ADVERTISEMENT

ಸಂಗತ: ನೆಲದ ಅಸ್ಮಿತೆಗೆ ಸಿಗಲಿ ‘ಪುರಸ್ಕಾರ’

ಅಕ್ಷತಾ ಹುಂಚದಕಟ್ಟೆ
Published 21 ಫೆಬ್ರುವರಿ 2025, 0:12 IST
Last Updated 21 ಫೆಬ್ರುವರಿ 2025, 0:12 IST
<div class="paragraphs"><p>ಸಂಗತ: ನೆಲದ ಅಸ್ಮಿತೆಗೆ ಸಿಗಲಿ ‘ಪುರಸ್ಕಾರ’</p></div>

ಸಂಗತ: ನೆಲದ ಅಸ್ಮಿತೆಗೆ ಸಿಗಲಿ ‘ಪುರಸ್ಕಾರ’

   

ಕೇರಳದ ವೈಕಂ ಎಂಬ ಪುಟ್ಟ ಊರಿನಲ್ಲಿ 2024ರ ಡಿಸೆಂಬರ್ ಹನ್ನೆರಡರಂದು ನಡೆದ ಸಮಾರಂಭದಲ್ಲಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕನ್ನಡದ ಸಾಹಿತಿ ದೇವನೂರ ಮಹಾದೇವ ಅವರಿಗೆ ತಮಿಳುನಾಡು ಸರ್ಕಾರ ಘೋಷಿಸಿದ್ದ ‘ವೈಕಂ’ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ತಮಿಳುನಾಡಿನ ಪೆರಿಯಾರ್ (ಇ.ವಿ. ರಾಮಸ್ವಾಮಿ) ಅವರ ನೇತೃತ್ವದಲ್ಲಿ ನೂರು ವರ್ಷಗಳ ಹಿಂದೆ ಜಾತಿ ತಾರತಮ್ಯ, ಜಾತಿ ಶೋಷಣೆ, ದೇಗುಲಗಳು ಮತ್ತು ಊರಿನ ಬೀದಿಗಳಿಗೆ ದಲಿತರಿಗೆ ಪ್ರವೇಶ ನಿರ್ಬಂಧಿಸಿದ್ದುದರ ವಿರುದ್ಧ ಕೇರಳದ ಆ ನೆಲದಲ್ಲಿ ನಡೆದ ವೈಕಂ ಸತ್ಯಾಗ್ರಹವು ಚಾರಿತ್ರಿಕ ಮಹತ್ವವನ್ನು ಪಡೆದಿದೆ. ಅದರ ಶತಮಾನೋತ್ಸವ ಸಮಾರಂಭವನ್ನು ಎರಡು ರಾಜ್ಯಗಳ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಆ ಊರಿನಲ್ಲೇ ಮಾಡಿ, ಮಹಾದೇವ ಅವರಿಗೆ ವೈಕಂ ಪ್ರಶಸ್ತಿ ನೀಡಿದ್ದು ಮಹತ್ವದ ವಿದ್ಯಮಾನ.

ADVERTISEMENT

ಇದಕ್ಕಾಗಿ ಸಂಭ್ರಮಿಸುವುದರ ಜೊತೆಗೆ, ಅದೇ ಡಿಸೆಂಬರ್‌ನಲ್ಲಿ ನಮ್ಮ ರಾಜ್ಯದ ಕುಪ್ಪಳಿ ಎಂಬ, ಸಾಂಸ್ಕೃತಿಕವಾಗಿ ಮಹತ್ವದ್ದಾಗಿರುವ ಪುಟ್ಟ ಊರಿನಲ್ಲಿ ಪ್ರತಿವರ್ಷ ನಡೆಯುತ್ತಾ ಬಂದಿದ್ದ ಸಾಂಸ್ಕೃತಿಕ ವಿದ್ಯಮಾನವೊಂದು ಅಲ್ಲಿಂದ ರಾಜಧಾನಿಗೆ ವರ್ಗಾವಣೆಗೊಂಡು, ಸಾಂಸ್ಕೃತಿಕ ಅಸ್ಮಿತೆಯನ್ನು ಕಾಯ್ದು ಕೊಳ್ಳುವ ದಿಸೆಯಲ್ಲಿ ಹಿನ್ನಡೆ ಉಂಟುಮಾಡಿದೆ ಎಂದು ವಿಷಾದದಿಂದ ಹೇಳಬೇಕಾಗಿ ಬಂದದ್ದು ದುರಂತ.

ಕುವೆಂಪು ಅವರ ಊರಾದ ಕುಪ್ಪಳಿಯಲ್ಲಿ ಅವರ ಹುಟ್ಟುಹಬ್ಬದಂದು (ಡಿ. 29) ದೇಶದ ಮಹತ್ವದ ಲೇಖಕ ಅಥವಾ ಲೇಖಕಿಗೆ ಕುವೆಂಪು ರಾಷ್ಟ್ರೀಯ ಪುರಸ್ಕಾರ ನೀಡಿ ಗೌರವಿಸಲಾಗುತ್ತಿತ್ತು. ಕವಿ ಬೆಳೆದ ನೆಲದಲ್ಲಿ ನಡೆಯುತ್ತಿದ್ದ ಸಮಾರಂಭದಲ್ಲಿ ಬೇರೆ ಬೇರೆ ಭಾಷೆಯ ಕವಿಗಳು, ಲೇಖಕರು ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದೊಂದು ಸಾಂಸ್ಕೃತಿಕ ವಿದ್ಯಮಾನವೂ ಆಗಿ ದಶಕಕ್ಕೂ ಮೀರಿ ಅನೂಚಾನವಾಗಿ ನಡೆದುಬಂದಿತ್ತು. ಬೇರೆ ಬೇರೆ ಭಾಷೆಯ ಕವಿಗಳು, ಲೇಖಕರು ಕುವೆಂಪು ಅವರು ಬೆಳೆದ ಈ ನೆಲಕ್ಕೆ ಕಾಲಿಟ್ಟು, ಅವರ ಹೆಸರಿನ ಪ್ರಶಸ್ತಿ ಯನ್ನು ಹೆಮ್ಮೆಯಿಂದ ಪಡೆದು ಹೋಗಿದ್ದಾರೆ. ಈ ನೆಲದ ಸೊಬಗಿಗೆ ಬೆರಗಾಗಿದ್ದಾರೆ. ಅವರೆಲ್ಲರಿಗೂ ಕುವೆಂಪು ಅವರ ಸಾಹಿತ್ಯದಷ್ಟೇ ಅವರು ಬಾಲ್ಯ ಕಳೆದ ಈ ನೆಲ ಬಹಳ ಮಹತ್ವದ್ದಾಗಿ, ಪ್ರಕೃತಿ ವೈಶಿಷ್ಟ್ಯಗಳಿಂದ ಕೂಡಿದ್ದಾಗಿ ಕಂಡಿದೆ.

ಮಹಾದೇವ ಅವರಿಗೆ ಕುವೆಂಪು ಪುರಸ್ಕಾರ ಬಂದಾಗ ಕುಪ್ಪಳಿಯಲ್ಲಿ ಬಹಳಷ್ಟು ಜನ ಸೇರಿ ಸಂಭ್ರಮಿಸಿದ್ದರು. ತಮಿಳು ಲೇಖಕ ಇಮೈಯಮ್ ಅವರಿಗೆ ಪ್ರಶಸ್ತಿ ಬಂದಾಗ, ತಮಿಳುನಾಡಿನ ಪುಟ್ಟ ದೊಂದು ಊರಿನ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ಅವರ ಹಿರಿಯ ಶಿಷ್ಯ ಬಳಗ ಮತ್ತು ಹಳ್ಳಿಯ ಜನ ‘ನಮ್ಮ ಮೇಷ್ಟ್ರಿಗೆ ಕುವೆಂಪು ಪ್ರಶಸ್ತಿ ಬಂದಿದೆ’ ಎಂದು ಸಂಭ್ರಮಿಸಿ, ಅದಕ್ಕೆ ಸಾಕ್ಷಿಯಾಗಲು ಅಲ್ಲಿಂದ ಬಸ್ಸುಗಳನ್ನು ಮಾಡಿಕೊಂಡು ಬಂದಿದ್ದರು.

2024ರ ಪುರಸ್ಕಾರವು ಗುಜರಾತಿ ಭಾಷೆಯ ಲೇಖಕಿ ಹಿಮಾಂಶಿ ಇಂದುಲಾಲ್ ಶೆಲತ್ ಅವರಿಗೆ ಸಂದಿದೆ. ಪ್ರದಾನ ಸಮಾರಂಭ ಡಿಸೆಂಬರ್ 29ರ ಬದಲು ಇದೇ 22ರಂದು, ಕುಪ್ಪಳಿಗೆ ಬದಲು ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಸಮಾರಂಭವನ್ನು ಬೆಂಗಳೂರಿಗೆ ವರ್ಗಾಯಿಸಿದ್ದಕ್ಕೆ ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಯಾವುದೇ ಕಾರಣ ನೀಡಿಲ್ಲ. ಒಂದು ವೇಳೆ ಪ್ರಶಸ್ತಿಯ ಮೊತ್ತವನ್ನು ನೀಡುತ್ತಿರುವ ದಾನಿಗಳ ಇಚ್ಛೆ ಇದಾಗಿದ್ದರೂ ಪ್ರತಿಷ್ಠಾನವು ಅವರ ಮನವೊಲಿಸುವ ಕಾರ್ಯ ಮಾಡಬಹುದಿತ್ತು. ಏಕೆಂದರೆ ಕುಪ್ಪಳಿಯಲ್ಲಿ ಈ ಸಮಾರಂಭ ನಡೆದರೆ ಅದಕ್ಕೊಂದು ಅರ್ಥಪೂರ್ಣತೆ ಇದೆ, ಅಸ್ಮಿತೆ ಇದೆ. ಅದೇ ಬೆಂಗಳೂರಿನಲ್ಲಿ ಇದು ಹತ್ತರ ಜೊತೆ ಹನ್ನೊಂದನೇ ಕಾರ್ಯಕ್ರಮದಂತೆ ಆಗುತ್ತದೆ ಅಷ್ಟೆ.

ಕುವೆಂಪು ಹಬ್ಬವಾಗಿ, ಕುವೆಂಪು ಅವರ ವೈಚಾರಿಕ ಚಿಂತನೆಗಳಿಗೆ ಅನುಗುಣವಾಗಿ ಒಂದು ಪರಿಷೆಯ ರೀತಿಯಲ್ಲಿ ಈ ಕಾರ್ಯಕ್ರಮವನ್ನು ರೂಪಿಸುವ ಜವಾಬ್ದಾರಿಯನ್ನು ಪ್ರತಿಷ್ಠಾನವು ಹೊರಬೇಕು, ವಿದ್ಯಾರ್ಥಿ ಯುವಜನರನ್ನು ಹೆಚ್ಚು ಹೆಚ್ಚು ಒಳಗೊಳ್ಳ ಬೇಕು ಎಂಬುದು ಇಲ್ಲಿನ ಜನರ ಅಭಿಲಾಷೆ ಆಗಿತ್ತು. ಆದರೆ ಈ ಕಾರ್ಯಕ್ರಮ ಕುಪ್ಪಳಿಯ ನೆಲದಲ್ಲಿ ನಡೆಯುವ ಬಗ್ಗೆ ಇಲ್ಲಿನ ಎಲ್ಲರಿಗೂ ಹೆಮ್ಮೆಯಿತ್ತು.

‘ಪಂಪ ಪ್ರಶಸ್ತಿ’ಯನ್ನು ಆದಿಕವಿ ಪಂಪನ ಊರು ಬನವಾಸಿಯಲ್ಲಿ ನಡೆಯುವ ಕದಂಬೋತ್ಸವ ದಲ್ಲಿ ಕೊಡಲಾಗುತ್ತಿತ್ತು. ಕೆಲ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಈ ಪ್ರಶಸ್ತಿ ಕೊಡುವ ವಿದ್ಯಮಾನ ಪ್ರಾರಂಭವಾಯಿತು. ನಂತರ ಮತ್ತೆ ಅದು ಬನವಾಸಿಗೆ ಮರಳಲೇ ಇಲ್ಲ. ಈಗ ಕುವೆಂಪು ಹೆಸರಿನ ಪುರಸ್ಕಾರದ ಸರದಿ. ಈ ಕಾರ್ಯಕ್ರಮವು ಮತ್ತೆ ಕುಪ್ಪಳಿಗೆ ವಾಪಸ್ ಬರುವುದೋ ಇಲ್ಲವೋ ಗೊತ್ತಿಲ್ಲ. ಇದು ಬರಿಯ ಪ್ರಶಸ್ತಿ ಪ್ರದಾನ ಸಮಾರಂಭವಷ್ಟೇ ಆಗಿದ್ದರೆ ಎಲ್ಲಾದರೂ ಕೊಡಿ ಎನ್ನಬಹುದಿತ್ತು. ಆದರೆ ಇದೊಂದು ಸಾಂಸ್ಕೃತಿಕ ವಿದ್ಯಮಾನ. ಇಲ್ಲಿನ ಹಳ್ಳಿಗಳು, ಪಟ್ಟಣಗಳು, ತಾಲ್ಲೂಕು ಕೇಂದ್ರಗಳು, ಜಿಲ್ಲಾಕೇಂದ್ರಗಳನ್ನು ಸಾಂಸ್ಕೃತಿಕವಾಗಿ ಸಮೃದ್ಧವಾಗಿಸುವ ಅವಶ್ಯಕತೆ ಇರುವ ಹೊತ್ತಿನಲ್ಲಿ, ಕುಪ್ಪಳಿಯಂಥ ಊರಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ವಿದ್ಯಮಾನಗಳನ್ನು ನಿಷ್ಕ್ರಿಯವಾಗಿಸುವ ಪ್ರಯತ್ನವು ಕುವೆಂಪು ವಿಚಾರಧಾರೆಗೆ ವಿರುದ್ಧವಾದದ್ದು ಹಾಗೂ ಈ ನೆಲವನ್ನು ಸಾಂಸ್ಕೃತಿಕವಾಗಿ ಬರಡಾಗಿಸುವ ಪ್ರಯತ್ನವೇ ಸರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.