ADVERTISEMENT

ಸಂಗತ: ಪ್ರಶ್ನಿಸುವ ಮನೋಭಾವ ಮುಕ್ತವಾಗಿದೆಯೇ?

ಎಚ್.ಕೆ.ಶರತ್
Published 16 ಜನವರಿ 2024, 21:44 IST
Last Updated 16 ಜನವರಿ 2024, 21:44 IST
.
.   

ಉದ್ಯಾನವೊಂದರಲ್ಲಿ ಏರು-ಇಳಿ ಬಂಡಿ ಮೇಲೆ ಕುಳಿತು ಆಟವಾಡುತ್ತಿದ್ದ ಏಳೆಂಟರ ವಯೋಮಾನದ ಮಕ್ಕಳಿಬ್ಬರ ನಡುವಿನ ಮಾತು, ಅಲ್ಲೇ ಸಮೀಪದಲ್ಲಿ ಪುಟ್ಟ ಮಗುವನ್ನು ಆಡಿಸಿಕೊಂಡು ನಿಂತಿದ್ದ ನನ್ನ ಗಮನ ಸೆಳೆಯಿತು. ಒಬ್ಬ ‘ತುಂಬಾ ಮೇಲಕ್ಕೆ ನನ್ನ ಏರಿಸಬೇಡ. ಆಮೇಲೆ ನಾನು ದೇವರ ಹತ್ರ ಹೋಗ್ಬಿಡ್ತೀನಿ’ ಅಂದ. ಮಾತು ಮುಂದುವರಿಸಿ, ‘ಏರಿದ ಮೇಲೆ ಮತ್ತೆ ಇಳೀತೀನಲ್ವಾ... ಅಂದ್ರೆ ದೇವರ ಹತ್ರಕ್ಕೆ ಹೋಗಿ ಮತ್ತೆ ವಾಪಸ್ ಇಲ್ಲಿಗೇ ಬರ್ತೀನಿ ಅಲ್ವಾ’ ಅಂತ, ಎದುರು ಕುಳಿತಿದ್ದ ಸ್ನೇಹಿತನ ಬಳಿ ವಿಚಾರಿಸಿದ. ಸ್ನೇಹಿತ ಅವನಿಗೆ ಉತ್ತರ ನೀಡುವ ಬದಲು ತನ್ನಲ್ಲಿರುವ ಗೊಂದಲಗಳನ್ನು ಹಂಚಿಕೊಳ್ಳತೊಡಗಿದ. ‘ಎಷ್ಟು ಎತ್ತರಕ್ಕೆ ಹೋದ್ರೆ ನಾವು ದೇವರನ್ನ ಕಾಣಬಹುದು?’ 

ದೇವರಿಗೆ ಸಂಬಂಧಿಸಿದಂತೆ ತಮ್ಮಲ್ಲಿ ಮೂಡುತ್ತಿರುವ ಪ್ರಶ್ನೆಗಳಿಗೆ ಇಬ್ಬರ ಬಳಿಯೂ ಸೂಕ್ತ ಉತ್ತರ ಇರದಿದ್ದರೂ ಮಾತು ವಿಷಯಾಂತರಗೊಳ್ಳದೆ ಮುಂದುವರಿಯಿತು.

‘ಅಲ್ಲ, ನಾವು ಮನಸ್ಸಿನಲ್ಲಿ ಬೇಡಿಕೊಳ್ಳೋದು ದೇವರಿಗೆ ಹೇಗೆ ಕೇಳ್ಸುತ್ತೆ?’

ADVERTISEMENT

‘ದೇವರಿಗೆ ಅಷ್ಟು ದೊಡ್ಡ ಕಿವಿ ಇದ್ಯಾ? ಗಣೇಶನ್ನ ಬಿಟ್ರೆ ಉಳಿದ ದೇವರ ಕಿವಿಗಳೆಲ್ಲ ನಮ್ಮಷ್ಟೇ ಇರೋದನ್ನ ಫೋಟೊದಲ್ಲಿ ನೋಡಿಲ್ವಾ?’

‘ಹಾಗಾದ್ರೆ ದೇವ್ರು ಎಲ್ಲಿರಬಹುದು? ನಿಜವಾಗ್ಲೂ ದೇವರನ್ನ ನೋಡ್ಬೇಕು ಅಂದ್ರೆ ನಾವು ಎಲ್ಲಿಗೆ ಹೋಗ್ಬೇಕು?’

ಹೀಗೆ ದೇವರ ಕುರಿತ ಚರ್ಚೆ ಮುಂದುವರಿಸಿದ ಮಕ್ಕಳಿಬ್ಬರಲ್ಲೂ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಾ ಹೋದವೇ ವಿನಾ ಅವರ ಗೊಂದಲವನ್ನು ಬಗೆಹರಿಸುವ ಉತ್ತರ ಮಾತ್ರ ಸಿಗಲಿಲ್ಲ. ಕೊನೆಗೆ, ‘ಈ ಆಟ ಬೋರಾಗ್ತಿದೆ, ಬೇರೆ ಆಡೋಣ’ ಅಂತ ಏರು-ಇಳಿ ಬಂಡಿಯಿಂದ ಕೆಳಗಿಳಿದು ಬೇರೆಡೆಗೆ ತೆರಳಿದರು.

‘ಇನೊವೇಷನ್ ಆ್ಯಂಡ್ ಡಿಸೈನ್ ಥಿಂಕಿಂಗ್’ ಎಂಬ ಕೋರ್ಸು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇದೆ. ನೈಜ ಸಮಸ್ಯೆಯನ್ನು ಆರಿಸಿಕೊಂಡು, ಅದನ್ನು ಪರಿಹರಿಸಲು ಹೊಸ ದಾರಿ ಕಂಡುಕೊಳ್ಳಲು ಪ್ರಯತ್ನಿ ಸುವುದು ಈ ಕೋರ್ಸಿನ ಆಶಯ. ವಿದ್ಯಾರ್ಥಿಗಳಲ್ಲಿ ಸಮಸ್ಯೆ ಪರಿಹರಿಸುವ ಕೌಶಲವನ್ನು ಮೈಗೂಡಿಸುವುದು ಇದರ ಉದ್ದೇಶ.

ಇದರ ಭಾಗವಾಗಿ, ಧಾರ್ಮಿಕ ಚಟುವಟಿಕೆ
ಗಳಿಂದ ಉಂಟಾಗುತ್ತಿರುವ ಶಬ್ದದಿಂದ ಎಂಬಿಬಿಎಸ್ ಓದುತ್ತಿರುವ ತನ್ನ ಸ್ನೇಹಿತನಿಗೆ ಆಗುತ್ತಿರುವ ತೊಂದರೆಯ ವಿಷಯವನ್ನು ವಿದ್ಯಾರ್ಥಿಯೊಬ್ಬ ಆರಿಸಿಕೊಂಡಿದ್ದ. ಅವನು ಇದನ್ನು ತರಗತಿಯಲ್ಲಿ ಹೇಳಿದ ಕೂಡಲೇ ಮತ್ತೊಬ್ಬ ವಿದ್ಯಾರ್ಥಿ ಎದ್ದು ನಿಂತು, ‘ಇದೂ ಒಂದು ಸಮಸ್ಯೆನಾ? ಧಾರ್ಮಿಕ ಚಟು
ವಟಿಕೆಗಳಿಂದ ಹೊರಹೊಮ್ಮುವ ಸದ್ದಿನಲ್ಲಿ ಚಿಕಿತ್ಸಕ ಅಂಶಗಳಿವೆ (ಮ್ಯೂಸಿಕ್ ಥೆರಪಿ) ಎಂದು ಈಗಾಗಲೇ ಸಾಬೀತಾಗಿಲ್ವಾ?’ ಅಂತ ಅಸಮಾಧಾನ ವ್ಯಕ್ತಪಡಿಸಿದ.

‘ಇದು ನನ್ನ ಸ್ನೇಹಿತ ಅನುಭವಿಸುತ್ತಿರುವ ಸಮಸ್ಯೆ. ಅವನು ನೆಲೆಸಿರುವ ಕೊಠಡಿಗೆ ಸಮೀಪವೇ ಧಾರ್ಮಿಕ ಶ್ರದ್ಧಾಕೇಂದ್ರ ಇರೋದ್ರಿಂದ ಅವನ ಓದಿಗೆ ತೊಂದರೆ ಆಗ್ತಿರೋದು ನಿಜ’ ಎಂದು, ತಾನು ಆರಿಸಿಕೊಂಡಿರು ವುದು ನೈಜ ಸಮಸ್ಯೆಯನ್ನೇ ಎಂದು ವಿದ್ಯಾರ್ಥಿ ನಿರೂಪಿಸಿದ.

ಎಂಜಿನಿಯರಿಂಗ್ ಕಾಲೇಜುಗಳ ಅಧ್ಯಾಪಕರನ್ನು ಒಳಗೊಂಡಿರುವ ವಾಟ್ಸ್‌ಆ್ಯಪ್‌ ಗುಂಪಿಗೆ ಇತ್ತೀಚೆಗೆ ಒಬ್ಬರು, 3-ಡಿ ಮುದ್ರಣಯಂತ್ರ ಬಳಸಿ ತಮ್ಮ ಕಾಲೇಜಿನ ಲ್ಯಾಬ್‍ನಲ್ಲಿ ತೆಗೆದ, ಅಯೋಧ್ಯೆಯಲ್ಲಿ ನಿರ್ಮಾಣ
ವಾಗುತ್ತಿರುವ ರಾಮಮಂದಿರದ ಮಾದರಿಯ ಫೋಟೊವನ್ನು ಹಾಕಿದ್ದರು. ಅದಕ್ಕೆ ಉಳಿದ ಅಧ್ಯಾಪಕರು ಮೆಚ್ಚುಗೆ ಸೂಚಿಸಿದರು.

ದೇವರ ಬಗೆಗಿನ ಪ್ರಶ್ನೆಗಳನ್ನು ನಿಭಾಯಿಸುವುದು, ಧಾರ್ಮಿಕ ಆಚರಣೆಗಳ ಭಾಗವಾಗಬೇಕೊ ಬೇಡವೊ ಎನ್ನುವುದನ್ನು ವ್ಯಕ್ತಿಗತ ನೆಲೆಯಲ್ಲಿ ನಿರ್ಧರಿಸಲು ಬೇಕಿರುವ ಪೂರಕ ವಾತಾವರಣವನ್ನು ಒದಗಿಸುವುದು ಕೂಡ ಆರೋಗ್ಯಪೂರ್ಣ ಸಮಾಜವೊಂದರ ಆದ್ಯತೆ ಆಗಬೇಕಲ್ಲವೇ? ದೇವರ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಮಕ್ಕಳಲ್ಲಿ ಮೂಡುವ ಪ್ರಶ್ನೆಗಳಿಗೆ ಸಂಯಮದಿಂದ ಉತ್ತರಿಸುವ, ವೈಜ್ಞಾನಿಕತೆಗೂ ಧಾರ್ಮಿಕ ನಂಬಿಕೆಗಳಿಗೂ ಇರುವ ವ್ಯತ್ಯಾಸವನ್ನು ತಿಳಿಸಿಕೊಡುವ ಮುತುವರ್ಜಿ ತೋರಬೇಕಲ್ಲವೇ?

ಮಕ್ಕಳಲ್ಲಿ ದೈವಶ್ರದ್ಧೆ ಮೂಡುವಂತೆ ನೋಡಿಕೊಳ್ಳಲು ತೋರುವಷ್ಟೇ ಕಾಳಜಿಯನ್ನು ಅವರು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಚಿಂತಿಸುವಂತೆ ಮಾಡಲೂ ತೋರುತ್ತೇವೆಯೇ? ಉದ್ಯಾನದಲ್ಲಿ ಆಡುತ್ತಿದ್ದ ಮಕ್ಕಳ ಮಾತುಕತೆಯಲ್ಲಿ ಇಣುಕುತ್ತಿದ್ದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲು ಬೇಕಿರುವ ಮುಕ್ತ ಮನಸ್ಸು ಹೊಂದುವುದರೆಡೆಗೆ ಸಮಾಜ ಹೊರಳುತ್ತಿದೆಯೇ? ಮಕ್ಕಳಿಗೆ ಆಸ್ತಿಕರಾಗಿ ರೂಪುಗೊಳ್ಳಲು ಸಿಗುವಷ್ಟೇ ಮಾರ್ಗದರ್ಶನ ಮತ್ತು ಪ್ರೋತ್ಸಾಹ, ಅವರು ವೈಚಾರಿಕವಾಗಿ ಚಿಂತಿಸುವಂತೆ ಮಾಡುವಲ್ಲಿಯೂ ಸಿಗುತ್ತಿದೆಯೇ? ಧಾರ್ಮಿಕ ಪರಿಕಲ್ಪನೆ ಹಾಗೂ ವೈಜ್ಞಾನಿಕ ಚಿಂತನೆ ಇವುಗಳಲ್ಲಿ ತಮಗೆ ಸರಿಕಂಡದ್ದು, ಸೂಕ್ತವೆನಿಸಿದ್ದನ್ನು ಆರಿಸಿಕೊಳ್ಳುವ, ಒಪ್ಪಿಕೊಳ್ಳುವ ಸ್ವಾತಂತ್ರ್ಯವನ್ನು ಮಕ್ಕಳ ಎದುರಿಗೆ ಮುಕ್ತವಾಗಿ ಇಟ್ಟಿದ್ದೇವೆಯೇ?

ಧಾರ್ಮಿಕ ನಂಬಿಕೆಗಳಿಗೆ ವೈಜ್ಞಾನಿಕತೆಯ ಪೋಷಾಕು ತೊಡಿಸಿ, ಕಾಲ್ಪನಿಕ ಘಟನೆಗಳಿಗೆ ಇತಿಹಾಸದ ಹಣೆಪಟ್ಟಿ ಹಾಕಿ ಮೆರೆಸುವುದೇ ಸಮಾಜದ ಪಾಲಿಗೆ ಹಿತವಾಗಿ ತೋರತೊಡಗಿದಾಗ, ವೈಜ್ಞಾನಿಕ ಚಿಂತನೆ ಮತ್ತು ಪ್ರಶ್ನಿಸುವ ಮನೋಭಾವ ಹಿನ್ನೆಲೆಗೆ ಸರಿಯುವುದು ಸಹಜ ತಾನೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.