ಸಾಂದರ್ಭಿಕ ಚಿತ್ರ
ಈಚೆಗೆ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಸ್ವಾಮೀಜಿಯೊಬ್ಬರು, ಸಾಲ ಮಾಡಿ ಹೆಂಡತಿಗೆ ಚಿನ್ನದ ದೊಡ್ಡ ಸರ ಮಾಡಿಸಿ, ಸಾಲ ತೀರಿಸಲು ಹೊಲ ಕಳೆದುಕೊಂಡಂತಹ ಜಾನಪದ ಕಥೆಯೊಂದನ್ನು ಉದಾಹರಿಸಿದರು. ‘ಮೈಕ್ರೊಫೈನಾನ್ಸ್ ಕಂಪನಿಗಳ ಹಾವಳಿ ಹೆಚ್ಚಾಗಿದೆ. ಈ ಕಂಪನಿಗಳ ಕಚೇರಿಗಳಿಗೆ ಬೀಗ ಹಾಕಬೇಕು’ ಎಂದು ಜೋರಾಗಿ ಹೇಳಿದರು. ಜನ ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದರು.
‘ಸಾಲ ಮಾಡಬಾರದು, ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು, ಸಾಲ ಎಂದರೆ ಶೂಲ’ ಎಂಬಂತಹ ಭಾವನೆ ಜನಸಾಮಾನ್ಯರಲ್ಲಿ ಒಂದು ಕಾಲದಲ್ಲಿ ಬಲವಾಗಿ ಬೇರೂರಿತ್ತು. ಸಾಲ ಮಾಡುವುದು ಅಪರಾಧ, ಅಪಮಾನ ಎನ್ನುವಂತೆ ಸಭೆ–ಸಮಾರಂಭಗಳಲ್ಲಿ,ಧಾರ್ಮಿಕ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಮುಖಂಡರು ಹಾಗೂ ಹಿರಿಯರು ಹೇಳುತ್ತಾರೆ. ಆದರೆ ಈ ಬಗೆಯ ಯೋಚನೆಯು ಉದ್ಯಮ–ವ್ಯವಹಾರ ದಲ್ಲಿ ತೊಡಗಿಕೊಳ್ಳಲು ಬಯಸುವವರ ಆತ್ಮಸ್ಥೈರ್ಯ ಕುಗ್ಗಿಸುತ್ತದೆ ಎಂಬುದನ್ನು ಮರೆಯಬಾರದು.
ಸಾಲದ ಹಣವನ್ನು ದುಂದುವೆಚ್ಚ ಮಾಡಿ ತೊಂದರೆ ಅನುಭವಿಸುವವರ ಕುರಿತು ‘...ಸಾಲಿಗನು ಬಂದು ಎಳೆಯುವಾಗ ಕಿಬ್ಬದಿಯ ಕೀಲು ಮುರಿದಂತೆ’ ಎಂದು ಸರ್ವಜ್ಞ ಕವಿ ಹೇಳಿದ ಮಾತನ್ನು ಎಲ್ಲ ವ್ಯವಹಾರಗಳಿಗೂ ಅನ್ವಯಿಸಿ ಹೇಳುವುದು ಸರಿಯಲ್ಲ. ಅದು ಅನವಶ್ಯವಾಗಿ ಖರ್ಚು ಮಾಡುವವರಿಗೆ ಹೇಳಿದ ಎಚ್ಚರಿಕೆ ಅಷ್ಟೆ.
‘ಸಾಲ ಪಡೆದು ಶ್ರೀಮಂತರಾಗಿ’ ಎನ್ನುವ ಮಾತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಹತ್ವದ ಘೋಷವಾಕ್ಯ ಆಗಿದೆ. ಸಮರ್ಪಕವಾಗಿ ಬಳಸಿಕೊಳ್ಳುವ ಸಾಲವು ಪ್ರಗತಿಗೆ ಊರುಗೋಲಾಗುತ್ತದೆ. ಸಾಲ ಪಡೆದು ಆರ್ಥಿಕ ಉನ್ನತಿ ಸಾಧಿಸುವುದನ್ನು ಹಣಕಾಸು ವ್ಯವಹಾರದ ಪರಿಭಾಷೆಯಲ್ಲಿ ‘ಲೀವರೇಜಿಂಗ್’ ಎಂದು ಹೇಳುತ್ತಾರೆ. ದೊಡ್ಡ ಭಾರದ ವಸ್ತುಗಳನ್ನು ಎತ್ತಲು ಭೌತಶಾಸ್ತ್ರದ ಸನ್ನೆ ವಿಧಾನವನ್ನು ಅನುಸರಿಸಲಾಗುತ್ತದೆ. ಸನ್ನೆಯ ವೈಜ್ಞಾನಿಕ ತತ್ವವನ್ನು ಪ್ರತಿಪಾದಿಸಿದ ಭೌತ ವಿಜ್ಞಾನಿ ಆರ್ಕಿಮಿಡೀಸ್ ‘ವಿಶ್ವದ ಹೊರಗೆ ನಿಲ್ಲಲು ಸ್ವಲ್ಪ ಜಾಗ ಕೊಡಿ. ಉದ್ದನೆಯ ಕೋಲು ಹಿಡಿದು ಸನ್ನೆಯ ತತ್ವದ ಮೂಲಕ ವಿಶ್ವವನ್ನು ಚೆಂಡಿನಂತೆ ಆಡುತ್ತೇನೆ’ ಎಂದು ಹೇಳುತ್ತಿದ್ದರಂತೆ. ಹಾಗೆಯೇ ಹಣಕಾಸಿನ ಒಂದು ಸಣ್ಣ ಸಹಾಯ ವಿಶ್ವಮಟ್ಟದ ಆರ್ಥಿಕ ಬೆಳವಣಿಗೆಗೆ ಮೆಟ್ಟಿಲಾಗುತ್ತದೆ ಎನ್ನುವುದು ಕೂಡ ವಾಸ್ತವ ಸಂಗತಿಯಾಗಿದೆ.
ಪಶು ಸಂಗೋಪನೆ, ಕಿರಾಣಿ ವ್ಯಾಪಾರ, ಹೊಲಿಗೆ, ಕಸೂತಿ ಕೆಲಸ, ತರಕಾರಿ ಮಾರಾಟದಂಥ ಸ್ವಉದ್ಯೋಗಗಳನ್ನು ಆರಂಭಿಸಲು ಮಹಿಳೆಯರಿಗೆ ಕಿರುಸಾಲ ಬಹಳ ನೆರವಾಗುತ್ತದೆ. ರಾಜ್ಯದಲ್ಲಿ 31 ನೋಂದಾಯಿತ ಮೈಕ್ರೊಫೈನಾನ್ಸ್ ಸಂಸ್ಥೆಗಳಿವೆ. ಇವುಗಳಲ್ಲಿ ಒಟ್ಟು 1.09 ಕೋಟಿ ಮಹಿಳೆಯರು ಸಾಲ ಪಡೆದಿದ್ದಾರೆ. ಇದರಿಂದ ಬಹಳಷ್ಟು ಕುಟುಂಬಗಳಿಗೆ ಅನುಕೂಲವಾಗಿದೆ.
ಬಾಗಲಕೋಟೆಯಲ್ಲಿ ಈಚೆಗೆ ಜಿಲ್ಲಾಧಿಕಾರಿ ಅಧ್ಯಕ್ಷತೆ ಯಲ್ಲಿ ಮೈಕ್ರೊಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳು, ಗಿರವಿದಾರರು, ಲೇವಾದೇವಿ ವ್ಯವಹಾರ ನಡೆಸುವವರ ಸಭೆ ನಡೆಯಿತು. ಕೊಟ್ಟ ಸಾಲದಲ್ಲಿ ಶೇ 95ರಷ್ಟು ಸಾಲ ವಸೂಲಾಗುತ್ತದೆ, ಶೇ 5ರಷ್ಟು ಸಾಲ ಮರುಪಾವತಿ ಮಾತ್ರ ಸಮಸ್ಯೆ ಆಗುತ್ತದೆ ಎಂದು ಅವರೆಲ್ಲರೂ ಹೇಳಿದರು. ವ್ಯವಹಾರಗಳಲ್ಲಿ ಇಂಥ ಸಣ್ಣ ಮಟ್ಟದ ಸಮಸ್ಯೆ ಸಾಮಾನ್ಯ. ಸಾಲದಿಂದ ಜನಸಾಮಾನ್ಯರ ಆರ್ಥಿಕ ಉನ್ನತಿಗೆ ಆಗುವ ಅನುಕೂಲ ಮತ್ತು ಸಾಲ ನೀಡುವ ಸಂಸ್ಥೆಗಳು ಗಳಿಸುವ ಲಾಭದ ಪ್ರಮಾಣದಲ್ಲಿ ಇದು ನಗಣ್ಯ. ಯಾವುದೇ ವ್ಯವಹಾರ, ವ್ಯಾಪಾರದಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಇರುವುದಿಲ್ಲ. ನಿಯಮದ ಅನುಸಾರ ಸಣ್ಣ ಮಟ್ಟದ ಸೋರಿಕೆಗಳನ್ನು ಸಹಿಸಿಕೊಳ್ಳಬೇಕು, ಸರಿಪಡಿಸಿಕೊಳ್ಳಬೇಕು.
‘ಗ್ರಾಹಕನನ್ನು ಗೌರವದಿಂದ ಕಾಣಬೇಕು. ದೂಷಿಸ ಬಾರದು. ಅವನು ನಮಗೆ ಸೇವೆಯ ಅವಕಾಶ ಒದಗಿಸು ತ್ತಾನೆ. ಗ್ರಾಹಕ ಸದಾ ಶ್ರೇಷ್ಠ’ ಎಂದು ಗಾಂಧೀಜಿ ಹೇಳುತ್ತಿದ್ದರು. ದೊಡ್ಡ ದೊಡ್ಡ ಉದ್ಯಮಿಗಳೆಲ್ಲ ಸಾಲ ಪಡೆದೇ ಸಂಸ್ಥೆಗಳನ್ನು ಕಟ್ಟುತ್ತಾರೆ. ಸಾಲ ಸೌಲಭ್ಯ ಪಡೆಯದೆ ದೊಡ್ಡ ಸಂಸ್ಥೆಗಳನ್ನು, ಕಾರ್ಖಾನೆಗಳನ್ನು ಕಟ್ಟಲು ಸಾಧ್ಯವಾಗುವುದಿಲ್ಲ.
ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲ ಮನ್ನಾ ಮಾಡುವ ಕುರಿತು ತೀವ್ರ ಚರ್ಚೆ ನಡೆದಿತ್ತು. ಸಾಲ ಮನ್ನಾ ಸರಿಯಾದ ಕ್ರಮವಲ್ಲ, ಇದರಿಂದ ಸಾಲ ಮರುಪಾವತಿ ಮಾಡಬೇಕು ಎಂಬ ನಂಬಿಕೆ ಹೊರಟು ಹೋಗಬಹುದು, ಬಡ್ಡಿಯನ್ನು ಮಾತ್ರ ಕಡಿಮೆ ಮಾಡಬೇಕು ಎಂದು ತಜ್ಞರು ಸಲಹೆ ಮಾಡಿದ್ದರು. ಸಾಲ ಮರುಪಾವತಿ ಮಾಡುವುದು ಒಂದು ನೈತಿಕ ಹೊಣೆ ಮತ್ತು ಜವಾಬ್ದಾರಿ. ಸಾಲ ಮರುಪಾವತಿ ಮಾಡದಿದ್ದರೆ ಕೊಟ್ಟವರ ಋಣದಲ್ಲಿ ಉಳಿಯಬೇಕಾಗುತ್ತದೆ ಎಂಬ ನಂಬಿಕೆ ಜನಸಂಸ್ಕೃತಿಯ ಭಾಗವಾಗಿದೆ. ಮರುಪಾವತಿ ಮಾಡಬೇಕೆಂಬ ಮನೋಭಾವವನ್ನು ಹೆಚ್ಚಿನವರು ಹೊಂದಿರುತ್ತಾರೆ.
ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹ ರಾವ್ ಮತ್ತು ಹಣಕಾಸು ಸಚಿವರಾಗಿದ್ದ ಮನಮೋಹನ್ ಸಿಂಗ್ ಅವರು 90ರ ದಶಕದಲ್ಲಿ ಆರಂಭಿಸಿದ ಉದಾರೀಕರಣ ನೀತಿಯು ಆರ್ಥಿಕ ಸಬಲೀಕರಣಕ್ಕೆ ಕಾರಣವಾಯಿತು. ದೇಶವು ಉದ್ದಿಮೆ ಪ್ರಧಾನ ವ್ಯವಸ್ಥೆಯ ಕಡೆಗೆ ದಾಪುಗಾಲು ಇಟ್ಟು ನಡೆಯತೊಡಗಿತು. ಜನರ ಕೈಗೆ ದುಡ್ಡು ಕೊಟ್ಟು ಉದ್ಯೋಗ, ವ್ಯವಹಾರ, ವ್ಯವಸಾಯ ಮಾಡುವುದಕ್ಕೆ ಬೆಂಬಲ ನೀಡಲಾಯಿತು. ಇದರಿಂದ ದೇಶದಲ್ಲಿ ಹಣದ ಸಂಚಲನ ಹೆಚ್ಚಿ, ಕೊಳ್ಳುವ ಸಾಮರ್ಥ್ಯವೂ ಬೆಳೆಯಿತು.
ಸಾಲ ಶೂಲ ಎಂಬ ಭಾವನೆ ಅಳಿಯಬೇಕು. ಸಾಲದ ವ್ಯವಹಾರ ಜನಸ್ನೇಹಿ ಆಗಬೇಕು. ಸಾಲ ಪಡೆಯುವವರು ಮತ್ತು ನೀಡುವವರು ಜವಾಬ್ದಾರಿ ಯಿಂದ ನಡೆದುಕೊಂಡರೆ ಮಾತ್ರ ಇದು ಸಾಧ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.