈಪುಗಳು ಅಲ್ಲಲ್ಲಿ ಒಡೆದು ಜೀವಜಲ ಸೋರಿ ನೆಲದಲ್ಲಿ ಇಂಗಿ ಹೋಗುತ್ತಿದೆ.

ADVERTISEMENT

ಕೇಂದ್ರ ಸರ್ಕಾರದ ಜಲಜೀವನ ಮಿಷನ್‌ ಮೂಲಕ ನೀರು ಪೂರೈಕೆ ಮಾಡುವ ಜಾಹೀರಾತು ಮಾತ್ರ ಭರ್ಜರಿಯಾಗಿದೆ. ಹಲವು ಕಡೆ ಅದೊಂದು ಸಫಲ ಯೋಜನೆಯಾಗಿಲ್ಲ. ಸದ್ಯ ಗ್ರಾಮ ಪಂಚಾಯಿತಿಗಳಿಂದ ಪೂರೈಕೆಯಾಗುವ ನೀರನ್ನೇ ಈ ಹೊಸ ಪೈಪುಗಳಲ್ಲಿ ಹರಿಸಿ ಯೋಜನೆಯನ್ನು ಗುರಿ ಮುಟ್ಟಿಸಿರುವುದು ಕಂಡುಬರುತ್ತಿದೆ. ಇನ್ನು ಹರಿಯುವ ಹಳ್ಳ, ನದಿಯಂತಹ ನೀರಿನಾಸರೆಗಳಿಂದ ಪಟ್ಟಣಗಳಲ್ಲಿ ನೀರು ಶುದ್ಧೀಕರಿಸುವ ಘಟಕಗಳನ್ನು ಸ್ಥಾಪಿಸಲಾಗಿದೆ. ಬೇಸಿಗೆ ಮಧ್ಯಮಾವಧಿ ತಲುಪಿದಾಗ ಇಂತಹ ಘಟಕಗಳ ಬಳಿಗೆ ಭೇಟಿ ನೀಡಿದವರಿಗೆ ನೀರು ಕುಡಿಯುವುದೇ ಬೇಡ ಎನಿಸಬಹುದು. ಹರಿದುಬರುವ ನೀರಿನಿಂದ ಪ್ರತ್ಯೇಕಿಸಿದ ಗೋಣಿಚೀಲಗಳು, ಪ್ಲಾಸ್ಟಿಕ್‌ ವಸ್ತುಗಳು, ಬಟ್ಟೆಗಳು ಅಲ್ಲಿ ರಾಶಿ ಬೀಳುವ ದೃಶ್ಯವಂತೂ ಹೊಟ್ಟೆ ತೊಳಸುವಂತೆ ಇರುತ್ತದೆ. ಎಷ್ಟೇ ಶುದ್ಧೀಕರಿಸಿದ್ದೇವೆ ಎಂದು ಹೇಳಿದರೂ ಇಂತಹ ನೀರನ್ನು ಕುಡಿಯುವಾಗ ಯೋಚಿಸಲೇಬೇಕಾಗುತ್ತದೆ.

ಸರ್ಕಾರ ಮತ್ತು ಸ್ಥಳೀಯ ಆಡಳಿತಗಳು ಶುದ್ಧ ಕುಡಿಯುವ ನೀರಿನ ಪೂರೈಕೆ ವಿಚಾರವಾಗಿ ಪ್ರಾಮಾಣಿಕ ಹಾಗೂ ಪಾರದರ್ಶಕ ನೀತಿಯನ್ನು ಹೊಂದಿದಂತೆ ಭಾಸವಾಗುವುದಿಲ್ಲ. ಪ್ರತಿವರ್ಷದ ಬಜೆಟ್‌ನಲ್ಲಿ ಇದಕ್ಕಾಗಿ ಗಮನಾರ್ಹ ಮೊತ್ತವನ್ನು ತೆಗೆದಿರಿಸಿ ಜನರ ಪ್ರಾಣ ರಕ್ಷಿಸುವ ನೀರನ್ನು ಅತ್ಯಂತ ಪರಿಶುದ್ಧವಾಗಿ ಒದಗಿಸಲು ಕಾಳಜಿ ವಹಿಸಿದಂತಿಲ್ಲ. ಕ್ಷಮಾರ್ಹವಲ್ಲದ ಅಲಕ್ಷ್ಯವೇ ಕುಡಿಯುವ ನೀರು ನಂಜಾಗಲು ಕಾರಣವಾಗುತ್ತಿದೆ. ನೀರು ಸಂಗ್ರಹಿಸುವ ತೊಟ್ಟಿಗಳನ್ನು ನಿಗದಿತ ಸಮಯದೊಳಗೆ ಶುಚಿಗೊಳಿಸದ ಗ್ರಾಮ ಪಂಚಾಯಿತಿಗಳೂ ಇವೆ.

ಇದರೊಂದಿಗೆ ಹನಿ ಹನಿ ನೀರು ಕೂಡ ಚಿನ್ನಕ್ಕಿಂತ ಬೆಲೆ ಬಾಳುವುದು ಎಂಬ ಸತ್ಯವನ್ನು ಸಾರ್ವಜನಿಕರೂ ಮರೆಯುವುದುಂಟು. ನಲ್ಲಿಯಲ್ಲಿ ಸೋರಿ ಹೋಗುತ್ತಿರುವ ದೃಶ್ಯವನ್ನು ಕಂಡರೂ ‘ನನ್ನ ಮನೆಯದ್ದಲ್ಲ’ ಎಂಬ ನಿರಾಳ ಭಾವದಲ್ಲಿ ಮುಂದುವರಿಯುವವರಿದ್ದಾರೆ. ಬರುವ ನೀರನ್ನು ಆರಂಭದಲ್ಲಿ ತಮ್ಮ ಮನೆಯ ಅಗತ್ಯಗಳಿಗೆ ಭರ್ತಿ ಮಾಡಿಕೊಂಡು, ಸಾಲಿನ ಕೊನೆಯಲ್ಲಿ ಇರುವವರಿಗೆ ತೊಟ್ಟು ನೀರೂ ಸಿಗದೆ ಹೋದಾಗಲೂ ಸಂತಾಪ ಪಡದವರಿದ್ದಾರೆ. ಕುಡಿಯುವ ನೀರನ್ನು ಅನ್ಯ ಉದ್ದೇಶಗಳಿಗೆ ಬಳಸುವುದಿಲ್ಲ ಎಂಬ ಕರಾರಿಗೆ ಸಹಿ ಮಾಡಿದ್ದರೂ ತೆಂಗು, ಮಲ್ಲಿಗೆ, ತರಕಾರಿ ಗಿಡಗಳ ಬುಡ ನೆನೆಸಿಕೊಳ್ಳುವವರಿಗೂ ಬರವಿಲ್ಲ.

ನೀರನ್ನು ಪೋಲು ಮಾಡುವ ಮೊದಲು, ಹನಿ ನೀರಿಗಾಗಿ ಪರಿತಪಿಸುವ ದೇಶಗಳ ಗ್ರಾಮೀಣ ಜನರನ್ನು ನೆನಪಿಸಿಕೊಳ್ಳಬೇಕು. ನಮ್ಮಲ್ಲಿಯೂ ಹರದಾರಿ ದೂರದಿಂದ ಕೊಡ ತುಂಬಿಕೊಂಡು ಬರುವ ಸಂಕಷ್ಟ ಈಗಲೂ ಕೆಲವೆಡೆ ಇದೆ. ಶುದ್ಧ ನೀರಿನ ಸರಬರಾಜು ಹೇಗೆ ಆಡಳಿತದ ಹೊಣೆಗಾರಿಕೆಯೋ ಪ್ರತಿ ಹನಿ ನೀರನ್ನೂ ದುರ್ಬಳಕೆ ಮಾಡದ ಜಾಗೃತಿ ಬಳಕೆದಾರರಲ್ಲೂ ಇರಬೇಕಾಗಿದೆ. ಅನೇಕ ಗ್ರಾಮ ಪಂಚಾಯಿತಿಗಳು ಬರುವ ಅನುದಾನವನ್ನು ಗ್ರಾಮೀಣ ಜನರ ಕುಡಿಯುವ ನೀರು ಪೂರೈಕೆಯ ವಿದ್ಯುತ್‌ ವೆಚ್ಚಕ್ಕೆ ಬಳಸಿ, ಅಭಿವೃದ್ಧಿಗೆ ಬಿಡಿಗಾಸನ್ನೂ ಬಳಸದಿರುವ ಲೋಪ ಎದ್ದು ಕಾಣುತ್ತಿದೆ.

ಮಳೆಗಾಲದಲ್ಲಿ ಚಾವಣಿಯಿಂದ ಬೀಳುವ ನೀರನ್ನು ಸಂಗ್ರಹಿಸಿ, ಶುದ್ಧೀಕರಿಸಿ ಬಳಸುವುದು, ಜಲಮೂಲಗಳಿಗೆ ಸೇರಿಸುವಂತಹ ಜಲ ಸಂರಕ್ಷಣೆಯ ತಂತ್ರಗಳನ್ನು ಅಳವಡಿಸಿಕೊಳ್ಳುವಲ್ಲಿ ಸಾರ್ವಜನಿಕರನ್ನು ತೊಡಗಿಸುವ ಕೆಲಸಗಳನ್ನು ಸ್ಥಳೀಯ ಆಡಳಿತದವರು ಮಾಡಬೇಕು. ಈ ಮೂಲಕ ತಮ್ಮ ನೀರನ್ನು ತಾವೇ ಪಡೆಯಲು ಪ್ರೇರಕರಾಗಬೇಕಾದ ಅಗತ್ಯ ಇದೆ. ಬೇಸಿಗೆಯ ನೀರಿನ ಹಾಹಾಕಾರ ಶಮನಕ್ಕೂ ಇದು ನೆರವಾದೀತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.