ADVERTISEMENT

ಸಂಗತ: ವಕ್ರ ಮನಸ್ಸಿನ ವಯಸ್ಕರು

ಮಕ್ಕಳ ಸಹಜ ಮಾನಸಿಕ ವಿಕಾಸಕ್ಕೆ ಅಡ್ಡಿಪಡಿಸುವ ವಯಸ್ಕರ ಸಂಕುಚಿತ ಭಾವಗಳಿಗೆ ತಡೆಯೊಡ್ಡಬೇಕಾಗಿದೆ

ಡಾ.ಎ.ಶ್ರೀಧರ
Published 31 ಮೇ 2022, 19:30 IST
Last Updated 31 ಮೇ 2022, 19:30 IST
ಸಂಗತ: ವಕ್ರ ಮನಸ್ಸಿನ ವಯಸ್ಕರು
ಸಂಗತ: ವಕ್ರ ಮನಸ್ಸಿನ ವಯಸ್ಕರು    

ಹಲವು ತಿಂಗಳುಗಳ ಹಿಂದೆ ಅಮೆರಿಕದ ‘ನ್ಯೂಯಾರ್ಕ್‌ ಟೈಮ್ಸ್‌’ ದಿನಪತ್ರಿಕೆಯಲ್ಲಿ ಪಠ್ಯಪುಸ್ತಕಗಳ
ಉಪಯುಕ್ತತೆ ಕುರಿತ ಲೇಖನವೊಂದಿತ್ತು. ಓದುಗರಿಂದ ಇದಕ್ಕೆ ಬಂದಿದ್ದ ಪ್ರತಿಕ್ರಿಯೆಗಳಲ್ಲಿ
ಹೆಚ್ಚಿನವು ಮಾಜಿ ವಿದ್ಯಾರ್ಥಿಗಳ ಶಾಲಾ ಅನುಭವಗಳು. ಜೊತೆಯಲ್ಲಿ ಶಿಕ್ಷಕರು, ಪಾಲಕರ ಒಂದಿಷ್ಟು ಅಭಿಪ್ರಾಯಗಳೂ ಇದ್ದವು. ಪಠ್ಯಪುಸ್ತಕಗಳ
ಪ್ರಭಾವವು ಪರೀಕ್ಷೆಗಳಿಗೆ ಮಾತ್ರ ಸೀಮಿತ, ವಿದ್ಯಾರ್ಥಿಗಳ ಅರಿವಿನ ಮೇಲೆ ಇದರ ಪರಿಣಾಮ ಕಡಿಮೆ ಎಂದು ತಿಳಿಸಿದ್ದವರೇ ಹೆಚ್ಚು. ಪಠ್ಯಪುಸ್ತಕಗಳು
ಆಸಕ್ತಿ ಕೆರಳಿಸುವುದಕ್ಕಿಂತ ಹೆಚ್ಚಾಗಿ ಬೇಸರವನ್ನು ಹೆಚ್ಚಿಸುತ್ತವೆ ಎನ್ನುವ ಪ್ರತಿಕ್ರಿಯೆಗಳೂ ಇದ್ದವು.

ಬಹುಪಾಲು ಓದುಗರ ಪ್ರತಿಕ್ರಿಯೆಯಲ್ಲಿ ಎದ್ದು ಕಾಣಿಸುತ್ತಿದ್ದ ಸಂಗತಿ ಎಂದರೆ, ಶಾಲಾ ಕಲಿಕೆಯನ್ನು ನಿರ್ದಿಷ್ಟ ರಾಜಕೀಯ, ಧಾರ್ಮಿಕ ನಿಲುವುಗಳನ್ನು ಬಲವಂತದಿಂದ ಪರಿಚಯಿಸುವುದಕ್ಕೆ ಇದ್ದ ವಿರೋಧ. ಇತರರ ಬಗ್ಗೆ ನಕಾರಾತ್ಮಕ ಭಾವನೆ, ದುರಭಿಪ್ರಾಯ ಗಳನ್ನು ಪಾಠಗಳ ಮೂಲಕ ಪರೋಕ್ಷವಾಗಿ ಪರಿಚಯಿಸಲಾಗಿದೆ ಎನ್ನುವುದನ್ನೂ ವಾಚಕರ ಅಭಿಪ್ರಾಯಗಳು ಸೂಚಿಸಿದ್ದವು. ಎಲ್ಲ ವಯಸ್ಸಿನ ಮಕ್ಕಳ ಸಮಗ್ರ ಮಾನಸಿಕ ಬೆಳವಣಿಗೆಯನ್ನು ಅತ್ಯಂತ ಪರಿಣಾಮಕಾರಿ ಯಾಗಿ ಉತ್ತೇಜಿಸುವ ವಾತಾವರಣವೆಂದರೆ ಶಾಲೆ ಎಂಬುದು ಬಲ್ಲ ಅತಿ ಪುರಾತನ ಸತ್ಯ. ಮಕ್ಕಳ ಮನಸ್ಸೆಂಬುದು ಮೊಳಕೆಯೊಡೆದು ಚಿಗುರುವಂತೆ ಮಾಡುವ ಬಲವು ಶಾಲೆಯ ನೆಲದಲ್ಲಿದೆ. ಮಕ್ಕಳ ಮನೋವಿಕಾಸಕ್ಕೆ ಅಗತ್ಯವಿರುವ ಪೂರಕಾಂಶಗಳು ಶಾಲೆಯ ಆವರಣದಲ್ಲಿ ಸಿಗುವಷ್ಟು ಸುಲಭವಾಗಿ ಮಿಕ್ಕ ಯಾವ ವ್ಯವಸ್ಥೆಯಲ್ಲಿಯೂ ಸಿಗವು.

ಕಲಿಕೆಯ ಪ್ರಕ್ರಿಯೆಗಳು ನೆರವೇರುವ ವಿಧಾನವು ಒಂದು ಮಗುವಿನಲ್ಲಿ ಸಾಗಿದಂತೆ ಇನ್ನೊಂದು ಮಗುವಿನಲ್ಲಿ ಸಾಗದು. ಜೊತೆಯಲ್ಲಿ ಪಠ್ಯಪುಸ್ತಕಗಳ ಸಾಲುಗಳನ್ನು ಕಲಿಯುವುದಕ್ಕೆ ವಿಶೇಷ ಉತ್ಸಾಹ
ಗಳಿರುವುದು ಅಪರೂಪ. ಹೀಗಾಗಿ ಪಠ್ಯಪುಸ್ತಕಗಳಲ್ಲಿ
ಕಾಣಿಸಿಕೊಳ್ಳುವ ಉದಾತ್ತ ವಿಚಾರಗಳು ಎಷ್ಟೇ
ವಿದ್ವತ್ಪೂರ್ಣವಾಗಿದ್ದರೂ ಕಲಿಯುವವರಿಗೆ ಅದು ಪರೀಕ್ಷೆಗೆ ಸಂಬಂಧಿಸಿದ ವಿಷಯಗಳಷ್ಟೇ.

ADVERTISEMENT

ಮುಂದಿನ ತರಗತಿಗೆ ಸರಿಯುವುದರೊಂದಿಗೆ ಹಿಂದಿನ ಕಲಿಕೆಯು ಹಿಂದೆ ಸರಿಯುವುದು ಸಾಮಾನ್ಯ. ಆದುದರಿಂದ ನೆನಪಿನ ಸರಕಾಗಿ ಬರುವ ಪಠ್ಯಗಳು ಪರೀಕ್ಷೆಯ ನಂತರದ ವ್ಯಕ್ತಿತ್ವ ವಿಕಸನಕ್ಕೆ ನೆರವಾಗವು. ಪರೀಕ್ಷೆಯಲ್ಲಿ ತೇರ್ಗಡೆಯಾಗಲಿ, ಉತ್ತಮ ಅಂಕ ಗಳಿಸಲಿ ಎನ್ನುವ ಭಾವನೆಯು ಬೋಧಕರಲ್ಲಿಯೂ ನುಸುಳಿರುತ್ತದೆ. ಹೀಗಿದ್ದರೂ ಮಕ್ಕಳ ಮನಸ್ಸಿಗೆ ಉದಾತ್ತ ವಿಚಾರಗಳನ್ನು ಪರಿಚಯಿಸುವ ಉತ್ತಮ ಶಿಕ್ಷಕರು ಅಪರೂಪವಲ್ಲ. ಆದ್ದರಿಂದ ಶಾಲಾ ಮಕ್ಕಳ ಕಲಿಕೆಯ ಆವರಣದಲ್ಲಿ ಸಮಾಜ, ಸಂಸ್ಕೃತಿಗಳ ಅನುಭವ, ಅವಲೋಕನ ಮಾಡಿರುವ ಸೃಜನಶೀಲ, ಸಜ್ಜನರ ಬರಹಗಳನ್ನು, ಭಿನ್ನಾಭಿಪ್ರಾಯಗಳ
ನಡುವೆಯೂ ಪರಿಚಯಿಸುವುದು ಮಕ್ಕಳ ಮನೋವಿಕಾಸದ ಹಿತದೃಷ್ಟಿಯಿಂದ ಬಹುಮುಖ್ಯ.

ಶಾಲಾ ವಯಸ್ಸಿನ ಮಕ್ಕಳ ವ್ಯಕ್ತಿತ್ವ ವಿಕಾಸ ನೆರವೇರುವುದಕ್ಕೆ ಬೇಕಾಗುವ ಪ್ರೇರಣೆಯು ತರಗತಿಯ ಹೊರಗಿನ ಸಾಮಾಜಿಕ ವಾತಾವರಣದಿಂದ ಸಿಗುವುದೇ ಹೆಚ್ಚು. ನಿಗದಿತ ಪಠ್ಯ, ಬೋಧನೆಗಳನ್ನು ಮೀರಿಸುವ ವಿಷಯ, ವಿಚಾರಗಳನ್ನು ತನ್ನದೇ ಆದ ರೀತಿಯಲ್ಲಿ ಶಾಲೆಯ ಆವರಣವು ಒದಗಿಸುತ್ತದೆ. ಒಂಟಿತನ, ಗೆಳತನ, ನಂಬಿಕೆ, ವಿರೋಧ, ಪ್ರತಿರೋಧದ ಭಾವನೆಗಳ ಮೂಲಕ ಹೊಸತನ ಮೂಡುವಂತೆ ಮಾಡುತ್ತದೆ. ವಿಭಿನ್ನ ಕೌಟುಂಬಿಕ ವಾತಾವರಣದಿಂದ ಶಾಲೆಗೆ ಬರುವ ಮಕ್ಕಳು ಮನೆಯ ವಾತಾವರಣವನ್ನು
ಬದಿಗಿರಿಸಿ ಸಮವಯಸ್ಕರು, ಸಹಪಾಠಿಗಳೊಂದಿಗೆ
ಬೆರೆಯುವುದರ ಮೂಲಕ ವಿಚಾರ ಮಾಡುವ, ವಿರೋಧಿಸುವ ಗುಣಗಳನ್ನು ಅನುಕರಣೆ, ಅನುಸರಣೆಯ ವಿಧಾನಗಳ ಮೂಲಕ ಕಲಿಯುತ್ತಾರೆ.

ತಂತ್ರಜ್ಞಾನದ ಮೂಲಕ ಹರಿದುಬರುತ್ತಿರುವ ಮಾಹಿತಿಗಳಿಗೆ ಇಂದು ಇತಿಮಿತಿಯೇ ಇಲ್ಲ. ಅರಿವು ಕೆಡಿಸುವ, ಪೂರ್ವಗ್ರಹ ಕೆದಕುವ ವಾದ ವಿವರಣೆಗಳನ್ನು
ಬೇಕಾದಂತೆ ಸೃಷ್ಟಿಸಿ, ಸ್ಪಷ್ಟವಾಗಿ ಗೋಚರಿಸುವ ಸತ್ಯಸಂಗತಿಗಳನ್ನು ತಿರುಚಿ ಹುಸಿಯಾಗಿಸುವ ಕುತಂತ್ರವು ಸಾಮಾನ್ಯವಾಗುತ್ತಿರುವ ಈ ಸಮಯದಲ್ಲಿ ಮಕ್ಕಳ ಮನೋವಿಕಾಸ ಮತ್ತು ಮಾನಸಿಕ ಆರೋಗ್ಯ ಹಾದಿಕೆಡದಂತೆ ಎಚ್ಚರ ವಹಿಸಬೇಕಿದೆ. ಮಾನಸಿಕ ಆರೋಗ್ಯ ಎನ್ನುವುದು ಕೇವಲ ಲವಲವಿಕೆಯಿಂದ ಇರುವುದು, ಕಿರಿಕಿರಿ ಮಾಡಿಕೊಳ್ಳದೆ ಸದಾ ಶಾಂತವಾಗಿ ಇರುವುದಕ್ಕಷ್ಟೇ ಸೀಮಿತವಾಗಿ ಇರುವುದಿಲ್ಲ.

ಉತ್ತಮ ಮಾನಸಿಕತೆ ವ್ಯಕ್ತಗೊಳ್ಳುವುದು ಈರ್ಷ್ಯೆ ಮತ್ತು ಹಗೆತನದ ಭಾವಗಳಿಂದ ಮೂಡುವ ನಕಾರಾತ್ಮಕ ವರ್ತನೆಗಳನ್ನು ನಿಗ್ರಹಿಸುವುದನ್ನು ಕಲಿತಾಗ. ನಕಾರಾತ್ಮಕ ಭಾವನೆಗಳನ್ನು ಬದಲಿಸುವ ಶಕ್ತಿ ಶಾಲೆಯ ಆವರಣದಲ್ಲಿ ಸರಾಗವಾಗಿ ಸಿಗುತ್ತದೆ. ಸಹಪಾಠಿಗಳು, ಸ್ನೇಹಿತರು ಮತ್ತು ಸಮವಯಸ್ಕರೊಂದಿಗಿನ ಪರಸ್ಪರ ಸಂಬಂಧ, ಸಂಪರ್ಕಗಳ ಮೂಲಕ ಇದು ಸಾಧ್ಯ ಎನ್ನುವುದನ್ನು ಅನುಭವಿಸದಿರುವ ವಿದ್ಯಾರ್ಥಿಗಳು ಅಪರೂಪ.

ನಾನಾ ರೀತಿಯಲ್ಲಿ ಆತ್ಮೀಯತೆಯ ಭಾವ ಗಳನ್ನು
ಅನುಭವಿಸಲು ಸಾಧ್ಯವಿರುವಂತಹ ಸಹಜ ಮನೋಸಾಮಾಜಿಕ ಶುದ್ಧ ವಾತಾವರಣವನ್ನು ಶಾಲೆಯ ಆವರಣ ಹೇರಳವಾಗಿ ಕೊಡುತ್ತದೆ. ಮಕ್ಕಳ ಸಹಜ ಮಾನಸಿಕ ವಿಕಾಸಕ್ಕೆ ಅಡ್ಡಿಪಡಿಸುವ ವಕ್ರ ಮನಸ್ಸಿನ ವಯಸ್ಕರ ಸಂಕುಚಿತ ಭಾವಗಳಿಗೆ
ತಡೆಯೊಡ್ಡುತ್ತಲೇ ಇರಬೇಕಾಗುತ್ತದೆ.

ಲೇಖಕ: ಮನೋವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.