ADVERTISEMENT

ಸಂಗತ: ಅಭಿವೃದ್ಧಿಗೆ ‘ಸಾಲ’ದ ಮೆಟ್ಟಿಲು!

 ಸಾಲ ಪಡೆಯುವುದರ ಬಗ್ಗೆ ಇರುವ ನಕಾರಾತ್ಮಕ ನಂಬಿಕೆಗಳನ್ನು ಎಲ್ಲ ವ್ಯವಹಾರಗಳಿಗೂ ಅನ್ವಯಿಸಿಕೊಳ್ಳುವುದು ಸಮಂಜಸವಲ್ಲ

ಮಲ್ಲಿಕಾರ್ಜುನ ಹೆಗ್ಗಳಗಿ
Published 3 ನವೆಂಬರ್ 2022, 19:45 IST
Last Updated 3 ನವೆಂಬರ್ 2022, 19:45 IST
ಸಂಗತ: ಅಭಿವೃದ್ಧಿಗೆ ‘ಸಾಲ’ದ ಮೆಟ್ಟಿಲು!
ಸಂಗತ: ಅಭಿವೃದ್ಧಿಗೆ ‘ಸಾಲ’ದ ಮೆಟ್ಟಿಲು!   

ರಿಲಯನ್ಸ್ ಉದ್ಯಮ ಸಾಮ್ರಾಜ್ಯ ಕಟ್ಟಿದ ಧೀರುಭಾಯಿ ಅಂಬಾನಿ ಅವರ ಬದುಕಿನ ರೋಚಕ ಸಂಗತಿ ಇದು. ಯೆಮನ್ ದೇಶದ ಏಡನ್ ಬಂದರಿನಲ್ಲಿ ಕೆಲಸಕ್ಕೆ ಸೇರಿಕೊಳ್ಳಲು ಹೊರಟಾಗ ಅವರ ಬಳಿ ಹಣವಿರಲಿಲ್ಲ. ಅವರು ಚಿಂತಿಸುತ್ತಿದ್ದಾಗ ಪಕ್ಕದ ಮನೆಯ ಸರಭಾಭಾ ಪಾರ್ಥ ಎಂಬುವರು ಸಾಲ ಕೊಡಲು ಒಪ್ಪಿದರು. ಮನೆಯವರು ‘ಸಾಲ ಮಾಡಿ ಹೋಗುವುದು ಬೇಡ, ಇಲ್ಲೇ ಕೆಲಸ ಹುಡುಕು' ಎಂದರು. ಸಮಾಜದ ಗುರುಗಳೂ ‘ಸಾಲ ಮಾಡಬೇಡ’ ಎಂದು ಉಪದೇಶ ಮಾಡಿದರು. ಎಲ್ಲ ಹಳೆಯ ನಂಬಿಕೆಗಳನ್ನೂ ಪಕ್ಕಕ್ಕೆ ಸರಿಸಿ ಧೀರುಭಾಯಿ ಸಾಲ ಪಡೆದು ಏಡನ್‍ಗೆ ತೆರಳಿ ಕೆಲಸಕ್ಕೆ ಸೇರಿಕೊಂಡರು. ಇದು ಅವರ ಬೆಳವಣಿಗೆಗೆ ಮೆಟ್ಟಿಲಾಯಿತು. ಸಾಲ, ಬಡ್ಡಿ ಹಣ ವಾಪಸ್‌ ಮಾಡಿದರು. ಮುಂದೆ ಕಂಪನಿ ಕಟ್ಟಿದಾಗ ಪಾರ್ಥ ಅವರ ಮಗ ಹಾಗೂ ಮೊಮ್ಮಗನಿಗೆ ಉದ್ಯೋಗ ನೀಡಿ ಕೃತಜ್ಞತೆ ಸಲ್ಲಿಸಿದರು.

ಸಮರ್ಪಕವಾಗಿ ಬಳಸಿಕೊಳ್ಳುವ ಸಾಲ ಆರ್ಥಿಕವಾಗಿ ಬೆಳೆಯಲು ಊರುಗೋಲಾಗುತ್ತದೆ ಎನ್ನುವ ಮಾತನ್ನು ಧೀರುಭಾಯಿ ಅಂಬಾನಿ ತಮ್ಮ ಬದುಕಿನುದ್ದಕ್ಕೂ ಹೇಳುತ್ತಿದ್ದರು.

‘ಸಾಲ ಎಂದರೆ ಶೂಲ’ ಎಂಬ ಭಯ ಸಾಮಾನ್ಯವಾಗಿ ಎಲ್ಲರ ಭಾವನೆಯಾಗಿದೆ. ಸಾಲ ಮಾಡುವುದನ್ನು ಅಪರಾಧ ಎನ್ನುವಂತೆ ಪ್ರವಚನ, ಉಪನ್ಯಾಸ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಿಂಬಿಸಲಾಗುತ್ತದೆ. ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಕೆಲವು ಪುಸ್ತಕಗಳಲ್ಲಿಯೂ ಇಂತಹುದೇ ಸಲಹೆ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಸಾಲದ ಬಗ್ಗೆ ಅತಿಯಾದ ತಪ್ಪು ಕಲ್ಪನೆಗಳು ತುಂಬಿವೆ. ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಲ ಪೂರಕ, ಸಾಲದ ಹಣವನ್ನು ಸಮರ್ಪಕವಾಗಿ ಬಳಸಿಕೊಂಡು ಸಂಪತ್ತನ್ನು ವೃದ್ಧಿಸಿಕೊಳ್ಳಲು ಸಾಧ್ಯವಿದೆ ಎನ್ನುವುದನ್ನು ಮರೆಯಬಾರದು.

ADVERTISEMENT

ಸಾಲ ಪಡೆದು ಅದನ್ನು ಸದ್ವಿನಿಯೋಗ ಮಾಡಿಕೊಂಡು ಆರ್ಥಿಕ ಉನ್ನತಿ ಸಾಧಿಸುವುದನ್ನು ಹಣಕಾಸು ನಿರ್ವಹಣೆಯ ಪರಿಭಾಷೆಯಲ್ಲಿ ಲಿವರೇಜಿಂಗ್ ಎಂದು ಕರೆಯಲಾಗುತ್ತದೆ. ದೊಡ್ಡ ಭಾರದವಸ್ತುಳನ್ನು ಎತ್ತಲು ಭೌತಶಾಸ್ತ್ರದ ಸನ್ನೆ ವಿಧಾನ ಅನುಸರಿಸಲಾಗುತ್ತದೆ.ಹಣಕಾಸಿನ ಭಾರ ನೀಗಿಸಲು ಸಾಲ ಒಂದು ಸನ್ನೆಯಾಗಬೇಕು ಎಂಬುದನ್ನು ಒಂದು ರೂಪಕವಾಗಿ ಹೇಳಲಾಗುತ್ತದೆ.

‘ಸಾಲ ಪಡೆದು ಶ್ರೀಮಂತರಾಗಿ’ ಎನ್ನುವ ಮಾತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಒಂದು ಘೋಷವಾಕ್ಯವಾಗಿದೆ.

ಸಾಲವನ್ನು ಕೊಂಬಾಗ ಹಾಲೋಗರುಂಡಂತೆ ಸಾಲಿಗನು ಬಂದು ಎಳೆವಾಗಕಿಬ್ಬದಿಯ ಕೀಲು ಮುರಿದಂತೆ– ಸರ್ವಜ್ಞ

ಸಾಲದ ದುಡ್ಡನ್ನು ದುಂದುವೆಚ್ಚ ಮಾಡಿ ಕಳೆದುಕೊಳ್ಳುವವರ ಕುರಿತು ಸರ್ವಜ್ಞ ಹೇಳಿದ ಎಚ್ಚರಿಕೆಯ ಮಾತುಗಳಿವು. ಇದನ್ನೇ ಎಲ್ಲ ವ್ಯವಹಾರಗಳಿಗೆ ಅನ್ವಯಿಸಿ ಹೇಳುವುದು ಸಮಂಜಸವಲ್ಲ.

1990ರ ದಶಕದ ಆರಂಭದಿಂದ ಶುರುವಾದ ಆರ್ಥಿಕ ಉದಾರೀಕರಣದ ಶಕೆ, ಆರ್ಥಿಕ ಸಬಲೀಕರಣ
ದಲ್ಲಿ ಒಂದು ಮಹತ್ವದ ಹೆಜ್ಜೆ. ದೇಶವು ನಿಧಾನವಾಗಿ ಕೃಷಿ ಪ್ರಧಾನ ವ್ಯವಸ್ಥೆಯೊಂದಿಗೆ ಉದ್ಯಮ ಪ್ರಧಾನ
ವ್ಯವಸ್ಥೆಯತ್ತ ಸಾಗುವುದಕ್ಕೆ ನೆರವಾಯಿತು.

ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಸಾಲ ಕೊಡಲು ಮುಂದೆ ಬರುತ್ತಿವೆ. ಬೆಳೆಯಬೇಕೆನ್ನುವ
ವರಿಗೆ ಇದು ಒಂದು ದೊಡ್ಡ ಅವಕಾಶ. ಇಲ್ಲಿ ಸಾಲವಾಗಿ ಪಡೆದ ಬಂಡವಾಳಕ್ಕೆ ಪಾವತಿಸುವ ಬಡ್ಡಿಗಿಂತ ಹೆಚ್ಚಿನ ಲಾಭವನ್ನು ಕಂಡುಕೊಳ್ಳುವುದು ಬಹಳ ಮುಖ್ಯ. ಸರಿಯಾದ ಯೋಜನೆ ರೂಪಿಸಬೇಕು. ತಜ್ಞರಿಂದ ಮಾರ್ಗದರ್ಶನ ಪಡೆಯಬೇಕು. ಶ್ರದ್ಧೆ ಹಾಗೂ ಶ್ರಮದಿಂದ ನಿಗದಿತ ಸಮಯದಲ್ಲಿಯೇ ಕಾರ್ಯರೂಪಕ್ಕೆ ತರಬೇಕು. ನಿರ್ವಹಣಾ ಕೌಶಲ ಪ್ರತಿಯೊಬ್ಬರ ವೈಯಕ್ತಿಕ ಬೆಳವಣಿಗೆಗೂ ದೇಶದ ಸಮಗ್ರ ಬೆಳವಣಿಗೆಗೂ ಅತ್ಯಂತ ಅವಶ್ಯ.

ಬ್ರಿಟನ್ ಆರ್ಥಿಕ ಬಿಕ್ಕಟ್ಟಿಗೆ ಸಾಲದ ನಿಯಮಗಳನ್ನು ಕಠಿಣಗೊಳಿಸಿರುವುದು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಈಗ ಹೇಳಲಾಗುತ್ತಿದೆ. ಅಲ್ಲಿ ಆಸ್ತಿ ಅಡಮಾನ ಸಾಲ ಒಮ್ಮೆಲೇ ಶೇ 50ರಷ್ಟು ಕುಸಿತ ಕಂಡಿದೆ. ಇದರಿಂದ ಬ್ರಿಟನ್ನಿನ ರಿಯಲ್‌ ಎಸ್ಟೇಟ್ ಉದ್ಯಮ ಬಹಳ ಹಿನ್ನಡೆ ಅನುಭವಿಸುತ್ತಿದೆ. ಹೊಸ ಆಡಳಿತ ವ್ಯವಸ್ಥೆಯು ಸಾಲ ನೀತಿಯನ್ನು ಸರಳಗೊಳಿಸುವುದಾಗಿ ಪ್ರಕಟಿಸಿದೆ.

ಎಲ್ಲದಕ್ಕೂ ಸ್ವಂತದ ಹಣ ಹೂಡುವುದು ಸಾಧ್ಯವಿಲ್ಲ. ಸಾಲಕ್ಕೆ ಮೊರೆ ಹೋಗಬೇಕಾಗುತ್ತದೆ. ಸಾಲ ಮಾಡುವುದು ತಪ್ಪು ಎನ್ನುವ ಭಾವನೆಯಿಂದ ಮುಖ್ಯವಾಗಿ ಯುವಕರು ಹೊರಬೇಕಾಗಿರುವುದು ಇಂದು ಅವಶ್ಯ.

1965ರಲ್ಲಿ ಸರ್ಕಾರವು ಉನ್ನತ ಶಿಕ್ಷಣಕ್ಕೆ ಸಾಲರೂಪದ ಶಿಷ್ಯವೇತನ ನೀಡುವ ಯೋಜನೆ ಪ್ರಕಟಿಸಿತು. ಎಸ್ಎಸ್ಎಲ್‌ಸಿ ಪರೀಕ್ಷೆಯನ್ನು ಪ್ರಥಮ ಶ್ರೇಣಿಯಲ್ಲಿ ಪಾಸಾದ, ಆರ್ಥಿಕ ತೊಂದರೆಯಲ್ಲಿರುವ ವಿದ್ಯಾರ್ಥಿಗಳಿಗೆ ಈ ಸಾಲ ಸೌಲಭ್ಯ ಪಡೆಯಲು ಅನುಕೂಲ ಕಲ್ಪಿಸಲಾಯಿತು. ಈ ಸಾಲದ ನೆರವಿನಿಂದಲೇ ನಾನು ಮತ್ತು ನನ್ನ ಗೆಳೆಯರು ಪದವಿ ಶಿಕ್ಷಣ ಪೂರ್ಣಗೊಳಿಸಲು ಸಾಧ್ಯವಾಯಿತು.

ದಿಗ್ಗಜ ಉದ್ದಿಮೆಗಳೆಲ್ಲ ಸಾಲ ಪಡೆದೇ ಸಂಪತ್ತು ಸೃಷ್ಟಿಸಿದ್ದಾರೆ. ಸಾಲ ಮಾಡದೇ ದೊಡ್ಡ ಮಟ್ಟದ ಸಂಪತ್ತು ಸೃಷ್ಟಿಸುತ್ತೇವೆ ಎಂದರೆ ಅದು ಆಗದ ಮಾತು.
ಉತ್ಪಾದಕ ಸಾಲ ಅಂದರೆ ಸಂಪತ್ತು ಗಳಿಕೆಯ ಉದ್ದೇಶಕ್ಕಾಗಿ ಪಡೆಯುವ ಸಾಲ. ಇದನ್ನು ಅಭಿವೃದ್ಧಿಗಾಗಿ ಸಾಲ ಎಂದು ಪರಿಗಣಿಸಲಾಗುತ್ತಿದೆ.

‘ಸಾಲ ಮಾಡಿಯಾದರೂ ತುಪ್ಪ ತಿನ್ನು’ ಎಂದು ಚಾರ್ವಾಕ ಋಷಿ ಹೇಳಿದ ಮಾತು ನೆನಪಾಗುತ್ತದೆ. ಅವಶ್ಯವಿದ್ದಾಗ ಸಾಲ ಮಾಡು ಎಂಬುದನ್ನು ಈ ಮಾತು ಧ್ವನಿಸುತ್ತದೆ. ಆದರೆ, ಅದು ಯೋಜನಾಬದ್ಧ ರೀತಿಯಲ್ಲಿ ಸದ್ವಿನಿಯೋಗ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.