ADVERTISEMENT

ಸಂಗತ: ಸಬಲೆಯ ಕೆಡವಲು ನೂರಾರು ಹತಾರ

ಮಹಿಳೆಯರು ಹಿಂಸೆಯಿಂದ ಹೊರಬರಲು, ಭಾವನಾತ್ಮಕತೆಯನ್ನುಬದಿಗಿಟ್ಟು ಪ್ರಾಯೋಗಿಕವಾಗಿ ಯೋಚನೆ ಮಾಡುವುದು ಅತ್ಯಗತ್ಯ

ಡಾ.ಕೆ.ಎಸ್.ಪವಿತ್ರ
Published 23 ನವೆಂಬರ್ 2022, 19:30 IST
Last Updated 23 ನವೆಂಬರ್ 2022, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮನೋವೈದ್ಯೆಯಾಗಿ ದುಡಿಯುತ್ತ 17 ವರ್ಷಗಳೇ ಕಳೆದಿವೆ. ವಿವಿಧ ರೀತಿಯ ಹಿಂಸೆಗಳಿಗೆ ಒಳಗಾಗಿ, ಖಿನ್ನತೆಯಿಂದ ನರಳುತ್ತ ಬರುವ ಹೆಣ್ಣುಮಕ್ಕಳನ್ನು ನೋಡುತ್ತ, ನೋಡುತ್ತ ಉತ್ತರವಿರದ ಹಲವು ಪ್ರಶ್ನೆಗಳು ನನ್ನನ್ನು ಕಾಡುತ್ತವೆ. ವೃತ್ತಿಜೀವನದ ಆರಂಭದ ದಿನಗಳಲ್ಲಿ, ‘ನನ್ನ ಗಂಡ ಹೊಡೆಯುತ್ತಾರೆ’ ಎಂಬ ಮಾತನ್ನು ಕೇಳಿದಾಕ್ಷಣ ನಾನು ಅವರ ಪತಿಯನ್ನು ಕರೆಸುತ್ತಿದ್ದೆ. ಹಾಗೆ ಹೊಡೆದರೆ ಇರುವ ಕಾನೂನಿನ ಶಿಕ್ಷೆಯ ಬಗ್ಗೆ ಅವರಿಗೆ ವಿವರಿಸುತ್ತಿದ್ದೆ. ಕೆಲವರು ಕೇಳುತ್ತಿದ್ದರು, ಮತ್ತೆ ಕೆಲವರು ವಾಪಸ್ ಹೋಗಿ ‘ಹೊರಗೆ ಬೇರೆ ಹೋಗಿ ಹೇಳ್ತೀಯಾ’ ಎಂದು ಹೆಂಡತಿಗೆ ಮತ್ತೆರಡು ಬಾರಿಸುತ್ತಿದ್ದರು! ಆಪ್ತಸಲಹೆ- ಚಿಕಿತ್ಸೆಯು ಸಮಸ್ಯೆಗಳನ್ನು ಕಡಿಮೆ ಮಾಡುವ ಬದಲು ಮತ್ತಷ್ಟು ಹೆಚ್ಚಿಸುತ್ತಿತ್ತು. ಕ್ರಮೇಣ ಹೆಣ್ಣಿನ ಮೇಲಿನ ಹಿಂಸೆಯ ವಿವಿಧ ಆಯಾಮಗಳು ನನಗೆ ಅರಿವಾಗತೊಡಗಿದವು.

ನೀರಿನ ಮೇಲೆ ಕಾಣುವ ಮಂಜುಗಡ್ಡೆಯ ಬಹುಭಾಗ ನೀರಿನ ಕೆಳಗೆ ಅಡಗಿ ಕುಳಿತಿರುತ್ತ
ದಷ್ಟೆ. ಹಾಗೆಯೇ ಹೆಣ್ಣಿಗೆ ಸಂಬಂಧಿಸಿದ ಹಿಂಸೆಯ ಬಹುಮುಖಗಳೂ!

ಮಹಿಳೆಯರು ದೈಹಿಕ ಹಿಂಸೆಯ ಬಗ್ಗೆ ಧ್ವನಿ ಎತ್ತುವುದು ಬಲು ತಡವಾಗಿ. ಸಹಿಸಲು ಇನ್ನು ಅಸಾಧ್ಯ ಎನ್ನುವ ಸಂದರ್ಭದಲ್ಲಿ ಮಾತ್ರ. ಆರ್ಥಿಕತೆ, ಶಿಕ್ಷಣ, ಕಾನೂನು ಇವುಗಳಲ್ಲಿ ಯಾವುದರ ಬಲ ಇದ್ದರೂ ಕೆಲವೊಮ್ಮೆ ಮೌನಕ್ಕೆ ಶರಣಾಗುತ್ತಾರೆ. ಕಾರಣಗಳು ನಾಚಿಕೆ, ಸಮಾಜದಲ್ಲಿ ತಾನು ಕಳಂಕದ ಹಣೆಪಟ್ಟಿ ಹೊತ್ತು ತಲೆ ತಗ್ಗಿಸಬೇಕಾಗಬಹುದು ಎಂಬ ಹೆದರಿಕೆ. ವಸ್ತು ಕಳೆದಾಗ ತಪ್ಪು ಮಾಡಿದ ಕಳ್ಳ ತಲೆತಗ್ಗಿಸುವ ಬದಲು, ಕಳೆದುಕೊಂಡವನು ನಾಚಿಕೆ, ಅವಮಾನದಿಂದ ಕುಗ್ಗಿದಂತೆ!

ADVERTISEMENT

ಹೆಣ್ಣು ಹೀಗೆ ಮೌನವಾಗಿರುವುದಕ್ಕೆ ಪ್ರಮುಖ ಕಾರಣ ‘ಮಕ್ಕಳು'. ಮಹಿಳೆಗೆ ತನ್ನ ಮಕ್ಕಳ ಭವಿಷ್ಯ ಎನ್ನುವುದು ಎಷ್ಟು ಮುಖ್ಯವೆಂದರೆ, ಅದಕ್ಕೆ ತನ್ನ ಸಂತಸ, ಆರೋಗ್ಯವನ್ನೂ ಬಲಿ ಕೊಡುವಷ್ಟು. ಮಕ್ಕಳ ಭವಿಷ್ಯದ ಸುರಕ್ಷತೆ, ಮಕ್ಕಳು ನಾಳೆ ಕೇಳಬಹುದಾದ ಪ್ರಶ್ನೆಗಳು, ಹೆಣ್ಣುಮಕ್ಕಳ ಮದುವೆ ಮಾಡುವಾಗ ತಾಯಿಯು ಗಂಡನ ಜೊತೆಗೆ ಇರದೇ ಹೋದರೆ ಎದುರಿಸಬೇಕಾದ ಪ್ರಶ್ನೆಗಳು- ಇವು, ಹಿಂಸೆಯನ್ನು ಸತತವಾಗಿ ಅನುಭವಿಸುತ್ತಿದ್ದರೂ ಮಹಿಳೆಯರು ಹೊರ ಬರಲು ಯೋಚಿಸುವಂತೆ, ಹೆದರುವಂತೆ ಮಾಡುತ್ತವೆ.

ವಿಚಿತ್ರವೆಂದರೆ, ಹೀಗೆ ಮಕ್ಕಳ ಸಲುವಾಗಿ ತನ್ನ ಅಸ್ತಿತ್ವವನ್ನೇ ತ್ಯಾಗ ಮಾಡುವ ತಾಯಿಯನ್ನು ಬೆಳೆದ ಮಕ್ಕಳು ಅರ್ಥ ಮಾಡಿಕೊಳ್ಳದಿರುವುದು! ಅಂದರೆ ಸಮಾಜದ ರೂಢಿಗತ ಧೋರಣೆಯನ್ನೇ ತಮ್ಮ
ದಾಗಿಸಿಕೊಳ್ಳುವ ಮಕ್ಕಳು ಬೆಳೆದ ಮೇಲೆ ತಾಯಿಯ ನಡವಳಿಕೆಯನ್ನು ದೂರುವುದು, ತಂದೆಯಿಂದ ಆಗಿರಬಹುದಾದ ಹಿಂಸೆಯನ್ನು ‘ಗಂಭೀರವಾದದ್ದೇನಲ್ಲ’ ಎಂಬಂತೆ ತಳ್ಳಿಹಾಕುವುದು ಸಾಮಾನ್ಯ. ಇಂಥ ಸಂದರ್ಭದಲ್ಲಿ ತಾಯಿಯ ಗೊಂದಲ, ನೋವು ಹೇಳತೀರದ್ದು.

ಯಾವುದೇ ರೀತಿಯ ಹಿಂಸೆಗೆ ಒಳಗಾಗುವ ಮಹಿಳೆಯರು ಅದನ್ನು ಹೊರಗೆ ಹೇಳದೇ, ವಿವಿಧ ನೋವು, ಗ್ಯಾಸ್ಟ್ರಿಕ್, ಖಿನ್ನತೆಯಂತಹ ಸಮಸ್ಯೆಗಳಿಗೆ ಬೇರೆ ಬೇರೆ ವೈದ್ಯರನ್ನು ನೋಡುತ್ತಾ ಕಾಯಂ ರೋಗಿ ಆಗಿಬಿಡಬಹುದು. ಒಂದೊಮ್ಮೆ ಹೇಳಿದರೂ, ಇತರ ವೈದ್ಯರಿಗಾಗಲೀ, ಕುಟುಂಬ ವೈದ್ಯರಿಗಾಗಲೀ ಅದಕ್ಕೆ ಮಾಡುವುದೇನೆಂದು ಗೊತ್ತಿಲ್ಲ! ಹೆಚ್ಚೆಂದರೆ ಪತಿಯನ್ನು ಕರೆದು ಒಂದಿಷ್ಟು ಬುದ್ಧಿ ಹೇಳಬಹುದು. ಮನೋವೈದ್ಯರು ‘ಹಿಂಸೆ’ ಎಂಬ ಪ್ರಕ್ರಿಯೆಯ ಬಗ್ಗೆ ಮಾಹಿತಿಯನ್ನೇನೋ ಹೊಂದಿರುತ್ತಾರೆ. ಆದರೆ ಅದನ್ನು ನಿಭಾಯಿಸುವ ಪ್ರಾಯೋಗಿಕ ವ್ಯವಸ್ಥೆ ನಮ್ಮ ಸಮಾಜದಲ್ಲಿ ಸರಳವಾಗಿಲ್ಲ. ಹಾಗಾಗಿ ಹೆಣ್ಣಿನ ತಂದೆ-ತಾಯಿ, ‍ಪೊಲೀಸ್‌, ಕಾನೂನು, ಕೊನೆಗೆ ಇವರೊಂದಿಗೆ ವೈದ್ಯರು ಎಲ್ಲರೂ ಸೇರಿ ಹಿಂಸೆ ಅನುಭವಿಸುತ್ತಿರುವ ಹೆಣ್ಣಿಗೆ ಹೇಳುವ ಮಾತು ‘ಹೊಂದಿಕೊಂಡು, ಸುಧಾರಿಸಿಕೊಂಡು ಹೋಗಬೇಕಮ್ಮಾ!’

ಹಾಗಿದ್ದರೆ ಹಿಂಸೆಯನ್ನು ತಡೆಯುವ, ಹೊರಬರುವ ದಾರಿಯೇ ಇಲ್ಲವೇ?! ‘ಸಬಲತೆ’ ಎನ್ನುವುದು ಮಹಿಳೆಯ ಒಳಗಿನಿಂದ ಬರಬೇಕು. ತತ್‍ಕ್ಷಣ ನಿಮಗೆ ಇಂಥದ್ದೇ ಪರಿಹಾರ ಎಂಬುದನ್ನು ಕೊಡಲು ಸಾಧ್ಯವಾಗದಿರಬಹುದು. ಆದರೆ ‘ನಡೆಯುತ್ತಿರುವುದು ತಪ್ಪು’ ಎಂಬುದನ್ನು ದೃಢವಾಗಿ ಹೇಳುವ ಕೆಲಸವನ್ನು ವೈದ್ಯರು- ಆತ್ಮೀಯರು- ಆಪ್ತ ಸಲಹಾಕಾರರು ಮಾಡಬೇಕು.

ಹಿಂಸೆಯ ವಾತಾವರಣದಲ್ಲಿ ಬೆಳೆಯುವ ಮಕ್ಕಳು ತಾವೂ ಹಿಂಸಾತ್ಮಕ ಪ್ರವೃತ್ತಿ ಅನುಸರಿಸ ಬಹುದು ಅಥವಾ ಮದುವೆಯ ಬಗ್ಗೆ ಒಂದು ರೀತಿಯ ನಕಾರಾತ್ಮಕ ಭಾವನೆ ಬೆಳೆಸಿಕೊಳ್ಳಬಹುದು ಎಂಬುದನ್ನು ತಾಯಿ ಅರಿತುಕೊಳ್ಳಬೇಕಾದುದು ಬಹುಮುಖ್ಯ. ಮೊದಲು ದೈಹಿಕ ಹಿಂಸೆಗೆ ಲಗಾಮು ಹಾಕಬೇಕು. ಪತಿ ಮದ್ಯವ್ಯಸನಿಯಾಗಿದ್ದರೆ ಮತ್ತು ಅದರಿಂದಾಗಿ ಹಿಂಸೆ ನೀಡುತ್ತಿದ್ದರೆ ಚಿಕಿತ್ಸೆ ಪಡೆಯಲು ಆಗ್ರಹಿಸಬೇಕು. ಚಿಕಿತ್ಸೆ ಸಾಧ್ಯವಾಗದಿದ್ದರೆ ಕ್ರಮೇಣ ತನ್ನ ಮನಸ್ಸನ್ನು ಗಟ್ಟಿಯಾಗಿ ರೂಪಿಸಿಕೊಂಡು, ಬೆಂಬಲವನ್ನು ಒಟ್ಟು ಹಾಕಿ ಹೊರಬರುವ ಪ್ರಯತ್ನ ಮಾಡಬೇಕು. ಈ ಹಂತದಲ್ಲಿ ಭಾವನಾತ್ಮಕತೆಯನ್ನು ಬದಿಗಿಟ್ಟು ಪ್ರಾಯೋಗಿಕವಾಗಿ ಯೋಚನೆ ಮಾಡಿ ಮಕ್ಕಳ ಭವಿಷ್ಯದ ಜೊತೆಗೆ ತನ್ನ ವೈಯಕ್ತಿಕ ಭವಿಷ್ಯವನ್ನೂ ಯೋಜಿಸಿಕೊಳ್ಳುವುದು ಅತ್ಯಗತ್ಯ. ಈ ದಿಸೆಯಲ್ಲಿ ಜಾಗೃತಿ ಮೂಡಿಸುವುದು, ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆಗಾಗಿನ ಅಂತರರಾಷ್ಟ್ರೀಯ ದಿನಾಚರಣೆಯ (ನ. 25) ಮುಖ್ಯ ಉದ್ದೇಶ.

ಲೇಖಕಿ: ಮನೋವೈದ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.