ಇದೀಗತಾನೆ ಸಂವಿಧಾನ ದಿನವನ್ನು ಆಚರಿಸಿದ್ದೇವೆ. ‘ಲಾ ಡೇ’ ಎಂದು ಇದ್ದದ್ದನ್ನು ಸಂವಿಧಾನ ದಿನ ಎಂದು ಬದಲಿಸುವ ಮೂಲಕ ಉನ್ನತೀಕರಿಸಿ ಆಚರಿಸಿದ್ದೇವೆ. ಭಾರತೀಯರು ದಿನಾಚರಣೆಗಳ ವಿಷಯದಲ್ಲಿ ಜಗತ್ತಿನಲ್ಲಿ ಎಲ್ಲರಿಗಿಂತ ಮುಂದು! ಸತ್ತವರಿಂದ ಹಿಡಿದು ಸಂವಿಧಾನದವರೆಗೆ ದಿನಾಚರಣೆಗಳೋ ದಿನಾಚರಣೆಗಳು! ಬಹುಶಃ ವರ್ಷದಲ್ಲಿ ಯಾವುದೇ ದಿನಾಚರಣೆ ಇಲ್ಲದ ದಿನ ಯಾವುದೆಂದು ಕಷ್ಟಪಟ್ಟು ಹುಡುಕಬೇಕಾಗಿದೆ ಎನ್ನುವಷ್ಟು ಮಟ್ಟಿಗೆ ದಿನಾಚರಣೆಗಳು ರೂಢಿಗೆ ಬಂದುಬಿಟ್ಟಿವೆ. ಆದರೆ ಸಂವಿಧಾನ ದಿನ ಕೂಡ ಅವುಗಳಲ್ಲಿ ಒಂದು ಎನ್ನುವಂತೆ ಖಂಡಿತ ಆಗಬಾರದು.
ನಮ್ಮ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅದನ್ನೇ ಬಹುಶಃ ‘ಸಂವಿಧಾನ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು’ ಎಂದು ಹೇಳಿದ್ದಾರೆ. ನಮ್ಮ ಎಲ್ಲ ಮಂತ್ರಿ ಮಹೋದಯರೂ ಅಧಿಕಾರ ಸ್ವೀಕರಿಸುವಾಗ ಹೇಳುವ ಪ್ರತಿಜ್ಞಾವಿಧಿಯಲ್ಲಿ ಸಂವಿಧಾನದ ವಿಷಯಕ್ಕೆ ಶ್ರದ್ಧೆ ಮತ್ತು ನಿಷ್ಠೆ ಇಟ್ಟುಕೊಂಡಿರುವುದಾಗಿ ಹೇಳುವ ಪರಿಪಾಟ ಬೆಳೆದುಬಂದಿದೆ. ಆದರೆ ಹಾಗೆ ಹೇಳಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಬಹುಪಾಲು ಜನ ಅಧಿಕಾರ ಬಿಟ್ಟುಕೊಡುವ ಹೊತ್ತಿಗೆ ಅವರ ಸುತ್ತ ಹಗರಣಗಳ ಸರಮಾಲೆಯೇ ಸುತ್ತಿಕೊಂಡುಬಿಟ್ಟಿರುವುದು ಹಿಂದಿನ ಅರ್ಧ ಶತಮಾನದಿಂದಂತೂ ತೀರಾ ಸಾಮಾನ್ಯವಾಗಿಬಿಟ್ಟಿದೆ. ಅವರು ನಿಜಕ್ಕೂ ಸಂವಿಧಾನಕ್ಕೆ ಬದ್ಧರೇ ಆಗಿದ್ದರೆ ಹಾಗಾಗಬೇಕಿಲ್ಲ. ಕಡೇಪಕ್ಷ ಪ್ರತಿಜ್ಞಾವಿಧಿ ಸ್ವೀಕರಿಸಿದ ದಿನವಾದರೂ ಅದರಂತೆ ಇರುತ್ತಾರೆಯೇ ಎನ್ನುವುದೂ ಅನುಮಾನವೇ ಎನ್ನುವಂತಾಗಿಬಿಟ್ಟಿದೆ.
ಕವಿವರ್ಯ ಬೇಂದ್ರೆಯವರ ಕವಿತೆಯ ‘ಗಾಂಧಿ ಜಯಂತಿಯ ದಿನ/ ಇಂದಾದರೂ ನಿಜ ಹೇಳೋಣ ಸುಳ್ಳಿಗೋ ಇಡಿ ವರುಷ ತೆರವಿಹುದು’ ಎಂಬ ವ್ಯಂಗ್ಯದ ಸಾಲು ನೆನಪಾಗುತ್ತದೆ. ಆದರೆ ವ್ಯಂಗ್ಯವೇ ವಾಸ್ತವ
ಆಗಿಬಿಟ್ಟಿರುವ ದುರಂತ ಸಮಯದಲ್ಲಿ ನಾವಿದ್ದೇವೆ.
ಸಂವಿಧಾನದ ಬಗ್ಗೆ ನಮಗೆ ಇರಬೇಕಾದದ್ದು ಎಲ್ಲಕ್ಕಿಂತ ಹೆಚ್ಚಾಗಿ ಬದ್ಧತೆ, ಗೌರವ. ಸಂವಿಧಾನವನ್ನು ಪಾಲಿಸಬೇಕಾದವರಲ್ಲಿ ಅವು ಇದ್ದಿದ್ದರೆ ನಮ್ಮ ದೇಶದ ಜನ ಇಷ್ಟೊಂದು ಪಾಡು ಪಡಬೇಕಾಗಿರಲಿಲ್ಲ. ರಾಜಕೀಯ ಭ್ರಷ್ಟಾಚಾರ ಮತ್ತು ಅಧಿಕಾರಿಶಾಹಿಯ ಭ್ರಷ್ಟಾಚಾರ ತನ್ನ ತುತ್ತತುದಿಯನ್ನು ತಲುಪಿರುವ ಕಾಲ
ದಲ್ಲಿ ನಾವಿದ್ದೇವೆ. ಯಾವ ಕಚೇರಿಗೆ ಕಾಲಿಟ್ಟರೂ ಒಂದು ಸಣ್ಣ ಕೆಲಸಕ್ಕೂ ಲಂಚ ತೆರದೆ ಕೆಲಸವಾಗುವುದಿಲ್ಲ ಎಂಬುದು ಸೂರ್ಯಸತ್ಯ. ಕೇಳಿದರೆ, ಮಂತ್ರಿಗಳವರೆಗೂ ಹಂಚಿಕೆಯಾಗಬೇಕು ಎನ್ನುತ್ತಾರೆ.
ಭ್ರಷ್ಟಾಚಾರ ನಿಲ್ಲದ ವಿನಾ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ, ಸಂವಿಧಾನಕ್ಕೂ ಉಳಿಗಾಲ ಇರುವು
ದಿಲ್ಲ, ಗೌರವವೂ ಬರುವುದಿಲ್ಲ. ರೆವಿನ್ಯೂ ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಉದ್ಯೋಗ ರಂಗ, ಉದ್ಯಮಗಳು... ಹೀಗೆ ಇದು ಸರ್ವವ್ಯಾಪಿಯಾಗಿ, ಸಹಜವಾಗಿ ಪರಿಹಾರ ಕಾಣಬೇಕಾದಂಥ ಸಮಸ್ಯೆಗಳ ಪರಿಹಾರಕ್ಕೂ ರಾಜಕಾರಣಿಗಳು ಮತ್ತು ಅಧಿಕಾರಿಶಾಹಿಯ ಈ ಲಂಚಗುಳಿತನ ದೊಡ್ಡ ತಡೆಗೋಡೆಯಾಗಿದೆ. ಇದರ ಹಾವಳಿಯಿಂದ ಹತಾಶರಾಗಿ ಹೊಸ ಹೊಸ ನಕ್ಸಲೀಯರು ಹುಟ್ಟಿಕೊಳ್ಳುವುದಕ್ಕೂ ಇದು ಕಾರಣಆಗಿದೆ. ಇನ್ನು ಭ್ರಷ್ಟಾಚಾರ ವಿರುದ್ಧದ ಆಂದೋಲನದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ವ್ಯಕ್ತಿ ಮತ್ತು ಆತನ ಬಹಳಷ್ಟು ಸಂಗಡಿಗರು ಭ್ರಷ್ಟಾಚಾರದ ಆಪಾದನೆಯಲ್ಲಿ ಜೈಲು ಸೇರಿದ್ದಕ್ಕಿಂತ ಇನ್ನೊಂದು ವ್ಯಂಗ್ಯ ಇನ್ನೇನಿದೆ?
ಜಗತ್ತಿನ ಮೊದಲ ಧಾರ್ಮಿಕ ಸಂಸತ್ತು ಶರಣರ ಅನುಭವ ಮಂಟಪ; ಅಲ್ಲ, ತೀರ್ಥಂಕರರ ಸಮವಸರಣ ಎಂದೆಲ್ಲ ಹೆಮ್ಮೆತಾಳುವ ನಾವು, ಕವಿ ಅಡಿಗರು ಹೇಳುವಂತೆ ‘ಇದೆ’ಯ ಹೃದಯದ್ರಾವದ ಗೊಡವೆ
ಯಿಲ್ಲದೆ ‘ಇತ್ತು’ಗಳ ಧ್ವಜವನ್ನು ಎತ್ತಿಹಿಡಿಯುವುದರಲ್ಲಿ ನಿಸ್ಸೀಮರು. ಆದರೆ ಈಗಿನ ನಮ್ಮ ಸಂಸತ್ತು ಹೇಗೆ ನಡೆಯುತ್ತಿದೆ ಎಂಬುದರ ಬಗ್ಗೆ ಜನ ತಲೆಕೆಡಿಸಿಕೊಳ್ಳುವುದಿರಲಿ ಸಂಸದರೂ ತಲೆಕೆಡಿಸಿಕೊಳ್ಳುವ ಕಷ್ಟ ತೆಗೆದುಕೊಳ್ಳುವುದಿಲ್ಲವಲ್ಲ ಎಂಬುದೇ ನಮ್ಮ ಚಿಂತೆಯಾಗಿದೆ.
ಒಂದು ದಿನದ ಸಂಸತ್ ಕಲಾಪಕ್ಕೆ ಕೋಟಿಗಟ್ಟಲೆ ಹಣ ಖರ್ಚಾಗುತ್ತದೆಂದು ಹೇಳಲಾಗುತ್ತದೆ ಮತ್ತು ಆ ಕಲಾಪಗಳು ದೂರದರ್ಶನದಲ್ಲಿ ನೇರವಾಗಿ ಪ್ರಸಾರವಾಗುತ್ತವೆ ಎಂಬುದು ಎಲ್ಲ ಸಂಸದರಿಗೂ ತಿಳಿದಿದೆ. ಹೀಗಿದ್ದೂ ಜನರ ಸಮಸ್ಯೆಗಳನ್ನು ಮುನ್ನೆಲೆಗೆ ತಂದು, ಸಂಸತ್ತಿನಲ್ಲಿ ಪ್ರತಿಧ್ವನಿಸುವುದರತ್ತ ಅವರು ಅಲಕ್ಷ್ಯ ತೋರುತ್ತಾರೆ. ತಮ್ಮ ಬಗ್ಗೆ ಜನ ಏನೆಂದು ಕೊಂಡಾರು ಎಂಬುದರ ಬಗ್ಗೆ ಕಿಂಚಿತ್ತೂ ಯೋಚಿಸದೆ, ಬರೀ ತಮ್ಮ ಪಕ್ಷಗಳ ಹಾಗೂ ತಮ್ಮ ವೈಯಕ್ತಿಕ ಪ್ರತಿಷ್ಠೆ ಮೆರೆಸಲು ಇನ್ನಿಲ್ಲದಂತೆ ಮುಗಿಬೀಳುತ್ತಾರೆ. ಏನೊಂದೂ ತ್ಯಾಗ ಮಾಡದವರು ಸಭಾತ್ಯಾಗಕ್ಕೆ ತುದಿಗಾಲಿನಲ್ಲಿ ನಿಲ್ಲುತ್ತಾರೆ. ಇದನ್ನೆಲ್ಲ ಕಂಡಾಗ, ಈ ಚಿತ್ರ ಬದಲಾಗಲು ಭಾರತದ ನಾಗರಿಕರು ಇನ್ನೆಷ್ಟು ವರ್ಷ ಕಾಯಬೇಕು ಎಂದು ಬೇಸರವಾಗುತ್ತದೆ. ‘ಹೆಮ್ಮೆಪಟ್ಟುಕೊಳ್ಳುವಂಥ ಇಂತಹ ಸಂವಿಧಾನವನ್ನು ನಾವು ಕೊಟ್ಟರೂ ಅದಕ್ಕೆ ಚ್ಯುತಿ ಬಾರದಂತೆ ಸಂಸದರು ನಡೆದುಕೊಳ್ಳುವುದನ್ನು ನೋಡಲು ನಾವಿನ್ನೆಷ್ಟು ಕಾಲ ಕಾಯಬೇಕು’ ಎಂದು ಸಂವಿಧಾನ ಪಿತೃಗಳ ಆತ್ಮ ನೊಂದುಕೊಳ್ಳುವುದನ್ನು ತಡೆಯಲಾಗದೇ?
ಎ.ಸೂರ್ಯ ಪ್ರಕಾಶ್ ಅವರೇನೋ ತಮ್ಮ ಲೇಖನದಲ್ಲಿ (ಪ್ರ.ವಾ., ನ. 27) ‘ನಮ್ಮ ಸಂವಿಧಾನ ಜಗತ್ತಿಗೇ ದಾರಿದೀಪ’ ಎಂದು ಸಾರಿಬಿಟ್ಟಿದ್ದಾರೆ. ಅದು ಚರ್ಚಾಸ್ಪದವೋ ಅಲ್ಲವೋ ಎಂಬ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ಆ ಬಗ್ಗೆ ಹೆಮ್ಮೆಪಡುತ್ತಲೇ ನಮ್ಮ ಸಂವಿಧಾನ ಮೊದಲು ನಮಗೆ ನಿಜಕ್ಕೂ ದಾರಿ
ದೀಪವಾಗುವಂತೆ, ಅದು ಎಂದೆಂದಿಗೂ ನಂದದಂತೆ ನೋಡಿಕೊಳ್ಳಬೇಕಾದ ಮತ್ತು ಅದರ ಬೆಳಕಿನಲ್ಲಿ ಮುಂದಡಿ ಇಡಬೇಕಾದ ಹೊಣೆಗಾರಿಕೆ ನಮ್ಮದೇ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.